ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ‘ಡಿಜಿಟಲ್‌ ಮೀಟರ್‌’ ಅಳವಡಿಕೆ ಶೇ 95ರಷ್ಟು ಪೂರ್ಣ

ಬೆಂಗಳೂರಿನಲ್ಲಿ ವಿದ್ಯುತ್‌ ಸೋರಿಕೆ ತಡೆಗೆ ಬೆಸ್ಕಾಂ ಕ್ರಮ l ಸಿಗಲಿದೆ ಬಳಕೆ ಪ್ರಮಾಣದ ನಿಖರ ಲೆಕ್ಕ
Published : 6 ಆಗಸ್ಟ್ 2024, 23:43 IST
Last Updated : 6 ಆಗಸ್ಟ್ 2024, 23:43 IST
ಫಾಲೋ ಮಾಡಿ
Comments

ಬೆಂಗಳೂರು: ರಾಜಧಾನಿಯ ವ್ಯಾಪ್ತಿಯಲ್ಲಿ ಹಳೆಯ ವಿದ್ಯುತ್‌ ಮೀಟರ್‌ಗಳನ್ನು ಬದಲಿಸಿ ಡಿಜಿಟಲ್‌ ಮೀಟರ್‌ ಅಳವಡಿಸುವ ಪ್ರಕ್ರಿಯೆ ಶೇಕಡ 95.92ರಷ್ಟು ಪೂರ್ಣಗೊಂಡಿದೆ. ಇನ್ನು ಕೆಲವೇ ದಿನಗಳಲ್ಲಿ ರಾಜಧಾನಿಯಲ್ಲಿ ಪೂರ್ಣ ಪ್ರಮಾಣದಲ್ಲಿ ವಿದ್ಯುತ್‌ ಬಳಕೆಯನ್ನು ಡಿಜಿಟಲ್‌ ಮೀಟರ್‌ ಮೂಲಕವೇ ಅಳೆಯಲು ಸಾಧ್ಯವಾಗಲಿದೆ.

ಬೆಂಗಳೂರು ನಗರದಲ್ಲಿ ಒಟ್ಟು 58.77ಲಕ್ಷ  ಕಡಿಮೆ ಸಾಮರ್ಥ್ಯದ (ಎಲ್‌ಟಿ) ವಿದ್ಯುತ್‌ ಮಾಪಕಗಳಿವೆ. ಸಮೀಕ್ಷೆಯ ಪ್ರಕಾರ ಇದರಲ್ಲಿ 17.23 ಲಕ್ಷ ‘ಎಲೆಕ್ಟ್ರೋ ಮೆಕ್ಯಾನಿಕಲ್ ಮೀಟರ್’ಗಳಿದ್ದವು. ಅವುಗಳನ್ನು ಡಿಜಿಟಲ್ ಮೀಟರ್‌ಗೆ ಬದಲಾವಣೆ ಮಾಡುವ ಪ್ರಕ್ರಿಯೆಗೆ 2022ರ ಜುಲೈನಲ್ಲಿ ಚಾಲನೆ ನೀಡಲಾಗಿತ್ತು. ಇದಕ್ಕಾಗಿ ಬೆಸ್ಕಾಂ ₹285.65 ಕೋಟಿ ವೆಚ್ಚದ ಯೋಜನೆ ಕೈಗೆತ್ತಿಕೊಂಡಿತ್ತು.

ಮುಂಚೂಣಿಯಲ್ಲಿ ಪಶ್ಚಿಮ ವಿಭಾಗ:

‘ನಗರದ ನಾಲ್ಕು ವಿಭಾಗಗಳಲ್ಲಿ ಬಾಕಿ ಇರುವ ಡಿಜಿಟಲ್‌ ಮೀಟರ್‌ ಅಳವಡಿಕೆ ಕಾಮಗಾರಿಯನ್ನು ಆಗಸ್ಟ್‌ ತಿಂಗಳೊಳಗೆ ಮುಕ್ತಾಯ ಮಾಡಲಾಗುವುದು. 17,90,882 ಮೀಟರ್‌ಗಳ ಪೈಕಿ ಈಗಾಗಲೇ 17,17,935 ಮೀಟರ್‌ಗಳನ್ನು ಅಳವಡಿಸಲಾಗಿದೆ. ಉಳಿದ 72,949 ಮೀಟರ್‌ಗಳು ಅಳವಡಿಸುವ ಕೆಲಸ ಮಾತ್ರ ಉಳಿದಿದೆ’ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.

‘ಡಿಜಿಟಲ್‌ ಮೀಟರ್‌ ಅಳವಡಿಕೆಯಲ್ಲಿ ಶೇಕಡ 99ರಷ್ಟು ಗುರಿ ಸಾಧನೆಯೊಂದಿಗೆ ಬೆಸ್ಕಾಂನ ಬೆಂಗಳೂರು ನಗರದ ಪಶ್ಚಿಮ ವಿಭಾಗ ಮುಂಚೂಣಿಯಲ್ಲಿದೆ. ಪೂರ್ವ ವಿಭಾಗದಲ್ಲಿ ಶೇ 98.28, ಉತ್ತರ ವಿಭಾಗದಲ್ಲಿ ಶೇ 95 ಹಾಗೂ ದಕ್ಷಿಣ ವಿಭಾಗದಲ್ಲಿ ಶೇ 93.11ರಷ್ಟು ಮೀಟರ್‌ಗಳನ್ನು ಅಳವಡಿಸುವ ಕೆಲಸ ಮುಗಿದಿದೆ’ ಎಂದು ತಿಳಿಸಿದರು.

ನಗರ ವ್ಯಾಪ್ತಿಯಲ್ಲಿ ಡಿಜಿಟಲ್‌ ಮೀಟರ್‌ ಅಳವಡಿಸುವ ಕಲಸದ ಗುತ್ತಿಗೆಯನ್ನು ಎರಡು ಕಂಪನಿಗಳಿಗೆ ನೀಡಲಾಗಿದೆ. ಡಿಜಿಟಲ್‌ ಮೀಟರ್‌ಗಳನ್ನು ಗ್ರಾಹಕರಿಗೆ ಉಚಿತವಾಗಿಯೇ ಅಳವಡಿಸಲಾಗುತ್ತಿದೆ. ಸಿಂಗಲ್ ಫೇಸ್ ಡಿಜಿಟಲ್ ಮೀಟರ್‌ಗೆ ₹934 ಹಾಗೂ ತ್ರಿ–ಫೇಸ್ ಮೀಟರ್‌ಗೆ ₹ 2,312 ವೆಚ್ಚವನ್ನು ಬೆಸ್ಕಾಂ ಭರಿಸುತ್ತಿದೆ.

ಸೋರಿಕೆ ತಡೆಗೆ ಸಹಕಾರಿ:

‘ಎಲೆಕ್ಟ್ರೋ ಮೆಕ್ಯಾನಿಕಲ್ ಮೀಟರ್’ಗಳಲ್ಲಿ ಸಂಪರ್ಕಿತ ಲೋಡ್‌, ಪವರ್‌ ಫ್ಯಾಕ್ಟರ್‌ ಮತ್ತು ವೊಲ್ಟೇಜ್‌ ದಾಖಲಿಸುವ ವ್ಯವಸ್ಥೆ ಇರಲಿಲ್ಲ. ಇದರಿಂದ, ಬೆಸ್ಕಾಂಗೆ ವಿದ್ಯುತ್‌ ಶುಲ್ಕ ಸಂಗ್ರಹಣೆಯಲ್ಲಿ ನಷ್ಟವಾಗುತ್ತಿತ್ತು. ಕೆಲವೊಮ್ಮೆ ‘ಮೀಟರ್‌ ರೀಡಿಂಗ್‌’ ಬಗ್ಗೆಯೂ ದೂರುಗಳು ಬರುತ್ತಿದ್ದವು. ಡಿಜಿಟಲ್‌ ಮೀಟರ್‌ ಅಳವಡಿಕೆಯಿಂದ ವಿದ್ಯುತ್‌ ಶುಲ್ಕ ಸಂಗ್ರಹದಲ್ಲಿ ಈ ಹಿಂದೆ ಉಂಟಾಗುತ್ತಿದ್ದ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ. ಗ್ರಾಹಕರು ಬಳಸುವ ಸಣ್ಣ ಪ್ರಮಾಣದ ವಿದ್ಯುತ್‌ನ ಲೆಕ್ಕವೂ ಸಿಗಲಿದೆ.

ಡಿಜಿಟಲ್‌ ಮೀಟರ್‌ನಿಂದ ಎರಡು ವರ್ಷಗಳ ತನಕ ಬಳಸಿರುವ ವಿದ್ಯುತ್‌ ಪ್ರಮಾಣ ಹಾಗೂ ಪಾವತಿಸಿರುವ ಶುಲ್ಕದ ಮೊತ್ತದ ಮಾಹಿತಿ ಸಿಗಲಿದೆ. ಅಲ್ಲದೇ ರಾಜ್ಯ ಸರ್ಕಾರವು ಜಾರಿಗೆ ತರುತ್ತಿರುವ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ನೋಂದಣಿಯಲ್ಲಿ ಹಿಂದಿನ ಮೀಟರ್‌ ರೀಡಿಂಗ್‌ ಅಳೆಯುವ ಲೆಕ್ಕಾಚಾರಕ್ಕೂ ನೆರವಾಗಲಿದೆ.

‘ಬೆಂಗಳೂರಿನಲ್ಲಿ ಡಿಜಿಟಲ್‌ ಮೀಟರ್‌ ಅಳವಡಿಕೆ ಮುಕ್ತಾಯವಾದ ನಂತರ ಬೆಸ್ಕಾಂ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಈ ಮೀಟರ್‌ಗಳನ್ನು ಅಳವಡಿಸುವ ಯೋಜನೆ ಆರಂಭವಾಗಲಿದೆ. ಟೆಂಡರ್‌ ಪ್ರಕ್ರಿಯೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ನಗರದ ವ್ಯಾಪ್ತಿಯಲ್ಲಿ ಹಳೆಯ ವಿದ್ಯುತ್‌ ಮೀಟರ್‌ ಬದಲಿಸುವ ಕೆಲಸ ಮುಕ್ತಾಯದ ಹಂತದಲ್ಲಿದೆ. ಬಾಕಿ ಉಳಿದಿರುವ ಮೀಟರ್ ಅಳವಡಿಕೆ ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ.
ಮಹಾಂತೇಶ್ ಬೀಳಗಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ

ಡಿಜಿಟಲ್‌ ಮೀಟರ್‌ ಅಳವಡಿಕೆಯಲ್ಲಿ ಗುರಿ ಸಾಧನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT