ಬೆಂಗಳೂರು: ಬಿಬಿಎಂಪಿ ಕಾಮಗಾರಿಗಳಲ್ಲಿ ಕಟ್ಟಡ ತ್ಯಾಜ್ಯ ವಿಲೇವಾರಿ ಮಾಡದ ಗುತ್ತಿಗೆದಾರರ ಬಿಲ್‌ಗಳಲ್ಲಿ ನಿಗದಿತ ಮೊತ್ತ ಕಡಿತ ಮಾಡಲು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ.
ಬಿಬಿಎಂಪಿ ವತಿಯಿಂದ ಕೈಗೊಳ್ಳಲಾಗುವ ಸಿವಿಲ್ ಕಾಮಗಾರಿಗಳಿಂದಾಗಿ ಉತ್ಪತ್ತಿಯಾಗುವ ಕಟ್ಟಡ ಭಗ್ನಾವಶೇಷಗಳ (ಡೆಬ್ರಿಸ್) ತೆರವು ಮತ್ತು ನಿರ್ಮೂಲನೆಗಾಗಿ ತಗಲುವ ವೆಚ್ಚವನ್ನು ಆಯಾ ಕಾಮಗಾರಿಯ ಬಿಲ್ಲುಗಳಲ್ಲಿ ಕಡಿತಗೊಳಿಸಬೇಕು ಎಂದು ಸೂಚಿಸಿದ್ದಾರೆ.
ಕಾಮಗಾರಿಗಳಿಂದ ಆಗಾಗ್ಗೆ ಸೃಷ್ಟಿಯಾಗುವ ಡೆಬ್ರಿಸ್ ಅನ್ನು ಆಯಾ ಗುತ್ತಿಗೆದಾರರಿಂದ ತೆರವುಗೊಳಿಸಲು ಉಸ್ತುವಾರಿ ಅಧಿಕಾರಿ ಕ್ರಮ ಕೈಗೊಳ್ಳಬೇಕು. ಕಾಮಗಾರಿ ಮುಕ್ತಾಯಗೊಂಡ ನಂತರ ಡೆಬ್ರಿಸ್ ಸೃಷ್ಟಿಯಾಗದಂತೆ ಗುತ್ತಿಗೆದಾರರು ನೋಡಿಕೊಳ್ಳಬೇಕು.
ಕಾಮಗಾರಿಗಳು ಮುಕ್ತಾಯಗೊಂಡ ನಂತರ ಡೆಬ್ರಿಸ್ ಸೃಷ್ಟಿಯಾಗಿ, ಅದನ್ನು ತೆರವುಗೊಳಿಸದೆ ಇದ್ದಲ್ಲಿ ಪಾಲಿಕೆಯಿಂದಲೇ ತೆರವುಗೊಳಿಸಬೇಕು. ಅಂತಿಮ ಬಿಲ್ಲುಗಳಲ್ಲಿ ಡೆಬ್ರಿಸ್ ತೆರವಿಗೆ ತಗುಲಿದ ವೆಚ್ಚಗಳ ಶೇ 150ರಷ್ಟು ಮೊತ್ತವನ್ನು ಕಡಿತ ಮಾಡಬೇಕು ಎಂದು ಎಂಜಿನಿಯರ್‌ಗಳಿಗೆ ಸೂಚಿಸಿದ್ದಾರೆ.