ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ| ₹7 ಸಾವಿರ ಕೋಟಿ ವೆಚ್ಚ: ಬೆಚ್ಚಿದ ಬೊಮ್ಮಾಯಿ

ಆರ್ಥಿಕ ಅಶಿಸ್ತಿಗೆ ತಡೆಹಾಕಿ: ಬಿಡಿಎಗೆ ಮುಖ್ಯಮಂತ್ರಿ ತಾಕೀತು
Last Updated 1 ಅಕ್ಟೋಬರ್ 2021, 20:27 IST
ಅಕ್ಷರ ಗಾತ್ರ

ಬೆಂಗಳೂರು: ₹ 7ಸಾವಿರ ಕೋಟಿಗೂ ಅಧಿಕ ಮೊತ್ತದ ಕೆಲಸ– ಕಾರ್ಯಗಳನ್ನು ಒಳಗೊಂಡ ಕಾರ್ಯಸೂಚಿಗಳಿಗೆ ಆಡಳಿತ ಮಂಡಳಿಯ ಒಂದೇ ಸಭೆಯಲ್ಲಿ ಅಂಗೀಕಾರ ಪಡೆಯುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಪ್ರಯತ್ನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸಮ್ಮತಿ ಸೂಚಿಸಿದ್ದಾರೆ.

ಆಡಳಿತ ಮಂಡಳಿ ಸಭೆಯಲ್ಲಿ ಅಂಗಿಕಾರ ಪಡೆಯಲು ಬಿಡಿಎ 63 ಕಾರ್ಯಸೂಚಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಇವುಗಳಲ್ಲಿ ಹಣಕಾಸು ಬಂಡವಾಳ ಬಯಸುವ 15 ವಿಷಯಗಳಿದ್ದು, ಇವುಗಳ ಅನುಷ್ಠಾನಕ್ಕೆ ₹ 7 ಸಾವಿರ ಕೋಟಿಗೂ ಅಧಿಕ ಮೊತ್ತದ ಅಗತ್ಯವಿದೆ. ಈ ಕಡತ ನೋಡಿದ ಬೊಮ್ಮಾಯಿ ಗಾಬರಿಯಾಗಿದ್ದಲ್ಲದೇ, ಆರ್ಥಿಕ ಅಶಿಸ್ತಿಗೆ ತಡೆಹಾಕಿ ಎಂದೂ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ ಎಂದು ಗೊತ್ತಾಗಿದೆ.

ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್‌ ಹಾಗೂ ಬಿಡಿಎ ಆಯುಕ್ತ ಎಂ.ಬಿ.ರಾಜೇಶ ಗೌಡ ಅವರಿಗೆ ಇದೇ 13ರಂದು ಟಿಪ್ಪಣಿ ಕಳುಹಿಸಿ, ಪ್ರಾಧಿಕಾರದಲ್ಲಿ ಆರ್ಥಿಕ ಶಿಸ್ತು ರೂಢಿಸಿಕೊಳ್ಳುವಂತೆ ಕಿವಿಹಿಂಡಿದ್ದಾರೆ. ಟಿಪ್ಪಣಿಯ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಒಂದೇ ಸಭೆಯಲ್ಲಿ 63 ವಿಷಯಗಳನ್ನು ಚರ್ಚಿಸುವ ಬದಲು, ಎರಡು ಸಭೆ ನಡೆಸುವಂತೆ ಹಾಗೂ ಹಣಕಾಸಿನ ಪರಿಣಾಮಗಳನ್ನು ಒಳಗೊಂಡ 15 ಕಾರ್ಯಸೂಚಿಗಳನ್ನು ಎರಡನೇ ಸಭೆಯಲ್ಲಿ ಚರ್ಚೆಗೆ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.

‘15 ವಿಷಯಗಳಿಗೆ ಸಂಬಂಧಿಸಿದ ಚಟುವಟಿಕೆಗಳು, ಕಾಮಗಾರಿಗಳು ಹಾಗೂ ವ್ಯತ್ಯಾಸದ ಕಾಮಗಾರಿಗಳ ಅನುಷ್ಠಾನಕ್ಕೆ ₹ 7 ಸಾವಿರ ಕೋಟಿ ಬೇಕು. ಈಗಾಗಲೇ ಪ್ರಾರಂಭವಾಗಿರುವ ಹಾಗೂ ಪ್ರಸ್ತಾವನೆಯ ಹಂತದಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಹಣಕಾಸಿನ ಅವಶ್ಯಕತೆ ಇದೆ. ಈಗಿನ ಸಂದರ್ಭದಲ್ಲಿ ಮಂಡಳಿಯ ಮುಂದೆ ಇಂತಹ ವಿಷಯಗಳನ್ನು ಮಂಡಿಸುವುದಕ್ಕೆ ಮುನ್ನ ಬಿಡಿಎಯ ಹಣಕಾಸು ಸ್ಥಿತಿ ಅವಲೋಕಿಸ ಬೇಕಿದೆ’ ಎಂದು ಮುಖ್ಯಮಂತ್ರಿ ಅವರು ಸೂಚಿಸಿದ್ದಾರೆ.

ಸಭೆಯ ಕಾರ್ಯಸೂಚಿಗಳಿಗೆ ಸಂಬಂಧಿಸಿ ಎಚ್ಚರಿಕೆ ಕ್ರಮಗಳನ್ನು ಕೈಗೊಂಡ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದೂ ಮುಖ್ಯಮಂತ್ರಿ ತಾಕೀತು ಮಾಡಿದ್ದಾರೆ.

ಬಿಡಿಎ, ತನ್ನ ಕೇಂದ್ರ ಕಚೇರಿಯ ಹಳೆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ಸಂಕೀರ್ಣ ನಿರ್ಮಿಸಲು ಚಿಂತನೆ ನಡೆಸಿತ್ತು. ವಿವಿಧ ವಾಣಿಜ್ಯ ಸಂಕೀರ್ಣಗಳ ಅಭಿವೃದ್ಧಿಗೂ ಯೋಜನೆ ಹಾಕಿಕೊಂಡಿತ್ತು. ಗಟ್ಟಿಮುಟ್ಟಾಗಿರುವ ಕೇಂದ್ರ ಕಚೇರಿಯ ಕಟ್ಟಡವನ್ನು ಕೆಡಹುವುದು ಸೂಕ್ತವಲ್ಲ ಎಂಬ ಟೀಕೆ ವ್ಯಕ್ತವಾಗಿತ್ತು. ಕೋವಿಡ್‌ನಿಂದ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಸಂದರ್ಭದಲ್ಲಿ ಹೊಸ ಕಟ್ಟಡಕ್ಕಾಗಿ ₹ 250 ಕೋಟಿಗೂ ಅಧಿಕ ಹೂಡಿಕೆ ಮಾಡುವ ಔಚಿತ್ಯದ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿತ್ತು.

2021ರ ಮೇ 17ರ ಬಳಿಕ ಬಿಡಿಎ ಆಡಳಿತ ಮಂಡಳಿ ಸಭೆ ನಡೆದಿಲ್ಲ. ಆ ಬಳಿಕ ಮೂರು ಬಾರಿ ಸಭೆ ನಡೆಸುವ ಪ್ರಯತ್ನಗಳು ನಡೆದಿದ್ದವು. ಆದರೆ, ಕೊನೆಯ ಕ್ಷಣಗಳಲ್ಲಿ ಸಭೆಯನ್ನು ಮುಂದೂಡಲಾಗಿತ್ತು.

ಬಿಕರಿಯಾಗದ ಫ್ಲ್ಯಾಟ್‌: ಸಿ.ಎಂ ಅಸಮಾಧಾನ

ವಸತಿ ಸಮುಚ್ಚಯಗಳನ್ನು ನಿರ್ಮಿಸಿ ಅವುಗಳನ್ನು ಮಾರಾಟ ಮಾಡಲು ಹೆಣಗಾಡುತ್ತಿರುವ ಬಿಡಿಎ ವೈಫಲ್ಯದತ್ತಲೂ ಮುಖ್ಯಮಂತ್ರಿ ಬೊಟ್ಟು ಮಾಡಿದ್ದಾರೆ.

‘ವಿವಿಧ ವಸತಿ ಯೋಜನೆಗಳಲ್ಲಿ ಫ್ಲ್ಯಾಟ್‌ಗಳು ಮಾರಾಟವಾಗದೇ ದೀರ್ಘಕಾಲದಿಂದ ಹಾಗೆಯೇ ಉಳಿದಿವೆ. ಇದರಿಂದಹಣಕಾಸಿನ ಹರಿವಿಗೆ ಅಡ್ಡಿಯಾಗಿದೆ. ಹೊಸ ವಸತಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮುನ್ನವೂ ಪ್ರಾಧಿಕಾರ ಎಚ್ಚರಿಕೆ ವಹಿಸಬೇಕು’ ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT