ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಬೆನ್ನು ಬಿಡದ ಜೀತ

Last Updated 9 ಫೆಬ್ರುವರಿ 2020, 20:31 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಸಿಲಿಕಾನ್ ಸಿಟಿ, ಐ.ಟಿ ಹಬ್, ಉದ್ಯಾನನಗರಿ ಎಂಬೆಲ್ಲಾ ಬಿರುದಾಂಕಿತ ಬೆಂಗಳೂರಿಗೆ ಜೀತ ಪದ್ಧತಿ ಎಂಬುದು ಬೆನ್ನುಬಿಡದೆ ಅಂಟಿಕೊಂಡಿದೆ. ಈ ಜಾಲದೊಳಗೆ ಸಿಲುಕಿ ನರಕಯಾತನೆ ಅನುಭವಿಸುತ್ತಿರುವ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇವೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯಲ್ಲಿ ಪ್ರತಿವರ್ಷ ಸರಾಸರಿ 150 ಜೀತದಾಳುಗಳನ್ನು ಸರ್ಕಾರ ರಕ್ಷಿಸುತ್ತಾ ಬಂದಿದೆ.

ಜೀತ ಎಂದರೆ ಕೈ ಮತ್ತು ಕಾಲುಗಳಿಗೆ ಕಬ್ಬಿಣದ ಚೈನ್‌ನಲ್ಲಿ ಕಟ್ಟಿ ಗುಲಾಮರಂತೆ ದುಡಿಸಿಕೊಳ್ಳುವುದು ಎಂಬ ಭಾವನೆ ಸಾಕಷ್ಟು ಜನರಲ್ಲಿದೆ. ಆದರೆ, 1976ರಲ್ಲಿ ಬಂದ ಜೀತ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಪ್ರಕಾರ ಜೀತ ಪದ್ಧತಿಗೆ ಇರುವ ವ್ಯಾಖ್ಯಾನವೇ ಬೇರೆ. ಯಾವುದೇ ವ್ಯಕ್ತಿ ಸಾಲ ಅಥವಾ ಅನಿವಾರ್ಯ ಕಾರಣಗಳಿಂದಾಗಿ ತನ್ನ ಸ್ವಾತಂತ್ರ್ಯ ಕಳೆದುಕೊಂಡು ಸಾಲ ಕೊಟ್ಟವನ ಆಜ್ಞೆಯಂತೆ ಜೀವನ ನಡೆಸುವುದು ಜೀತ ಪದ್ಧತಿ.

ಜೀತ ಪದ್ಧತಿ ಇಲ್ಲವೇ ಇಲ್ಲ ಎಂದು ಹೇಳಲು ಆಗುವುದಿಲ್ಲ. ರಕ್ಕಸವಾಗಿ ಬೆಳೆಯುತ್ತಿರುವ ಬೆಂಗಳೂರು ನಗರ ಜೀತ ಪದ್ಧತಿಯನ್ನೂ ತನ್ನೊಳಗೆ ಹುದುಗಿಸಿಕೊಂಡಿದೆ. ಜೀತ ಕಾರ್ಮಿಕರನ್ನು ಸರ್ಕಾರ ಆಗಾಗ ರಕ್ಷಣೆ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿ. 2017ರಲ್ಲಿ ಜಿಗಣಿಯ ಕ್ವಾರಿಯೊಂದರಲ್ಲಿ ಜೀತ ಮಾಡುತ್ತಿದ್ದ 11 ಮಂದಿಯನ್ನು ಅಧಿಕಾರಿಗಳು ರಕ್ಷಣೆ ಮಾಡಿದ್ದರು. ಬ್ಯಾಟರಾಯನಪುರದಲ್ಲೂ ಜೀತದಿಂದ ಕಾರ್ಮಿಕರನ್ನು ಅಧಿಕಾರಿಗಳು ಮುಕ್ತಗೊಳಿಸಿದ್ದರು. ಇವೆಲ್ಲವೂ ಜೀತ ಪದ್ಧತಿ ಜೀವಂತ ಇದೆ ಎಂಬುದಕ್ಕೆ ಸಾಕ್ಷಿ.

‌‌ಘೋರವಾಗಿ ಶಿಕ್ಷೆ ನೀಡುವ ಪದ್ಧತಿ ಇಲ್ಲದಿದ್ದರೂ ಜೀತ ಪದ್ಧತಿಯ ಲಕ್ಷಣ ಮತ್ತು ಸ್ವರೂಪ ಬದಲಾಗಿದೆ. ಬಡತನದ ಕಾರಣದಿಂದ ಒಂದು ಹೊತ್ತಿನ ಊಟಕ್ಕೆ ಕಷ್ಟಪಡುವ ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ದೈಹಿಕವಾಗಿ ಶೋಷಣೆಗೆ ಒಳಪಡಿಸಿ, ದುಡಿಸಿಕೊಳ್ಳುವುದು ನಿರಂತರವಾಗಿ ನಡೆದುಕೊಂಡು ಬಂದಿದೆ. ನಿರ್ದಿಷ್ಟ ವೇತನ ಅಥವಾ ವೇತನವೇ ಇಲ್ಲದೆ ದುಡಿಮೆಗೆ ಹಚ್ಚಲಾಗುತ್ತಿದೆ. ಮುಂಗಡ ಪಡೆದ ಹಣಕ್ಕೆ ಬಡ್ಡಿ ತೀರಿಸುವ ಸಲುವಾಗಿಯೂ ದುಡಿಸಿಕೊಳ್ಳಲಾಗುತ್ತಿದೆ.

‘‌ಹೆಚ್ಚು ಸಂಬಳ ಕೊಡಿಸುವ ಆಮಿಷ ಒಡ್ಡಿ ಒಂದಷ್ಟು ಮುಂಗಡ ಹಣ ನೀಡಿ ಕುಟುಂಬ ಸಮೇತ ಕರೆತಂದು ನಗರದ ಸುತ್ತಮುತ್ತ ಇರುವ (ಉಪನಗರಗಳಲ್ಲಿ) ಇಟ್ಟಿಗೆ ಗೂಡು, ಕಲ್ಲುಗಣಿಯ ಕ್ವಾರಿಗಳಲ್ಲಿ ದುಡಿಮೆಗೆ ಹಚ್ಚಲಾಗುತ್ತಿದೆ. ಇದು ಇಂದು ನಿನ್ನೆಯದಲ್ಲ, ನಿರಂತವಾಗಿ ನಡೆಯುತ್ತಲೇ ಇದೆ’ ಎಂದು ರಾಜ್ಯದಲ್ಲಿ ಜೀತ ಕಾರ್ಮಿಕರ ಪದ್ಧತಿ ನಿರ್ಮೂಲನೆಗಾಗಿ ಸರ್ಕಾರದೊಂದಿಗೆ ಪಾಲುದಾರರಾಗಿ ಕೆಲಸ ಮಾಡುತ್ತಿರುವ ಇಂಟರ್‌ನ್ಯಾಷನಲ್ ಜಸ್ಟಿಸ್ ಮಿಷನ್‌ನ (ಐಜೆಎಂ) ಸಹಾಯಕ ನಿರ್ದೇಶಕ ವಿಲಿಯಂ ಕ್ರಿಸ್ಟೋಫರ್ ಹೇಳುತ್ತಾರೆ.

‘ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸಕ್ಕೆ ಬರುವ ವಲಸೆ ಕಾರ್ಮಿಕರ ಸ್ಥಿತಿ ಕೂಡ ಜೀತಕ್ಕೆ ಹೊರತಾಗಿಲ್ಲ.ಪ್ರಾರಂಭದಲ್ಲಿ ಇದ್ದ ಜೀತ ಪದ್ಧತಿ ಈಗ ಮಾನವ ಕಳ್ಳಸಾಗಣೆ ಮತ್ತು ಆರ್ಥಿಕ, ಸಾಮಾಜಿಕ, ದೈಹಿಕ, ಲೈಂಗಿಕ ಶೋಷಣೆ ರೂಪದಲ್ಲಿ ಮುಂದುವರಿದಿದೆ’ ಎಂದು ಅವರು ಹೇಳಿದರು.

ವಲಸೆ ಬಂದವರೇ ಗುರಿ

ಒಡಿಶಾ, ಆಂಧ್ರಪ್ರದೇಶ, ತಮಿಳುನಾಡು, ಬಿಹಾರ ಹಾಗೂ ಉತ್ತರ ಕರ್ನಾಟಕದಿಂದ ಹೆಚ್ಚು ಮಂದಿ ಉದ್ಯೋಗ ಅರಸಿ ಈ ಮಾಯಾನಗರಿಯತ್ತ ವಲಸೆ ಬರುತ್ತಾರೆ. ಹೀಗೆ ಗುಳೆ ಬಂದವರಲ್ಲಿ ಹಲವಾರು ಜನ ಜೀತದಾಳುಗಳಾಗಿ ಕೆಲಸ ಮಾಡುತ್ತಿದ್ದಾರೆ.

‘ಹೋಟೆಲ್‌, ಗಂಧದ ಕಡ್ಡಿ ತಯಾರಿಕಾ ಘಟಕಗಳು, ಚಪ್ಪಲಿ ಮತ್ತು ಶೂ ತಯಾರಿಕಾ ಘಟಕಗಳು, ಅಕ್ಕಿ ಗಿರಣಿ, ಕೊಳವೆಬಾವಿ ಕೊರೆಯುವ ಲಾರಿಗಳು, ತಂಬಾಕು ಉತ್ಪನ್ನಗಳ ತಯಾರಿಕಾ ಘಟಕಗಳಲ್ಲಿ ಜೀತ ಪದ್ಧತಿ ತನ್ನ ಮಗ್ಗಲು ಬದಲಿಸಿಕೊಂಡು ಜೀವಂತವಾಗಿದೆ’ ಎನ್ನುವುದು ಐಜೆಎಂ ನಡೆಸಿದ ಸಮೀಕ್ಷೆಯಿಂದ ಗೊತ್ತಾಗಿದೆ.

‘ಕಾರ್ಮಿಕರನ್ನು ಮಾನವ ಕಳ್ಳಸಾಗಣೆ ಮೂಲಕ ಕೆಲಸಕ್ಕೆ ಕರೆತಂದು ಜೀತ ಪದ್ಧತಿಯೊಳಗೆ ನೂಕಲಾಗುತ್ತಿದೆ. ಮುಂಗಡ ಹಣ ಬಡ್ಡಿ ಸಮೇತ ತೀರುವವರೆಗೂಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಹಣತೀರಿದ ಬಳಿಕವೂ ದುಡಿಸಿಕೊಳ್ಳುವ ಮಾಲೀಕರು ಇದ್ದಾರೆ. ಜೀತ ಕಾರ್ಮಿಕರನ್ನು ವಾರದ ಏಳು ದಿನವೂ ದುಡಿಸಿಕೊಳ್ಳಲಾಗುತ್ತದೆ. ಹಬ್ಬ–ಹರಿದಿನ ಆಚರಿಸಲೂ ಬಿಡುತ್ತಿಲ್ಲ’ ಎಂಬುದನ್ನು ಸಮೀಕ್ಷೆಗಳು ಹೇಳುತ್ತಿವೆ.

ಮಾನವ ಕಳ್ಳಸಾಗಣೆ

ಐಪಿಸಿಯ 370ನೇ ಕಲಂ, ಅಪರಾಧಿಕ ಕಾನೂನು ತಿದ್ದುಪಡಿ ಕಾಯ್ದೆ 2013ರ ಪ್ರಕಾರ ಯಾರಾದರೂ ಬೆದರಿಸಿ, ಅಪಹರಣ ಮಾಡಿ, ಆಮಿಷ ಒಡ್ಡಿ, ವಂಚಿಸಿ ಇಲ್ಲವೇ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ವ್ಯಕ್ತಿಗಳನ್ನು ನೇಮಕ ಮಾಡಿಕೊಂಡಿದ್ದರೆ ಅಥವಾ ಸ್ಥಳಾಂತರಿಸಿದ್ದರೆ ಅದು ಮಾನವ ಕಳ್ಳಸಾಗಣೆ ಆಗುತ್ತದೆ.

ಜೀತಪದ್ಧತಿ ಕೂಡ ಅನೇಕ ಸಂದರ್ಭಗಳಲ್ಲಿ ಮಾನವ ಕಳ್ಳಸಾಗಣೆಯೇ ಆಗುತ್ತದೆ. ಏಕೆಂದರೆ ಬೆದರಿಸಿ, ಮೋಸದಿಂದ, ಆಮಿಷ ಒಡ್ಡಿ ವಂಚನೆ ಮಾಡುವ ಮೂಲಕ ಆರಂಭದಲ್ಲಿ ಸಂಬಂಧ ಬೆಳೆಸಿ ನಂತರ ಅವರನ್ನು ಶೋಷಣೆಗೆ ಒಳಪಡಿಸಲಾಗುತ್ತದೆ.

ಮಾನವ ಕಳ್ಳಸಾಗಣೆಯು ಜಾಮೀನುರಹಿತ ಅಪರಾಧ. ಅನೇಕ ವ್ಯಕ್ತಿಗಳನ್ನು ಮಾನವ ಕಳ್ಳಸಾಗಣೆ ಮಾಡಿದ್ದಲ್ಲಿ ಅಂಥ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಲೂ ಕಾನೂನಿನಲ್ಲಿ ಅವಕಾಶ ಇದೆ.

ಯಾವುದು ಜೀತ?

ಜೀತ ಕಾರ್ಮಿಕ ಪದ್ಧತಿಯು ಒಂದು ಬಲವಂತದ ದುಡಿಮೆ. ಸಾಲ ಅಥವಾ ಮುಂಗಡ ಹಣಕ್ಕಾಗಿ ವ್ಯಕ್ತಿಗಳ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು. ಹೆಚ್ಚಿನ ಪ್ರಕರಣಗಳಲ್ಲಿ ಕಾರ್ಮಿಕರು ಪಡೆದಿರುವ ಮುಂಗಡ ಹಣವನ್ನೇ ನೆಪವಾಗಿಟ್ಟುಕೊಂಡು ಅವರ ಎಲ್ಲ ರೀತಿಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತದೆ.

ತಂದೆ ಅಥವಾ ಇತರೆ ಪೂರ್ವಜರಿಂದ ಬಂದ ಸಾಲ ತೀರಿಸಲು, ರೂಢಿಗತ ಅಥವಾ ಸಾಮಾಜಿಕ ಕಾರಣಕ್ಕೆ ದುಡಿಸಿಕೊಳ್ಳುವುದು ಜೀತವಾಗುತ್ತಿದೆ. ನಿರ್ದಿಷ್ಟ ಜಾತಿ ಅಥವಾ ಬುಡಕಟ್ಟಿನಲ್ಲಿ ಹುಟ್ಟಿದ ಕಾರಣದಿಂದಾಗಿ ಸ್ವತಂತ್ರವಾಗಿ ಬದುಕುವ ಹಕ್ಕನ್ನು ಕಸಿದುಕೊಳ್ಳುವುದು ಕೂಡ ಜೀತ ಪದ್ಧತಿ. ಈ ಕಾಯ್ದೆ ಮತ್ತು ಸುಪ್ರೀಂ ಕೋರ್ಟ್‌ ತೀರ್ಪಿನ ಅನ್ವಯ ಜೀತದಾಳು ಎಂದು ಪರಿಗಣಿಸಲು ಅವರಿಗೆ ದೈಹಿಕ ನಿಯಂತ್ರಣ ಹೇರಲಾಗಿತ್ತು ಎಂಬುದನ್ನು ಸಾಬೀತು ಪಡಿಸಬೇಕಾದ ಅಗತ್ಯವಿಲ್ಲ. ಸಂವಿಧಾನದಲ್ಲಿ ಉಲ್ಲೇಖವಾಗಿರುವ ಮೂಲಭೂತ ಹಕ್ಕುಗಳುಜೀತದಾಳು ಪುರುಷ, ಮಹಿಳೆ ಅಥವಾ ಮಕ್ಕಳಿಗೆ ಚ್ಯುತಿ ತರುವಂತೆ ದುಡಿಸಿಕೊಳ್ಳುವುದನ್ನು ಜೀತ ಪದ್ಧತಿ ಎನ್ನಬಹುದು.

ಜನರನ್ನು ಜೀತಕ್ಕೆ ದುಡಿಸಿಕೊಳ್ಳುವವರಿಗೆ ಗರಿಷ್ಠ 7 ವರ್ಷದ ವರೆಗೆ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ.

ರಕ್ಷಣೆ ಹೇಗೆ?

ಜೀತ ಪದ್ಧತಿ ಎಂದಾಕ್ಷಣ ಯಾವುದೇ ಸಂಘಟನೆ ಅಥವಾ ಹೋರಾಟಗಾರರು ನೇರವಾಗಿ ದಾಳಿ ಮಾಡಿ, ಕಾರ್ಮಿಕರನ್ನು ರಕ್ಷಣೆ ಮಾಡಲು ಆಗುವುದಿಲ್ಲ.

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾ ಮಟ್ಟದಲ್ಲಿ ಸಮಿತಿಗಳಿವೆ. ಉಪವಿಭಾಗಾಧಿಕಾರಿ, ತಹಶೀಲ್ದಾರ್, ಪೊಲೀಸ್ ವರಿಷ್ಠಾಧಿಕಾರಿ, ಕಾರ್ಮಿಕ ಇಲಾಖೆ ಅಧಿಕಾರಿ, ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಈ ಸಮಿತಿಯಲ್ಲಿದ್ದಾರೆ.

ಜೀತ ಕಾರ್ಮಿಕ ಪದ್ಧತಿ ಬಗ್ಗೆ ಮಾಹಿತಿ ನೀಡಿದರೆ ಈ ಸಮಿತಿ ಕಾನೂನು ಪ್ರಕಾರವಾಗಿ ದಾಳಿ ನಡೆಸಿ ಕಾರ್ಮಿಕರನ್ನು ರಕ್ಷಣೆ ಮಾಡುತ್ತದೆ. ಜೀತದಿಂದ ಮುಕ್ತಿ ಪಡೆದವರಿಗೆ ತಕ್ಷಣಕ್ಕೆ ತಲಾ ₹20 ಸಾವಿರವನ್ನು ತಾತ್ಕಾಲಿಕ ಪರಿಹಾರವಾಗಿ ನೀಡಲಾಗುತ್ತದೆ. ಕ್ರಮೇಣ ಅವರು ಸ್ವತಂತ್ರವಾಗಿ ಬದುಕಲು ಬೇಕಿರುವ ಪುನರ್ವಸತಿಯನ್ನು ಸರ್ಕಾರವೇ ಕಲ್ಪಿಸಿಕೊಡಲಿದೆ.

ವರ್ಷ; ಪ್ರಕರಣಗಳ ಸಂಖ್ಯೆ; ರಕ್ಷಣೆಯಾದ ಸಂತ್ರಸ್ತರ ಸಂಖ್ಯೆ

2005; 1; 84

2006; 1; 1

2007;3; 91

2008; 4; 119

2009; 7; 73

2010; 9; 197

2011; 4; 155

2012; 7; 138

2014; 11; 99

2015; 9; 435

2016; 7; 40

2017; 14; 273

2018; 18; 240

2019; 25; 276

***

ವರ್ಷ; ಬಂಧಿತರಾದವರ ಸಂಖ್ಯೆ; ಆಪಾದಿತರ ಸಂಖ್ಯೆ; ಶಿಕ್ಷೆಗೆ ಒಳ‍ಪಟ್ಟವರು

2016; 12; 20; 4

2017; 12; 18; 1

2018; 3; 6; 0

2019; 8; 23; 1

***

16.70 ಲಕ್ಷ -ಮೂರು ಜಿಲ್ಲೆಗಳ ಒಟ್ಟು ಕಾರ್ಮಿಕರ ಸಂಖ್ಯೆ

5,58,334 -ಜೀತ ಕಾರ್ಮಿಕರು

(ಮಾಹಿತಿ: ಐಜೆಎಂ ಸಮೀಕ್ಷೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT