ಶನಿವಾರ, ಅಕ್ಟೋಬರ್ 23, 2021
20 °C
ರಾಜರಾಜೇಶ್ವರಿನಗರ, ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಹೆಚ್ಚು ಅನಾಹುತ

ಮಳೆ ಅಬ್ಬರಕ್ಕೆ ನಲುಗಿದ ಬೆಂಗಳೂರಿಗರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ಭಾನುವಾರ ರಾತ್ರಿ ಅಬ್ಬರಿಸಿದ ಮಳೆಗೆ ಇಡೀ ಬೆಂಗಳೂರು ತಲ್ಲಣಗೊಂಡಿದೆ. ರಸ್ತೆಗೆ ಬಿದ್ದಿದ್ದ ಮರಕ್ಕೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಸವಾರರೊಬ್ಬರು ಮೃತಪಟ್ಟಿದ್ದಾರೆ. 18 ಜಾನುವಾರುಗಳೂ ಮಳೆಗೆ ಬಲಿಯಾಗಿವೆ. 600ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಹಾನಿಯುಂಟಾಗಿದೆ.

25ಕ್ಕೂ ಹೆಚ್ಚು ಮರಗಳು ಮತ್ತು ಮರದ ಕೊಂಬೆಗಳು ರಸ್ತೆಗೆ ಉರುಳಿವೆ. ಕಾರು, ದ್ವಿಚಕ್ರ ವಾಹನ, ಆಟೋರಿಕ್ಷಾಗಳು, ಟೆಂಪೊ ಟ್ರಾವೆಲರ್‌ಗಳು ಸೇರಿ ನೂರಕ್ಕೂ ಹೆಚ್ಚು ವಾಹನಗಳು ನೀರಿನಲ್ಲಿ ಮುಳುಗಿ ಹಾಳಾಗಿವೆ.

ಬಿಬಿಎಂಪಿಯ ರಾಜರಾಜೇಶ್ವರಿ ನಗರ ಮತ್ತು ಪಶ್ಚಿಮ ವಲಯದಲ್ಲೇ ಹೆಚ್ಚಿನ ಹಾನಿಯಾಗಿದೆ. ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ ಬಡಾವಣೆಯಲ್ಲಿ ರಾಜಕಾಲುವೆ ಉಕ್ಕಿ ಮನೆಗಳಿಗೆ ನೀರು ನುಗ್ಗಿ ಭಾರಿ ಪ್ರಮಾಣದ ಹಾನಿಯಾಗಿದೆ. ರಸ್ತೆ ಬದಿಯಲ್ಲಿರುವ ಎರಡು ಗ್ಯಾರೇಜ್‌ಗಳಿಗೂ ನೀರು ನುಗ್ಗಿದ್ದು, ಅಲ್ಲಿದ್ದ ಕಾರುಗಳೆಲ್ಲವೂ ನೀರಿನಲ್ಲಿ ಮುಳುಗಿದ್ದವು.

ಪ್ರವಾಹದಂತೆ ನುಗ್ಗಿದ ನೀರಿನ ಜೊತೆಗೆ ಕೆಸರು ಕೂಡ ಮನೆ ಮತ್ತು ರಸ್ತೆಗಳನ್ನು ಆವರಿಸಿಕೊಂಡಿತ್ತು. ರಾತ್ರಿಯಿಡೀ ಜಾಗರಣೆ ಮಾಡಿದ ನಿವಾಸಿಗಳು ನೀರು ಮತ್ತು ಕೆಸರು ಹೊರ ಹಾಕಲು ಪಡಿಪಾಟಲು ಅನುಭವಿಸಿದರು. ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳು ನೀರಿನಲ್ಲಿ ಮುಳುಗಿ ಹಾಳಾದವು. ಈ ಬಡಾವಣೆಯ ಕೊಟ್ಟಿಗೆಯೊಂದರಲ್ಲಿ ಕಟ್ಟಿದ್ದ 18 ಜಾನುವಾರುಗಳು ಮೃತಪಟ್ಟಿವೆ.

ನೈಸ್‌ ರಸ್ತೆ ಸಮೀಪದ ಪ್ರಮೋದ್ ಲೇಔಟ್‌ನಲ್ಲೂ ರಾಜಕಾಲುವೆ ನೀರು ಮನೆಗಳಿಗೆ ನುಗ್ಗಿದೆ. ರಾಜಕಾಲುವೆಗೆ ಇದ್ದ ತಡೆಗೋಡೆಯನ್ನೇ ಒಡೆದುಕೊಂಡು ನೀರು ಬಡಾವಣೆಗೆ ಪ್ರವಾಹವಾಗಿ ಆವರಿಸಿಕೊಂಡಿತ್ತು. ರಾಜಕಾಲುವೆ ಪಕ್ಕದ ಬಹುತೇಕ ಮನೆಗಳ ತಳ ಮಹಡಿಗೆ ನೀರು ನುಗ್ಗಿತ್ತು. ಆ ಸಂದರ್ಭದಲ್ಲಿ ಜೋರು ಮಳೆ ಸುರಿಯುತ್ತಿದ್ದರಿಂದ ಮನೆಯಿಂದ ಹೊರ ಬರಲು ಸಾಧ್ಯವಾಗದೆ ಮಕ್ಕಳು ಮತ್ತು ವೃದ್ಧರು ಸಮಸ್ಯೆ ಎದುರಿಸಿದರು ಎಂದು ಪ್ರಮೋದ್ ಲೇಔಟ್‌ ಸರೋಜ ತಿಳಿಸಿದರು.

‘ಮಳೆ ಬಂದಾಗಲೆಲ್ಲಾ ಪ್ರಮೋದ್ ಲೇವೌಟ್‌ನ ಕೆಲ ಮನೆಗಳಿಗೆ ನೀರು ನುಗ್ಗುವುದು ಸಾಮಾನ್ಯವಾಗಿಬಿಟ್ಟಿದೆ. ತಡೆಗೋಡೆ ಇದ್ದರೂ ನೀರು ನುಗ್ಗುವುದು ತಪ್ಪಿಲ್ಲ. ವರ್ಷದಲ್ಲಿ ನಾಲ್ಕು ಬಾರಿಯಾದರೂ ಇದು ಮರುಕಳಿಸುತ್ತಿದೆ. ನೆಮ್ಮದಿಯಿಂದ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ಅಳಲು ತೋಡಿಕೊಂಡರು.

ರಾಜರಾಜೇಶ್ವರಿನಗರ, ಶಕ್ತಿಗಣಪತಿನಗರ, ಜೆ.ಸಿ.ನಗರ, ಐಡಿಯಲ್ ಹೋಮ್ ಲೇಔಟ್, ಹೊರಮಾವು, ರಾಮಮೂರ್ತಿನಗರ, ಮಹದೇವಪುರ, ಬಾಪೂಜಿನಗರ, ಹೊಸಕೆರೆಹಳ್ಳಿ, ದಾಸರಹಳ್ಳಿ, ಸಂಪಂಗಿರಾಮನಗರ, ಡಿ ಗ್ರೂಪ್ ಲೇಔಟ್, ನಾಗರಭಾವಿ, ಬಿಡಿಎ ಲೇಔಟ್, ಸುಂಕದಕಟ್ಟೆ, ಗಾಳಿ ಅಂಜನೇಯಸ್ವಾಮಿ ದೇವಸ್ಥಾನ ವಾರ್ಡ್, ಕೋರಮಂಗಲ ಆರನೇ ಹಂತ, ಶಂಕರಮಠ, ಕಮಲನಗರ, ವೃಷಭಾವತಿ ನಗರ, ಬಸವೇಶ್ವರನಗರ, ಆರ್‌ಎಂವಿ ಎಕ್ಸ್‍ಟೆನ್ಷನ್, ಜನಪ್ರಿಯ ಲೇಔಟ್, ಕೆಂಚನಹಳ್ಳಿ, ಎಚ್‍ಎಎಲ್‍ನ ಬಸವನಗರ ಸೇರಿ ಹಲವೆಡೆ ಮಳೆ ಅವಾಂತರ ಸೃಷ್ಟಿಸಿತ್ತು.

ಎಚ್‌ಎಎಲ್‌ ಏರ್‌ಪೋರ್ಟ್‌ ವಾರ್ಡಿನ ರಮೇಶನಗರದಲ್ಲಿ ಮಳೆ ನೀರಿನ ಚರಂಡಿ ಕಟ್ಟಿಕೊಂಡು ಎಚ್‌ಎಎಲ್‌ ಸಂಸ್ಥೆಯ ಹಳೆಯ ಕಾಂಪೌಂಡ್‌ ಗೋಡೆ ಕುಸಿದು ಬಿದ್ದಿದೆ. ಗೋಡೆ ಪಕ್ಕದಲ್ಲಿ ನಿಲ್ಲಿಸಿದ್ದ 3 ವಾಹನಗಳು ಜಖಂಗೊಂಡಿವೆ.

ಮನೆಗಳಲ್ಲಿ ಕೊಳಚೆ ನೀರು ತೆರವಿಗೆ ಜಾಗರಣೆ ಮಾಡಿದ್ದವರು ಸೋಮವಾರವೂ ಮನೆ ಮತ್ತು ಮನೆ ಮುಂದಿನ ರಸ್ತೆ ಸ್ವಚ್ಛಗೊಳಿಸುವ ಕೆಲಸದಲ್ಲಿ ನಿರತರಾಗಿದ್ದರು. ನೀರು ನುಗ್ಗುವುದನ್ನು ತಪ್ಪಿಸದ ಬಿಬಿಎಂಪಿ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.

ಅಂಗಡಿ ಮಳಿಗೆಗೆ ನೀರು ನುಗ್ಗಿ ಅಪಾರ ಹಾನಿ

ಜೆ.ಸಿ. ನಗರ, ಸಂಪಂಗಿರಾಮನಗರ, ನಾಗರಭಾವಿಯ ಡಿ. ಗ್ರೂಪ್ ಲೇಔಟ್‌ನಲ್ಲಿ ಅಂಗಡಿ ಮಳಿಗೆಗಳಿಗೂ ನೀರು ನುಗ್ಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನೀರಿನಲ್ಲಿ ಮುಳುಗಿದ್ದವು. ಜೆ.ಸಿ.ನಗರದ ತೌಸಿಯಾ ಎಂಬುವವರಿಗೆ ಸೇರಿದ ಎಲೆಕ್ಟ್ರಾನಿಕ್ಸ್ ವಸ್ತುಗಳ ಮಳಿಗೆಗೆ ನೀರು ನುಗ್ಗಿ ವಸ್ತುಗಳೆಲ್ಲ ಹಾಳಾಗಿವೆ. ಡಿ. ಗ್ರೂಪ್ ಲೇಔಟ್‍ನ ಎಲೆಕ್ಟ್ರಾನಿಕ್ಸ್ ಉಪಕರಣಗಳ ಮಾರಾಟ ಮಳಿಗೆಗೆ ನೀರು ನುಗ್ಗಿದ್ದು,  ವಾಷಿಂಗ್ ಮಷಿನ್‌ಗಳು, ಮೈಕ್ರೋ ಓವೆನ್ ಮತ್ತು ಟಿವಿಗಳು ನೀರಿನಲ್ಲಿ ಮುಳುಗಿ ಹಾಳಾಗಿವೆ. ಪಕ್ಕದಲ್ಲೇ ಇದ್ದ ಬ್ಯಾಗ್ ಮತ್ತು ಹೆಲ್ಮೆಟ್ ಅಂಗಡಿ, ಗಂಥಿಗೆ ಅಂಗಡಿಗೂ ನೀರು ನುಗ್ಗಿ ಹಾಳಾಗಿವೆ. ‘ಪಿತೃಪಕ್ಷ ಇದ್ದುದರಿಂದ ₹ 1 ಲಕ್ಷ ಮೌಲ್ಯದ ವಸ್ತುಗಳನ್ನು ಅಂಗಡಿಗೆ ತಂದಿದ್ದೆ. ಇದೀಗ ರಾತ್ರೋರಾತ್ರಿ ಎಲ್ಲ ವಸ್ತುಗಳು ನಾಶವಾಗಿವೆ’ ಎಂದು ಅಂಗಡಿ ಮಾಲೀಕರು ಬೇಸರ ವ್ಯಕ್ತಪಡಿಸಿದರು.

ವಾಲಿದ ಕಟ್ಟಡ; ಬಿಬಿಎಂಪಿ ನೋಟಿಸ್

ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ಶ್ರೀಗಂಧದ ಕಾವಲ್‌ನ ಡಿ ಗ್ರೂಪ್ ಬಡಾವಣೆಯಲ್ಲಿ ರಾಜಕಾಲುವೆ ಪಕ್ಕದಲ್ಲಿ ಮೂರು ಅಂತಸ್ತಿನ ಕಟ್ಟಡವೊಂದು ವಾಲಿದ್ದು, ಕಟ್ಟಡದಲ್ಲಿ ವಾಸ ಇರುವವರ ಸ್ಥಳಾಂತರಕ್ಕೆ ಬಿಬಿಎಂಪಿ ನೋಟಿಸ್ ನೀಡಿದೆ.

ತಳ ಅಂತಸ್ತಿನಿಂದಲೇ ಬಿರುಕು ಬಿಟ್ಟಿದ್ದು, ಅಷ್ಟೇನೂ ಹಳೆಯದಲ್ಲದ ಕಟ್ಟಡ ವಾಲಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ರಾಜಕಾಲುವೆಯ ಮೀಸಲು ‍ಪ್ರದೇಶದಲ್ಲಿ ಕಟ್ಟಡ ನಿರ್ಮಾಣವಾಗಿದೆ. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸುವಂತೆಯೂ ನೋಟಿಸ್‌ನಲ್ಲಿ ಬಿಬಿಎಂಪಿ ತಿಳಿಸಿದೆ.

ತಜ್ಞರನ್ನು ನೇಮಿಸಿಕೊಂಡು ಕಟ್ಟಡದ ಸುರಕ್ಷತೆ ಮತ್ತು ಸದೃಡತೆ ಬಗ್ಗೆ ವರದಿ ಸಲ್ಲಿಸುವಂತೆ ವಲಯದ ಜಂಟಿ ಆಯುಕ್ತರು ಕಾರ್ಯಪಾಲಕ ಎಂಜಿನಿಯರ್‌ಗೆ ಸೂಚನೆ ನೀಡಿದ್ದಾರೆ.

‘ಸಂತ್ರಸ್ತರಿಗೆ ₹ 10 ಸಾವಿರ ತನಕ ಪರಿಹಾರ’

‘ಮಳೆ ನೀರು ಮನೆಗೆ ನುಗ್ಗಿ ಧವಸಧಾನ್ಯಗಳು, ಪರಿಕರಗಳು ಹಾನಿಯಾದರೆ ತಲಾ ₹ 10 ಸಾವಿರ ಪರಿಹಾರ ನೀಡಲು ಅವಕಾಶವಿದೆ. ಮಂಗಳವಾರದೊಳಗೆ ಸಂತ್ರಸ್ತರ ಪಟ್ಟಿ ತಯಾರಿಸುವಂತೆ ಮುಖ್ಯ ಆಯುಕ್ತ ಗೌರವ್‌ ಗುಪ್ತ ಸೂಚನೆ ನೀಡಿದ್ದಾರೆ. ಅದರಂತೆ ಸಂತ್ರಸ್ತರ ಪಟ್ಟಿ ತಯಾರಿಸುತ್ತಿದ್ದೇವೆ’ ಎಂದು ಪಶ್ಚಿಮ ವಲಯದ ಜಂಟಿ ಆಯುಕ್ತ ಶಿವಸ್ವಾಮಿ ತಿಳಿಸಿದರು.

ಪಶ್ಚಿಮ ವಲಯದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದ ಪ್ರದೇಶಗಳಿಗೆ ಅವರು ಸೋಮವಾರ ಭೇಟಿ ನೀಡಿದರು.

‘ಮಹಾಲಕ್ಷ್ಮಿ ಲೇಔಟ್‌ ವಿಧಾನಸಭಾ ಕ್ಷೇತ್ರದಲ್ಲಿ 350ಕ್ಕೂ ಅಧಿಕ ಮನೆಗಳಿಗೆ ಮತ್ತು ಗೋವಿಂದರಾಜನಗರ ಕ್ಷೇತ್ರದಲ್ಲಿ 80ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ’ ಎಂದು ಅವರು ತಿಳಿಸಿದರು.

ಲಗ್ಗೆರೆಯಿಂದ ಕೆಂಗೇರಿ ಕಡೆಗೆ ಹರಿಯುವ ಮುಖ್ಯ ರಾಜಕಾಲುವೆಯಲ್ಲಿ ಸರಿಯಾಗಿ ಹೂಳೆತ್ತಿಲ್ಲ. ಮಳೆಯು ‍ಪ್ರಮಾಣವೂ ಅಧಿಕವಾಗಿತ್ತು. ಹಾಗಾಗಿ ಸಮಸ್ಯೆ ಎದುರಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ರಾಜರಾಜೇಶ್ವರಿನಗರ ವಲಯದ ದೊಡ್ಡಬಿದರಕಲ್ಲು, ರಾಜರಾಜೇಶ್ವರಿನಗರ, ಕೊಟ್ಟಿಗೆಪಾಳ್ಯ, ಲಗ್ಗೆರೆ ಸುತ್ತಮುತ್ತ 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ ಎಂದು ರಾಜರಾಜೇಶ್ವರಿ ನಗರದ ಜಂಟಿ ಆಯುಕ್ತ ನಾಗರಾಜ್ ತಿಳಿಸಿದರು.

ಪ್ರದೇಶ; ಮಳೆಯ ಪ್ರಮಾಣ(ಮಿಲಿ ಮೀಟರ್‌)

ಜ್ಞಾನಭಾರತಿ; 98

ನಾಗರಬಾವಿ; 91

ಹಂಪಿನಗರ; 90

ನಂದಿನಿ ಲೇಔಟ್; 78

ಹೆಗ್ಗನಹಳ್ಳಿ; 67.5

ಮಾರುತಿ ಮಂದಿರ; 64.5

ವಿ.ವಿ ಪುರ; 58.5

ರಾಜರಾಜೇಶ್ವರಿನಗರ; 53.5

ದಯಾನಂದನಗರ; 48.5

–––––

ಯಾವ ವಲಯದಲ್ಲಿ ಎಷ್ಟು ಹಾನಿ

ವಲಯ; ಹಾನಿ

ಪೂರ್ವ; 7 ಮನೆಗಳು

ಪಶ್ಚಿಮ; 10 ಮನೆಗಳು

ದಕ್ಷಿಣ; 2 ಮರಗಳು, 3 ಮನೆಗಳು

ರಾಜರಾಜೇಶ್ವರಿನಗರ; 15 ಮನೆಗಳು

ದಾಸರಹಳ್ಳಿ; 5 ಮನೆಗಳು

ಮಹದೇವಪುರ; 4 ಮನೆಗಳು, 10 ಅಡಿ ಎತ್ತರದ ಕಾಂಪೌಂಡ್ ಬಿದ್ದಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು