ಬ್ರ್ಯಾಂಡ್ ಬೆಂಗಳೂರು ದಾರಿ ಹತ್ತಾರು: ಚಿಗಿತುಕೊಂಡ ವೈದ್ಯಕೀಯ ಪ್ರವಾಸೋದ್ಯಮ

ಬೆಂಗಳೂರು: ಕೋವಿಡ್ ನಿರ್ಬಂಧಗಳಿಂದಾಗಿ ಹಿಮ್ಮುಖ ಚಲಿಸಿದ್ದ ವೈದ್ಯಕೀಯ ಪ್ರವಾಸೋದ್ಯಮ, ಈಗ ಚೇತರಿಕೆಯ ಹಾದಿಗೆ ಮರಳಿದೆ. ಅಗ್ಗದ ಮತ್ತು ಗುಣಮಟ್ಟದ ಚಿಕಿತ್ಸೆಯನ್ನು ಅರಸಿ ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರಲಾರಂಭಿಸಿದ್ದಾರೆ.
ಐಟಿ–ಬಿಟಿ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಸಿಲಿಕಾನ್ ಸಿಟಿ ಬೆಂಗಳೂರು, ವೈದ್ಯಕೀಯ ಪ್ರವಾಸೋದ್ಯಮದಲ್ಲಿಯೂ
ಮುಂಚೂಣಿಯಲ್ಲಿದೆ. ಇಲ್ಲಿನ ವೈದ್ಯಕೀಯ ವ್ಯವಸ್ಥೆ ಹಾಗೂ ನಗರದ ವಾತಾವರಣವು ವಿದೇಶಿಗರನ್ನು ಕೈಬೀಸಿ ಕರೆಯುತ್ತಿದೆ. ಇದರಿಂದಾಗಿ ಆಫ್ರಿಕಾ ಸೇರಿ ವಿವಿಧ ದೇಶಗಳ ಜನರು ಶಸ್ತ್ರಚಿಕಿತ್ಸೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.
2020ರ ಮಾರ್ಚ್‌ನಲ್ಲಿ ಕೋವಿಡ್ ಕಾಣಿಸಿಕೊಂಡ ಬಳಿಕ ಅಂತರರಾಷ್ಟ್ರೀಯ ಪ್ರಯಾಣಕ್ಕೆ ನಿರ್ಬಂಧ ವಿಧಿಸಿದ ಪರಿಣಾಮ, ವಿದೇಶಿಗರು ಚಿಕಿತ್ಸೆಗಾಗಿ ನಗರಕ್ಕೆ ಬರಲು ತೊಡಕುಗಳು ಎದುರಾಗಿದ್ದವು. ಇದರಿಂದಾಗಿ ವೈದ್ಯಕೀಯ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿ, ಆಸ್ಪತ್ರೆಗಳ ವರಮಾನ ಶೇ 30ರಷ್ಟು ಕಡಿತವಾಗಿತ್ತು.
ಕೋವಿಡ್ ಪೂರ್ವದಲ್ಲಿ ಪ್ರತಿವರ್ಷ 50 ಸಾವಿರಕ್ಕೂ ಅಧಿಕ ವಿದೇಶಿಗರು ಚಿಕಿತ್ಸೆಗೆ ಇಲ್ಲಿಗೆ ಬರುತ್ತಿದ್ದರು. ಅವರಲ್ಲಿ ಹೆಚ್ಚಿನವರು ಹೃದಯ ಸಂಬಂಧಿ ಸಮಸ್ಯೆ, ಮೂಳೆ ಮುರಿತ, ಮೂತ್ರಪಿಂಡ ಸಮಸ್ಯೆಯಂತಹ ಕಾಯಿಲೆಗಳಿಗೆ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇದರಿಂದ ಇಲ್ಲಿನ ಆಸ್ಪತ್ರೆಗಳ ವಾರ್ಷಿಕ ವರಮಾನ ಹೆಚ್ಚಳವಾಗುವುದರ ಜತೆಗೆ ವೈದ್ಯಕೀಯ ಪ್ರವಾಸೋದ್ಯಮ ಕೂಡ ಪ್ರಗತಿ ಕಂಡಿತ್ತು.
ಕೋವಿಡ್ ಮೂರನೇ ಅಲೆಯ ಬಳಿಕ ಪ್ರಕರಣಗಳ ಸಂಖ್ಯೆ ನಿಯಂತ್ರಣಕ್ಕೆ ಬಂದಿದ್ದರಿಂದ ನಿರ್ಬಂಧಗಳನ್ನು ತೆಗೆಯಲಾಗಿದೆ. ಎರಡು ವರ್ಷಗಳ ಬಳಿಕ ಆಸ್ಪತ್ರೆಗಳಲ್ಲಿಯೂ ಶಸ್ತ್ರಚಿಕಿತ್ಸೆಗಳಿಗೆ ಆದ್ಯತೆ ನೀಡಲಾಗಿದೆ. ಇದರಿಂದಾಗಿ ವಿದೇಶದಿಂದ ರೋಗಿಗಳು ಮತ್ತೆ ಬರಲಾರಂಭಿಸಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿರುವವರಲ್ಲಿ ಹೆಚ್ಚಿನವರು ಆಫ್ರಿಕಾ, ಮಧ್ಯಪೂರ್ವ ದೇಶಗಳು, ಬಾಂಗ್ಲಾದೇಶ, ಅಫ್ಗಾನಿಸ್ತಾನ,
ಶ್ರೀಲಂಕಾದವರಾಗಿದ್ದಾರೆ.
400ಕ್ಕೂ ಅಧಿಕ ಆಸ್ಪತ್ರೆಗಳು: ಹೃದಯ ಚಿಕಿತ್ಸೆಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ, ಕ್ಯಾನ್ಸರ್ ಕಾಯಿಲೆಗೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಸೇರಿ ವಿವಿಧ ಸಮಸ್ಯೆ ಹಾಗೂ ಕಾಯಿಲೆಗಳಿಗೆ ಅನುಗುಣವಾಗಿ ಪರಿಣತ ವೈದ್ಯರನ್ನು ಒಳಗೊಂಡ ಸರ್ಕಾರಿ ಸಂಸ್ಥೆಗಳು ಇಲ್ಲಿವೆ. ಅದೇ ರೀತಿ, ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫನಾ) ಅಡಿಯಲ್ಲಿ 400ಕ್ಕೂ ಅಧಿಕ ಆಸ್ಪತ್ರೆಗಳು ನಗರದಲ್ಲಿ ಸೇವೆ ನೀಡುತ್ತಿವೆ.
ಮಣಿಪಾಲ್, ಆಸ್ಟರ್, ಅಪೋಲೊ, ಫೋರ್ಟಿಸ್, ಕೊಲಂಬಿಯಾ ಏಷ್ಯಾ, ನಾರಾಯಣ ಹೆಲ್ತ್ ಸಿಟಿ, ಎಚ್.ಸಿ.ಜಿ, ಎಂ.ಎಸ್. ರಾಮಯ್ಯ, ಸಕ್ರಾ ವರ್ಲ್ಡ್, ನಾರಾಯಣ ಹೃದಯಾಲಯ, ನಾರಾಯಣ ನೇತ್ರಾಲಯ ಸೇರಿ ಪ್ರಮುಖ ಖಾಸಗಿ ಆಸ್ಪತ್ರೆಗಳು ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಹೊಂದಿವೆ. ಇದರಿಂದಾಗಿ ಇಲ್ಲಿನವೈದ್ಯಕೀಯ ಸಮೂಹವು ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರಿಗೆ ಚಿಕಿತ್ಸೆ ಒದಗಿಸುತ್ತಿವೆ.
ವೈದ್ಯಕೀಯ ಪ್ರವಾಸೋದ್ಯಮಕ್ಕೆಸಂಬಂಧಿಸಿದಂತೆ ಕೆಲ ಏಜೆನ್ಸಿ ಹಾಗೂ ಕಂಪನಿಗಳು ಮಧ್ಯವರ್ತಿ
ಗಳಂತೆ ಕಾರ್ಯನಿರ್ವಹಿಸುತ್ತಿವೆ.ಇವು ವಿವಿಧ ರೀತಿಯಪ್ಯಾಕೇಜ್‌ಗಳನ್ನೂ ನೀಡುತ್ತಿದ್ದು, ಚಿಕಿತ್ಸೆಯ ಬಳಿಕ ಪ್ರವಾಸದ ಯೋಜನೆಯನ್ನು ರೂಪಿಸಿಕೊಡುತ್ತಿವೆ.ಇಲ್ಲಿನ ಭೇಟಿಯ ಅವಧಿಯಲ್ಲಿ ವಸತಿ ಸೇರಿ ವಿವಿಧ ಸೌಲಭ್ಯ ಕಲ್ಪಿಸಲಾಗುತ್ತಿದೆ. ಆಯುರ್ವೇದ, ಸಿದ್ಧ, ಯುನಾನಿ, ಪಂಚಕರ್ಮ ಸೇರಿ ವಿವಿಧ ಸಾಂಪ್ರದಾಯಿಕ ಚಿಕಿತ್ಸೆಗಳಿಗೂ ವಿದೇಶಿಗರು ಇಲ್ಲಿಗೆ ಬರುತ್ತಿದ್ದಾರೆ.
ಏನಿದು ವೈದ್ಯಕೀಯ ಪ್ರವಾಸೋದ್ಯಮ?
ಪ್ರವಾಸದ ಜತೆಗೆ ನಿಗದಿತ ಚಿಕಿತ್ಸೆಯನ್ನು ಪಡೆದುಕೊಳ್ಳಲು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ತೆರಳುವುದೇ ವೈದ್ಯಕೀಯ ಪ್ರವಾಸೋದ್ಯಮ. ಈ ಮೊದಲು ಶಸ್ತ್ರಚಿಕಿತ್ಸೆಗಳಿಗೆ ಅಭಿವೃದ್ಧಿ ಹೊಂದುತ್ತಿರುವ ಹಾಗೂ ಹಿಂದುಳಿದ ದೇಶದ ಜನರು ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಗುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ದೇಶದ ಜನರೂ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಬರುತ್ತಿದ್ದಾರೆ. ಅಗ್ಗದ ದರದಲ್ಲಿ ಗುಣಮಟ್ಟದ ಚಿಕಿತ್ಸೆ, ಉತ್ತಮ ಸಾರಿಗೆ ಸಂಪರ್ಕದಂತಹ ಅಂಶಗಳೇ ಇದಕ್ಕೆ ಕಾರಣ.
ಜಾಗತಿಕ ಮನ್ನಣೆ ಪಡೆದ ಸಂಸ್ಥೆಗಳು
ಇಲ್ಲಿನ ಮಣಿಪಾಲ್ ಆಸ್ಪತ್ರೆಗಳಿಗೆ ಪ್ರತಿವರ್ಷ 15 ಸಾವಿರಕ್ಕೂ ಅಧಿಕ ಹಾಗೂ ನಾರಾಯಣ ಹೆಲ್ತ್ ಸಿಟಿಗೆ 10 ಸಾವಿರಕ್ಕೂ ಅಧಿಕ ವಿದೇಶಿಗರು ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಅದೇ ರೀತಿ, ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ವಿದೇಶಿಗರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಯುರೋಪಿನ ಹಾರ್ಟ್ ಜರ್ನಲ್ ಈ ಹಿಂದೆ ಜಯದೇವ ಹೃದ್ರೋಗ ಆಸ್ಪತ್ರೆಯನ್ನು ‘ವಿಶ್ವದ ಶ್ರೇಷ್ಠ ಹೃದಯ ಕೇಂದ್ರ’ ಎಂದು ಬಣ್ಣಿಸಿ, ಅಮೆರಿಕದ ಪ್ರಜೆಯೊಬ್ಬರು 10 ವರ್ಷಗಳ ಹಿಂದೆ ಕೇವಲ ₹ 92 ಚಿಕಿತ್ಸಾ ವೆಚ್ಚ ಪಾವತಿಸಿದ್ದನ್ನು ಉಲ್ಲೇಖಿಸಿತ್ತು. ಕೆಲ ದಿನಗಳ ಹಿಂದಷ್ಟೇ ಸಂಸ್ಥೆಯಲ್ಲಿ ಇಂಡೊನೇಷ್ಯಾದ ಮೂವರು ಮಕ್ಕಳು ಹಾಗೂ ಯುವತಿಯೊಬ್ಬರಿಗೆ ಯಶಸ್ವಿಯಾಗಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಒದಗಿಸುವ ಸಂಬಂಧ ನಗರದ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ಪೂರ್ವ ಆಫ್ರಿಕಾದ ಬುರುಂಡಿ ದೇಶದ ಜತೆಗೆ 2019ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಬುರುಂಡಿ ದೇಶದ ವಿದೇಶಾಂಗ ಸಚಿವಾಲಯದ ಅಧಿಕಾರಿಗಳನ್ನು ಒಳಗೊಂಡ ನಿಯೋಗ ಸಂಸ್ಥೆಗೆ ಭೇಟಿ ನೀಡಿ, ಇಲ್ಲಿನ ಚಿಕಿತ್ಸೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತ್ತು. ಒಪ್ಪಂದದ ಪ್ರಕಾರ ವರ್ಷಕ್ಕೆ 300ರಿಂದ 500 ರೋಗಿಗಳನ್ನು ಚಿಕಿತ್ಸೆಗೆ ಕಳುಹಿಸಬೇಕಿತ್ತು. ಆದರೆ, ಕೋವಿಡ್ ಕಾರಣ ಆ ದೇಶದಿಂದ ರೋಗಿಗಳಿಗೆ ಇಲ್ಲಿ ಬರಲು ಸಾಧ್ಯವಾಗಿರಲಿಲ್ಲ. ನೇಪಾಳ ಸೇರಿ ವಿವಿಧ ದೇಶಗಳಿಂದ ರೋಗಿಗಳು ಕ್ಯಾನ್ಸರ್ ಚಿಕಿತ್ಸೆಗೆ ಕಿದ್ವಾಯಿಗೆ ಬರುತ್ತಿದ್ದಾರೆ.
ವೈದ್ಯಕೀಯ ಪ್ರವಾಸೋದ್ಯಮ ಬೆಳವಣಿಗೆಗೆ ಕಾರಣಗಳು
l ವಿದೇಶಗಳಿಗೆ ಹೋಲಿಸಿದಲ್ಲಿ ಅಗ್ಗದ ದರದಲ್ಲಿ ಚಿಕಿತ್ಸೆ
l ಅತ್ಯಾಧುನಿಕ ಸೌಲಭ್ಯ ಹೊಂದಿದ ಸರ್ಕಾರಿ ಸಂಸ್ಥೆಗಳು
l ಎಲ್ಲರಿಗೂ ಹೊಂದಾಣಿಕೆಯಾಗುವ ವಾತಾವರಣ
l ಇಂಗ್ಲಿಷ್ ಬಳಕೆಯಿಂದ ಸುಲಭ ಸಂವಹನ
l ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿ ಉತ್ತಮ ಸಾರಿಗೆ ಸಂಪರ್ಕ
l ವೈದ್ಯಕೀಯ ವೀಸಾ ಪಡೆಯುವುದು ಸುಲಭ
ನಗರದ ಪ್ರಮುಖ ಸರ್ಕಾರಿ ಆರೋಗ್ಯ ಸಂಸ್ಥೆಗಳು
l ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)
l ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ
l ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ
l ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ
l ಸಂಜಯ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ
l ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆ
l ಗ್ಯಾಸ್ಟ್ರೊಎಂಟ್ರಾಲಜಿ ಸೈನ್ಸಸ್ ಆ್ಯಂಡ್ ಆರ್ಗನ್ ಟ್ರಾನ್ಸ್‌ಪ್ಲಾಂಟ್ ಸಂಸ್ಥೆ
l ಮಿಂಟೋ ನೇತ್ರ ಚಿಕಿತ್ಸಾ ಪ್ರಾದೇಶಿಕ ಸಂಸ್ಥೆ
l ನೆಫ್ರೊ-ಯುರಾಲಜಿ ಸಂಸ್ಥೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.