ಶುಕ್ರವಾರ, ಫೆಬ್ರವರಿ 26, 2021
20 °C

ಕಟ್ಟಡ ನಕ್ಷೆ ಉಲ್ಲಂಘನೆ: ನಿಯಮ ಸಡಿಲ; ನಿಯಂತ್ರಣ ಜಟಿಲ

ಪ್ರವೀಣ್‌ ಕುಮಾರ್‌ ಪಿ.ವಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಜಗತ್ತಿನಲ್ಲೇ ವೇಗವಾಗಿ ಬೆಳೆಯುತ್ತಿರುವ ಮಹಾನಗರಗಳಲ್ಲಿ ಬೆಂಗಳೂರು ಒಂದು. ನಗರದಲ್ಲಿ ಲಂಗುಲಗಾಮಿಲ್ಲದೇ ಕಟ್ಟಡ ನಿರ್ಮಿಸುವುದನ್ನು ನಿಯಂತ್ರಿಸಲು ಹಾಗೂ ನಗರದ ಬೆಳವಣಿಗೆ ವ್ಯವಸ್ಥಿತವಾಗಿ ಇರಲಿ ಎಂಬ ಕಾರಣಕ್ಕೆ ಬಿಬಿಎಂಪಿ ಕಟ್ಟಡ ಉಪವಿಧಿಗಳನ್ನು (ಬೈಲಾ) ರೂಪಿಸಿದೆ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಹೊಣೆ ಹೊತ್ತ ಬಿಬಿಎಂಪಿ ಇದರಲ್ಲಿ ವೈಫಲ್ಯ ಕಂಡಿದೆ. ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಈಗ ಈ ನಿಯಮವನ್ನೇ ಸಡಿಲಗೊಳಿಸಲು ಸಿದ್ಧತೆ ನಡೆಸಿದೆ. 

ನಗರದಲ್ಲಿ ಯಾವುದೇ ಕಟ್ಟಡ ನಿರ್ಮಿಸಬೇಕಿದ್ದರೂ ಅದರ ನಕ್ಷೆಯನ್ನು ಮುಂಚಿತವಾಗಿ ಬಿಬಿಎಂಪಿಗೆ ಒದಗಿಸಿ ಮಂಜೂರಾತಿ ಪಡೆಯಬೇಕು. ಕಟ್ಟಡ ನಿರ್ಮಿಸುವಾಗ ಸೆಟ್‌ಬ್ಯಾಕ್‌ ಬಿಡಲು ಕ್ರಮ ಕೈಗೊಳ್ಳಲಾಗಿದೆಯೇ, ಎಫ್‌ಎಆರ್‌ಗೆ ಸಂಬಂಧಿಸಿದ ನಿಯಮಗಳು ಪಾಲನೆ ಆಗಿವೆಯೇ ಎಂಬುದನ್ನು ಪರಿಶೀಲಿಸಿ, ಅದು ನಿಯಮಬದ್ಧವಾಗಿದ್ದರೆ ಮಾತ್ರ ಬಿಬಿಎಂಪಿ ಅದಕ್ಕೆ ಮಂಜೂರಾತಿ ನೀಡುತ್ತದೆ. ಕಟ್ಟಡ ಪೂರ್ಣಗೊಂಡ ಬಳಿಕ ಅದನ್ನು ಬಳಸುವುದಕ್ಕೆ ಮುನ್ನ ಬಿಬಿಎಂಪಿಯಿಂದ ಸ್ವಾಧೀನಾನುಭವ ಪ್ರಮಾಣ ಪತ್ರ (ಒ.ಸಿ) ಪಡೆಯಬೇಕು. ಬಿಬಿಎಂಪಿ ಎಂಜಿನಿಯರ್‌ಗಳು ಸ್ಥಳ ಪರಿಶೀಲನೆ ನಡೆಸಿ, ನಕ್ಷೆ ಪ್ರಕಾರವೇ ಕಟ್ಟಡ ನಿರ್ಮಾಣವಾಗಿದ್ದರೆ ಅದಕ್ಕೆ ಒ.ಸಿ ನೀಡಲು ಕ್ರಮ ಕೈಗೊಳ್ಳುತ್ತಾರೆ. ನಕ್ಷೆಗೆ ಮಂಜೂರಾತಿ ಪಡೆದ ಬಳಿಕ ಅನಿವಾರ್ಯ ಕಾರಣಗಳಿಂದ ಶೇ 5ರಷ್ಟು ಉಲ್ಲಂಘನೆಗಳು ಆಗಿದ್ದರೆ, ಅಂತಹ ಕಟ್ಟಡಗಳಿಗೆ ದಂಡನಾ ಶುಲ್ಕ ವಿಧಿಸಿ ಬಿಬಿಎಂಪಿ ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ) ನೀಡುತ್ತದೆ. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉಲ್ಲಂಘನೆ ಆಗಿದ್ದರೆ ಆ ಕಟ್ಟಡಗಳಿಗೆ ಒ.ಸಿ ಲಭಿಸದು.

ನಗರದಲ್ಲಿ ಅನೇಕರು ನಕ್ಷೆಗೆ ಮಂಜೂರಾತಿ ಪಡೆದರೂ ಅದರ ಪ್ರಕಾರ ಕಟ್ಟಡ ನಿರ್ಮಿಸುತ್ತಿಲ್ಲ. ಸೆಟ್‌ಬ್ಯಾಕ್‌ ಹಾಗೂ ಎಫ್‌ಎಆರ್‌ಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸುವುದಂತೂ ಚಾಳಿಯಾಗಿಬಿಟ್ಟಿದೆ. ಉಲ್ಲಂಘನೆ ಪ್ರಮಾಣ ಶೇ 5ಕ್ಕಿಂತ ಹೆಚ್ಚು ಇರುವವರಂತೂ ಬಿಬಿಎಂಪಿಯಿಂದ  ಸ್ವಾಧೀನಾನುಭವ ಪ್ರಮಾಣಪತ್ರ ಪಡೆಯುವ ಗೋಜಿಗೇ ಹೋಗುತ್ತಿಲ್ಲ.

ಸಾವಿರಾರು ಕಟ್ಟಡಗಳು ಒ.ಸಿ ಪಡೆಯದೆಯೇ ಬಳಕೆಯಾಗುತ್ತಿವೆ. ಇದರಿಂದ ಬಿಬಿಎಂಪಿಗೆ ವರಮಾನ ನಷ್ಟವಾಗುತ್ತಿದೆ. ಇದನ್ನು ತಪ್ಪಿಸಲು ಬಿಬಿಎಂಪಿ 2003ರ ಬಿಬಿಎಂಪಿ ಕಟ್ಟಡ ಉಪವಿಧಿಯ ನಿಯಮಗಳಿಗೆ ತಿದ್ದುಪಡಿ ತರುವ ಬಗ್ಗೆ ಬಿಬಿಎಂಪಿ ಪ್ರಸ್ತಾವ ಸಿದ್ಧಪಡಿಸಿದೆ. ಮಂಜೂರಾತಿ ಪಡೆದ ನಕ್ಷೆಗಿಂತ ಶೇ 15ರಷ್ಟು ಉಲ್ಲಂಘನೆ ಮಾಡಿರುವ ಕಟ್ಟಡಗಳಿಗೂ ದಂಡ ವಿಧಿಸಿ ಸ್ವಾಧೀನಾನುಭವ ಪ್ರಮಾಣಪತ್ರ ನೀಡಲು ಪಾಲಿಕೆ ಮುಂದಾಗಿದೆ.  

‘ಕಟ್ಟಡ ನಕ್ಷೆಗೆ ಅನುಮೋದನೆ ಪಡೆದ ಬಳಿಕ ಶೇ 5ಕ್ಕಿಂತಲೂ ಹೆಚ್ಚು ಉಲ್ಲಂಘನೆ ಮಾಡುವ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಒ.ಸಿ ಪಡೆಯದ ಕಟ್ಟಡಗಳಿಗೆ ಬೆಸ್ಕಾಂ ವಿದ್ಯುತ್‌ ಸಂಪರ್ಕ ನೀಡುವುದಿಲ್ಲ. ಇದರಿಂದ ನಗರದ ಅಭಿವೃದ್ಧಿಗೆ ತೊಡಕು ಉಂಟಾಗುತ್ತಿದೆ. ಪಾಲಿಕೆಯ ವರಮಾನಕ್ಕೂ ಧಕ್ಕೆ ಉಂಟಾಗುತ್ತಿದೆ. 2003 ಕಟ್ಟಡ ಉಪವಿಧಿಯ ಸೆಕ್ಷನ್‌ 6 (i)ಗೆ ತಿದ್ದುಪಡಿ ತಂದು ಉಲ್ಲಂಘನೆ ಪ್ರಮಾಣವನ್ನು ಶೇ 15ರವರೆಗೆ ಹೆಚ್ಚಿಸಿದರೆ ಬಿಬಿಎಂಪಿಗೆ ಹೆಚ್ಚಿನ ವರಮಾನ ಬರಲಿದೆ’ ಎನ್ನುತ್ತಾರೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌. 

ಪಾಲಿಕೆಯ ಈ ನಡೆಗೆ ಸಾರ್ವಜನಿಕರು ಹಾಗೂ ನಗರ ಯೋಜನಾ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ರೀತಿ ನಿಯಮ ಸಡಿಲಿಕೆ ಮಾಡಿದ್ದೇ ಆದರೆ ನಗರದಲ್ಲಿ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸುವವರ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ ಎಂಬುದು ನಾಗರಿಕ ಸಂಘಟನೆಗಳ ಆತಂಕ.

ಅಷ್ಟೇ ಅಲ್ಲ, ಈ ರೀತಿ ಉಲ್ಲಂಘನೆಗೆ ಅವಕಾಶ ಕಲ್ಪಿಸುವುದೆಂದರೆ, ಕ್ರಮಬದ್ಧವಾಗಿ ಕಟ್ಟಡ ನಿರ್ಮಿಸುವವರನ್ನು ಅಪಮಾನಿಸಿದಂತೆ. ನಿಯಮಬದ್ಧವಾಗಿ ನಡೆದುಕೊಳ್ಳುವವವರಿಗೆ ಬೆಲೆ ಇಲ್ಲದಂತಾಗುತ್ತದೆ. ಅಕ್ರಮಗಳಿಗೆ ಉತ್ತೇಜನ ಸಿಕ್ಕಂತಾಗುತ್ತದೆ. ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೇ ವಿನಃ ಅದನ್ನು ಸಕ್ರಮಗೊಳಿಸುವುದು ತರವಲ್ಲ ಎಂಬುದು ನಗರ ಯೋಜನಾ ತಜ್ಞರ ವಾದ.

ಬಿಬಿಎಂಪಿ ತಾತ್ಕಾಲಿಕ ವರಮಾನವನ್ನು ನೋಡಿದರೆ ಸಾಲದು. ನಗರವು ಆರೋಗ್ಯಕರವಾಗಿ ಬೆಳೆಯುವಂತೆ ನೋಡಿಕೊಳ್ಳುವುದೂ ಬಿಬಿಎಂಪಿಯ ಕರ್ತವ್ಯ. ಕಟ್ಟಡ ನಕ್ಷೆಗೆ ಮಂಜೂರಾತಿ ಪಡೆದ ಬಳಿಕ ಶೇ 15ರಷ್ಟು ಉಲ್ಲಂಘನೆ ಮಾಡಿ ನಿರ್ಮಿಸುವ ಕಟ್ಟಡಗಳಿಗೂ ಸ್ವಾಧೀನಾನುಭವ ಪ್ರಮಾಣಪತ್ರ ನೀಡುವ ಪ್ರಸ್ತಾವವನ್ನು ಪ್ರಾರಂಭಿಕ ಹಂತದಲ್ಲೇ ಕೈಬಿಡಬೇಕು ಎಂಬುದು ಅವರ ಒತ್ತಾಯ.

‘ಅಕ್ರಮ ಸಕ್ರಮ ಜಾರಿಯ ಕಳ್ಳ ದಾರಿ’
‘ಬಿಬಿಎಂಪಿ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳನ್ನು ಸಕ್ರಮಗೊಳಿಸಲು 2015ರಲ್ಲಿ ಸರ್ಕಾರ ಮುಂದಾಗಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದೆವು. ಹೈಕೋರ್ಟ್‌ ಅರ್ಜಿಯನ್ನು ವಜಾ ಮಾಡಿದ್ದರಿಂದ ಅದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದೆವು. ಸುಪ್ರೀಂ ಕೋರ್ಟ್‌ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಿದೆ. ಅಕ್ರಮ–ಸಕ್ರಮ ಪ್ರಕ್ರಿಯೆ ಜಾರಿಗೊಳಿಸದಂತೆ 2017ರಲ್ಲಿ ತಡೆಯಾಜ್ಞೆ ನೀಡಿದೆ. ಇದಕ್ಕೆ ಪ್ರತಿಯಾಗಿ ಪ್ರಮಾಣಪತ್ರವನ್ನು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕಿತ್ತು. ಆದರೆ, ಹಾಗೆ ಮಾಡಿಲ್ಲ. ಪ್ರಕರಣ ಈಗ ಸುಪ್ರೀಂ ಕೋರ್ಟ್‌ ಅಂಗಳದಲ್ಲಿದೆ. ಅಕ್ರಮ– ಸಕ್ರಮ ಯೋಜನೆ ಜಾರಿ ಕಷ್ಟ ಎಂಬುದನ್ನು ಅರಿತ ಸರ್ಕಾರ ಈಗ ಕಟ್ಟಡ ನಕ್ಷೆಗೆ ವ್ಯತಿರಿಕ್ತವಾಗಿ ಶೇ 15ರಷ್ಟು ಉಲ್ಲಂಘನೆ ಮಾಡಿರುವ ಕಟ್ಟಡಗಳಿಗೂ ಸ್ವಾಧೀನಾನುಭವ ಪ್ರಮಾಣ ಪತ್ರ ನೀಡಲು ತಯಾರಿ ನಡೆಸಿದೆ’ ಎಂದು ಆರೋಪಿಸುತ್ತಾರೆ ಸಿಟಿಜನ್ಸ್‌ ಆ್ಯಕ್ಷನ್‌ ಫೋರಂನ ಎನ್‌.ಎಸ್‌.ಮುಕುಂದ್‌. 

‘ಪ್ರತಿ ಕಟ್ಟಡಕ್ಕೂ ನಿರ್ದಿಷ್ಟ ಪ್ರಮಾಣದ ಸೆಟ್‌ ಬ್ಯಾಕ್‌ ಬಿಡಬೇಕು ಎಂಬ ನಿಯಮ ಜಾರಿಗೆ ತಂದಿರುವುದೇ ಕಟ್ಟಡ ಸುತ್ತ ಮುತ್ತ ಗಾಳಿ ಬೆಳಕು ಆಡಲಿ. ಮಳೆನೀರು ಸರಿಯಾಗಿ ಹರಿವು ಹೋಗುವ ವ್ಯವಸ್ಥೆ ಇರಲಿ ಎಂಬ ಉದ್ದೇಶದಿಂದ. ಆದರೆ ಬಹುತೇಕ ಕಟ್ಟಡಗಳು ಈಗ ನಿಗದಿತ ಪ್ರಮಾಣದಲ್ಲಿ ಸೆಟ್‌ ಬ್ಯಾಕ್‌ ಬಿಡುತ್ತಿಲ್ಲ. ನಿರ್ಮಾಣ ಹಂತದಲ್ಲೇ ಕಟ್ಟಡ ಪರಿಶೀಲನೆ ನಡೆಸುವುದು, ಮಂಜೂರಾತಿ ಪಡೆದ ನಕ್ಷೆಗೆ ವ್ಯತಿರಿಕ್ತವಾಗಿ ಕಟ್ಟಡ ನಿರ್ಮಿಸುವುದನ್ನು ತಡೆಯುವುದು ಆಯಾ ವಾರ್ಡ್‌ನ ಎಂಜಿನಿಯರ್‌ಗಳ ಜವಾಬ್ದಾರಿ. ಅವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದ ಕಾರಣದಿಂದಾಗಿಯೇ, ಮಂಜೂರಾತಿ ಪಡೆದ ನಕ್ಷೆಗಿಂತ ಶೇ 5ಕ್ಕಿಂತಲೂ ಹೆಚ್ಚು ಉಲ್ಲಂಘನೆ ಮಾಡಿ ನಿರ್ಮಿಸಿದ ಕಟ್ಟಡಗಳ ಸಂಖ್ಯೆ ಹೆಚ್ಚುತ್ತಿದೆ. ಅಕ್ರಮ ನಡೆಸಲು ಅವಕಾಶ ಕಲ್ಪಿಸುವ ಮೂಲಕ ತಮ್ಮ ಕರ್ತವ್ಯ ಸರಿಯಾಗಿ ನಿರ್ವಹಿಸದ ಅಧಿಕಾರಿಗಳ ವಿರುದ್ಧ ಬಿಬಿಎಂಪಿ ಏನು ಕ್ರಮ ಕೈಗೊಳ್ಳಲಿದೆ’ ಎಂದು ಅವರು ಪ್ರಶ್ನಿಸಿದರು.

‘ಶೇ 15ರವರೆಗೆ ಉಲ್ಲಂಘನೆಗೆ ಅವಕಾಶ ಕಲ್ಪಿಸಿದರೆ ಭ್ರಷ್ಟಾಚಾರ ಮತ್ತಷ್ಟು ಹೆಚ್ಚಾಗಲಿದೆ. ಭ್ರಷ್ಟ ಅಧಿಕಾರಿಗಳಿಗೆ ಇನ್ನಷ್ಟು ದುಡ್ಡು ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

‘ನಗರವು ಅಸ್ತವ್ಯಸ್ತವಾಗಿ ನಿರ್ಮಾಣವಾದರೆ ಏನೆಲ್ಲ ಅನಾಹುತಗಳು ಸಂಭವಿಸುತ್ತವೆ ಎಂಬುದನ್ನು ಇತ್ತೀಚಿನ ವರ್ಷಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ರವಾಹಗಳು ಬೊಟ್ಟುಮಾಡಿ ತೋರಿಸಿವೆ. ಒಂದು ಗಂಟೆ ಮಳೆ ಸುರಿದರೂ ಇಲ್ಲಿನ ಬದುಕು ದುಸ್ತರವಾಗುತ್ತಿದೆ. ಜನ ಇಲ್ಲಿ ರಾಜಕಾಲುವೆ ಮೀಸಲು ಪ್ರದೇಶವನ್ನು ಬಿಟ್ಟು ಕಟ್ಟಡ ಕಟ್ಟುವುದಿಲ್ಲ. ಸೆಟ್‌ ಬ್ಯಾಕ್‌ ಬಿಡುವುದಿಲ್ಲ. ಕಟ್ಟಡದ ಎತ್ತರದ ಮಿತಿಗಳಿಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸುವುದಿಲ್ಲ. ಇವುಗಳನ್ನೆಲ್ಲ ನಿಯಂತ್ರಿಬೇಕಾದ ಬಿಬಿಎಂಪಿ ಅಕ್ರಮಗಳನ್ನೇ ಸಕ್ರಮ ಮಾಡುತ್ತದೆ. ನಮ್ಮ ಆಡಳಿತ ವ್ಯವಸ್ಥೆ ಎತ್ತ ಹೋಗುತ್ತಿದೆಯೋ ಅರ್ಥವಾಗುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಸರಿಯಾಗಿ ಸೆಟ್‌ಬ್ಯಾಕ್‌ ಬಿಟ್ಟು ಕ್ರಮಬದ್ಧವಾಗಿ ಕಟ್ಟಡ ನಿರ್ಮಿಸಿದರೆ ಆ ಕಟ್ಟಡದ ಒಟ್ಟು ನಿರ್ಮಾಣ ಪ್ರದೇಶ ಕಡಿಮೆಯಾಗುತ್ತದೆ. ಸೆಟ್‌ ಬ್ಯಾಕ್‌ ಬಿಡದೇ ನಿರ್ಮಿಸಿದ ಕಟ್ಟಡದಲ್ಲಿ ಹೆಚ್ಚು ನಿರ್ಮಾಣ ಪ್ರದೇಶವಿರುತ್ತದೆ. ಒಂದು ಬಾರಿ ದಂಡ ಕಟ್ಟಿಸಿ ಅಕ್ರಮವನ್ನು ಸಕ್ರಮ ಮಾಡಿದರೆ, ಕ್ರಮಬದ್ಧವಾಗಿ ನಡೆದುಕೊಂಡವರನ್ನೇ ಶಿಕ್ಷಿಸಿದಂತೆ. ಬಿಬಿಎಂಪಿಯೇ ಅಕ್ರಮ ನಡೆಸಿದವರ ಬೆಂಬಲಕ್ಕೆ ನಿಂತರೆ ಭವಿಷ್ಯದಲ್ಲಿ ಯಾರಾದರೂ ನಿಯಮ ಪ್ರಕಾರ ಕಟ್ಟಡ ನಿರ್ಮಿಸುತ್ತಾರೆಯೇ’ ಎಂದು ಅವರು ಪ್ರಶ್ನಿಸಿದರು.

‘ತಪ್ಪಿಗೆ ಪ್ರತಿವರ್ಷವೂ ದಂಡ ಕಟ್ಟಲಿ’
‘ಒಂದು ಬಾರಿ ದಂಡ ಕಟ್ಟಿಸಿಕೊಂಡು ಅಕ್ರಮಗಳನ್ನು ಸಕ್ರಮ ಮಾಡುವುದು ಉತ್ತಮ ಆಡಳಿತದ ಲಕ್ಷಣವಲ್ಲ. ಇದು ಕಾನೂನು ಪಾಲನೆ ಮಾಡಿದವರನ್ನು ಅಣಕಿಸಿದಂತೆ. ಅಕ್ರಮ ನಡೆಸುವುದಕ್ಕೆ ಕಡಿವಾಣ ಹಾಕಲು ಹತ್ತಾರು ದಾರಿಗಳಿವೆ. ಆಡಳಿತ ವ್ಯವಸ್ಥೆ ಇಂತಹ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು’ ಎನ್ನುತ್ತಾರೆ ನಗರ ಯೋಜನಾ ತಜ್ಞ ವಿ.ರವಿಚಂದರ್‌.

‘ಕಟ್ಟಡ ನಕ್ಷೆಗೆ ಮಂಜೂರಾತಿ ಪಡೆದ ಬಳಿಕ ಶೇ 15ರಷ್ಟು ಉಲ್ಲಂಘನೆ ಮಾಡಿರುವ ಕಟ್ಟಡಗಳಿಗೆ ಈಗ ಒಂದು ಬಾರಿ ದಂಡನಾ ಶುಲ್ಕ ಕಟ್ಟಿಸಿಕೊಂಡು ಸಕ್ರಮ ಮಾಡುವುದು ದೊಡ್ಡ ವಿಚಾರವಲ್ಲ. ಒಮ್ಮೆ ಆ ಕಟ್ಟಡಕ್ಕೆ ಸ್ವಾಧೀನಾನುಭವ ಪ್ರಮಾಣಪತ್ರ ನೀಡಿದ್ದೇ ಆದರೆ, ಅದು ಕೂಡಾ ಸಕ್ರಮ ಕಟ್ಟಡವಾಗುತ್ತದೆ. ಅದರ ಬದಲು ನಕ್ಷೆ ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಿಸಿದವರು ಪ್ರತಿವರ್ಷವೂ ದಂಡ ಕಟ್ಟುವಂತೆ ಆಗಬೇಕು. ಆಗ ಉಲ್ಲಂಘನೆ ಪ್ರಮಾಣವೂ ಕಡಿಮೆಯಾಗುತ್ತದೆ. ಬಿಬಿಎಂಪಿ ಈಗ ಎಷ್ಟು ವರಮಾನ ನಿರೀಕ್ಷೆ ಮಾಡಿದೆಯೋ ಅದಕ್ಕಿಂತ ಹೆಚ್ಚು ವರಮಾನವೂ ಬರುತ್ತದೆ’ ಎಂದು ಅವರು ಸಲಹೆ ನೀಡಿದರು.

‘ಯಾರೆಲ್ಲ ಮಂಜೂರಾತಿ ಪಡೆದ ನಕ್ಷೆಯ ಪ್ರಕಾರ ಕಟ್ಟಡ ನಿರ್ಮಿಸಿಲ್ಲವೋ ಆ ಬಗ್ಗೆ ಖಾತೆಯಲ್ಲೂ ನಮೂದು ಮಾಡಬೇಕು. ನಿಯಮ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡವಿದು ಎಂದು ಖಾತೆಯಲ್ಲೂ ನಮೂದಾದರೆ, ಸಹಜವಾಗಿಯೇ ಅದರ ಮೌಲ್ಯವೂ ಕಡಿಮೆಯಾಗುತ್ತದೆ. ಮಾಲೀಕರು ಅದನ್ನು ಮಾರಾಟ ಮಾಡಲು ಮುಂದಾದರೆ ಖರೀದಿದಾರರು ಕಡಿಮೆ ಬೆಲೆಗೆ ನೀಡುವಂತೆ ಒತ್ತಾಯಿಸುತ್ತಾರೆ’ ಎಂದು ಅವರು ವಿವರಿಸಿದರು.

‘ಬೇರೆ ವಿಧಿ ಇಲ್ಲ’
‘ನಿಯಮ ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಿಸಿದವರು ಸ್ವಾಧೀನಾನುಭವ ಪ್ರಮಾಣಪತ್ರ ಪಡೆಯುವುದಕ್ಕೆ ಬಿಬಿಎಂಪಿಗೆ ಅರ್ಜಿಯನ್ನೇ ಸಲ್ಲಿಸುತ್ತಿಲ್ಲ. ಅವರ ಪಾಡಿಗೆ ಅದನ್ನು ಬಳಸುತ್ತಿರುತ್ತಾರೆ. ಈಗಿರುವ ವ್ಯವಸ್ಥೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕಟ್ಟಡ ನಕ್ಷೆಗೆ ಮಂಜೂರಾತಿ ಪಡೆದ ಬಳಿಕ ಶೇ 15ರಷ್ಟು ಉಲ್ಲಂಘನೆ ಮಾಡಿರುವ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ ನೀಡಲು ಪ್ರಸ್ತಾವ ಸಿದ್ಧಪಡಿಸಿದ್ದೇವೆ’ ಎಂದು ಬಿಬಿಎಂಪಿಯ ನಗರ ಯೋಜನಾ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ 15ರಷ್ಟು ಉಲ್ಲಂಘನೆಗೆ ಮಾಡಿ ನಿರ್ಮಿಸಿರುವ ಕಟ್ಟಡಗಳು ಎಷ್ಟಿವೆ ಎಂಬ ಬಗ್ಗೆ ಸದ್ಯಕ್ಕಂತೂ ಮಾಹಿತಿ ಲಭ್ಯವಿಲ್ಲ. ಸಮಗ್ರ ಸಮೀಕ್ಷೆ ನಡೆದರೆ ಮಾತ್ರ ಈ ವಿವರ ಲಭ್ಯವಾಗಬಹುದು’ ಎಂದು ನಗರ ಯೋಜನಾ ವಿಭಾಗದ ಹೆಚ್ಚುವರಿ ನಿರ್ದೇಶಕ ಆರ್‌.ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು