ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದಾಪುರ ಕೆರೆ ಸ್ವಚ್ಛತೆಗೆ ಪ್ರಥಮ ಹೆಜ್ಜೆ

ಕಲ್ಮಶ ಹರಿಯಲ್ಲ, ಒತ್ತುವರಿ ತೆರವು: ₹2.53 ಕೋಟಿಗೆ ಟೆಂಡರ್‌ ಆಹ್ವಾನ l ಸರ್ಕಾರಕ್ಕೆ ದಂಡ ವಿಧಿಸಿದ್ದ ಎನ್‌ಜಿಟಿ
Last Updated 28 ಅಕ್ಟೋಬರ್ 2022, 21:15 IST
ಅಕ್ಷರ ಗಾತ್ರ

ಬೆಂಗಳೂರು: ಕಲ್ಮಶದ ತಾಣವಾಗಿರುವ ಆನೇಕಲ್‌ ತಾಲ್ಲೂಕಿನ ಚಂದಾಪುರ ಕೆರೆಯನ್ನು ಸ್ವಚ್ಛಗೊಳಿಸಿ, ಎಲ್ಲ ರೀತಿಯಲ್ಲೂ ಅಭಿವೃದ್ಧಿಗೊಳಿಸುವ ಪ್ರಥಮ ಹೆಜ್ಜೆಯಾಗಿ ಸಣ್ಣ ನೀರಾವರಿ ಇಲಾಖೆ ₹2.53 ಕೋಟಿ ವೆಚ್ಚದ ಟೆಂಡರ್‌ ಕರೆದಿದೆ.

ಚಂದಾಪುರ ಕೆರೆಯಲ್ಲಿನ ಬೃಹತ್‌ ಮಟ್ಟದ ಕಲ್ಮಶಕ್ಕೆ ರಾಷ್ಟ್ರೀಯ ಹಸಿರುಪೀಠ (ಎನ್‌ಜಿಟಿ) ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ದಂಡವನ್ನು ವಿಧಿಸಿತ್ತು.

23 ಎಕರೆ ವಿಸ್ತೀರ್ಣದಲ್ಲಿರುವ ಚಂದಾಪುರ ಕೆರೆ ಹಾಗೂ 600 ಎಕರೆ ಪ್ರದೇಶದಲ್ಲಿರುವ ಮುತ್ತಾನಲ್ಲೂರು ಕೆರೆ ನಡುವಿನ ರಾಜಕಾಲುವೆ ಹಾಗೂ ಕೆರೆ ಅಂಗಳದ ಒತ್ತುವರಿ ತೆರವು, ಕಾಲುವೆ ಮರು ನಿರ್ಮಾಣವೂ ಈ ಯೋಜನೆಯಲ್ಲಿದೆ.

ಚಂದಾಪುರ ಮತ್ತು ಮುತ್ತಾನಲ್ಲೂರು ಕೆರೆ ಹಾಗೂ ರಾಜಕಾಲುವೆಯ ಸರ್ವೆ ನಡೆಸಿ, ಅದರ ಬಫರ್‌ ಝೋನ್‌ ಅನ್ನೂ ಗುರುತಿಸಬೇಕು. ಎರಡೂ ಕೆರೆಗಳನ್ನು ಒತ್ತುವರಿಮುಕ್ತ ಮಾಡಬೇಕು ಎಂದು ಅ.27ರಂದು ಕರೆಯಾಗಿರುವ ಟೆಂಡರ್‌ನಲ್ಲಿ ನಮೂದಿಸಲಾಗಿದೆ. ನ.5ಕ್ಕೆ ಟೆಂಡರ್‌ ಸಲ್ಲಿಸಲು ಕೊನೆಯ ದಿನ. ಆರು ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸಬೇಕು.

ಪರಿಣಾಮ: ‘ಪ್ರಜಾವಾಣಿ’ಯಲ್ಲಿ ‘ರಾಜಕಾಲುವೆ ಒತ್ತುವರಿ: ನಿಂತ ಕಾಮಗಾರಿ’ ಶೀರ್ಷಿಕೆಯಡಿ ಸೆ.3ರಂದು ವಿಶೇಷ ವರದಿ ಪ್ರಕಟವಾಗಿತ್ತು. ಚಂದಾಪುರ ಕೆರೆಯ ಕಲ್ಮಶದಿಂದ
ಸಣ್ಣ ನೀರಾವರಿ ಇಲಾಖೆ ಕೈಗೊಂಡಿರುವ ಕೆರೆ ತುಂಬುವ ಯೋಜನೆಗೆ ಹಿನ್ನಡೆಯಾಗಿದೆ ಎಂಬ ಮಾಹಿತಿಯನ್ನು ಪ್ರಕಟಿಸಲಾಗಿತ್ತು.

ಕೆ.ಸಿ. ವ್ಯಾಲಿಯಿಂದ 75 ಕೆರೆಗಳನ್ನು ತುಂಬುವ ಯೋಜನೆಯನ್ನು ಸಣ್ಣ ನೀರಾವರಿ ಇಲಾಖೆ ಅನುಷ್ಠಾನಗೊಳಿಸಿದೆ. ಮುತ್ತಾನಲ್ಲೂರು ಕೆರೆಗೆ ಸಂಸ್ಕರಿತ ನೀರು ಪಂಪ್‌ ಆಗುತ್ತಿದೆ. ಆದರೆ, ಈ ಕೆರೆಗೆ ಚಂದಾಪುರ ಕೆರೆಯಿಂದ ಕಲ್ಮಶ ನೀರು ಬಂದು ಸೇರುತ್ತಿದೆ. ಹೀಗಾಗಿ ಈ ಸಂಸ್ಕರಿತ ನೀರು ಮತ್ತೆ ಕಲ್ಮಶವಾಗಿ ಕೆರೆಗಳಿಗೆ ಹರಿಯುತ್ತಿರುವುದರಿಂದ ಯೋಜನೆ ವಿಫಲವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದರು.

ಇದನ್ನು ಒಪ್ಪಿದ್ದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ‘ಚಂದಾಪುರ ಕೆರೆ ನಮ್ಮ ಯೋಜನೆಯಲ್ಲಿಲ್ಲ. ಆದರೂ ಅದನ್ನು ಸ್ವಚ್ಛಗೊಳಿಸದ ಹೊರತು ಯೋಜನೆ ಪೂರ್ಣವಾಗುವುದಿಲ್ಲ ಎಂಬುದನ್ನು ಅರಿತು ಚಂದಾಪುರ ಕೆರೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ’ ಎಂದಿದ್ದರು. ಇದೀಗ ಚಂದಾಪುರ ಕೆರೆಗೆ ಕಲ್ಮಶ ಹರಿಯದಂತೆ ತಡೆದು, ಅದಕ್ಕೆ ಸಂಸ್ಕರಿತ ನೀರು ಮಾತ್ರ ಹೋಗುವಂತೆ ಮಾಡಲು ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ.

ಹೋರಾಟದ ಫಲ: ‘ಚಂದಾಪುರ ಹಾಗೂ ಮುತ್ತಾನಲ್ಲೂರು ಕೆರೆ ಸೇರಿ ಆನೇಕಲ್‌ ತಾಲ್ಲೂಕಿನಲ್ಲಿ ಕೆರೆಗಳ ಸರ್ವೆ ಆಗಬೇಕು. ಬಫರ್‌ ಝೋನ್‌ ಗುರುತಿಸಬೇಕು ಎಂದು ಹಲವು ವರ್ಷಗಳಿಂದ ನಾವು ಹೋರಾಟ ಮಾಡಿಕೊಂಡು ಬಂದಿದ್ದೇವೆ. ಇದೀಗ ಅದರ ಫಲ ದೊರೆತಿದೆ. ಈ ಎರಡು ಕೆರೆಗಳಲ್ಲಿ ಕೈಗೊಂಡಿರುವ ರೀತಿಯಲ್ಲೇ ತಾಲ್ಲೂಕಿನ ಎಲ್ಲ ಕೆರೆಗಳ ಸರ್ವೆ ಆಗಬೇಕು. ಬಫರ್‌ ಝೋನ್‌ ಗುರುತು ಮಾಡಬೇಕು’ ಎಂದು ಆನೇಕಲ್‌ ಪರಿಸರ ಸಂರಕ್ಷಣೆ ಫೆಡರೇಷನ್‌ನ ಕ್ಯಾಪ್ಟನ್‌ ಸಂತೋಷ್‌ ಕುಮಾರ್‌ ಹೇಳಿದರು.

ಏನೇನು ಕಾಮಗಾರಿ?

ಚಂದಾಪುರ ಕೆರೆಗೆ ಸಂಸ್ಕರಿತ ನೀರು ಮಾತ್ರ ಹರಿಯಲು ಸಂಸ್ಕರಣೆ ಘಟಕ ನಿರ್ಮಾಣ. ಕೆರೆಯ ಹೂಳು ತೆಗೆದು, ಏರಿ ಮರುನಿರ್ಮಾಣ. ನೈಸರ್ಗಿಕವಾಗಿ ನೀರು ಸ್ವಚ್ಛವಾಗಿರುವಂತೆ ಮಾಡಲು ಕೊಳವೆ ಮಾರ್ಗ, ವೆಟ್‌ಲ್ಯಾಂಡ್‌ ಹಾಗೂ ಸಸಿಗಳನ್ನು ನೆಡುವುದು. ಚಂದಾಪುರ ಮತ್ತು ಮುತ್ತಾನಲ್ಲೂರು ಕೆರೆಯ ಒತ್ತುವರಿಯನ್ನು ತೆರವುಗೊಳಿಸುವುದು. ಈ ಎರಡೂ ಕೆರೆಗಳ ನಡುವಿನ ರಾಜಕಾಲುವೆ ಒತ್ತುವರಿ ತೆರವು, ಹೂಳು ತೆಗೆಯುವುದು... ಈ ಎಲ್ಲ ಕಾಮಗಾರಿಗಳು ಮುಗಿದ ಮೇಲೆ ಅದನ್ನು ಎರಡು ವರ್ಷ ನಿರ್ವಹಣೆ ಮಾಡುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT