ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಟರ್ ಆನಂದ್‌ಗೆ ₹ 18.50 ಲಕ್ಷ ವಂಚನೆ: ಲೀಪ್ ವೆಂಚರ್ಸ್ ಕಂಪನಿ ವಿರುದ್ಧ ಎಫ್‌ಐಆರ್

Published 26 ಜೂನ್ 2023, 0:30 IST
Last Updated 26 ಜೂನ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ಚಿತ್ರನಟ, ನಿರ್ದೇಶಕ ಮಾಸ್ಟರ್ ಆನಂದ್ ಅವರಿಂದ ನಿವೇಶನ ಹೆಸರಿನಲ್ಲಿ ₹18.50 ಲಕ್ಷ ಮುಂಗಡ ಹಣ ಪಡೆದು ವಂಚಿಸಲಾಗಿದ್ದು, ಈ ಬಗ್ಗೆ ಚಂದ್ರಾಲೇಔಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಕೆಂಗೇರಿ ಉಪನಗರ ಅರುಣಾಚಲ ಬಡಾವಣೆಯ ನಿವಾಸಿ ಎಚ್‌.ಆನಂದ್ ಉರುಫ್ ಮಾಸ್ಟರ್ ಆನಂದ್ (39) ವಂಚನೆ ಬಗ್ಗೆ ದೂರು ನೀಡಿದ್ದಾರೆ. ಚಂದ್ರಾಲೇಔಟ್‌ನ ಇನ್‌ಕಮ್ ಟ್ಯಾಕ್ಸ್ ಬಡಾವಣೆಯಲ್ಲಿರುವ ಮಲ್ಟಿ ಲೀಪ್ ವೆಂಚರ್ಸ್ ಕಂಪನಿಯ ಮಾಲೀಕ ಎಸ್‌.ಸುಧೀರ್, ಆಪ್ತ ಸಹಾಯಕಿ ಮನಿಕಾ ಕೆ.ಎಂ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘2020ರ ಸೆಪ್ಟೆಂಬರ್ 23ರಿಂದ 2021ರ ಅಕ್ಟೋಬರ್ 7ರ ಅವಧಿಯಲ್ಲಾದ ವಂಚನೆ ಇದಾಗಿದೆ. ಹಣ ವರ್ಗಾವಣೆ ದಾಖಲೆ, ಖರೀದಿ ಕರಾರು ಪತ್ರ ಹಾಗೂ ಇತರೆ ಪುರಾವೆಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ದೂರಿನ ವಿವರ: ‘ಕೊಮ್ಮಘಟ್ಟದ ರಾಮಸಂದ್ರ ಗ್ರಾಮಕ್ಕೆ 2020ರ ಜುಲೈನಲ್ಲಿ ಚಿತ್ರೀಕರಣಕ್ಕೆಂದು ಹೋದಾಗ, ನಿವೇಶನಗಳನ್ನು ನೋಡಿದ್ದೆ. ಅಲ್ಲಿಯ ಕಚೇರಿಯಲ್ಲಿ ಮನಿಕಾ ಕೆ.ಎಂ ಅವರನ್ನು ಭೇಟಿಯಾಗಿದ್ದೆ. ನಿವೇಶನ ಖರೀದಿಸಲು ಸಾಲ ಸೌಲಭ್ಯ ಹಾಗೂ ಆಕರ್ಷಕ ಕೊಡುಗೆ ಇರುವುದಾಗಿ ಮನಿಕಾ ಆಮಿಷವೊಡ್ಡಿದ್ದರು’ ಎಂದು ಮಾಸ್ಟರ್ ಆನಂದ್ ದೂರಿನಲ್ಲಿ ತಿಳಿಸಿದ್ದಾರೆ.

‘ಮನಿಕಾ ಹಾಗೂ ಇತರರು ಪದೇ ಪದೇ ಕರೆ ಮಾಡಿ ನಿವೇಶನ ಖರೀದಿಸಲು ಮನವೊಲಿಸಿದರು. ಮಲ್ಟಿ ಲೀಪ್ ವೆಂಚರ್ಸ್ ಕಂಪನಿ ಕಚೇರಿಗೆ ಹೋಗಿ, ಆರೋಪಿಗಳನ್ನು ಭೇಟಿಯಾಗಿದ್ದೆ. ರಾಮಸಂದ್ರದಲ್ಲಿರುವ 2000 ಅಡಿ ವಿಸ್ತ್ರೀರ್ಣದ ನಿವೇಶನ ತೋರಿಸಿದ್ದರು. ₹ 70 ಲಕ್ಷಕ್ಕೆ ಖರೀದಿ ಒಪ್ಪಂದವಾಯಿತು. ಹಂತ ಹಂತವಾಗಿ ₹ 18.50 ಲಕ್ಷ ಮುಂಗಡ ಹಣ ನೀಡಿದ್ದೆ. ಉಳಿದ ಹಣಕ್ಕೆ ಸಾಲ ಕೊಡಿಸುವುದಾಗಿ ಆರೋಪಿಗಳು ಭರವಸೆ ನೀಡಿದ್ದರು. ನನ್ನ ಹಾಗೂ ಪತ್ನಿ ಯಶಸ್ವಿನಿ ಹೆಸರಿನಲ್ಲಿ ಖರೀದಿ ಕರಾರು ಪತ್ರ ಮಾಡಿಕೊಟ್ಟಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಆರೋಪಿಗಳು ಎಲ್ಲಿಯೂ ಸಾಲ ಕೊಡಿಸಲಿಲ್ಲ. ಈ ಮಧ್ಯೆ ಆರೋಪಿಗಳು ನಿವೇಶನವನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಈ ಬಗ್ಗೆ ನನಗೆ ಮಾಹಿತಿ ನೀಡಿಲ್ಲ, ಮುಂಗಡ ಹಣವನ್ನೂ ಮರಳಿಸಿಲ್ಲ. ವಿಚಾರಿಸಿದಾಗ ಆರೋಪಿಗಳು ಸ್ಪಂದಿಸಲಿಲ್ಲ. ಸುಳ್ಳು ಭರವಸೆ, ಕೊಡುಗೆಗಳ ಆಮಿಷವೊಡ್ಡಿ ನಿವೇಶನ ಮಾರಾಟದ ಹೆಸರಿನಲ್ಲಿ ಹಲವರನ್ನು ವಂಚಿಸಿರುವ ಅವರ ವಿರುದ್ಧ ಕ್ರಮಕೈಗೊಳ್ಳಿ’ ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

‘ಆಮಿಷವೊಡ್ಡಿ ವಂಚನೆ: ಬುಡ್ಸ್ ಕಾಯ್ದೆಯಡಿ ಪ್ರಕರಣ‘

‘ನಿವೇಶನ ಹೂಡಿಕೆ ಹಾಗೂ ಇತರೆ ಆಮಿಷವೊಡ್ಡಿ ಮಾಸ್ಟರ್ ಆನಂದ್ ರೀತಿಯಲ್ಲಿ ಮತ್ತಷ್ಟು ಮಂದಿಗೆ ಆರೋಪಿಗಳು ವಂಚನೆ ಮಾಡಿರುವ ಅನುಮಾನವಿದೆ. ಅನಿಯಂತ್ರಿತ ಉಳಿತಾಯ ಯೋಜನೆಗಳ ನಿಷೇಧ (ಬಿಯುಡಿಎಸ್‌) ಕಾಯ್ದೆ 2019ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ. ‘ಆರೋಪಿಗಳಿಂದ ನಿವೇಶನ ಹೆಸರಿನಲ್ಲಿ ಯಾರಿಗಾದರೂ ವಂಚನೆಯಾಗಿದ್ದರೆ ಠಾಣೆಗೆ ದೂರು ನೀಡಬಹುದು’ ಎಂದು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT