ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿ–ಮಗು ಹತ್ಯೆ; ‘ಆನ್‌ಲೈನ್’ ಸ್ನೇಹಿತನೇ ಆರೋ‍‍ಪಿ ?

ಬೇಗೂರು ಪೊಲೀಸರ ಚುರುಕಿನ ತನಿಖೆ; ಆರೋಪಿ ವಶಕ್ಕೆ
Last Updated 11 ಅಕ್ಟೋಬರ್ 2021, 16:44 IST
ಅಕ್ಷರ ಗಾತ್ರ

ಬೆಂಗಳೂರು: ಬೇಗೂರು ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ಚಂದ್ರಕಲಾ (40) ಹಾಗೂ ಅವರ ಮಗು ರಾತನ್ಯ (4) ಹತ್ಯೆ ಸಂಬಂಧ, ಆರೋಪಿ ಪ್ರಶಾಂತ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಹೊಸಪೇಟೆಯ ಪ್ರಶಾಂತ್, ತಮ್ಮೂರಿನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಸಾಮಾಜಿಕ ಜಾಲತಾಣ ಮೂಲಕ ಚಂದ್ರಕಲಾ ಅವರನ್ನು ಪರಿಚಯಿಸಿಕೊಂಡು, ಆನ್‌ಲೈನ್‌ನಲ್ಲಿ ನಿತ್ಯವೂ ಚಾಟಿಂಗ್ ಮಾಡುತ್ತಿದ್ದ. ಪ್ರಕರಣದ ತನಿಖೆ ಕೈಗೊಂಡಿದ್ದ ವಿಶೇಷ ತಂಡ, ಪುರಾವೆಗಳನ್ನು ಸಂಗ್ರಹಿಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ನಗರದ ಗಾರ್ಮೇಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಪತಿ ಚನ್ನವೀರಸ್ವಾಮಿ ಜೊತೆ ಚಂದ್ರಕಲಾ ವಾಸವಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು. ಮೊದಲ ಮಗನನ್ನು ಬೇರೆ ಊರಿನಲ್ಲಿ ವಸತಿನಿಲಯದಲ್ಲಿಟ್ಟು ಓದಿಸುತ್ತಿದ್ದರು. ಮಗು ರಾತನ್ಯ ತಾಯಿ ಬಳಿ ಇತ್ತು.’

‘ಅ. 6ರಂದು ಪತಿ ಕೆಲಸಕ್ಕೆ ಹೋಗಿದ್ದ ವೇಳೆಯಲ್ಲಿ ಮನೆಗೆ ಬಂದಿದ್ದ ಆರೋಪಿ, ಚಂದ್ರಕಲಾ ಹಾಗೂ ಮಗುವನ್ನು ಚಾಕುವಿನಿಂದ ಇರಿದು ಕೊಂದು ಪರಾರಿಯಾಗಿದ್ದ’ ಎಂದೂ ತಿಳಿಸಿದರು.

ಮೊದಲ ಭೇಟಿಯಲ್ಲೇ ಕೊಲೆ: ‘ಆರೋಪಿ ಪ್ರಶಾಂತ್, ಕೆಲ ತಿಂಗಳಿನಿಂದ ಚಂದ್ರಕಲಾ ಜೊತೆ ನಿತ್ಯವೂ ಮಾತನಾಡುತ್ತಿದ್ದ. ‘ನಿಮ್ಮನ್ನು ನೋಡಬೇಕು. ಯಾವಾಗ ಮನೆಗೆ ಬರಲಿ’ ಎಂದು ಕೇಳುತ್ತಿದ್ದ. ಆತ ಹೆಚ್ಚು ಒತ್ತಾಯಪಡಿಸಿದ್ದರಿಂದ ಅ. 6ರಂದು ಮನೆಗೆ ಬರುವಂತೆ ಚಂದ್ರಕಲಾ ಹೇಳಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಹೊಸಪೇಟೆಯಿಂದ ಬೆಂಗಳೂರಿಗೆ ಬಂದಿದ್ದ ಆರೋಪಿ, ಬೆಳಿಗ್ಗೆ 10 ಗಂಟೆ ಸುಮಾರಿಗೆ ಚಂದ್ರಕಲಾ ಅವರ ಮನೆಯಲ್ಲಿದ್ದ. ಇಬ್ಬರು ಸೇರಿ ತಿಂಡಿ ತಿಂದಿದ್ದರು. ನಂತರ, ಇಬ್ಬರೂ ಕೊಠಡಿಗೆ ಹೋಗಿ ಮಾತನಾಡುತ್ತ ಕುಳಿತಿದ್ದರು. ಮಗು ಸಹ ಜೊತೆಗಿತ್ತು.’

‘ಮಾತನಾಡುತ್ತಿದ್ದಾಗಲೇ ಇಬ್ಬರ ನಡುವೆ ಜಗಳ ಶುರುವಾಗಿತ್ತು. ಸಿಟ್ಟಾಗಿದ್ದ ಆರೋಪಿ, ಚಂದ್ರಕಲಾ ಅವರನ್ನು ಕೊಂದಿದ್ದ. ಮಗು ಜೋರಾಗಿ ಅಳಲಾರಂಭಿಸಿತ್ತು. ಧ್ವನಿ ಕೇಳಿ ಸ್ಥಳೀಯರು ಬರಬಹುದೆಂದು ತಿಳಿದ ಮಗುವನ್ನು ಸಾಯಿಸಿದ್ದ’ ಎಂದೂ ಮೂಲಗಳು ತಿಳಿಸಿವೆ.

‘ಇಬ್ಬರ ನಡುವೆ ಯಾವ ವಿಚಾರಕ್ಕೆ ಜಗಳವಾಯಿತು ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT