ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಪಿಪಿ ಮಾದರಿಯಲ್ಲಿ ಪಿಆರ್‌ಆರ್‌: ಬಿಡಿಎಯಿಂದ ಟೆಂಡರ್‌ ಆಹ್ವಾನ

8 ಪಥ; 27 ಸಾವಿರ ಕೋಟಿ ವೆಚ್ಚ
Published 1 ಫೆಬ್ರುವರಿ 2024, 23:30 IST
Last Updated 1 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕ– ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಪೆರಿಫೆರಲ್‌ ವರ್ತುಲ ರಸ್ತೆಯನ್ನು (ಪಿಆರ್‌ಆರ್) ₹27 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಲು ಬಿಡಿಎ ನಿರ್ಧರಿಸಿದ್ದು, 50 ವರ್ಷಗಳ ಅವಧಿಗೆ ನಿರ್ವಹಣಾ ಶುಲ್ಕ ಸಂಗ್ರಹಿಸಲು ಅವಕಾಶ ಕಲ್ಪಿಸಿದೆ.

ತುಮಕೂರು ರಸ್ತೆಯಿಂದ ಹೊಸೂರು ರಸ್ತೆವರೆಗೆ ನಿರ್ಮಾಣವಾಗುವ ಎಂಟು ಪಥದ 73.04 ಕಿ.ಮೀ ಉದ್ದ ಪಿಆರ್‌ಆರ್‌ ಅನ್ನು ‘ವಿನ್ಯಾಸ, ನಿರ್ಮಾಣ, ಹಣಕಾಸು, ಕಾರ್ಯಾಚರಣೆ, ವರ್ಗಾವಣೆ’ ಆಧಾರದಲ್ಲಿ ನಿರ್ಮಿಸಲಾಗುತ್ತದೆ. ಈ ಬಗ್ಗೆ ಫೆ.1ರಂದು ಟೆಂಡರ್‌ ಆಹ್ವಾನಿಸಲಾಗಿದ್ದು, ಮಾರ್ಚ್‌ 1ರವರೆಗೆ ಟೆಂಡರ್‌ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ತುಮಕೂರು ರಸ್ತೆಯ ಮಾದನಾಯಕಹಳ್ಳಿ ಬಳಿಯ ನೈಸ್‌ ಜಂಕ್ಷನ್‌ ಸಮೀಪದಿಂದ ಪಿಆರ್‌ಆರ್‌ ಆರಂಭವಾಗಲಿದ್ದು, ಹೆಸರುಘಟ್ಟ ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಬಳ್ಳಾರಿ ರಸ್ತೆ, ಹೆಣ್ಣೂರು, ಹಳೇ ಮದ್ರಾಸ್‌ ರಸ್ತೆ, ವೈಟ್‌ಫೀಲ್ಡ್‌, ಚನ್ನಸಂದ್ರ, ಸರ್ಜಾಪುರ ರಸ್ತೆ, ಹೊಸೂರು ರಸ್ತೆ ತಲುಪಲಿದೆ.

ಹೆಸರಘಟ್ಟ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ವೈಟ್‌ಫೀಲ್ಡ್‌, ಹೊಸೂರು ರಸ್ತೆಗಳಲ್ಲಿ ರೈಲ್ವೆ ಲೆವೆಲ್‌ ಕ್ರಾಸಿಂಗ್‌ ಹಾಗೂ 395 ಸಣ್ಣ ಜಂಕ್ಷನ್‌ಗಳ ಮೇಲೆ ಪಿಆರ್‌ಆರ್‌ ಹಾದುಹೋಗಲಿದೆ. ಜಾರಕಬಂಡೆ ಕೆರೆ, ತಿರುಮೇನಹಳ್ಳಿ ಕೆರೆ, ಚಿನ್ನಗಾನಹಳ್ಳಿ ಕೆರೆ, ಗುಂಜೂರು ಕೆರೆ,  ಚಿಕ್ಕತೋಗೂರು ಕೆರೆಗಳ ಮೇಲೆ ಸೇರಿದಂತೆ ಒಟ್ಟು 16 ಮೇಲ್ಸೇತುವೆಗಳನ್ನು ನಿರ್ಮಿಸಲಾಗುತ್ತದೆ.

2,560 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಯೋಜಿಸಲಾಗಿದ್ದು, ಬಿಡಿಎ ಯೋಜನೆಯ ಅಲೈನ್‌ಮೆಂಟ್‌ ಅನ್ನೂ ನಮೂದಿಸಿ ಎರಡು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಬೇಕು ಎಂದು ಟೆಂಡರ್‌ನಲ್ಲಿ ತಿಳಿಸಲಾಗಿದೆ.

ಪಿಆರ್‌ಆರ್‌ ರಸ್ತೆಗೆ ‘ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್‌’ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದ್ದರು. ಆದರೆ, ಟೆಂಡರ್‌ನಲ್ಲಿ ‘ಎಂಟು ಪಥದ ಪಿಆರ್‌ಆರ್‌’ ಎಂದೇ ನಮೂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT