ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷ ರಾಜಕಾರಣ ಬಹಳ ದಿನ ನಡೆಯಲ್ಲ

ಯಾರದೋ ಮಾತು ಕೇಳಿ ತನಿಖೆಗೆ ಆದೇಶಿಸುವುದು ಸರಿಯಲ್ಲ: ಸಿದ್ದರಾಮಯ್ಯ ವಾಗ್ದಾಳಿ
Last Updated 9 ಸೆಪ್ಟೆಂಬರ್ 2019, 20:10 IST
ಅಕ್ಷರ ಗಾತ್ರ

ಬೆಂಗಳೂರು: ಕೃಷಿ ಭಾಗ್ಯ, ಅನ್ನ ಭಾಗ್ಯ ಸೇರಿದಂತೆ ಐದು ಪ್ರಮುಖ ಯೋಜನೆಗಳ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದ್ವೇಷದ ರಾಜಕಾರಣದಲ್ಲಿ ತೊಡಗಿದ್ದಾರೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೋಮವಾರ ಟೀಕಾಪ್ರಹಾರ ನಡೆಸಿದರು.

ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿ, ‘ದ್ವೇಷ ರಾಜಕಾರಣ ಮಾಡುವ ಸಲುವಾಗಿಯೇ ದ್ವೇಷ ರಾಜಕಾರಣ ಮಾಡುವುದಿಲ್ಲ ಎಂದು ಯಡಿಯೂರಪ್ಪ ಹೇಳಿಕೆ ನೀಡಿರಬಹುದು. ನಾನು ಐದು ವರ್ಷ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಯಾರ ಮೇಲೂ ದ್ವೇಷ ರಾಜಕಾರಣ ಮಾಡಲಿಲ್ಲ’ ಎಂದರು.

‘ಕೃಷಿ ಹೊಂಡಗಳ ನಿರ್ಮಾಣ ಸೇರಿದಂತೆ ಯಾವುದೇ ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆದಿದ್ದರೆ ತನಿಖೆ ಮಾಡಿಸಲಿ. ನಾವು ಕಾನೂನಿಗೆ ಅಡ್ಡಿ ಬರುವುದಿಲ್ಲ. ಯಾರೋ ಹೇಳಿದರೆಂದು ತನಿಖೆಗೆ ಆದೇಶಿಸುವುದು ಸರಿಯಲ್ಲ. ದ್ವೇಷ, ಸೇಡಿನಿಂದ ರಾಜಕಾರಣ ಮಾಡಬಾರದು. ಇದರಿಂದ ಅಭಿವೃದ್ಧಿ ಆಗುವುದಿಲ್ಲ.ಇಂಥ ರಾಜಕಾರಣ ಬಹಳ ದಿನ ಉಳಿಯುವುದಿಲ್ಲ’ ಎಂದು ಟೀಕಿಸಿದರು.

‘ಸಿದ್ದರಾಮಯ್ಯ ಅವರಿಂದಲೇ ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ಹೇಳಿಕೆಗೆ ಪ್ರತಿಕ್ರಿಯಿಸಿ, ‘ಕಟೀಲ್‌ಗೆ ಕನಿಷ್ಠ ಜ್ಞಾನವೂ ಇಲ್ಲ. ಐ.ಟಿ, ಇ.ಡಿ ಯಾರ ಅಧೀನದಲ್ಲಿದೆ ಎಂಬುದೂ ಗೊತ್ತಿಲ್ಲ. ಅಲ್ಪ ಸ್ವಲ್ಪ ಮಾಹಿತಿಯೂ ಇಲ್ಲದವರನ್ನು ಹೇಗೆ ಅಧ್ಯಕ್ಷರನ್ನಾಗಿ ಮಾಡಿದ್ದಾರೋ ಗೊತ್ತಿಲ್ಲ’ ಎಂದು ಕುಟುಕಿದರು.

ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ಬಿಜೆಪಿ ಹೈಕಮಾಂಡ್‌ಗೆ ಇಷ್ಟ ಇರಲಿಲ್ಲ. ಅದೇ ಕಾರಣಕ್ಕೆ ಅವರು ಹೇಳಿದವರು ವಿಧಾನಸಭಾಧ್ಯಕ್ಷರು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಲಿಲ್ಲ. ಈಗಾಗಲೇ ಮೂವರನ್ನು ಉಪಮುಖ್ಯಮಂತ್ರಿ ಮಾಡಿದ್ದು, ಬೇಕಿದ್ದರೆ ಎಲ್ಲ ಸಚಿವರನ್ನೂ ಡಿಸಿಎಂ ಮಾಡಿಕೊಳ್ಳಲಿ. ಇದರಿಂದ ಆತಳಿತಾತ್ಮಕ ವೆಚ್ಚ ಹೆಚ್ಚಲಿದ್ದು, ರಾಜ್ಯಕ್ಕೆ ಯಾವುದೇ ಉಪಯೋಗವಿಲ್ಲ ಎಂದು ಆರೋಪಿಸಿದರು.

‘ದೇಶದಲ್ಲಿ ಆರ್ಥಿಕ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕೇಂದ್ರದ ಬಿಜೆಪಿ ಸರ್ಕಾರಕ್ಕೆ ನೂರು ದಿನಗಳಾಗಿದ್ದು, ಯಾವುದೇ ಪ್ರಗತಿ ಕಾಣುತ್ತಿಲ್ಲ. ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದ್ದರೂ ಪ್ರಧಾನಿ ಮೋದಿ ಭಾಷಣದಲ್ಲೇ ಕಾಲ ಕಳೆಯುತ್ತಿದ್ದಾರೆ’ ಎಂದು ದೂರಿದರು.

ಪ್ರತಿಭಟನೆಗೆ ಕಾಂಗ್ರೆಸ್ ಕರೆ

ಭೀಕರ ಪ್ರವಾಹಕ್ಕೆ ಜನರು ತತ್ತರಿಸಿದ್ದರೂ ಕೇಂದ್ರ ಸರ್ಕಾರ ಈವರೆಗೂ ಪರಿಹಾರ ಪ್ರಕಟಿಸದಿರುವುದನ್ನು ಖಂಡಿಸಿ ಸೆ. 12ರಂದು ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ.

ಈಗಾಗಲೇ ಕೇಂದ್ರ ಸಚಿವರು ವೀಕ್ಷಣೆ ಮಾಡಿದ್ದು, ಅಧಿಕಾರಿಗಳ ತಂಡ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ಸಲ್ಲಿಸಿದ್ದರೂ ಪರಿಹಾರ ನೀಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದರೂ ಜನರ ಸಂಕಷ್ಟ ಕೇಳಲಿಲ್ಲ. ಪರಿಹಾರ ನೀಡುವಂತೆ ಬಿಜೆಪಿ ಮುಖಂಡರೂ ಅವರಿಗೆ ಮನವಿ ಮಾಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT