ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಟ್‌ ಟಾಪಿಂಗ್‌: ಹೇಳಿದ್ದು ₹4 ಕೋಟಿ, ವೆಚ್ಚ ಮಾಡುತ್ತಿರುವುದು 9 ಕೋಟಿ!

ಬಿಬಿಎಂಪಿ ವ್ಯಾಪ್ತಿಯಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿ
Last Updated 23 ಅಕ್ಟೋಬರ್ 2019, 6:38 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದಿನ ಸರ್ಕಾರದಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿಗಳಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದ ಬಿಜೆಪಿ ನಾಯಕರು, ಪ್ರತಿ ಕಿಲೋಮೀಟರ್‌ಗೆ ₹ 4 ಕೋಟಿಯಲ್ಲಿ ಈ ಕಾಮಗಾರಿಯನ್ನು ಮಾಡಿತೋರಿಸುವುದಾಗಿ ಹೇಳಿಕೊಂಡಿದ್ದರು. ಈಗ ಮುಖ್ಯಮಂತ್ರಿ ಅವರ ಸೂಚನೆ ಮೇರೆಗೆ ರೂಪಿಸಿರುವ ಕಾಮಗಾರಿಯ ಅಂದಾಜುಪಟ್ಟಿಯ ಪ್ರಕಾರ, ಯಡಿಯೂರು ವಾರ್ಡ್‌ನ ವೈಟ್‌ಟಾಪಿಂಗ್‌ ಕಾಮಗಾರಿಗೆ ಪ್ರತಿ ಕಿ.ಮೀ.ಗೆ ₹ 8.94 ಕೋಟಿ ವೆಚ್ಚವಾಗಲಿದೆ.

ಯಡಿಯೂರು ವಾರ್ಡ್‌ನಲ್ಲಿ 1.2 ಕಿ.ಮೀ. ಉದ್ದದ ಪಟಾಲಮ್ಮ ದೇವಸ್ಥಾನ ರಸ್ತೆ (ಆರ್ಮುಗಂ ವೃತ್ತದಿಂದ 9ನೇ ಮುಖ್ಯ ರಸ್ತೆಯ 22ನೇ ಅಡ್ಡರಸ್ತೆ ಜಂಕ್ಷನ್‌ವರೆಗೆ) ಕಾಮಗಾರಿಗೆ ₹10.45 ಕೋಟಿ ಮೊತ್ತದ ಅಂದಾಜುಪಟ್ಟಿಗೆ (ಪ್ರತಿ ಕಿ.ಮೀ.ಗೆ ₹8.94 ಕೋಟಿ) ಒಪ್ಪಿಗೆ ನೀಡಲಾಗಿದೆ. ಕರೀಸಂದ್ರ ವಾರ್ಡ್‌ ಹಾಗೂ ಶಾಕಾಂಬರಿನಗರ ವಾರ್ಡ್‌ಗಳಲ್ಲಿ ಹಾದುಹೋಗುವ ನ್ಯಾಷನಲ್‌ ಕೋ ಆಪರೇಟಿವ್ ಬ್ಯಾಂಕ್‌ ರಸ್ತೆಯ (23ನೇ ಅಡ್ಡರಸ್ತೆಯಿಂದ ಜಯನಗರ 4ನೇ ಮುಖ್ಯ ರಸ್ತೆಯ 36ನೇ ಅಡ್ಡರಸ್ತೆವರೆಗೆ) 1.10 ಕಿ.ಮೀ ಉದ್ದದ ಕಾಮಗಾರಿಗೆ ₹10.27 ಕೋಟಿ (ಪ್ರತಿ ಕಿ.ಮೀ.ಗೆ ₹8.79 ಕೋಟಿ) ಅಂದಾಜುಪಟ್ಟಿಗೆ ಅನುಮೋದನೆ ನೀಡಲಾಗಿದೆ.

ಈ ಹಿಂದೆ ಪಟಾಲಮ್ಮ ದೇವಸ್ಥಾನ ರಸ್ತೆಯ ಕಾಮಗಾರಿ ನಿರ್ವಹಿಸಲು ಮುಂದೆ ಬಂದಿದ್ದ ಗುತ್ತಿಗೆದಾರ ಸತೀಶ್‌ ಆರ್‌. ಇದಕ್ಕೆ ₹ 7.30 ಕೋಟಿಯ ಅಂದಾಜುಪಟ್ಟಿಯನ್ನು ಸಲ್ಲಿಸಿದ್ದರು. ಈ ಮೊತ್ತ ಹೆಚ್ಚಾಯಿತು ಎಂದು ಅಧಿಕಾರಿಗಳು ತಗಾದೆ ತೆಗೆದ ಬಳಿಕ ಕಾಮಗಾರಿಯನ್ನು ₹ 7.08 ಕೋಟಿಗೆ ನಿರ್ವಹಿಸಲು (ಶೇ 3ರಷ್ಟು ಕಡಿಮೆ ಮೊತ್ತಕ್ಕೆ) ಒಪ್ಪಿದ್ದರು. ನ್ಯಾಷನಲ್‌ ಕೋ ಆಪರೇಟಿವ್ ಬ್ಯಾಂಕ್‌ ರಸ್ತೆಯ ಕಾಮಗಾರಿ ನಿರ್ವಹಿಸಲು ಮುಂದೆ ಬಂದಿದ್ದ ಗುತ್ತಿಗೆದಾರ ಎಸ್‌.ಮಂಜುನಾಥ್‌ ಇದಕ್ಕೆ ₹ 7.30 ಕೋಟಿಯ ಅಂದಾಜುಪಟ್ಟಿಯನ್ನು ಸಲ್ಲಿಸಿದ್ದರು. ಬಳಿಕ ₹ 7.14 ಕೋಟಿಗೆ ನಿರ್ವಹಿಸಲು ಒಪ್ಪಿದ್ದರು.

ಬಿಜೆಪಿ ನಗರ ಘಟಕದ ವಕ್ತಾರ ಎನ್. ಆರ್‌.ರಮೇಶ್‌ ಅವರು ಮುಖ್ಯಮಂತ್ರಿ ಕಚೇರಿಗೆ ಸೆ. 14ರಂದು ತಲುಪಿಸಿದ (ಅವರೇ ಹೇಳಿಕೊಂಡಿರುವಂತೆ) ಮಾಹಿತಿ ಪ್ರಕಾರ, ಪಟಾಲಮ್ಮ ರಸ್ತೆಯ ವೈಟ್‌ಟಾಪಿಂಗ್‌ ಕಾಮಗಾರಿ ಅಂದಾಜು ವೆಚ್ಚ ₹ 10.27 ಕೋಟಿ (ಪ್ರತಿ ಕಿ.ಮೀ.ಗೆ ₹ 8.78 ಕೋಟಿ).

ಬಿಬಿಎಂಪಿ ಈಗಾಗಲೇ ನಿರ್ವಹಿಸಿರುವ ನಾಲ್ಕು ಲೇನ್‌ ರಸ್ತೆಯ ವೈಟ್‌ಟಾಪಿಂಗ್‌ ಕಾಮಗಾರಿಗಳಲ್ಲಿ ಪ್ರತಿ ಕಿ.ಮೀ.ಯ ಅಂದಾಜು ವೆಚ್ಚ ₹ 7.37 ಕೋಟಿ. ಅದರಲ್ಲಿ ಸಂಚಾರ ಸಿಗ್ನಲ್‌ಗಳು, ರಸ್ತೆ ಮಾರ್ಕಿಂಗ್‌ ಹಾಗೂ ಇತರ ರಸ್ತೆ ಸವಲತ್ತುಗಳ ಕಾಮಗಾರಿಯೂ ಅಡಕವಾಗಿತ್ತು. ಪ್ರತಿ 100 ಮೀಟರ್‌ಗೆ ರಸ್ತೆಗೆ ಅಡ್ಡಲಾಗಿ ಕೊಳವೆಮಾರ್ಗವನ್ನು ಅಳವಡಿಸಲಾಗುತ್ತಿತ್ತು. ಪಟಾಲಮ್ಮ ರಸ್ತೆಯ ಕಾಮಗಾರಿ ಅಂದಾಜುಪಟ್ಟಿಯಲ್ಲಿ ಈ ಅಂಶಗಳಿಲ್ಲ. ಆದರೂ, ವೆಚ್ಚ₹8.9 ಕೋಟಿಗೆ ಹೇಗೆ ಹೆಚ್ಚಾಯಿತು ಎಂಬುದು ಸೋಜಿಗ.

ಎನ್‌.ಆರ್‌.ರಮೇಶ್‌ ಅವರು ಮುಖ್ಯಮಂತ್ರಿ ಕಚೇರಿಗೆ ಸಲ್ಲಿಸಿರುವ ಪಟಾಲಮ್ಮ ರಸ್ತೆಯ ಕಾಮಗಾರಿಯ ನಕ್ಷೆ ಯಲ್ಲಿ ಹೊಸತಾಗಿ ಒಳಚರಂಡಿ ಹಾಗೂ ಕುಡಿಯುವ ನೀರಿನ ಕೊಳವೆಗಳನ್ನು ಅಳವಡಿಸಲಾಗುತ್ತದೆ ಎಂದು ತೋರಿಸಿದ್ದಾರೆ. ಅಗತ್ಯ ಮೂಲಸೌಕರ್ಯ ಕೊಳವೆಗಳಿಗೆ ಹಾಗೂ ಚೇಂಬರ್‌ಗಳ ನಿರ್ಮಾಣಕ್ಕೆ ₹ 2.26 ಕೋಟಿ ವೆಚ್ಚವಾಗುತ್ತದೆ ಎಂದು ನಮೂದಿಸಿದ್ದಾರೆ. ಆದರೆ, ಈ ರಸ್ತೆಯ ಇಕ್ಕೆಲಗಳಲ್ಲಿ ಜಲಮಂಡಳಿಯವರು ಕುಡಿಯುವ ನೀರಿನ ಹೊಸ ಕೊಳವೆಗಳನ್ನು ಅಳವಡಿಸುತ್ತಿದ್ದಾರೆ. ವೈಟ್‌ಟಾಪಿಂಗ್‌ ಕಾಮಗಾರಿ ವೇಳೆ ಕುಡಿಯುವ ನೀರಿನ ಹಾಗೂ ಒಳಚರಂಡಿ ಕೊಳವೆಗಳನ್ನು ಅಳವಡಿಸುವ ಕಾಮಗಾರಿಯ ವೆಚ್ಚವನ್ನು ಕಡಿತ ಮಾಡದೆಯೇ ಅಂದಾಜುಪಟ್ಟಿಗೆ ಅನುಮೋದನೆ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ.

ಕಾಮಗಾರಿಗೆ ಅಲ್ಪಾವಧಿ ಟೆಂಡರ್‌

ಎರಡು ರಸ್ತೆಗಳನ್ನು ‘ಮುಖ್ಯಮಂತ್ರಿಗಳ ನವನಗರೋತ್ಥಾನ ಯೋಜನೆ’ ಅಡಿ ಟೆಂಡರ್‌ ಕರೆಯದೆಯೇ ವೈಟ್‌ಟಾಪಿಂಗ್‌ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಪ್ರಸ್ತಾವವನ್ನು ಬಿಬಿಎಂಪಿ ಕೊನೆಗೂ ಕೈಬಿಟ್ಟಿದೆ. ಈ ಕಾಮಗಾರಿಗಳನ್ನು ಇ–ಪ್ರೊಕ್ಯೂರ್‌ಮೆಂಟ್‌ ಪೋರ್ಟಲ್‌ ಮೂಲಕ ಟೆಂಡರ್‌ ಕರೆದೇ ನಿರ್ವಹಿಸುವಂತೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಬಿಬಿಎಂಪಿ ಆಯುಕ್ತರಿಗೆ ಸೋಮವಾರ ಪತ್ರ ಬರೆದಿದ್ದಾರೆ.

2018–19ನೇ ಸಾಲಿನ ನವ ನಗರೋತ್ಥಾನ ಕ್ರಿಯಾ ಯೋಜನೆಯಲ್ಲಿ ಅನಉಮೋದನೆಗೊಂಡ ವೈಟ್‌ಟಾಪಿಂಗ್‌ ಅಂದಾಜುಪಟ್ಟಿಗಳನ್ನು ಪರಿಷ್ಕರಿಸಿ ಆಯ್ದ ಕೆಲವು ರಸ್ತೆಗಳ ವೈಟ್‌ ಟಾಪಿಂಗ್‌ ಕಾಮಗಾರಿ ಕೈಗೊಳ್ಳಲು ಮೀಸಲಿಟ್ಟಿರುವ ₹ 50 ಕೋಟಿ ಅನುದಾನದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಅವರು ಸೂಚಿಸಿದ್ದಾರೆ.

ಈ ಎರಡು ಕಾಮಗಾರಿಗಳನ್ನು ಟೆಂಡರ್‌ ಕರೆಯದೆಯೇ ನಿರ್ವಹಿಸಲು ಅವಕಾಶ ಕಲ್ಪಿಸುವ ಸಲುವಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆ ಕಲಂ 4 ಜಿ ಅಡಿ ವಿನಾಯಿತಿ ನೀಡಬೇಕು ಎಂದು ಪಾಲಿಕೆ ಆಯುಕ್ತರು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2019ರ ಸೆ. 24ರಂದು ಪತ್ರ ಬರೆದಿದ್ದರು. ಈ ಕಾಮಗಾರಿಗಳನ್ನು ಟೆಂಡರ್‌ ಕರೆಯದೆಯೇ ನಿರ್ವಹಿಸುವ ತುರ್ತು ಇಲ್ಲದಿದ್ದರೂ ಕೆಟಿಪಿಪಿ ಕಾಯ್ದೆಯ ಕಲಂ 4 (ಜಿ) ಅಡಿ ವಿನಾಯಿತಿ ಕೋರಿರುವ ಬಗ್ಗೆ ‘ಪ್ರಜಾವಾಣಿ’ ಸೆ. 27ರಂದು ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಬಳಿಕ ಸರಣಿ ವರದಿಗಳನ್ನು ಪ್ರಕಟಿಸಿತ್ತು.

‘ನುಡಿದಂತೆ ನಡೆಯಿರಿ ಇಲ್ಲ ಕ್ಷಮೆ ಯಾಚಿಸಿ’

‘ಪ್ರತಿ.ಕಿ.ಮೀ.ಗೆ 4 ಕೋಟಿ ವೆಚ್ಚದಲ್ಲಿ ವೈಟ್‌ಟಾಪಿಂಗ್‌ ನಡೆಸುವುದಾಗಿ ಬಿಜೆಪಿ ನಾಯಕರು ಸವಾಲು ಹಾಕಿದ್ದರು. ಆದರೆ, ಈಗ ನೋಡಿದರೆ ಪ್ರತಿ ಕಿ.ಮೀ. ವೈಟ್‌ಟಾಪಿಂಗ್‌ ಕಾಮಗಾರಿ ವೆಚ್ಚ ನಮ್ಮ ಅವಧಿಗಿಂತಲೂ ಹೆಚ್ಚಾಗಿದೆ. ಜನರನ್ನು ತಪ್ಪುದಾರಿಗೆಳೆದಿದ್ದಕ್ಕೆ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು’ ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಒತ್ತಾಯಿಸಿದರು.

‘ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸುಖಾಸುಮ್ಮನೆ ಆರೋಪ ಮಾಡಿದ್ದ ಎನ್.ಆರ್‌.ರಮೇಶ್‌ ಈ ಹಿಂದೆ ಹೇಳಿಕೊಂಡಂತೆ ಪ್ರತಿ ಕಿ.ಮೀ.ಗೆ ₹ 4 ಕೋಟಿ ವೆಚ್ಚದಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿ ಮಾಡಿ ತೋರಿಸಬೇಕು. ಯಡಿಯೂರು ವಾರ್ಡ್‌ನಲ್ಲಿ ಕೈಗೆತ್ತಿಕೊಳ್ಳುವ ಕಾಮಗಾರಿಗೆ ₹ 4 ಕೋಟಿಗಿಂತ ಹೆಚ್ಚು ಬಿಲ್‌ ಪಾವತಿ ಮಾಡಿದರೆ ನಾವು ಪ್ರತಿಭಟನೆ ನಡೆಸುತ್ತೇವೆ’ ಎಂದರು.

‘ಟೆಂಡರ್‌ ಕರೆಯದೆಯೇ ಕಾಮಗಾರಿಯ ಗುತ್ತಿಗೆ ಪಡೆಯುವ ಸಂಚು ನಡೆದಿತ್ತು. ‘ಪ್ರಜಾವಾಣಿ’ ಈ ವಿಚಾರವನ್ನು ಬಯಲಿಗೆಳೆದಿದ್ದರಿಂದ ಆ ಸಂಚು ವಿಫಲವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT