ಶನಿವಾರ, ಜುಲೈ 31, 2021
28 °C
ಕೋವಿಡ್ ಮಾರ್ಗಸೂಚಿಗಳ ಪಾಲನೆ

ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಜೀವಕಳೆ: ಏರುಗತಿ ಪಡೆದ ಪ್ರವಾಸಿಗರ ಸಂಖ್ಯೆ

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ಪ್ರವಾಸಿಗರಿಲ್ಲದೆ ಭಣಗುಡುತ್ತಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಮತ್ತೆ ಜೀವಕಳೆ ಬಂದಿದೆ. ಕೋವಿಡ್‌ ಕಾರಣ ಮನೆಗಳಲ್ಲಿ ‘ಬಂಧಿ’ಯಾಗಿದ್ದ ಪ್ರಾಣಿ ಪ್ರಿಯರು ಉದ್ಯಾನದತ್ತ ಮುಖ ಮಾಡುತ್ತಿದ್ದಾರೆ. ವೀಕ್ಷಕರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವ ಕಾರಣ ಉದ್ಯಾನದ ಬೊಕ್ಕಸಕ್ಕೂ ಹಣದ ಹರಿವು ನಿಧಾನವಾಗಿ ಹೆಚ್ಚುತ್ತಿದೆ.

2019ರ ಏಪ್ರಿಲ್‌ನಿಂದ 2020ರ ಮಾರ್ಚ್‌ 15ರವರೆಗೆ ಒಟ್ಟು 16.16 ಲಕ್ಷ ಮಂದಿ ಉದ್ಯಾನಕ್ಕೆ ಭೇಟಿ ನೀಡಿದ್ದರು. ಈ ಅವಧಿಯಲ್ಲಿ ₹31.99 ಕೋಟಿ ಆದಾಯ ಸಂಗ್ರಹವಾಗಿತ್ತು. ರಾಜ್ಯದಲ್ಲಿ ಕೋವಿಡ್‌ ಕಾಣಿಸಿಕೊಂಡ ನಂತರ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿತ್ತು. ಹೀಗಾಗಿ ವರಮಾನಕ್ಕೂ ದೊಡ್ಡ ಪೆಟ್ಟು ಬಿದ್ದಿತ್ತು. ಪ್ರಾಣಿಗಳ ಆಹಾರ, ಸಿಬ್ಬಂದಿ ವೇತನ ಹಾಗೂ ನಿರ್ವಹಣೆಗಾಗಿಯೇ ಮಾಸಿಕ ₹2 ಕೋಟಿ ವೆಚ್ಚವಾಗುತ್ತದೆ. ಲಾಕ್‌ಡೌನ್‌ ಅವಧಿಯಲ್ಲಿ ಈ ಮೊತ್ತ ಹೊಂದಿಸುವುದೇ ಸವಾಲಾಗಿ ಪರಿಣಮಿಸಿತ್ತು.

‘ಲಾಕ್‌ಡೌನ್‌ ತೆರವುಗೊಂಡ ನಂತರದ ಮೊದಲ ದಿನವೇ (ಜುಲೈ1) 450 ಮಂದಿ ಉದ್ಯಾನಕ್ಕೆ ಭೇಟಿ ನೀಡಿದ್ದರು. ಜುಲೈ ಎರಡರಂದು ಈ ಸಂಖ್ಯೆ 800ರಷ್ಟಿತ್ತು. ಬಳಿಕ ವಾರಾಂತ್ಯ ಕರ್ಫ್ಯೂ ಇದ್ದಿದ್ದರಿಂದ ಜನ ಇತ್ತ ಸುಳಿಯಲಿಲ್ಲ. ಜುಲೈ 5ರ ನಂತರ ಪ್ರವಾಸಿಗರ ಸಂಖ್ಯೆ ಏರುಮುಖವಾಗಿದೆ. ಪ್ರತಿನಿತ್ಯ 800 ರಿಂದ 900 ಜನ ಬರುತ್ತಿದ್ದಾರೆ. ವಾರಾಂತ್ಯಗಳಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳುವ ನಿರೀಕ್ಷೆ ಇದೆ’ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿ‍‍ಪಿನ್‌ ಸಿಂಗ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಾಣಿಗಳ ಆಹಾರ, ಸಿಬ್ಬಂದಿ ವೇತನ ಹಾಗೂ ನಿರ್ವಹಣೆಗಾಗಿಯೇ ವರ್ಷಕ್ಕೆ ₹25 ಕೋಟಿ ವೆಚ್ಚವಾಗುತ್ತದೆ. ಈ ಮೊತ್ತಕ್ಕಿಂತ ಹೆಚ್ಚು ಹಣ ಸಂಗ್ರಹವಾದರೆ ಅದನ್ನು ಆದಾಯವೆಂದು ಪರಿಗಣಿಸಲಾಗುತ್ತದೆ. ಆ ಮೊತ್ತವನ್ನು ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸುತ್ತೇವೆ. ಕೋವಿಡ್‌ನಿಂದಾಗಿ ನಮಗೆ ದೊಡ್ಡ ಪ್ರಮಾಣದ ನಷ್ಟ ಉಂಟಾಗಿದೆ. ಅದರಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ’ ಎಂದರು.

ಮಾರ್ಗಸೂಚಿ ಪಾಲನೆ: ‘ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನೆಲ್ಲಾ ಕಡ್ಡಾಯವಾಗಿ ಪಾಲಿಸಲಾಗುತ್ತಿದೆ. ಪ್ರವಾಸಿಗರನ್ನು ಹೊತ್ತೊಯ್ಯುವ ‘ಸಫಾರಿ’ ವಾಹನಗಳಿಗೆ ನಿತ್ಯವೂ ಸೋಂಕು ನಿವಾರಕ ಸಿಂಪಡಣೆ ಮಾಡಲಾಗುತ್ತಿದೆ. ಉದ್ಯಾನದ ಆವರಣದಲ್ಲಿ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಕೊರೊನಾ ಸೋಂಕು ತಗಲುವ ಭೀತಿಯಿಂದ ಕೆಲವರು ಹೋಟೆಲ್ ಹಾಗೂ ರೆಸ್ಟೋರೆಂಟ್‌

ಗಳಲ್ಲಿ ತಯಾರಿಸಿದ ಆಹಾರ ಸೇವಿಸಲು ಹಿಂಜರಿಯುತ್ತಿದ್ದಾರೆ. ಅಂತಹವರು ಮನೆಯಿಂದಲೇ ಊಟ ತರಬಹುದು. ಅದನ್ನು ಉದ್ಯಾನದ ಆವರಣದಲ್ಲಿರುವ ರೆಸ್ಟೋರೆಂಟ್‌ನಲ್ಲೇ ಕುಳಿತು ಸೇವಿಸಬಹುದು. ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ’ ಎಂದು ಹೇಳಿದರು.

https://bannerghatta biologicalpark.org/ ವೆಬ್‌ಸೈಟ್‌ಗೆ ಭೇಟಿ ನೀಡಿದರೆ ಉದ್ಯಾನದ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಈ ವೆಬ್‌ಸೈಟ್‌ ಮೂಲಕವೇ ಟಿಕೆಟ್‌ ಕೂಡ ಕಾಯ್ದಿರಿಸಬಹುದು. ಪ್ರಾಣಿಗಳನ್ನು ದತ್ತು ಪಡೆಯುವ ಪ್ರಕ್ರಿಯೆಯ ಮಾಹಿತಿಯೂ ಇಲ್ಲಿ ಲಭ್ಯವಾಗಲಿದೆ. ಇದನ್ನೆಲ್ಲಾ ತಿಳಿದುಕೊಂಡು ವ್ಯವಸ್ಥಿತ ಯೋಜನೆಯೊಂದಿಗೆ ಕುಟುಂಬ ಸಮೇತರಾಗಿ ಜನ ಉದ್ಯಾನಕ್ಕೆ ಭೇಟಿ ನೀಡಿದರೆ ಒಳ್ಳೆಯದು. ಪ್ರಾಣಿಗಳಿಂದಲೂ ಸೋಂಕು ಹರಡು ತ್ತದೆ ಎಂಬುದು ತಪ್ಪು ಕಲ್ಪನೆ. ಅಂತಹ ಅಂಜಿಕೆ ಯಾರಿಗೂ ಬೇಡ’ ಎಂದರು.

*
ಕೋವಿಡ್‌ನಿಂದಾಗಿ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಇಂಥ ಪರಿಸ್ಥಿತಿಯಲ್ಲಿ ಟಿಕೆಟ್‌ ದರ ಕಡಿತಗೊಳಿಸುವ ಅಥವಾ ಹೊಸ ರಿಯಾಯಿತಿ ಪ್ರಕಟಿಸುವ ಯಾವ ಆಲೋಚನೆಯೂ ಇಲ್ಲ
-ವನಶ್ರೀ ವಿ‍‍ಪಿನ್‌ ಸಿಂಗ್‌, ಕಾರ್ಯನಿರ್ವಾಹಕ ನಿರ್ದೇಶಕಿ, ಬನ್ನೇರುಘಟ್ಟ ಜೈವಿಕ ಉದ್ಯಾನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು