ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ಎಸೆದಿದ್ದಕ್ಕೆ ಗಲಾಟೆ: ಕಿರುತೆರೆ ನಟನ ಮೇಲೆ ಹಲ್ಲೆ

Published 9 ಮಾರ್ಚ್ 2024, 16:16 IST
Last Updated 9 ಮಾರ್ಚ್ 2024, 16:16 IST
ಅಕ್ಷರ ಗಾತ್ರ

ಬೆಂಗಳೂರು: ಖಾಲಿ ಜಾಗದಲ್ಲಿ ಕಸ ಎಸೆದ ವಿಚಾರ ಸಂಬಂಧ ಗಲಾಟೆ ನಡೆದು ಕಿರುತೆರೆ ನಟ ಚರಿತ್ ಬಾಳಪ್ಪ ಮೇಲೆ ಹಲ್ಲೆ ಮಾಡಲಾಗಿದ್ದು, ಈ ಬಗ್ಗೆ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಡಿ ಗ್ರೂಪ್‌ ಬಡಾವಣೆಯಲ್ಲಿ ವಾಸವಿರುವ ಚರಿತ್ ಬಾಳಪ್ಪ ಅವರು ಫೆ. 23ರಂದು ನಡೆದಿರುವ ಘಟನೆ ಸಂಬಂಧ ತಡವಾಗಿ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ದೂರುದಾರ ಚರಿತ್, ಮನೆಯ ಕಸವನ್ನು ಖಾಲಿ ಜಾಗದಲ್ಲಿ ಎಸೆದಿದ್ದರು. ಅದನ್ನು ನೋಡಿದ್ದ ಸ್ಥಳೀಯರೊಬ್ಬರು, ‘ಇಲ್ಲಿ ಕಸ ಏಕೆ ಎಸೆಯುತ್ತಿದ್ದೀರಾ? ಇದು ಸರಿಯಲ್ಲ, ಬಿಬಿಎಂಪಿ ವಾಹನಕ್ಕೆ ಕಸ ಹಾಕಬೇಕು’ ಎಂದಿದ್ದರು. ಬಳಿಕ, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದೇ ಸಂದರ್ಭದಲ್ಲಿ ಚರಿತ್ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದರೆಂಬುದು ಗೊತ್ತಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಹಲ್ಲೆ ಬಳಿಕ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದ ಚರಿತ್, ಚಿತ್ರೀಕರಣಕ್ಕೆಂದು ಹೈದರಾಬಾದ್‌ಗೆ ಹೋಗಿದ್ದರು. ಅದನ್ನು ಮುಗಿಸಿಕೊಂಡು ಬಂದು ದೂರು ನೀಡಿದ್ದಾರೆ’ ಎಂದು ಮೂಲಗಳು ಹೇಳಿವೆ.

ನಟನ ವಿರುದ್ಧ ಆರೋಪ: ‘ನಟ ಚರಿತ್ ತಮ್ಮ ಮನೆಯ ಕಸವನ್ನು ಖಾಲಿ ಜಾಗದಲ್ಲಿ ಎಸೆಯುತ್ತಾರೆ. ಈ ವರ್ತನೆಯನ್ನು ವಿರೋಧಿಸಿ ಸ್ಥಳೀಯರು ಹಲವು ಬಾರಿ ತಾಕೀತು ಮಾಡಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ. ಇದೇ ವಿಚಾರಕ್ಕೆ ಇದೀಗ ಅವರ ಮೇಲೆ ಹಲ್ಲೆ ಆಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಚರಿತ್ ಅವರು ‘ಲವ್‌ ಲವಿಕೆ’ ಹಾಗೂ ‘ಮುದ್ದುಲಕ್ಷ್ಮಿ’ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT