ಬುಧವಾರ, ಜುಲೈ 28, 2021
25 °C
₹1 ಕೋಟಿ ದಾಟಿದ ದಿನದ ವರಮಾನ

ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ

ವಿಜಯಕುಮಾರ್‌ ಎಸ್‌.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲಾಕ್‌ಡೌನ್ ತೆರವು ನಂತರ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ನಿಧಾನವಾಗಿ ಏರಿಕೆಯಾಗುತ್ತಿದ್ದು, ದಿನದ ವರಮಾನ ₹1 ಕೋಟಿ ದಾಟಿದೆ.

ಲಾಕ್‌ಡೌನ್ ಸಡಿಲಗೊಂಡ ನಂತರ ಮೇ 18ರಿಂದ ಬಸ್ ಸಂಚಾರವನ್ನು ಬಿಎಂಟಿಸಿ ಆರಂಭಿಸಿದೆ. ಮೊದಲ ಕೆಲವು ದಿನ ₹50 ಸಾವಿರದಿಂದ ₹1 ಲಕ್ಷ ವರಮಾನ ಸಂಗ್ರಹವಾಗುತ್ತಿತ್ತು. ಜೂನ್ 8ರ ನಂತರ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಹೀಗಾಗಿ, ವರಮಾನವೂ ಹೆಚ್ಚಳವಾಗಿದೆ.

ಸದ್ಯ ಪ್ರತಿದಿನ ಸರಾಸರಿ 8 ಲಕ್ಷದಿಂದ 10 ಲಕ್ಷ ಜನ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಎಂದಿನಂತೆ ಬೆಳಿಗ್ಗೆ ಮತ್ತು ಸಂಜೆ ವೇಳೆ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಆದರೆ, ಸುರಕ್ಷತೆಯ ದೃಷ್ಟಿಯಿಂದ ಸೀಟುಗಳ ಸಂಖ್ಯೆಯಷ್ಟೇ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿದೆ. ನಿಂತು ಪ್ರಯಾಣ ಮಾಡಲು ಅವಕಾಶ ಇಲ್ಲ. 

ಲಾಕ್‌ಡೌನ್‌ಗೂ ಮೊದಲು ಪ್ರತಿದಿನ ಸರಾಸರಿ 35 ಲಕ್ಷ ಪ್ರಯಾಣಿಕರು ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಸರಾಸರಿ ವರಮಾನ ₹3.50 ಕೋಟಿ ಇತ್ತು. ಸದ್ಯ ₹1.20 ಕೋಟಿ ವರಮಾನ ಸಂಗ್ರಹವಾಗುತ್ತಿದೆ. 

ಸುರಕ್ಷತೆಗೆ ಆದ್ಯತೆ: ‍ಪ್ರಯಾಣಿಕರ ಸುರಕ್ಷತೆಗೆ ಬಿಎಂಟಿಸಿ ಆದ್ಯತೆ ನೀಡಿದೆ. ಟ್ರಿಪ್ ಮುಗಿಸಿ ಘಟಕಕ್ಕೆ ಬರುವ ಎಲ್ಲಾ ಬಸ್‌ಗಳನ್ನು ದಿನವೂ ಸ್ಯಾನಿಟೈಸ್ ಮಾಡಲಾಗುತ್ತದೆ. ಸೋಂಕು ನಿವಾರಕ ಸಿಂಪರಣೆ ಮಾಡಿರುವ ಬಸ್‌ಗಳನ್ನಷ್ಟೇ ಘಟಕಗಳಿಂದ ಹೊರಕ್ಕೆ ಕಳುಹಿಸಲಾಗುತ್ತಿದೆ. ನಿರ್ವಾಹಕರಿಗೂ ಸ್ಯಾನಿಟೈಸರ್ ಮತ್ತು ಮಾಸ್ಕ್‌ಗಳನ್ನು ವಿತರಿಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದರು.

‘ಹಿರಿಯ ನಾಗರಿಕರಿಗೂ ಪ್ರಯಾಣಿಸಲು ಅವಕಾಶ ನೀಡಿರುವ ಕಾರಣ ಕೊರೊನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಕ್ಯೂಆರ್ ಕೋಡ್ ಬಳಕೆಗೆ ನಿರಾಸಕ್ತಿ
ನಗದು ವಹಿವಾಟು ಕಡಿಮೆ ಮಾಡುವ ನಿಟ್ಟಿನಲ್ಲಿ ಬಿಎಂಟಿಸಿ ಬಸ್‌ನಲ್ಲಿ ಕ್ಯೂಆರ್‌ ಕೋಡ್ ಟಿಕೆಟ್‌ ವ್ಯವಸ್ಥೆ ಅಳವಡಿಸಲಾಗಿದೆ. ಆದರೆ, ದಿನಕ್ಕೆ ಸರಾಸರಿ 800 ಪ್ರಯಾಣಿಕರು ಮಾತ್ರ ಈ ವ್ಯವಸ್ಥೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಮೊದಲ ಹಂತದಲ್ಲಿ 700 ಬಸ್‌ಗಳಲ್ಲಿ ಈ ವ್ಯವಸ್ಥೆ ಇತ್ತು. ಈಗ 4 ಸಾವಿರ ಬಸ್‌ಗಳಲ್ಲಿ ಈ ವ್ಯವಸ್ಥೆ ಅಳವಡಿಸಲಾಗಿದೆ. ಇದರ ನಿರ್ವಹಣೆಗೆ ನಿರ್ವಾಹಕರಿಗೂ ತರಬೇತಿ ನೀಡಲಾಗಿದೆ. ಮೊಬೈಲ್ ದೂರವಾಣಿ ಬಳಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೂ, ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ. ದಿನಕ್ಕೆ ₹50 ಸಾವಿರದಿಂದ ₹60 ಸಾವಿರ ವರಮಾನವಷ್ಟೇ ಕ್ಯೂಆರ್‌ ಕೋಡ್ ವ್ಯವಸ್ಥೆಯಿಂದ ಬರುತ್ತಿದೆ. ಶೇ 1ರಷ್ಟು ವರಮಾನವೂ ಇದರಿಂದ ಸಂಗ್ರಹವಾಗುತ್ತಿಲ್ಲ.

ಕೋವಿಡ್–19 ನಿಯಂತ್ರಿಸಲು ಹಣಕಾಸಿನ ವಹಿವಾಟು ಕಡಿಮೆ ಮಾಡುವುದು ಕೂಡ ಒಂದು ಮಾರ್ಗ. ಸ್ಮಾರ್ಟ್‌ಫೋನ್ ಇರುವ ಪ್ರಯಾಣಿಕರು ಆದಷ್ಟು ಈ ವ್ಯವಸ್ಥೆ ಬಳಕೆ ಮಾಡಿಕೊಂಡು ಪ್ರಯಾಣ ಮಾಡುವುದು ಸೂಕ್ತ ಎಂಬುದಾಗಿ ಅರಿವು ಮೂಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು