ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಇಲ್ಲದೆ ಕೈಗಾರಿಕೆ ಅಭಿವೃದ್ಧಿ ಹೇಗೆ?

ಬೆಸ್ಕಾಂಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಬೇಡಿಕೆಗಳ ಪಟ್ಟಿ
Last Updated 20 ಆಗಸ್ಟ್ 2019, 19:46 IST
ಅಕ್ಷರ ಗಾತ್ರ

ಬೆಂಗಳೂರು:ಸಮರ್ಪಕ ವಿದ್ಯುತ್‌ ಪೂರೈಕೆ ಇಲ್ಲದೆ ಕೈಗಾರಿಕೆಗಳು ಹೇಗೆ ಕಾರ್ಯನಿರ್ವಹಿಸಬೇಕು? ಕುಂಬಳಗೋಡು ಕೈಗಾರಿಕಾ ಪ್ರದೇಶದಲ್ಲಿ ಬೇಕೆಂದಾಗ ಲೋಡ್‌ ಶೆಡ್ಡಿಂಗ್‌ ಮಾಡುತ್ತಾರೆ. ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಮಾಚೋಹಳ್ಳಿಯಲ್ಲಿ ಕಾರ್ಖಾನೆಗಳಲ್ಲಿ ನಿರಂತರ ವಿದ್ಯುತ್‌ ಸಮಸ್ಯೆ ಇರುತ್ತದೆ. ಪವರ್‌ಮೆನ್‌ಗಳಿಗೆ ಅಕ್ಷರಶಃ ಕೈವೊಡ್ಡಿ ಬೇಡುವ ಸ್ಥಿತಿ ಇದೆ.

ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ಅವರ ಎದುರು ಉದ್ಯಮಿಗಳು ಇಟ್ಟ ಅಹವಾಲುಗಳಿವು. ನಗರದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ (ಎಫ್‌ಕೆಸಿಸಿಐ) ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಉದ್ಯಮಿಗಳ ದೂರುಗಳನ್ನು ಆಲಿಸಿದ ಶಿಖಾ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

‘ಬೆಸ್ಕಾಂ ವ್ಯಾಪ್ತಿಯಲ್ಲಿ ಕೈಗಾರಿಕೆಗಳ ವಿದ್ಯುತ್‌ ಬಳಕೆಯ ಪ್ರಮಾಣ ಕಡಿಮೆಯಾಗಿಲ್ಲ. ಈ ಬಾರಿಯ ಮಳೆಗಾಲದಲ್ಲಿ ಜಲವಿದ್ಯುತ್‌ ಉತ್ಪಾದನೆ ಪ್ರಮಾಣ ಹೆಚ್ಚಾಗಿದೆ. ಅಲ್ಲದೆ, ಎ.ಸಿ ಬಳಕೆ ಕಡಿಮೆ ಇರುವುದು ಮತ್ತು ನೀರಾವರಿ ಪಂಪ್‌ಸೆಟ್‌ಗಳ ಬಳಕೆ ಕಡಿಮೆಯಾಗಿರುವುದರಿಂದ ವಿದ್ಯುತ್‌ ಉಳಿತಾಯವಾಗಿದೆ. ₹338 ಕೋಟಿ ಮೊತ್ತದ ವಿದ್ಯುತ್‌ ಅನ್ನು ಭಾರತೀಯ ಇಂಧನ ವಿನಿಮಯ (ಐಇಎಕ್ಸ್‌) ಅಡಿ ಮಾರಾಟ ಮಾಡಲಾಗಿದೆ. ಮುಂದೆ, ಸ್ಪರ್ಧಾತ್ಮಕ ಬೆಲೆಯಲ್ಲಿ ಕೈಗಾರಿಕೆಗಳಿಗೆ ವಿದ್ಯುತ್‌ ಪೂರೈಸಲು ಇದರಿಂದ ಸಾಧ್ಯವಾಗಲಿದೆ’ ಎಂದು ಹೇಳಿದರು.‘ಸ್ವಾಧೀನಾನುಭವ ಪತ್ರ (ಓಸಿ) ಒದಗಿಸುವ ವಿಚಾರ ಹಲವು ಇಲಾಖೆಗಳಿಗೆ ಸಂಬಂಧಪಟ್ಟ ವಿಚಾರ. ಕಟ್ಟಡದ ಬೈಲಾ ಪ್ರಕಾರ, ಬಿಬಿಎಂಪಿ ಸ್ವಾಧೀನಾನುಭವ ಪತ್ರ ನೀಡುತ್ತದೆ. ಆ ಕಟ್ಟಡ ಅಥವಾ ಮನೆಗೆ ವಿದ್ಯುತ್‌ ಸಂಪರ್ಕ ನೀಡುವ ವೇಳೆ ಈ ದಾಖಲೆ ನೀಡುವಂತೆ ಬೆಸ್ಕಾಂ ಕೇಳುತ್ತದೆ. ಕೆಇಆರ್‌ಸಿ ಈ ಕುರಿತು ಬೆಸ್ಕಾಂಗೆ ಸೂಚನೆ ನೀಡಿದೆ. ಅದೇ ಕೈಗಾರಿಕೆಯಲ್ಲಿ ಹೆಚ್ಚುವರಿ ಕಟ್ಟಡಕ್ಕೆ ವಿದ್ಯುತ್‌ ಸಂಪರ್ಕ ಒದಗಿಸುವ ವೇಳೆಯಲ್ಲಿಯೂ ಓಸಿ ಕೇಳುವುದು ಸರಿಯಲ್ಲ ಎಂದು ಎಫ್‌ಕೆಸಿಸಿಐ ಮನವಿ ಮಾಡಿದೆ. ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

ಭೂಗತ ಕೇಬಲ್‌ ಕಾಮಗಾರಿ:ನಗರದಲ್ಲಿ ಭೂಗತ ಕೇಬಲ್‌ ಅಳವಡಿಕೆ ಕಾರ್ಯ ಕೈಗೊಂಡ ಕಾರಣ ಕೆಲವು ಪ್ರದೇಶದಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಈ ಕಾಮಗಾರಿ ಪೂರ್ಣಗೊಂಡ ನಂತರ ವಿದ್ಯುತ್‌ ಪೂರೈಕೆಯಲ್ಲಿ ಹೆಚ್ಚು ವ್ಯತ್ಯಯವಾಗುವುದಿಲ್ಲ. ಹೆಚ್ಚು ಮಳೆ–ಗಾಳಿ ಇದ್ದ ಸಂದರ್ಭದಲ್ಲಿಯೂ ಯಾವುದೇ ಅಡೆ–ತಡೆಯಿಲ್ಲದೆ ವಿದ್ಯುತ್‌ ಪೂರೈಸಬಹುದು. ಒಟ್ಟು ₹5,200 ಕೋಟಿಯ ಈ ಕಾಮಗಾರಿಯನ್ನು ಮೂರು ಹಂತಗಳಲ್ಲಿ ಕೈಗೊಳ್ಳಲಾಗುತ್ತಿದೆ. ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಿಖಾ ತಿಳಿಸಿದರು.

ಉದ್ಯಮಿಗಳ ಬೇಡಿಕೆಗಳು

*ರಾಜ್ಯದಲ್ಲಿ ಅಸಮರ್ಪಕ ವಿದ್ಯುತ್‌ ಪೂರೈಕೆಯಿಂದ ಕೈಗಾರಿಕೆಗಳ ಕಾರ್ಯನಿರ್ವಹಣಾ ಸಾಮರ್ಥ್ಯ ಕುಗ್ಗುತ್ತಿದೆ. 2018–19ರಲ್ಲಿ ನಿರ್ಮಾಣ ವಲಯದಿಂದ ರಾಜ್ಯಕ್ಕೆ ಸಿಗುವ ಆದಾಯ ಶೇ 25ರಿಂದ ಶೇ 15ಕ್ಕೆ ಕುಸಿದಿದೆ.

*ಕೈಗಾರಿಕೆಗಳು ಕೂಡ ಸ್ವಾಧೀನಾನುಭವ ಪತ್ರ ನೀಡಬೇಕು ಎಂಬುದನ್ನು ಕಡ್ಡಾಯ ಮಾಡಲಾಗಿದೆ. ಇದರ ಬದಲು, ಮಾಲೀಕತ್ವದ ದಾಖಲೆಗಳು ಅಥವಾ ಪಾಲುದಾರಿಕೆ ಒಪ್ಪಂದದ ದಾಖಲೆಗಳನ್ನು ಮಾತ್ರ ನೀಡಲು ಅವಕಾಶ ಮಾಡಿಕೊಡಬೇಕು.

*ಪೂರ್ವ ಪಾವತಿ ಮೀಟರ್‌ ಮೂಲಕ ವಿದ್ಯುತ್‌ ಪೂರೈಕೆ ಮಾಡುವುದು ಉತ್ತಮ. ಕೈಗಾರಿಕೆಗಳಿಂದ ಒಂದು ತಿಂಗಳು ಮುಂಚಿತವಾಗಿ ಸರಾಸರಿ ಶುಲ್ಕವನ್ನು ಪಡೆದು ವಿದ್ಯುತ್‌ ಪೂರೈಸಬೇಕು. ಇದರ ಬದಲಾಗಿ, ಭದ್ರತಾ ಠೇವಣಿ ಪಡೆಯುವುದನ್ನು ನಿಲ್ಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT