ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಶಿಕ್ಷಕರ ಕ್ಷೇತ್ರ ಜೆಡಿಎಸ್‌ಗೆ

ಮೈತ್ರಿ ಪಕ್ಷದ ತೀರ್ಮಾನದ ಹಿಂದೆಯೇ ಅಭ್ಯರ್ಥಿ ಆಯ್ಕೆ ಕುರಿತು ಎಚ್‌.ಡಿ.ಡಿ ನೇತೃತ್ವದಲ್ಲಿ ಸಭೆ
Published 12 ಮೇ 2024, 18:42 IST
Last Updated 12 ಮೇ 2024, 18:42 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯ ಕ್ಷೇತ್ರ ಹಂಚಿಕೆ ವಿಚಾರದಲ್ಲಿ ನಿಲುವು ಬದಲಿಸಿರುವ ಬಿಜೆಪಿ, ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಮಿತ್ರಪಕ್ಷ ಜೆಡಿಎಸ್‌ಗೆ ಬಿಟ್ಟುಕೊಡಲು ತೀರ್ಮಾನಿಸಿದೆ. ಅದರ ಬೆನ್ನಲ್ಲೇ ಜೆಡಿಎಸ್‌ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಆರಂಭಿಸಿದೆ.

ಪರಿಷತ್‌ನ ಶಿಕ್ಷಕರು ಮತ್ತು ಪದವೀಧರರ ತಲಾ ಮೂರು ಕ್ಷೇತ್ರಗಳಿಗೆ ಜೂನ್‌ 3ರಂದು ಚುನಾವಣೆ ನಡೆಯಲಿದೆ. ಈ ಪೈಕಿ ನೈರುತ್ಯ ಶಿಕ್ಷಕರ ಕ್ಷೇತ್ರವನ್ನು ಹೊರತುಪಡಿಸಿ ಉಳಿದ ಐದು ಕ್ಷೇತ್ರಗಳಿಗೂ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರನ್ನು ಶನಿವಾರ ಪ್ರಕಟಿಸಿತ್ತು.

‘ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿ ಮುಂದುವರಿಯಲಿದ್ದು, ಬಿಜೆಪಿ ನಾಲ್ಕು ಮತ್ತು ಜೆಡಿಎಸ್‌ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಶನಿವಾರ ಬೆಳಿಗ್ಗೆ ಮೈಸೂರಿನಲ್ಲಿ ಹೇಳಿಕೆ ನೀಡಿದ್ದರು. ಆದರೆ, ಬಿಜೆಪಿ ರಾಷ್ಟ್ರೀಯ ಮುಖಂಡರು ಐದು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಸಂಜೆ ಪ್ರಕಟಿಸಿದ್ದರು.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಸಂಪರ್ಕಿಸಿದ್ದ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು, ಬಿಜೆಪಿ–ಜೆಡಿಎಸ್ ಜಂಟಿ ಸಮನ್ವಯ ಸಮಿತಿಯಲ್ಲಿ ಮಾಡಿದ್ದ ತೀರ್ಮಾನದಂತೆ ಎರಡು ಕ್ಷೇತ್ರಗಳನ್ನು ಬಿಟ್ಟುಕೊಡಲು ಮನವಿ ಮಾಡಿದ್ದರು. ಆ ಬಳಿಕ ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಬಿಜೆಪಿ ವರಿಷ್ಠರು ಒಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದಕ್ಷಿಣ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಈ.ಸಿ. ನಿಂಗರಾಜು ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಎರಡು ಅವಧಿಗೆ ಸತತವಾಗಿ ಜೆಡಿಎಸ್‌ ಅಭ್ಯರ್ಥಿಯೇ ಗೆಲುವು ಸಾಧಿಸಿದ್ದರು. ಈ ಕಾರಣದಿಂದ ಜೆಡಿಎಸ್‌ ಅಭ್ಯರ್ಥಿಯನ್ನೇ ಈ ಕ್ಷೇತ್ರದಲ್ಲಿ ಕಣಕ್ಕಿಳಿಸಲು ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಅಭ್ಯರ್ಥಿ ಆಯ್ಕೆಗೆ ಸಭೆ: ಕ್ಷೇತ್ರ ಬಿಟ್ಟುಕೊಡಲು ಬಿಜೆಪಿ ಒಪ್ಪಿದ ಬೆನ್ನಲ್ಲೇ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರು ತಮ್ಮ ನಿವಾಸದಲ್ಲಿ ಪಕ್ಷದ ನಾಯಕರ ಸಭೆ ನಡೆಸಿ, ಅಭ್ಯರ್ಥಿ ಆಯ್ಕೆ ಕುರಿತು ಚರ್ಚಿಸಿದರು.

ಕುಮಾರಸ್ವಾಮಿ, ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಶಾಸಕ ಎಚ್‌.ಡಿ. ಮಂಜುನಾಥ್‌, ಮಾಜಿ ಸಚಿವರಾದ ಸಿ.ಎಸ್‌. ಪುಟ್ಟರಾಜು, ಸಾ.ರಾ. ಮಹೇಶ್‌, ಮಾಜಿ ಶಾಸಕರಾದ ಕೆ. ಅನ್ನದಾನಿ, ಸುರೇಶ್‌ ಗೌಡ, ಟಿಕೆಟ್‌ ಆಕಾಂಕ್ಷಿಗಳಾದ ಕೆ.ಟಿ. ಶ್ರೀಕಂಠೇಗೌಡ ಮತ್ತು ವಿವೇಕಾನಂದ ಸಭೆಯಲ್ಲಿ ಭಾಗವಹಿಸಿದ್ದರು.

‘ಅಭ್ಯರ್ಥಿ ಆಯ್ಕೆ ಕುರಿತು ಎಚ್‌.ಡಿ. ದೇವೇಗೌಡರು ಎಲ್ಲ ನಾಯಕರ ಅಭಿಪ್ರಾಯ ಆಲಿಸಿದ್ದಾರೆ. ಬುಧವಾರ (ಮೇ 15) ತಮ್ಮ ತೀರ್ಮಾನ ಪ್ರಕಟಿಸುವುದಾಗಿ ದೇವೇಗೌಡರು ತಿಳಿಸಿದ್ದಾರೆ’ ಎಂದು ಜಿ.ಟಿ. ದೇವೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT