ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಕಾವತಿ ಬಡಾವಣೆಯ ಕೆಲ ನಿವೇಶನಗಳ ಖಾತಾ ರದ್ದತಿಗೆ ಮುಂದಾದ ಬಿಡಿಎ

ಅರ್ಕಾವತಿ ಬಡಾವಣೆ: ಬಗೆಹರಿಯದ ಸಮಸ್ಯೆ l ನಿವೇಶನದಾರರದಲ್ಲಿ ಕಳವಳ
Last Updated 6 ನವೆಂಬರ್ 2020, 19:07 IST
ಅಕ್ಷರ ಗಾತ್ರ

ಬೆಂಗಳೂರು: ಜಕ್ಕೂರು ಗ್ರಾಮದಲ್ಲಿ ಅರ್ಕಾವತಿ ಬಡಾವಣೆಯ ಕೆಲ ನಿವೇಶನಗಳ ಖಾತೆ ರದ್ದುಪಡಿಸಲು ಆದೇಶ ನೀಡುವಂತೆ ಕೋರಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಹೆಚ್ಚುವರಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಆದರೆ, ಈ ನಿವೇಶನಗಳ ಮಾಲೀಕರಿಗೆ ಈ ಬಗ್ಗೆ ಮಾಹಿತಿಯನ್ನೇ ನೀಡಿಲ್ಲ. ಪ್ರಾಧಿಕಾರದ ಈ ನಡೆ ಇಲ್ಲಿ ನಿವೇಶನ ಹೊಂದಿರುವವರಲ್ಲಿ ಕಳವಳ ಮೂಡಿಸಿದೆ.

‘ನಿವೇಶನದ ಖಾತೆ ರದ್ದತಿ ಅರ್ಜಿ ಕುರಿತು ನ್ಯಾಯಾಲಯದಿಂದ ನೋಟಿಸ್‌ ಬಂದ ಬಳಿಕ ಬಿಡಿಎ ಕಚೇರಿಗೆ ಹೋಗಿ ವಿಚಾರಿಸಿದರೂ ಯಾವ ಅಧಿಕಾರಿಗಳೂ ಸಮರ್ಪಕ ಉತ್ತರ ನೀಡುತ್ತಿಲ್ಲ. ಖಾತೆ ರದ್ದುಪಡಿಸಿರುವುದಾದರೆ ಬದಲಿ ನಿವೇಶನ ನೀಡುವ ಭರವಸೆಯನ್ನೂ ಬಿಡಿಎ ನೀಡಿಲ್ಲ’ ಎಂದು ಅಳಲು ತೋಡಿ ಕೊಳ್ಳುತ್ತಾರೆ ಇಲ್ಲಿನ ನಿವೇಶನದಾರರು.

ಜಕ್ಕೂರು ಗ್ರಾಮದ ಸರ್ವೇ ನಂಬರ್ 91/4 ರಲ್ಲಿ ಬಿಡಿಎ ಎನ್‌.ರಾಮಯ್ಯ ಅವರ 33 ಗುಂಟೆ ಜಮೀನನ್ನು ಅರ್ಕಾವತಿ ಬಡಾವಣೆಗಾಗಿ 2013ರ ಜನವರಿಯಲ್ಲಿ ಸ್ವಾಧೀನ ಪಡಿಸಿಕೊಂಡಿತ್ತು. ಅದಕ್ಕೆ ಪರಿಹಾರವಾಗಿಜಕ್ಕೂರಿನ ಸರ್ವೆ ನಂ. 76/7ಎ ಹಾಗೂ 76/7ಎ1ನಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿತ್ತು. ಇದರಲ್ಲಿ 30 x 40 ಅಡಿ ವಿಸ್ತೀರ್ಣದ 3109 ಸಂಖ್ಯೆಯ ನಿವೇಶನವೂ ಒಂದು.

‘3109 ಸಂಖ್ಯೆಯ ನಿವೇಶನವನ್ನು ರಾಮಯ್ಯ ಅವರು ಕೆ.ಎಚ್‌.ಚಂದ್ರಕಾಂತ್‌ ಅವರಿಗೆ ಮಾರಿದ್ದರು. ಅವರಿಂದ ನಾನು ಖರೀದಿಸಿದೆ. 2014ರಲ್ಲೇ ಇದರ ಖಾತೆ ಮಾಡಿಸಿದ್ದೇನೆ. ಈ ಖಾತೆ ರದ್ದುಪಡಿಸಲು ಆದೇಶ ನೀಡುವಂತೆ ಬಿಡಿಎ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ಈ ಬಗ್ಗೆ ನಮಗೆ ಮಾಹಿತಿಯನ್ನೇ ನೀಡಿಲ್ಲ. ನಾವೇ ಖುದ್ದಾಗಿ ಕಚೇರಿಗೆ ಹೋಗಿ ವಿಚಾರಿಸಿದರೂ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಖಾತೆ ರದ್ದುಪಡಿಸುವ ಅಗತ್ಯವೇನು ಎಂದೂ ನಮಗೆ ತಿಳಿಸುತ್ತಿಲ್ಲ.’ ಎಂದು ಎಸ್‌.ಸುರೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಇದು ಸುರೇಶ್‌ ಅವರೊಬ್ಬರ ಕತೆಯಲ್ಲ. ಅವರ ನಿವೇಶನವಿರುವ ರಸ್ತೆಯ ಪಕ್ಕದ 19 ನಿವೇಶನಗಳ ಮಾಲೀಕರೂ ಖಾತೆ ರದ್ದಾಗುವ ಆತಂಕ ಎದುರಿಸುತ್ತಿದ್ದಾರೆ. ತಾವು ಬಿಟ್ಟುಕೊಟ್ಟ ಜಾಗಕ್ಕೆ ಪರಿಹಾರ ರೂಪದಲ್ಲಿ ನಿವೇಶನ ಪಡೆದ ರೈತರು, ರೈತರಿಗೆ ಹಂಚಿಕೆಯಾದ ನಿವೇಶನ ಖರೀದಿಸಿದವರು ಹಾಗೂ ಬಿಡಿಎಯಿಂದ ನೇರವಾಗಿ ನಿವೇಶನ ಹಂಚಿಕೆ ಆದವರೂ ಇವರಲ್ಲಿದ್ದಾರೆ.

‘ನಾನು ಇಲ್ಲಿ 30 x 40 ಅಡಿಯ ಎರಡು ನಿವೇಶನಗಳನ್ನು ರೈತರಿಂದ ಖರೀದಿಸಿದ್ದೇನೆ. ಆದರೆ, ಈಗ ಏಕಾಏಕಿ ಖಾತೆ ರದ್ದುಪಡಿಸಿದರೆ ನಮ್ಮ ಗತಿ ಏನು’ ಎಂದು ಪ್ರಶ್ನಿಸುತ್ತಾರೆ ಮಧುಕುಮಾರ್‌.

‘ಖಾತೆ ರದ್ದತಿಗೆ ಕ್ರಮ ಕೈಗೊಂಡ ವಿಚಾರ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ ಪ್ರತಿಕ್ರಿಯೆ ನೀಡುತ್ತೇನೆ’ ಎಂದು ಬಿಡಿಎ ಉಪಕಾರ್ಯದರ್ಶಿ–3 ಶಿವೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಡಿಎಯಿಂದ ಹಂಚಿಕೆಯಾದ ನಿವೇಶನ ಎಂಬ ಕಾರಣಕ್ಕೆ ನಾವು ಇಲ್ಲಿ ನಿವೇಶನ ಖರೀದಿಸಿದೆವು. ಈ ತಪ್ಪಿಗೆ ಈಗ ಕೋರ್ಟು ಕಚೇರಿ ಅಲೆಯಬೇಕಾಗಿ ಬಂದಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಧ್ಯಪ್ರವೇಶ ಮಾಡಿ ನಮ್ಮ ಸಮಸ್ಯೆ ಇತ್ಯರ್ಥಪಡಿಸಬೇಕು’ ಎಂದು ಸುರೇಶ್‌ ಒತ್ತಾಯಿಸಿದರು.

‘ಬದಲಿ ನಿವೇಶನ ಬೇಡ’

‘ನಾವು ಮಾರುಕಟ್ಟೆ ಮೌಲ್ಯವನ್ನು ನೀಡಿ ಇಲ್ಲಿ ಜಾಗ ಖರೀದಿಸಿದ್ದೇವೆ. ಈಗ ಇದಕ್ಕೆ ಬದಲಿಯಾಗಿ ಬೇರೆ ನಿವೇಶನ ನೀಡಿದರೂ ನಮಗೆ ನಷ್ಟವಾಗು
ತ್ತದೆ. ಇಲ್ಲಿನ 30 x 40 ಅಡಿ ವಿಸ್ತೀರ್ಣದ ನಿವೇಶನದ ಮಾರುಕಟ್ಟೆ ಮೌಲ್ಯಕ್ಕೆ ಹೋಲಿಸಿದರೆ ಬಿಡಿಎ ಕೆಂಪೇಗೌಡ ಬಡಾವಣೆಯಂತಹ ಕಡೆ ನೀಡುವ ಇಷ್ಟೇ ವಿಸ್ತೀರ್ಣದ ಬದಲಿ ನಿವೇಶನದ ಮೌಲ್ಯ ತೀರಾ ಕಡಿಮೆ. ಇಲ್ಲಿ 30 x 40 ಅಡಿ ವಿಸ್ತೀರ್ಣದ ನಿವೇಶನದ ಬದಲು ಬೇರೆ ಬಡಾವಣೆಯಲ್ಲಿ 60 x 40 ಅಡಿ ವಿಸ್ತೀರ್ಣದ ನಿವೇಶನ ನೀಡಬೇಕಾಗುತ್ತದೆ’ ಎಂದು ಮಧು ಕುಮಾರ್‌ ತಿಳಿಸಿದರು.

ಮೂಲಸೌಕರ್ಯವೂ ಮರೀಚಿಕೆ

‘ಜಕ್ಕೂರಿನಲ್ಲಿ ಈ ಬಡಾವಣೆಯ ಕೆಲವು ನಿವೇಶನಗಳಿಗೆ ರಸ್ತೆ, ಕುಡಿಯುವ ನೀರು, ವಿದ್ಯುತ್‌ ಮುಂತಾದ ಮೂಲಸೌಕರ್ಯ ಕಲ್ಪಿಸುವ ಕಾರ್ಯ ಪ್ರಗತಿ ಯಲ್ಲಿದೆ. ಆದರೆ, ನಮ್ಮ ನಿವೇಶನ ಇರುವ ಕಡೆ ಯಾವುದೇ ಮೂಲ ಸೌಕರ್ಯವನ್ನೂ ಕಲ್ಪಿಸಿಲ್ಲ. ಇಲ್ಲಿರುವುದು ಕಚ್ಛಾ ರಸ್ತೆ’ ಎಂದು ಸುರೇಶ್‌ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT