ಬುಧವಾರ, ಜೂನ್ 29, 2022
23 °C

ಅಂಧ ದಂಪತಿಗೆ ನೆರವಾದ ಪಿಎಸ್‌ಐ: ಮಾನವೀಯ ಕಾರ್ಯಕ್ಕೆ ಬೆಂಗಳೂರು ಪೊಲೀಸ್ ಮೆಚ್ಚುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್ ಲಾಕ್‌ಡೌನ್‌ನ ಈ ಪರಿಸ್ಥಿತಿಯಲ್ಲಿ ನಗರದ ಪಿಎಸ್‌ಐ ಒಬ್ಬರು ಅಂಧ ದಂಪತಿಗೆ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.

ವಿಜಯನಗರದ ಪೊಲೀಸ್ ಠಾಣೆ ಬಳಿ ಕಂಡುಬಂದ ಅಂಧ ದಂಪತಿಗೆ ಪಿಎಸ್‌ಐ ಮನು ಅವರು ದಿನಸಿ ಪದಾರ್ಥ, ಔಷಧ ಹಾಗೂ ಇತರ ಅಗತ್ಯ ಸಾಮಗ್ರಿ ಖರೀದಿಸಿ ಒದಗಿಸಿಕೊಡುವ ಮೂಲಕ ನೆರವಾಗಿದ್ದಾರೆ.

ಮನು ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಬೆಂಗಳೂರು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ. ಸಂಜೀವ್ ಎಂ ಪಾಟೀಲ್ ಟ್ವೀಟ್ ಮಾಡಿದ್ದಾರೆ.

‘ವಿಜಯನಗರ ಪೊಲೀಸ್ ಠಾಣೆಯ ಬಳಿ ಅಸಹಾಯಕರಾಗಿ ಕಂಡ ಅಂಧ ದಂಪತಿಗಳ ಜೀವನ ನಿರ್ವಹಣೆಗಾಗಿ ದಿನಸಿ ಪದಾರ್ಥಗಳನ್ನು, ಅವರ ಇಬ್ಬರು ಪುಟ್ಟ ಮಕ್ಕಳ ಪೋಷಣೆಗಾಗಿ ಅಗತ್ಯವಿದ್ದ ಸಾಮಗ್ರಿ ಹಾಗೂ ಔಷಧಿಗಳನ್ನು ಪೂರೈಸುವ ಮೂಲಕ ಮಾನವೀಯತೆ ಮೆರೆದ ಪಿಎಸ್‌ಐ ಮನು ಅವರನ್ನು ತುಂಬು ಹೃದಯದಿಂದ ಶ್ಲಾಘಿಸುತ್ತೇವೆ’ ಎಂದು ಪಾಟೀಲ್ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಆರ್‌ಎಂಸಿ ಯಾರ್ಡ್ ಸಮೀಪದ ನಿವಾಸಿಗಳಾದ ಬಸವರಾಜು–ಚಿನ್ನಮ್ಮ ದಂಪತಿಗೆ ಎರಡು ವರ್ಷದ ಮಗು ಹಾಗೂ ಆರು ತಿಂಗಳ ಮಗು ಇದೆ. ಲಾಕ್‌ಡೌನ್‌ನಿಂದಾಗಿ ಜೀವನ ನಡೆಸುವುದೇ ಕಷ್ಟವಾಗಿತ್ತು. ನಿರ್ಗತಿಕರಿಗೆ ದಿನಸಿ ನೀಡುತ್ತಿದ್ದ ಸುದ್ದಿ ತಿಳಿದ ದಂಪತಿ, ಮಕ್ಕಳ ಸಮೇತ ವಿಜಯನಗರಕ್ಕೆ ಬಂದಿದ್ದರು.

ವಿಜಯನಗರ ಠಾಣೆ ಬಳಿ ದಂಪತಿಯನ್ನು ಮಾತನಾಡಿಸಿದ್ದ ಸಬ್‌ ಇನ್‌ಸ್ಪೆಕ್ಟರ್ (ಪಿಎಸ್‌ಐ) ಮನು, ಅವರ ಕಥೆ ಕೇಳಿ ಕಣ್ಣೀರಿಟಿದ್ದರು. ನಾಲ್ಕು ತಿಂಗಳಿಗೆ ಆಗುವಷ್ಟು ದಿನಸಿ ಖರೀದಿಸಿ ನೀಡಿದರು. ನಂತರ ಆಟೊದಲ್ಲಿ ದಂಪತಿಯನ್ನು ಮನೆಗೆ ಕಳುಹಿಸಿದ್ದರು. 50 ಕೆ.ಜಿ ಅಕ್ಕಿ, 10 ಕೆ.ಜಿ ಬೇಳೆ, 5 ಕೆ.ಜಿ ಗೋಧಿ ಹಿಟ್ಟು, 10 ಲೀಟರ್ ಎಣ್ಣೆ, 12 ಮೈ ಸೋಪು, 12 ಬಟ್ಟೆ ಸೋಪು, 10 ಕೆ.ಜಿ. ಸಕ್ಕರೆ, 2 ಕೆ.ಜಿ ಟೀ ಪುಡಿ, 1 ಕೆ.ಜಿ ಹಾಲಿನ ಪೌಡರ್, ಬಿಸ್ಕೆಟ್, ಮಗುವಿಗೆ ಪೌಡರ್ ಹಾಗೂ ಮಕ್ಕಳಿಗೆ ಬೇಕಾದ ಔಷಧಿಗಳು ದಿನಸಿ ಜೊತೆಯಲ್ಲಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು