ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ವಿಶೇಷ | ಬಿಎಂಟಿಸಿಗೆ ಸಿಬ್ಬಂದಿ ಕೊರತೆ: ನೌಕರರಿಗೆ ಒ.ಟಿ

ಕೋವಿಡ್‌ ನಂತರ ಬಹುತೇಕ ಎಲ್ಲ ಮಾರ್ಗಗಳಲ್ಲಿ ಬಸ್ ಸಂಚಾರ l 2 ವರ್ಷಗಳ ಬಳಿಕ ಆರಂಭವಾದ ಒ.ಟಿ ಪದ್ಧತಿ
Last Updated 9 ಆಗಸ್ಟ್ 2022, 22:45 IST
ಅಕ್ಷರ ಗಾತ್ರ

ಬೆಂಗಳೂರು: ಸಿಬ್ಬಂದಿ ಕೊರತೆ ಸಮಸ್ಯೆ ಎದುರಿಸುತ್ತಿರುವ ಬಿಎಂಟಿಸಿ, ‌ಎರಡು ವರ್ಷಗಳ ಬಳಿಕ ಚಾಲನಾ ಸಿಬ್ಬಂದಿಗೆ ಅವಧಿ ಮೀರಿದ ಹೆಚ್ಚುವರಿ ಕರ್ತವ್ಯ(ಒ.ಟಿ) ನೀಡುವ ಪದ್ಧತಿಯನ್ನು ಮತ್ತೆ ಆರಂಭಿಸಿದೆ.

ಕೋವಿಡ್‌ ಬಳಿಕ ಬಸ್‌ಗಳ ಕಾರ್ಯಾಚರಣೆ ಸಂಖ್ಯೆ ಕಡಿಮೆ ಮಾಡಲಾಗಿತ್ತು. ಇದೀಗ ಬಹುತೇಕ ಎಲ್ಲಾ ಮಾರ್ಗಗಳಲ್ಲಿ ಕಾರ್ಯಾ ಚರಣೆ ಆರಂಭಿಸಿದ್ದು, ಸಿಬ್ಬಂದಿ ಕೊರತೆ ಎದುರಾಗಿದೆ.

ಮುಷ್ಕರದ ಸಂದರ್ಭದಲ್ಲಿ ವಜಾಗೊಂಡ ಸಿಬ್ಬಂದಿಯಲ್ಲಿ 650ಕ್ಕೂ ಹೆಚ್ಚು ಮಂದಿ ಇನ್ನೂ ಕರ್ತವ್ಯದಿಂದ ಹೊರಗಿದ್ದಾರೆ. ಜತೆಗೆ ಪ್ರತಿ ತಿಂಗಳು ಸಿಬ್ಬಂದಿ ವಯೋನಿವೃತ್ತಿ ಆಗುತ್ತಿದ್ದು, ಕರ್ತವ್ಯದಲ್ಲಿರುವ ಸಿಬ್ಬಂದಿ ಮೇಲೆ ಕಾರ್ಯದ ಒತ್ತಡ ಹೆಚ್ಚುತ್ತಿದೆ. ಕರ್ತವ್ಯ ಮುಗಿದ ಬಳಿಕವೂ ಅವರನ್ನು ಹೆಚ್ಚವರಿ ಸೇವೆಗೆ ನಿಯೋಜಿಸಿಕೊಳ್ಳಲಾಗುತ್ತಿದೆ.

‘ಹೆಚ್ಚುವರಿ ಕೆಲಸ ಮಾಡಿದ ದಿನಗಳ ಬದಲಿಗೆ ಬೇರೆ ದಿನ ರಜೆ ಪಡೆಯಲು ಕಳೆದ ತಿಂಗಳಲ್ಲಿ ಅವಕಾಶ ನೀಡಲಾಗಿತ್ತು. ಈಗ ರಜೆ ಬದಲು ಹೆಚ್ಚುವರಿ ಸೇವೆ ಎಂದು ಪರಿಗಣಿಸಿ ಭತ್ಯೆ ಸಂದಾಯ ಮಾಡಲಾಗುತ್ತಿದೆ. ಹೊಸದಾಗಿ ಸಿಬ್ಬಂದಿ ನೇಮಕಕ್ಕೆ ಸರ್ಕಾರ ಅನುಮತಿ ನೀಡುತ್ತಿಲ್ಲ. ಆದ್ದರಿಂದ ಇರುವ ಸಿಬ್ಬಂದಿಯಲ್ಲೇ ಕಾರ್ಯಾಚರಣೆ ಮಾಡಬೇಕಿದೆ’ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ಹೇಳಿದರು.

ನಿರ್ವಾಹಕರಹಿತ ಕಾರ್ಯಾಚರಣೆಗೆ ತಯಾರಿ

ಸಿಬ್ಬಂದಿ ಕೊರತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ವಾಹಕರಹಿತ ಬಸ್‌ಗಳ ಕಾರ್ಯಾಚರಣೆ ಬಗ್ಗೆ ಬಿಎಂಟಿಸಿ ಆಲೋಚನೆ ನಡೆಸಿದೆ. ನಿರ್ವಾಹಕರಿಲ್ಲದೆಯೇ ಕಾರ್ಯಾಚರಣೆ ಮಾಡಬಹುದಾದ 500 ಮಾರ್ಗಗಳನ್ನು ಗುರುತಿಸುತ್ತಿದೆ.

ಚಾಲಕರ ಕೊರತೆಯಿಂದ 500ಕ್ಕೂ ಹೆಚ್ಚು ಬಸ್‌ಗಳು ರಸ್ತೆಗಳಿಯಲು ಸಾಧ್ಯವಾಗದೆ ಡಿಪೊಗಳಲ್ಲೇ ನಿಂತಿವೆ. ಕೋವಿಡ್‌ ಪೂರ್ವದ ವೇಳಾಪಟ್ಟಿ ಗಮನಿಸಿದರೆ ಬಸ್‌ಗಳ ಕಾರ್ಯಾಚರಣೆ ಸಂಖ್ಯೆ ಕಡಿಮೆ ಆಗಿರುವುದು ಗೊತ್ತಾಗುತ್ತದೆ.

‘ಕೋವಿಡ್ ಪೂರ್ವದಲ್ಲಿ ಇದ್ದಷ್ಟೇ ಮಾರ್ಗಗಳ ಕಾರ್ಯಾಚರಣೆಯನ್ನು ಪುನರ್ ಆರಂಭಿಸಲು ಕನಿಷ್ಠ 2 ಸಾವಿರ
ಸಿಬ್ಬಂದಿ ಅಗತ್ಯವಿದೆ. ಸಿಬ್ಬಂದಿ ಭರ್ತಿ ಮಾಡಿಕೊಳ್ಳುವಷ್ಟು ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ನಿರ್ವಾಹಕ ರಹಿತ ಸೇವೆ ಒದಗಿಸುವ ಬಗ್ಗೆ ಆಲೋಚನೆ ನಡೆಸಲಾಗುತ್ತಿದೆ. ಎಂ.ಆರ್. ಶ್ರೀನಿವಾಸಮೂರ್ತಿ ನೇತೃತ್ವದ ಏಕ ಸದಸ್ಯ ಸಮಿತಿ ಕೂಡ ಇದೇ ರೀತಿಯ ಶಿಫಾರಸು ಮಾಡಿದೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

‘ವಜಾಗೊಂಡ ಸಿಬ್ಬಂದಿ ನೇಮಿಸಿಕೊಳ್ಳಲಿ’

‘ಮುಷ್ಕರದ ಸಂದರ್ಭದಲ್ಲಿ ವಜಾಗೊಂಡಿದ್ದ ಸಿಬ್ಬಂದಿಯಲ್ಲಿ 650ಕ್ಕೂ ಹೆಚ್ಚು ಮಂದಿಯ ಪ್ರಕರಣ ಕಾರ್ಮಿಕ ನ್ಯಾಯಾಲಯದಲ್ಲಿ ಬಾಕಿ ಇದೆ. ಆ ಸಿಬಂದಿಯನ್ನೂ ಮರು ನೇಮಕ ಮಾಡಿಕೊಂಡರೆ ಸಮಸ್ಯೆ ಪರಿಹಾರವಾಗಲಿದೆ’ ಎನ್ನುವುದು ನೌಕರರ ಸಂಘಟನೆಗಳ ಅಭಿಪ್ರಾಯ.

‘ಮರು ನೇಮಕಕ್ಕೆ ಆದೇಶ ನೀಡುವಾಗ ಅರ್ಧ ಸಂಬಳ ನೀಡಬೇಕು ಎಂದು ನ್ಯಾಯಾಲಯ ಆದೇಶ ಮಾಡುತ್ತಿದೆ. ಅದರ ವಿರುದ್ಧ ಹೈಕೊರ್ಟ್‌ಗೆ ಬಿಎಂಟಿಸಿ ಮೇಲ್ಮನವಿ ಸಲ್ಲಿಸುತ್ತಿದೆ. ಅದರ ಬದಲು ಸಿಬ್ಬಂದಿಯನ್ನು ಕೆಲಸಕ್ಕೆ ನಿಯೋಜಿಸಿಕೊಂಡರೆ ಆಗುವ ನಷ್ಟ ಏನು’ ಎಂದು ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಪ್ರಶ್ನಿಸಿದರು.

‘ನೌಕರರ ವಿರುದ್ಧ ಸೇಡು ತೀರಿಸಿಕೊಳ್ಳುವ ಯೋಚನೆ ಬಿಟ್ಟು ಸಮಸ್ಯೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಅಧಿಕಾರಿಗಳು ಯೋಚಿಸಬೇಕು. ನಿರ್ವಾಹಕರಹಿತ ಬಸ್‌ ಕಾರ್ಯಾಚರಣೆ ಮಾಡುವುದು ಅಸಾಧ್ಯದ ಮಾತು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT