ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಸುಳುಕೋರರಿಗೆ ಆಧಾರ್, 9 ಮಂದಿ ಬಂಧನ: ಬಿಬಿಎಂಪಿ ಫಾರ್ಮಾಸಿಸ್ಟ್ ಕಿಂಗ್‌ಪಿನ್

ಪ್ರತಿ ‘ಲೆಟರ್‌ಹೆಡ್‌’ಗೆ ₹ 500– ₹1,000 ನಿಗದಿ
Last Updated 11 ಜೂನ್ 2022, 19:29 IST
ಅಕ್ಷರ ಗಾತ್ರ

ಬೆಂಗಳೂರು: ದೇಶದೊಳಗೆ ಅಕ್ರಮವಾಗಿ ನುಸುಳುವ ಹೊರದೇಶದ ಪ್ರಜೆಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಆಧಾರ್ ಮಾಡಿಸಿಕೊಡುತ್ತಿದ್ದ ವ್ಯವಸ್ಥಿತ ಜಾಲವನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಭೇದಿಸಿದ್ದು, ಬಿಬಿಎಂಪಿ ಆಸ್ಪತ್ರೆಯ ಫಾರ್ಮಾಸಿಸ್ಟ್ ಹಾಗೂ ಬಾಂಗ್ಲಾದೇಶದ ಪ್ರಜೆಗಳು ಸೇರಿ 9 ಮಂದಿಯನ್ನು ಬಂಧಿಸಿದ್ದಾರೆ.

ಬಾಂಗ್ಲಾದೇಶದ ಸೈದುಲ್ ಅಕ್ಹೋನ್ ಅಲಿಯಾಸ್ ಶಾಯೀದ್ ಅಹ್ಮದ್ (42), ಈತನ ಮಗ ಸುಮನ್ ಇಸ್ಲಾಮ್, ಮೊಹಮ್ಮದ್ ಅಬ್ದುಲ್ ಅಲೀಂ (35), ಡಿ.ಜೆ.ಹಳ್ಳಿ ನಿವಾಸಿ ಸುಹೇಲ್ ಅಹಮ್ಮದ್ (24), ಕಾಫಿಬೋರ್ಡ್ ಕಾಲೊನಿಯ ಮೊಹಮ್ಮದ್ ಇದಾಯತ್ (25), ಅವಲಹಳ್ಳಿ ಜೆ.ಪಿ.ನಗರದ ಸೈಯದ್ ಮನ್ಸೂರ್ (43), ಚಾಮರಾಜಪೇಟೆಯ ಆಯಿಷಾ ಅಲಿಯಾಸ್ ರಬಿಯಾ (40), ಪಿಳ್ಳಣ್ಣ ಗಾರ್ಡನ್‌ನ ಮೊಹಮ್ಮದ್ ಅಮೀನ್ ಸೇಠ್ (64), ಪರಪ್ಪನ ಅಗ್ರಹಾರದ ರಾಕೇಶ್ (41) ಹಾಗೂ ಜೆ.ಪಿ. ನಗರದ ಇಸ್ತಿಯಾಕ್ ಪಾಷಾ ಅಲಿಯಾಸ್ ಮೆಡಿಕಲ್ (50) ಬಂಧಿತರು.

‘ಆರೋಪಿಗಳು ವ್ಯವಸ್ಥಿತ ಜಾಲ ರೂಪಿಸಿಕೊಂಡು ಆಧಾರ್ ಮಾಡಿಸಿಕೊಡುತ್ತಿದ್ದರು. ಬೌರಿಂಗ್, ವಾಣಿ ವಿಲಾಸ, ಬಿಬಿಎಂಪಿ ಆರೋಗ್ಯ ಕೇಂದ್ರಗಳ 5 ಸೀಲ್‌ಗಳು, 26 ನಕಲಿ ಲೆಟರ್‌ಹೆಡ್, ಸೀಲ್ ತಯಾರು ಮಾಡುವ ಯಂತ್ರ, 16 ಮೊಬೈಲ್, 3 ಕಂಪ್ಯೂಟರ್, 2 ಲ್ಯಾಪ್‌ಟಾಪ್, 2 ಪ್ರಿಂಟರ್, 31 ಆಧಾರ್, 13 ಪಾನ್ ಕಾರ್ಡ್, 28 ಮತದಾರರ ಗುರುತಿನ ಚೀಟಿ, 4 ಈ–ಶ್ರಮ ಕಾರ್ಡ್, 5 ವಾಹನ ಚಾಲನಾ ಪರವಾನಗಿ, 3 ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್, 2 ಎಟಿಎಂ, 92 ಬಿಬಿಎಂಪಿ ವೈದ್ಯರ ಸೀಲ್‌ಗಳು ಆರೋಪಿಗಳ ಬಳಿ ಸಿಕ್ಕಿವೆ’ ಎಂದು ಕೇಂದ್ರ ವಲಯದ ಐಜಿಪಿ ಎಂ. ಚಂದ್ರಶೇಖರ್ ತಿಳಿಸಿದರು.

ದರೋಡೆ ಪ್ರಕರಣದಿಂದ ಬಯಲು: ‘ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯ ಚಿಕ್ಕ ಗೊಲ್ಲರಹಟ್ಟಿಯಲ್ಲಿ ಎಸ್‌ಬಿಐ ಎಟಿಎಂ ಘಟಕದಲ್ಲಿದ್ದ ಯಂತ್ರವನ್ನು ಕದ್ದು, ₹ 18 ಲಕ್ಷ ದೋಚಲಾಗಿತ್ತು. ಇನ್‌ಸ್ಪೆಕ್ಟರ್ ಬಿ.ಎಸ್. ಮಂಜುನಾಥ್ ನೇತೃತ್ವದ ತಂಡ ಪ್ರಕರಣದ ತನಿಖೆ ಕೈಗೊಂಡಾಗಲೇ, ನಕಲಿ ದಾಖಲೆ ಸೃಷ್ಟಿಸಿ ಆಧಾರ್ ಮಾಡಿಸುತ್ತಿದ್ದ ಜಾಲದ ಸುಳಿವು ಲಭ್ಯವಾಯಿತು’ ಎಂದರು.

‘ದರೋಡೆ ಮಾಡಿದ್ದ ಹಣವನ್ನು ಟಾಟಾ ಏಸ್‌ ಗೂಡ್ಸ್ ವಾಹನದಲ್ಲಿ ಗುಜರಿ ಶೆಡ್‌ವೊಂದಕ್ಕೆ ಸಾಗಿಸಲಾಗಿತ್ತು. ಶೆಡ್‌ ಮಾಲೀಕ ಶೇಕ್ ಇಸ್ಮಾಯಿಲ್‌ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಅಕ್ರಮವಾಗಿ ಬೆಂಗಳೂರಿಗೆ ಬರುವ ಬಾಂಗ್ಲಾ ಪ್ರಜೆಗಳಿಗೆ ನಕಲಿ ಆಧಾರ್ ಮಾಡಿಸಿಕೊಟ್ಟು, ದರೋಡೆ ಮಾಡಿಸುತ್ತಿದ್ದ ಸಂಗತಿ ಗೊತ್ತಾಗಿತ್ತು’ ಎಂದರು.

'ಗುಜರಿ ವ್ಯಾಪಾರಕ್ಕೆಂದು ‘ಎನ್‌ಎ ಪ್ಲ್ಯಾಸ್ಟಿಕ್’ ಕಂಪನಿ ತೆರೆದಿರುವ ಆರೋಪಿ ಸೈದುಲ್ ಅಕ್ಹೋನ್ ಹಾಗೂ ಆತನ ಮಗ ಸುಮನ್ ಇಸ್ಲಾಮ್, ಆಧಾರ್ ಜಾಲದಲ್ಲಿ ಸಕ್ರಿಯರಾಗಿದ್ದರು. ಜತೆಯಲ್ಲಿ ಹವಾಲಾ ದಂಧೆ ನಡೆಸುತ್ತಿದ್ದರು’ ಎಂಬ ಮಾಹಿತಿಯನ್ನೂ ಇಸ್ಮಾಯಿಲ್ ಬಾಯ್ಬಿಟ್ಟಿದ್ದ. ನಂತರ, ಸೈದುಲ್ ಹಾಗೂ ಸುಮನ್‌ನನ್ನು ಬಂಧಿಸಿದಾಗ, ಜಾಲದ ಕಾರ್ಯವೈಖರಿ ಬಯಲಾಯಿತು’ ಎಂದೂ ಪೊಲೀಸರು ಹೇಳಿದರು.

ನಕಲಿ ಲೆಟರ್‌ಹೆಡ್ ಸೃಷ್ಟಿಸುತ್ತಿದ್ದ ಫಾರ್ಮಾಸಿಸ್ಟ್: ‘ಬಂಧಿತ ಇಸ್ತಿಯಾಕ್ ಪಾಷಾ, ಬಿಬಿಎಂಪಿ ಆಸ್ಪತ್ರೆಯೊಂದರಲ್ಲಿ ಗುತ್ತಿಗೆ ಆಧಾರದಲ್ಲಿ ಫಾರ್ಮಾಸಿಸ್ಟ್ ಆಗಿ ಕೆಲಸ ಮಾಡುತ್ತಿದ್ದ. ಈತನೇ ಬಿಬಿಎಂಪಿ ವೈದ್ಯಾಧಿಕಾರಿಗಳ ನಕಲಿ ಸಹಿ ಹಾಗೂ ಸೀಲ್ ಬಳಸಿ ಲೆಡರ್‌ಹೆಡ್‌ ಸೃಷ್ಟಿಸುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.

‘ಗೆಜೆಟೆಡ್ ಅಧಿಕಾರಿಗಳ ಸೀಲ್ ಹಾಗೂ ಸಹಿ ಇರುವ ಲೆಟರ್‌ಹೆಡ್‌ ಇರುವವರಿಗೆ ಆಧಾರ್ ಮಾಡಿಕೊಡಲು ಅವಕಾಶವಿದೆ. ಇದೇ ಕಾರಣಕ್ಕೆ, ಆರೋಪಿ ಇಸ್ತಿಯಾಕ್ ನಗರದ ಬಿಬಿಎಂಪಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳ ನಕಲಿ ಲೆಟರ್‌ ಹೆಡ್ ಸೃಷ್ಟಿಸಿ ಆರೋಪಿ ಸೈದುಲ್ ಅಕ್ಹೋನ್ ಜೊತೆ ಸೇರಿ ಬಾಂಗ್ಲಾ ಪ್ರಜೆಗಳಿಗೆ ಆಧಾರ್ ಮಾಡಿಸಿಕೊಡುತ್ತಿದ್ದ. ಸಾಫ್ಟ್‌ವೇರ್ ಎಂಜಿನಿಯರ್ ಆದ ಆರೋಪಿ ರಾಕೇಶ್, ತಾಂತ್ರಿಕ ಸಹಾಯ ಮಾಡುತ್ತಿದ್ದ' ಎಂದೂ ಹೇಳಿದರು.

‘ನಕಲಿ ಲೆಡರ್‌ ಹೆಡ್‌ ಬಳಸಿಕೊಂಡು ಬಾಂಗ್ಲಾ ಪ್ರಜೆಗಳು, ಬೆಂಗಳೂರು ಒನ್ ಕೇಂದ್ರದಲ್ಲಿ ಆಧಾರ್ ನೋಂದಣಿ ಮಾಡಿಸುತ್ತಿದ್ದರು’ ಎಂದರು. ‘ನಕಲಿ ದಾಖಲೆ ಸೃಷ್ಟಿಸಿಕೊಡಲು ಆರೋಪಿಗಳು, ಪ್ರತಿಯೊಬ್ಬರಿಂದ ₹500 ಹಾಗೂ ₹1,000 ಪಡೆಯುತ್ತಿದ್ದರು’ ಎಂದೂ ಹೇಳಿದರು.

‘₹ 4 ಕೋಟಿ ವಹಿವಾಟು’
‘ಬಾಂಗ್ಲಾದ ಆರೋಪಿ ಸೈದುಲ್ ಅಕ್ಹೋನ್, 2011ರಲ್ಲಿ ನಗರಕ್ಕೆ ಬಂದು ಗುಜರಿ ವ್ಯಾಪಾರ ಮಾಡಲಾರಂಭಿಸಿದ್ದ. ತಾನೂ ನಕಲಿ ದಾಖಲೆ ಸೃಷ್ಟಿಸಿ ಆಧಾರ್ ಮಾಡಿಸಿಕೊಂಡಿದ್ದ. ಹವಾಲಾ ದಂಧೆಯಲ್ಲೂ ಭಾಗಿಯಾಗಿದ್ದ. ಈತನ ಎಸ್‌ಬಿಐ ಹಾಗೂ ಆ್ಯಕ್ಸಿಸ್ ಬ್ಯಾಂಕ್‌ ಖಾತೆಗಳ ಮೂಲಕ ವರ್ಷಕ್ಕೆ ₹ 4 ಕೋಟಿ ವಹಿವಾಟು ನಡೆಸಿರುವುದು ಗೊತ್ತಾಗಿದ್ದು, ಎಲ್ಲ ಖಾತೆಗಳನ್ನು ಜಪ್ತಿ ಮಾಡಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಠಾಣೆವಾರು ಸಮೀಕ್ಷೆಗೆ ನಿರ್ದೇಶನ
ಅಕ್ರಮ ವಲಸಿಗರಿಗೆ ಆಧಾರ್ ಮಾಡಿಸಿಕೊಡುತ್ತಿದ್ದ ಜಾಲ ಭೇದಿಸಿರುವ ಮಾದನಾಯಕನಹಳ್ಳಿ ಠಾಣೆ ಪೊಲೀಸರ ತನಿಖೆಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಶ್ಲಾಘಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಅಕ್ರಮ ವಲಸಿಗರ ವಿರುದ್ಧ ಸರ್ಕಾರ ಗಂಭೀರ ಕ್ರಮಗಳನ್ನು ತೆಗೆದುಕೊಂಡಿದೆ. ಅಕ್ರಮ ವಾಸಿಗಳು ಹಾಗೂ ಅವರಿಗೆ ಆಶ್ರಯ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದ ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಿ, ಅಕ್ರಮ ವಲಸಿಗರನ್ನು ಪತ್ತೆ ಮಾಡಿ ಕ್ರಮ ಜರುಗಿಸುವಂತೆ ಪೊಲೀಸರಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

*
ನಕಲಿ ದಾಖಲೆ ಸೃಷ್ಟಿಸಿ ಆಧಾರ್ ಮಾಡಿಸಿಕೊಡುತ್ತಿದ್ದ ಜಾಲ ಭೇದಿಸಿರುವ ಪೊಲೀಸರ ತಂಡಕ್ಕೆ ₹ 75 ಸಾವಿರ ಬಹುಮಾನ ಘೋಷಿಸಲಾಗಿದೆ.
-ಡಾ. ಕೋನ ವಂಶಿಕೃಷ್ಣ, ಬೆಂಗಳೂರು ಗ್ರಾಮಾಂತರ ಎಸ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT