ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಶ್ರದ್ಧಾಭಕ್ತಿಯಿಂದ ನಡೆದ ಬುದ್ಧ ಪೂರ್ಣಿಮೆ

ಬುದ್ಧನ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕಿವಿಮಾತು
Published 23 ಮೇ 2024, 16:21 IST
Last Updated 23 ಮೇ 2024, 16:21 IST
ಅಕ್ಷರ ಗಾತ್ರ

ಬೆಂಗಳೂರು: ಬೌದ್ಧ ಧರ್ಮೀಯರ ಪವಿತ್ರ ದಿನಗಳಲ್ಲಿ ಒಂದಾದ ಬುದ್ಧ ಪೂರ್ಣಿಮೆಯನ್ನು ನಗರದಲ್ಲಿ ಗುರುವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. 

ಮಹಾಬೋಧಿ ಸೊಸೈಟಿ, ನಾಗಸೇನ ವಿದ್ಯಾಲಯ, ಬುದ್ಧ ವಿಹಾರ ಹಾಗೂ ಬೌದ್ಧ ಮಹಾಸಭಾ, ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ, ರಂಗೋತ್ರಿ ಮಕ್ಕಳ ರಂಗಶಾಲೆ ಸೇರಿ ವಿವಿಧ ಸಂಘ–ಸಂಸ್ಥೆಗಳು ಬುದ್ಧ ಪೂರ್ಣಿಮೆ ಹಮ್ಮಿಕೊಂಡಿದ್ದವು. ಪ್ರಾರ್ಥನೆ, ಉಪನ್ಯಾಸ, ನಾಟಕ ಪ್ರದರ್ಶನ, ವಿಚಾರ ಸಂಕಿರಣ ಸೇರಿ ವಿವಿಧ ಕಾರ್ಯಕ್ರಮಗಳು ನಡೆದವು. 

ಮಹಾಬೋಧಿ ಸೊಸೈಟಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಿಕ್ಕು ಆನಂದ ಅವರು ‘ಇಂದಿಗೆ ಬುದ್ಧರ ಬೋಧನೆಗಳ ಪ್ರಸ್ತುತತೆ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ‘ಭವಿಷ್ಯದ ಬಗ್ಗೆ ಚಿಂತಿಸಿ ಸಮಯವನ್ನು ವ್ಯರ್ಥ ಮಾಡುವ ಬದಲು ಪ್ರಸ್ತುತ ಕ್ಷಣದ ಬಗ್ಗೆ ಯೋಚಿಸಬೇಕು. ಈ ಕ್ಷಣದ ಬಗ್ಗೆ ಯೋಚಿಸಿದಾಗ ಶಾಂತಿಯುತ ಜೀವನ ನಡೆಸಲು ಸಾಧ್ಯವಾಗುತ್ತದೆ. ಭವಿಷ್ಯದ ಚಿಂತೆಯಿಂದ ಅಮೂಲ್ಯವಾದ ಈಗಿನ ಸಮಯ ಹಾಳಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಪ್ರಸ್ತುತ ಸಮಯದ ಬಗ್ಗೆ ಯೋಚಿಸಿದಾಗ ಸಂತೋಷವು ನಿಮ್ಮನ್ನು ಹಿಂಬಾಲಿಸುತ್ತದೆ’ ಎಂದು ಕಿವಿಮಾತು ಹೇಳಿದರು.

‘ಬುದ್ಧನ ಬೋಧನೆಗಳು ವೈಜ್ಞಾನಿಕ ತಳಹದಿಯ ಮೇಲೆ ನಿಂತಿದೆ. ತಾನು ಹೇಳಿದ್ದೇ ನಿಜ ಎಂದು ಬುದ್ಧ ಎಂದೂ ಹೇಳಲಿಲ್ಲ. ಒಮ್ಮೆ ಪರಾಮರ್ಶಿಸಿ ಒಪ್ಪಿಕೊಳ್ಳುವಂತೆ ಹೇಳಿದ್ದು ಬುದ್ಧ ಮಾತ್ರ. ಬುದ್ಧನನ್ನು ಒಪ್ಪಿಕೊಂಡ ದೇಶಗಳೆಲ್ಲ ಇಂದು ಪ್ರಗತಿ ಹೊಂದಿವೆ. ಬುದ್ಧನ ಬೋಧನೆಗಳನ್ನು ಅನುಸರಿಸಿದರೆ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ’ ಎಂದರು.

ಮಹಾಬೋಧಿ ಸೊಸೈಟಿಯಲ್ಲಿ ಮುಂಜಾನೆ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ವಿವಿಧ ಆಚರಣೆಗಳು ನಡೆದವು. ಹಳೆ ವಿಹಾರದಿಂದ ಮಹಾಬೋಧಿ ಲೋಕ ಶಾಂತಿ ಬುದ್ಧ ವಿಹಾರದವರೆಗೆ ಮೆರವಣಿಗೆ ನಡೆಸಲಾಯಿತು. ಭಿಕ್ಕು ಸುಗತಾನಂದ ಅವರಿಂದ ಸತಿ ಮತ್ತು ಮೈತ್ರಿಧ್ಯಾನ ಕಾರ್ಯಕ್ರಮಗಳು ನಡೆದವು. ಬಳಿಕ ಕನ್ನಡ ಅನುವಾದಿತ ಪ್ರೊ. ಹನುಮಂತಯ್ಯ ಅವರ ‘ನಿತ್ಯ ಜೀವನದಲ್ಲಿ ಅಭಿಧಮ್ಮ’, ಕೆ. ಮಾಯೀಗೌಡ ಅವರ ‘ಬೌದ್ಧರು ಏನನ್ನು ನಂಬುವವರು’ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. 1008 ದೀಪಗಳೊಂದಿಗೆ ಪವಿತ್ರ ಬೋಧಿ ವೃಕ್ಷದ ಕೆಳಗೆ ವಿಶೇಷ ದೀಪ ಪೂಜೆ ಮಾಡಲಾಯಿತು.

ತತ್ವಗಳು ಮದ್ದು: ರಂಗೋತ್ರಿ ಮಕ್ಕಳ ರಂಗಶಾಲೆ ಸಂಸ್ಥೆ ಹಮ್ಮಿಕೊಂಡಿದ್ದ ಬುದ್ಧ ಪೂರ್ಣಿಮೆ ಹಾಗೂ ಬುದ್ಧನ ಬೆಳದಿಂಗಳ ರಾತ್ರಿ ಉತ್ಸವವನ್ನು ರಂಗನಿರ್ದೇಶಕ ಕೆ.ಎಚ್.ಕುಮಾರ್ ಉದ್ಘಾಟಿಸಿ, ಮಾತನಾಡಿದರು. ‘ಜಗತ್ತಿನಲ್ಲಿನ ವೈಷಮ್ಯ, ದ್ವೇಷ, ಅಸೂಯೆ, ಪ್ರಕ್ಷುಬ್ಧ ವಾತಾವರಣ ನಿರ್ಮೂಲನೆಗೆ ಬುದ್ಧ ಮಹಾತ್ಮನ ಶಾಂತಿ ಮತ್ತು ಅಹಿಂಸಾ ತತ್ವಗಳೇ ಮದ್ದು’ ಎಂದರು. 

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕವಿ ಗುಂಡೀಗೆರೆ ವಿಶ್ವನಾಥ್, ‘ಜಗತ್ತಿಗೆ ಶಾಂತಿ, ಅಹಿಂಸೆಯನ್ನು ಸಾರಿದ ಬುದ್ಧನು ಮಾತೃ ಹೃದಯದ ಮಾನವತಾವಾದಿ ಯಾಗಿದ್ದನು. ಬುದ್ಧ ಬಾರದೆ ಇದ್ದಿದ್ದರೆ ಈ ವಿಶ್ವವು ಮತ್ತಷ್ಟು ಸಮಸ್ಯೆಗಳ ವಿಷವರ್ತುಲದಲ್ಲಿ ಸಿಲುಕುತಿತ್ತು’ ಎಂದು ಹೇಳಿದರು.

ಇದೇ ವೇಳೆ ಗಾಯಕ ಸಂತವಾಣಿ ಸುಧಾಕರ್ ಮತ್ತು ತಂಡದವರು ಬುದ್ಧನ ಗೀತೆಗಳು ಹಾಗೂ ತತ್ವ ಪದಗಳನ್ನು ಪ್ರಸ್ತುತ ಪಡಿಸಿದರು.

ನಾಗಸೇನ ವಿದ್ಯಾಲಯ ಬುದ್ಧ ವಿಹಾರ ಮತ್ತು ಬುದ್ಧ ಮಹಾಸಭಾ ಆಯೋಜಿಸಿದ್ದ ಬುದ್ಧ ಪೂರ್ಣಿಮೆಯಲ್ಲಿ ಬುದ್ಧನ ಮೂರ್ತಿಗೆ ಭಿಕ್ಕು ಬುದ್ಧಮ್ಮ ವಿಶೇಷ ಪ್ರಾರ್ಥನೆ ಸಲ್ಲಿಸಿದರು –ಪ್ರಜಾವಾಣಿ ಚಿತ್ರ/ ಕಿಶೋರ್ ಕುಮಾರ್ ಬೋಳಾರ್
ನಾಗಸೇನ ವಿದ್ಯಾಲಯ ಬುದ್ಧ ವಿಹಾರ ಮತ್ತು ಬುದ್ಧ ಮಹಾಸಭಾ ಆಯೋಜಿಸಿದ್ದ ಬುದ್ಧ ಪೂರ್ಣಿಮೆಯಲ್ಲಿ ಬುದ್ಧನ ಮೂರ್ತಿಗೆ ಭಿಕ್ಕು ಬುದ್ಧಮ್ಮ ವಿಶೇಷ ಪ್ರಾರ್ಥನೆ ಸಲ್ಲಿಸಿದರು –ಪ್ರಜಾವಾಣಿ ಚಿತ್ರ/ ಕಿಶೋರ್ ಕುಮಾರ್ ಬೋಳಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT