ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಐಎಎಲ್‌: ಹೊಸತುಗಳ 2ನೇ ಟರ್ಮಿನಲ್‌, ನ.11ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಮತ್ತೊಂದು ಹೆಜ್ಜೆ ಗುರುತು
Last Updated 7 ನವೆಂಬರ್ 2022, 20:51 IST
ಅಕ್ಷರ ಗಾತ್ರ

ಬೆಂಗಳೂರು: ದೇಶ ಹಾಗೂ ವಿದೇಶದ ಪ್ರಯಾಣಿಕರನ್ನು ತನ್ನತ್ತ ಸೆಳೆಯುತ್ತಿರುವ ‘ಸಿಲಿಕಾನ್‌ ಸಿಟಿ’ ಬೆಂಗಳೂರು ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಹೆಜ್ಜೆ ಗುರುತು ಮೂಡಿಸುತ್ತಿದೆ.

ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್‌–2 ಉದ್ಘಾಟನೆಗೆ ಸಜ್ಜುಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನ.11ರಂದು ಉದ್ಘಾಟಿಸುತ್ತಿದ್ದು, ಬಳಿಕ ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದೆ. ಇದಕ್ಕಾಗಿ ಬಿಐಎಎಲ್‌ ಸಿದ್ಧತೆ ಮಾಡಿಕೊಂಡಿದೆ.

ಮೊದಲ ಟರ್ಮಿನಲ್‌ಗಿಂತಲೂ 2ನೇ ಟರ್ಮಿನಲ್‌ನಲ್ಲಿ ಅತ್ಯಾಧುನಿಕ ವ್ಯವಸ್ಥೆಗಳಿದ್ದು, ವಿದ್ಯುತ್‌ ದೀಪಗಳ ಅಲಂಕಾರದಿಂದ ಈಗಲೇ ಪ್ರಯಾಣಿಕರನ್ನು ಸೆಳೆಯುತ್ತಿದೆ. ಇದು ಉದ್ಘಾಟನೆಗೊಂಡರೆ ಪ್ರಯಾಣಿಕರ ದಟ್ಟಣೆ ನಿಯಂತ್ರಣ ಸುಗಮವಾಗಲಿದೆ.

‘ಕೆಂಪೇಗೌಡ ವಿಮಾನ ನಿಲ್ದಾಣವು ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ವೈಮಾನಿಕ ಸಂಚಾರ ವ್ಯವಸ್ಥೆಗೆ ಮತ್ತಷ್ಟು ಬಲ ಬರಲಿದೆ’ ಎಂದು ನಿಲ್ದಾಣದ ಅಧಿಕಾರಿಗಳು ಹೇಳುತ್ತಾರೆ.

‘ಈಗ ವಿಮಾನ ನಿಲ್ದಾಣಗಳು ವಾಣಿಜ್ಯ ಚಟುವಟಿಕೆಯ ಕೇಂದ್ರಗಳಾಗಿ ಹೊರಹೊಮ್ಮುತ್ತಿವೆ. ಅದಕ್ಕೆ ತಕ್ಕಂತೆ ಸಂಪರ್ಕ, ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ವಿಮಾನ ನಿಲ್ದಾಣ ನಿರ್ಮಾಣದ ಮೇಲಿನ ಹೂಡಿಕೆಗಳು ಸ್ಥಳೀಯ ಹಾಗೂ ರಾಷ್ಟ್ರೀಯ, ಅಂತರರಾಷ್ಟ್ರೀಯ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ. ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ವಿಮಾನ ನಿಲ್ದಾಣಗಳ ಪೈಕಿ ಬೆಂಗಳೂರೂ ಒಂದು. ಇಲ್ಲಿ ಒಟ್ಟಾರೆ ₹ 13 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲಾಗಿದೆ’ ಎಂದು ಬಿಐಎಎಲ್‌ ಅಧಿಕಾರಿಯೊಬ್ಬರು ತಿಳಿಸಿದರು.

‘2008ರಲ್ಲಿ ಕಾರ್ಯಾಚರಣೆ ಆರಂಭಿಸಿದ ನಿಲ್ದಾಣವು ದಕ್ಷಿಣ ಭಾರತದ ಅತ್ಯಂತ ದಟ್ಟಣೆ ವಿಮಾನ ನಿಲ್ದಾಣವಾಗಿ ಬೆಳೆದಿದೆ. ಈ ದಟ್ಟಣೆ ನಿಯಂತ್ರಣ ಉದ್ದೇಶದಿಂದ ವಿಸ್ತರಣೆ ಮಾಡಲಾಗಿದೆ. ಇದು ಹೊಸ ಬಹು-ಮಾದರಿ ಸಾರಿಗೆ ಕೇಂದ್ರವಾಗಿ ಹೊರಹೊಮ್ಮಿದೆ’ ಎಂದು ಅವರು ಹೇಳಿದರು.

ಪ್ರಯಾಣಿಕರಿಗೆ ಪ್ರಕೃತಿ ಸೌಂದರ್ಯದ ಅನುಭವ ಬರುವಂತೆ ಟರ್ಮಿನಲ್‌ 2 ಅನ್ನು ವಿನ್ಯಾಸ ಮಾಡಲಾಗಿದೆ. ಪ್ರಯಾಣಿಕರು ವಿಶ್ರಾಂತಿ ಪಡೆಯುವ ಸ್ಥಳದಲ್ಲಿ ಉದ್ಯಾನ ನಿರ್ಮಿಸಲಾಗಿದೆ. ಹೊಸ ಟರ್ಮಿನಲ್‌ನಲ್ಲಿ ಪ್ರಯಾಣಿಕರು ಸಾಗುವಾಗ ಉದ್ಯಾನದಲ್ಲಿ ನಡೆದಾಡಿದ ಅನುಭವ ಸಿಗಲಿದೆ. ಡಿಜಿಟಲ್‌ ವ್ಯವಸ್ಥೆಯ ಮೂಲಕ ರಾಜ್ಯದ ಜಲಮೂಲಗಳು, ನೈಸರ್ಗಿಕ ಕಾಡು ತೋರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರಯಾಣಿಕರಿಗೆ ಪುಟ್ಟ ಕಾಡಿನಲ್ಲಿದ್ದ ಅನುಭವ ಸಿಗುವಂತೆ ಕಟ್ಟಡ ವಿನ್ಯಾಸಗೊಂಡಿದೆ.

ಎರಡೂ ಟರ್ಮಿನಲ್‌ಗಳ ನಡುವೆ ಫ್ಲೈಓವರ್‌ ನಿರ್ಮಿಸಲಾಗಿದೆ. ಮಳೆ ನೀರು ಸಂಗ್ರಹ ವ್ಯವಸ್ಥೆಯಿದ್ದು, ಇದೇ ನೀರನ್ನು ಶುದ್ಧೀಕರಿಸಿ ಬಳಸಲು ಚಿಂತಿಸಲಾಗಿದೆ. ಖಾಲಿ ಜಾಗದಲ್ಲಿ ಕೆರೆ ನಿರ್ಮಿಸಲಾಗಿದೆ. ಇದು ಸಹ ನಿಲ್ದಾಣಕ್ಕೆ ಮೆರುಗು ಹೆಚ್ಚಿಸಲಿದೆ.

ಸೋಲಾರ್ ವ್ಯವಸ್ಥೆ ಅಳವಡಿಸಲಾಗಿದ್ದು, ವಿದ್ಯುತ್ ಬಳಕೆಯಲ್ಲಿ ನಿಲ್ದಾಣವು ಸ್ವಾವಲಂಬನೆ ಸಾಧಿಸಲಿದೆ ಎಂದು ಹೆಸರು ಹೇಳಲು ಬಯಸದ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಯಾಣಿಕರು ದಣಿವಿಲ್ಲದೇ ನಿಲ್ದಾಣಕ್ಕೆ ಪ್ರವೇಶ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರವೇಶದ ಪಾಸ್‌ ಪಡೆಯುವ ವಿಧಾನ ಸರಳೀಕರಿಸಲಾಗಿದೆ. ‘ಡಿಜಿ ಯಾತ್ರೆ’ ಸೌಕರ್ಯವೂ ನೆರವಾಗಲಿದೆ. ತಪಾಸಣಾ ಸಾಲು, ಬ್ಯಾಗ್‌ ಸ್ಕ್ರೀನಿಂಗ್‌ ವ್ಯವಸ್ಥೆ ಸಹ ಸ್ಮಾರ್ಟ್‌ ಆಗಿರಲಿದೆ. 1ನೇ ಟರ್ಮಿನಲ್‌ನಂತೆಯೇ ಇಲ್ಲಿಯೂ ರೋಬೊಗಳು ಓಡಾಟ ನಡೆಸಲಿವೆ.

ಪ್ರಯಾಣಿಕರ ಓಡಾಟ ಹೆಚ್ಚಳ: ವಿಮಾನ ಪ್ರಯಾಣಿಕರ ಸಂಖ್ಯೆಯು ಕೋವಿಡ್‌ ಪೂರ್ವದ ಹಂತಕ್ಕೆ ತಲುಪಿದೆ. ಕೆಂಪೇಗೌಡ ನಿಲ್ದಾಣದಿಂದ ಈ ವರ್ಷ ದೇಶೀಯವಾಗಿ 1,05,345 ವಿಮಾನಗಳು ಹಾಗೂ ವಿದೇಶಕ್ಕೆ 13,498 ವಿಮಾನಗಳು ಹಾರಾಟ ನಡೆಸಿವೆ. ದೇಶೀಯವಾಗಿ 1.43 ಕೋಟಿ ಹಾಗೂ ವಿದೇಶಕ್ಕೆ 19.60 ಲಕ್ಷ ಪ್ರಯಾಣಿಕರು ಈ ನಿಲ್ದಾಣದ ಮೂಲಕ ಬಂದು ಹೋಗಿದ್ದಾರೆ. ದೀಪಾವಳಿ ವೇಳೆ 5 ಲಕ್ಷ ದೇಶೀಯ ಹಾಗೂ 70 ಸಾವಿರ ಅಂತರರಾಷ್ಟ್ರೀಯ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ.

ಕೆಂಪೇಗೌಡ ಪ್ರತಿಮೆಯ ಆಕರ್ಷಣೆ
ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ವಿಮಾನ ನಿಲ್ದಾಣದ ಪಕ್ಕದಲ್ಲಿಯೇ ನಿರ್ಮಿಸಲಾಗಿದೆ. ಈ ಪ್ರತಿಮೆಯೂ ಅದೇ ದಿನ ಅನಾವರಣಗೊಳ್ಳಲಿದೆ. ಪ್ರತಿಮೆಯೂ ನಿಲ್ದಾಣಕ್ಕೆ ಬರುವ ಪ್ರಯಾಣಿಕರನ್ನು ಸೆಳೆಯಲಿದೆ.

ಈ ಮಾರ್ಗದಲ್ಲಿ ‘ನಮ್ಮ ಮೆಟ್ರೊ’ ಕಾಮಗಾರಿ ನಡೆಯುತ್ತಿದೆ. ‘ಮೆಟ್ರೊ’ ಸಂಚಾರ ಆರಂಭವಾದರೆ, ಸುಗಮ ಸಂಚಾರ ಸಾಧ್ಯವಾಗಲಿದೆ.

ಬಳ್ಳಾರಿ ಮಾರ್ಗದಲ್ಲಿ ನಿತ್ಯವೂ ದಟ್ಟಣೆಯಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ. ‘ಮೆಟ್ರೊ’ ಮಾರ್ಗದ ಕಾಮಗಾರಿ ಬಹುಬೇಗ ಪೂರ್ಣಗೊಳಿಸಬೇಕು ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ.

ರಾಜ್ಯದ ಕಲೆ, ಸಂಸ್ಕೃತಿ ಅನಾವರಣ‌
ಅತ್ಯಾಧುನಿಕ ಸೌಲಭ್ಯದ ಜೊತೆಗೆ ಟರ್ಮಿನಲ್‌ 2ರಲ್ಲಿ ರಾಜ್ಯದ ಇತಿಹಾಸ, ಸಾಂಸ್ಕೃತಿಕ ಪರಂಪರೆ ಅನಾವರಣಗೊಂಡಿದೆ.

ಕಟ್ಟಡದಲ್ಲಿ ರಾಜ್ಯದ ಸಾಂಸ್ಕೃತಿಕ ವೈವಿಧ್ಯ ಮತ್ತು ವಿಶಿಷ್ಟ ಕಲಾ ಪ್ರಕಾರಗಳು ಕಣ್ಮನ ಸೆಳೆಯುತ್ತಿವೆ.

‘ಅಳವಡಿಸಿರುವ ಸ್ಕ್ರೀನ್‌ಗಳಲ್ಲಿ ಕಲೆಗೆ ಸಂಬಂಧಿಸಿದ ವಿಡಿಯೊಗಳು ದಿನವಿಡೀ ಪ್ರದರ್ಶನಗೊಳ್ಳಲಿವೆ. ಅದಕ್ಕಾಗಿಯೇ ಪ್ರತ್ಯೇಕ ‘ಆರ್ಟ್‌ ಲಾಂಜ್‌’ ಎಂಬ ಪ್ರತ್ಯೇಕ ವಿಭಾಗ ನಿರ್ಮಿಸಲಾಗಿದೆ’ ಎಂದು ಹೇಳುತ್ತಾರೆ ಬಿಐಎಎಲ್‌ನ ಅಧಿಕಾರಿಗಳು.

ವೈಶಿಷ್ಟಗಳು ಏನು?

* ಪುಟ್ಟ ಅರಣ್ಯ ಹಾಗೂ ಉದ್ಯಾನದಲ್ಲಿ ಓಡಾಡಿದ ಅನುಭವ

* ಸುಸ್ಥಿರತೆ ಕಾಯ್ದುಕೊಳ್ಳುವಿಕೆ

* ಹೊಸ ತಂತ್ರಜ್ಞಾನ ಹಾಗೂ ನಾವೀನ್ಯ

* ರಾಜ್ಯದ ಸಾಂಸ್ಕೃತಿಕ ವೈವಿಧ್ಯದ ಪರಿಚಯ

ಅತ್ಯಾಧುನಿಕ ವ್ಯವಸ್ಥೆ

* ವಿಸ್ತೀರ್ಣ: 2.55 ಲಕ್ಷ ಚದರ ಮೀಟರ್‌

* ಪ್ರಯಾಣಿಕರ ಗೇಟ್‌ಗಳ ಸಂಖ್ಯೆ: 22

* ಬಸ್‌ ಗೇಟ್‌ಗಳ ಸಂಖ್ಯೆ: 15

* ವಲಸೆ ತಪಾಸಣೆ ಹಾಗೂ ಸಲಹಾ ಕೇಂದ್ರಗಳು: 95

* ಪ್ರಯಾಣಿಕರ ತಪಾಸಣಾ ಸಾಲುಗಳು: 17

* ಪ್ರವೇಶ ದ್ವಾರಗಳ ಸಂಖ್ಯೆ: ಸಾಮಾನ್ಯ 34, ಇ–ಗೇಟ್‌ 6, ವೀಸಾ 20

* ನಿರ್ಗಮನ ದ್ವಾರಗಳ ಸಂಖ್ಯೆ: ಸಾಮಾನ್ಯ 30, ಇ–ಗೇಟ್‌ 10

* ಹ್ಯಾಂಡ್ ಬ್ಯಾಗ್‌ ಸ್ಕ್ರೀನಿಂಗ್‌: 9

* ಲಾಂಜ್‌ನಲ್ಲಿ ಪ್ರಯಾಣಿಕರ ಸಾಮರ್ಥ್ಯ: 5,932

* ಪ್ರಯಾಣಿಕರು ಲಗೇಜ್‌ ಪಡೆಯುವ ಸಾಧನಗಳು: 9

* ಸಾಮರ್ಥ್ಯ: ವಾರ್ಷಿಕವಾಗಿ 2.5 ಕೋಟಿ ಪ್ರಯಾಣಿಕರು ಸಂಚಾರ ನಡೆಸಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT