ಶನಿವಾರ, ಏಪ್ರಿಲ್ 17, 2021
30 °C
ಅಪಾಯಕಾರಿ ಆಗಿದ್ದ ಕಾರ್ಯಾಚರಣೆ l ತಂದೆ ನೆನೆದು ಕಣ್ಣೀರಿಟ್ಟ ಅರ್ಜುನ್‌

ಕಟ್ಟಡ ದುರಂತ: ವಾಸಕ್ಕೆ ಮನೆ ಇಲ್ಲದೆ ಶೌಚಾಲಯದಲ್ಲೇ ಮಲಗಿದ್ದ ಖಗೆನ್ ಸಾವು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಗಳ ಮದುವೆಗಾಗಿ ಮಾಡಿದ್ದ ಸಾಲ ತೀರಿಸುವುದಕ್ಕಾಗಿ ನಗರಕ್ಕೆ ಬಂದಿದ್ದ ಅವರು ಗಾರೆ ಕೆಲಸಕ್ಕೆ ಸೇರಿದ್ದರು. ವಾಸಕ್ಕೆ ಮನೆ ಇಲ್ಲದಿದ್ದರಿಂದ, ನಿರ್ಮಾಣ ಹಂತದ ಕಟ್ಟಡದಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ಶೌಚಾಲಯದಲ್ಲೇ ಮಲಗುತ್ತಿದ್ದರು. ಆ ಶೌಚಾಲಯದಲ್ಲೇ ಅವರು ಪ್ರಾಣ ಬಿಟ್ಟಿದ್ದಾರೆ.

ಪುಲಿಕೇಶಿನಗರ ಸಮೀಪದ ಕಾಕ್ಸ್‌ ಟೌನ್‌ನಲ್ಲಿ ಸಂಭವಿಸಿದ ಕಟ್ಟಡ ದುರಂತದಲ್ಲಿ ಮೃತಪಟ್ಟ ಪಶ್ಚಿಮ ಬಂಗಾಳದ ಕಾರ್ಮಿಕ ಖಗೆನ್ ಸರ್ಕಾರ್‌ ಅವರ ದಾರುಣ ಅಂತ್ಯದ ಕಥೆಯಿದು. 

ಖಗೆನ್‌ ಅವರಿಗೆ ಪತ್ನಿ, ಮಗಳು ಹಾಗೂ ಮಗ ಇದ್ದಾರೆ. ಮಗಳ ಮದುವೆ ಮಾಡಿದ ಅವರು ಎರಡೂವರೆ ತಿಂಗಳ ಹಿಂದಷ್ಟೇ ನಗರಕ್ಕೆ ಬಂದಿದ್ದರು. ಒಂದೂವರೆ ತಿಂಗಳ ಹಿಂದಷ್ಟೇ ಮಗ ಅರ್ಜುನ್ ಸಹ ನಗರಕ್ಕೆ ಬಂದಿದ್ದರು. ತಂದೆ ಇದ್ದ ಕಟ್ಟಡದಲ್ಲಿ ಕೆಲಸ
ಸಿಕ್ಕಿರಲಿಲ್ಲ.


ಖಗೆನ್ ಸರ್ಕಾರ್‌

ಹೀಗಾಗಿ, ತುಮಕೂರಿನಲ್ಲಿ ನಿರ್ಮಾಣವಾಗುತ್ತಿದ್ದ ಕಟ್ಟಡವೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಆಗಾಗ ನಗರಕ್ಕೆ ಬಂದು ತಂದೆಯನ್ನು ಮಾತನಾಡಿಸಿಕೊಂಡು ಹೋಗುತ್ತಿದ್ದರು. ಇದೇ ಭಾನುವಾರ ನಗರಕ್ಕೆ ಬರು ವುದಾಗಿ ಮಗ ಹೇಳಿದ್ದರು. ಅಷ್ಟರಲ್ಲೇ ತಂದೆ ಮೃತಪಟ್ಟಿದ್ದಾರೆ.

ತಂದೆಗೆ ಕರೆ: ಕಟ್ಟಡ ದುರಂತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದಿದ್ದ ಅರ್ಜುನ್, ತಂದೆ ಖಗೆನ್ ಅವರನ್ನು ನೆನೆದು ಕಣ್ಣೀರಿಟ್ಟರು. ತಂದೆಯ ಶವವನ್ನು ರಕ್ಷಣಾ ಸಿಬ್ಬಂದಿ ಹೊರಗೆ ತೆಗೆಯುತ್ತಿದ್ದಂತೆ ಅವರ ಆಕ್ರಂದನ ಮುಗಿಲು ಮುಟ್ಟಿತ್ತು.

‘ನಮ್ಮೂರಿನಲ್ಲಿ ಕೆಲಸ ಸಿಗದಿದ್ದಕ್ಕೆ ಬೆಂಗಳೂರಿಗೆ ಬಂದೆವು. ತಂದೆಗೆ ದಿನಕ್ಕೆ ₹600 ಸಂಬಳ. ನನಗೆ ₹ 800. ಈಗ ದುರಂತದಲ್ಲಿ ತಂದೆ ತೀರಿಕೊಂಡಿರುವ ಸುದ್ದಿ ಕೇಳಿ ಊರಿನಲ್ಲಿರುವ ತಾಯಿ ಆಘಾತಕ್ಕೆ ಒಳಗಾಗಿದ್ದಾರೆ’ ಎಂದು ಅರ್ಜುನ್ ಕಣ್ಣೀರಿಟ್ಟರು.

‘ಮಂಗಳವಾರ ರಾತ್ರಿ 11ರ ಸುಮಾರಿಗೆ ತಂದೆಗೆ ಕರೆ ಮಾಡಿದ್ದೆ. ‘ಕಟ್ಟಡದ ಪ್ಲಾಸ್ಟರ್ ಕೆಲಸ ಮುಗಿಯುತ್ತಾ ಬಂದಿದೆ. ಬೇರೆ ಕಡೆ ಕೆಲಸ ಹುಡುಕಬೇಕು. ಬರುವ ಭಾನುವಾರವೇ ತುಮಕೂರಿಗೆ ಬರುತ್ತೇನೆ. ಅಲ್ಲಿಯೇ ನಿನ್ನ ಜೊತೆ ಕೆಲಸ ಮಾಡುತ್ತೇನೆ’ ಎಂದು ಹೇಳಿ ದ್ದರು. ನಾನೇ ಬೆಂಗಳೂರಿಗೆ ಬಂದು ಕರೆದು ಕೊಂಡು ಹೋಗು ವುದಾಗಿಯೂ ಹೇಳಿದ್ದೆ. ಅಷ್ಟರಲ್ಲೇ ದುರಂತ ನಡೆದು ಹೋಯಿತು’ ಎಂದು ಗೋಳಾಡಿದರು. 

‘ತಂದೆ ಸೇರಿ ಬಿಹಾರ ಹಾಗೂ ಪಶ್ಚಿಮ ಬಂಗಾಳದ 20 ಮಂದಿ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು. ತಂದೆಯು ಶೌಚಾಲಯದಲ್ಲಿ ಮಲಗುತ್ತಿದ್ದರು. ಕೆಲ ಕಾರ್ಮಿಕರು ಮೊದಲ ಮಹಡಿಯಲ್ಲಿ ಹಾಗೂ ಇನ್ನು ಕೆಲವರು ಬೇಸ್‌ಮೆಂಟ್‌ನಲ್ಲಿ ಮಲಗುತ್ತಿದ್ದರು’ ಎಂದರು.


ನಿರ್ಮಾಣ ಹಂತದ ಕಟ್ಟಡದ ಬೇಸ್‌ಮೆಂಟ್‌ ಜಾಗದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ

ಅಪಾಯಕಾರಿ ಕಾರ್ಯಾಚರಣೆ: ‘ಸಾಯಿ ಆದಿ ಅಂಬಲ್’ ಅಪಾರ್ಟ್‌ಮೆಂಟ್‌ ಸಮುಚ್ಚಯವನ್ನು ನಾಲ್ಕು ವರ್ಷಗಳ ಹಿಂದೆಯೇ ನಿರ್ಮಿಸಲಾಗಿದೆ. ಅದರ ಪಕ್ಕದ ಜಾಗದಲ್ಲೇ ಎಂಟು ತಿಂಗಳಿನಿಂದ ಹೊಸ ಕಟ್ಟಡ ನಿರ್ಮಾಣ ಮಾಡಲಾಗುತ್ತಿತ್ತು. ಈಗ ಎರಡೂ ಕಟ್ಟಡಗಳ ಬೇಸ್‌ಮೆಂಟ್ ಕುಸಿದುಬಿದ್ದಿವೆ. ಕಾರ್ಮಿಕರನ್ನು ರಕ್ಷಿಸಲು ನಡೆಸಿದ ಕಾರ್ಯಾಚರಣೆ ತುಂಬಾ ಅಪಾಯಕಾರಿ ಆಗಿತ್ತು. 

ಅಗ್ನಿಶಾಮಕ ದಳದ 100 ಹಾಗೂ ಎನ್‌ಡಿಆರ್‌ಎಫ್‌ನ 30 ಸಿಬ್ಬಂದಿ 15 ಗಂಟೆಗಳವರೆಗೆ ನಿರಂತರವಾಗಿ ಕಾರ್ಯಾಚರಣೆ ನಡೆಸಿ, ಮೃತದೇಹಗಳನ್ನು ಹೊರತೆಗೆದರು. ಅವಶೇಷಗಳಡಿ ಸಿಲುಕಿದ್ದ ನಾಲ್ವರನ್ನು ರಕ್ಷಿಸಿದರು.

‘ನಿರ್ಮಾಣ ಹಂತದ ಕಟ್ಟಡದ ಪಾಯ ಸಡಿಲಗೊಂಡು ಫಿಲ್ಲರ್‌ಗಳು ಬಾಗಿದ್ದವು. ನಂತರವೇ ಬೇಸ್‌ಮೆಂಟ್‌ ಕುಸಿದು ಬಿದ್ದಿದೆ. ಜೊತೆಗೆ ಪಕ್ಕದ ಅಪಾರ್ಟ್‌ಮೆಂಟ್‌ ಸಮುಚ್ಚಯದ ಬೇಸ್‌ಮೆಂಟ್‌ ಸಹ ಕುಸಿದಿದೆ. ದಂಪತಿ ವಾಸವಿದ್ದ ಕೊಠಡಿಯು ನಿರ್ಮಾಣ ಹಂತದ ಕಟ್ಟಡದ ಪಾಯದೊಳಗೆ ಹೂತು ಹೋಗಿದೆ’ ಎಂದು ಅಗ್ನಿಶಾಮಕ ಅಧಿಕಾರಿ ಹೇಳಿದರು.

‘ಕಟ್ಟಡ ನಿರ್ಮಾಣಕ್ಕೆ ಬಳಸಿದ್ದ ಸಾಮಗ್ರಿಗಳನ್ನು ಪರೀಕ್ಷಿಸಿದ ನಂತರವೇ ದುರಂತಕ್ಕೆ ಕಾರಣವೇನು ಎಂಬುದು ಗೊತ್ತಾಗಲಿದೆ. ಕುಸಿದು ಬಿದ್ದಿರುವ ಕಟ್ಟಡಗಳನ್ನು ಬಿಬಿಎಂಪಿ ಸಿಬ್ಬಂದಿಯೇ ತೆರವು ಮಾಡಬೇಕು’ ಎಂದರು. 

ಕಾರು, ಬೈಕ್‌ಗಳು ಜಖಂ: ಅಪಾರ್ಟ್‌ಮೆಂಟ್‌ ಬೇಸ್‌ಮೆಂಟ್‌ನಲ್ಲಿ ಎರಡು ಕಾರು ಹಾಗೂ ಐದು ಬೈಕ್‌ಗಳು ಇದ್ದವು. ಅವೆಲ್ಲವೂ ಅವಶೇಷಗಳಡಿ ಸಿಲುಕಿ ಜಖಂಗೊಂಡಿವೆ.


ಅಪಾರ್ಟ್‌ಮೆಂಟ್ ಸಮುಚ್ಚಯದ ಫ್ಲ್ಯಾಟ್‌ನ ಕೊಠಡಿಯಲ್ಲಿ ಚಿಂತಾಕ್ರಾಂತವಾಗಿ ಕುಳಿತಿದ್ದ ಮನೆ ಮಾಲೀಕ

‘ಭೂಕಂಪದ ಅನುಭವವಾಯಿತು’
ಬೇಸ್‌ಮೆಂಟ್‌ ಕುಸಿದ ‘ಸಾಯಿ ಆದಿ ಅಂಬಲ್’ ಅಪಾರ್ಟ್‌ಮೆಂಟ್‌ ಸಮುಚ್ಚಯದ ಮೊದಲ ಮಹಡಿಯ ಫ್ಲ್ಯಾಟ್‌ನಲ್ಲಿ ವಾಸವಿದ್ದ ಅಂಬರೀಷ್ ಅವರ ಕುಟುಂಬ ಸುರಕ್ಷಿತವಾಗಿ ಹೊರಗೆ ಬಂದಿದೆ.

ದುರಂತದ ಕುರಿತು ಮಾತನಾಡಿದ ಅವರು, ‘ಸಾಲ ಮಾಡಿ ಫ್ಲ್ಯಾಟ್‌ ಖರೀದಿಸಿದ್ದೆವು. ಈಗ ಅದೆಲ್ಲವೂ ಮಣ್ಣಾಯಿತು. ಜೀವ ಉಳಿದರೆ ಸಾಕು ಎಂದು ಎಲ್ಲವನ್ನೂ ಬಿಟ್ಟು ಬೀದಿಗೆ ಬಂದು ನಿಂತಿದ್ದೇವೆ. ದಿಕ್ಕು ತೋಚದ ಸ್ಥಿತಿ ನನ್ನದಾಗಿದೆ’ ಎಂದರು.

‘ಕುಟುಂಬದವರೆಲ್ಲ ಎಂದಿನಂತೆ ಊಟ ಮಾಡಿ ಮಲಗಿದ್ದೆವು. ತಡರಾತ್ರಿ ಕಟ್ಟಡ ಅಲುಗಾಡಿದ ಅನುಭವವಾಯಿತು’ ಎಂದರು.

ಪಾಯದಲ್ಲಿ ತುಂಬಿದ್ದ ನೀರು
‘ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಅದು ಗೊತ್ತಿದ್ದರೂ ಬಿಬಿಎಂಪಿ ಎಂಜಿನಿಯರ್‌ಗಳು ಮೌನವಾಗಿದ್ದರು. ಅವರ ನಿರ್ಲಕ್ಷ್ಯದಿಂದಲೇ ದುರಂತ ಸಂಭವಿಸಿದೆ’ ಎಂದು ಸ್ಥಳೀಯರು ದೂರಿದರು.

‘ಕಟ್ಟಡದ ಜಾಗದಲ್ಲಿ ಈ ಹಿಂದೆ ಬಾವಿ ಇತ್ತು. ಅದನ್ನು ಮುಚ್ಚಿ ನೆಲಸಮ ಮಾಡಲಾಗಿತ್ತು. ಅದೇ ಜಾಗದಲ್ಲಿ ಅವೈಜ್ಞಾನಿಕವಾಗಿ ಪಾಯ ತೆಗೆಯಲಾಗಿತ್ತು. ಫಿಲ್ಲರ್‌ ನಿರ್ಮಿಸಿ ನಾಲ್ಕು ಅಂತಸ್ತು ಕಟ್ಟಿದ ಮೇಲೂ ಪಾಯದಲ್ಲಿ ನೀರು ನಿಲ್ಲುತ್ತಿತ್ತು. ಅದರಿಂದಲೇ ಪಾಯ ಸಡಿಲಗೊಂಡು ಫಿಲ್ಲರ್‌ಗಳು ಬಾಗಿವೆ’ ಎಂದರು.

ಪ್ರಜ್ಞೆ ತಪ್ಪಿ ಬಿದ್ದ ಸಂಬಂಧಿಕರು
ದುರಂತದಲ್ಲಿ ಕಾವಲುಗಾರ ನೇಪಾಳದ ನಾರಾಯಣ, ಅವರ ಪತ್ನಿ ನಿರ್ಮಲಾ ಹಾಗೂ ಮಗಳು ಅನುಷ್ಕಾ ಮೂವರು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಬಂದಿದ್ದ ಸಂಬಂಧಿಕರು, ಮೃತದೇಹಗಳನ್ನು ನೋಡಿ ದುಃಖತಪ್ತರಾದರು. ಅದರಲ್ಲೇ ಇಬ್ಬರು, ಪ್ರಜ್ಞೆ ತಪ್ಪಿ ಬಿದ್ದರು. ಆಂಬುಲೆನ್ಸ್‌ನಲ್ಲೇ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.  ‘ಎರಡು ವರ್ಷದಿಂದ ನಾರಾಯಣ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದರು. ಸುಖಿ ಕುಟುಂಬ ಅವರದ್ದಾಗಿತ್ತು. ಮೂವರ ಸಾವು ಸಹಿಸಿಕೊಳ್ಳಲಾಗುತ್ತಿಲ್ಲ’ ಎಂದು ಸಂಬಂಧಿಕರು ಹೇಳಿದರು.

ದೂಳಿನಲ್ಲಿ ‘ಕಾಪಾಡಿ... ಕಾಪಾಡಿ...’ ಕೂಗು
‘ತಡರಾತ್ರಿ ದೊಡ್ಡ ಶಬ್ದ ಕೇಳಿ ಎಚ್ಚರವಾಯಿತು. ಏನಾಯಿತು ಎಂದು ನೋಡಲು ಹೊರಗಡೆ ಬಂದಾಗ ಎಲ್ಲೆಲ್ಲೋ ದೂಳು ಕಾಣಿಸುತ್ತಿತ್ತು. ಅದರ ನಡುವೆಯೇ  ‘ಕಾಪಾಡಿ... ಕಾಪಾಡಿ...’ ಎಂಬ ಕೂಗು ಕೇಳುಬರುತ್ತಿತ್ತು’ ಎಂದು ಸ್ಥಳೀಯ ನಿವಾಸಿ ರುಕ್ಮಿಣಿ ಹೇಳಿದರು.

ಪ್ರಜ್ಞೆ ತಪ್ಪಿ ಬಿದ್ದ ಸಂಬಂಧಿಕರು
ದುರಂತದಲ್ಲಿ ಕಾವಲುಗಾರ ನೇಪಾಳದ ನಾರಾಯಣ, ಅವರ ಪತ್ನಿ ನಿರ್ಮಲಾ ಹಾಗೂ ಮಗಳು ಅನುಷ್ಕಾ ಮೂವರು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಬಂದಿದ್ದ ಸಂಬಂಧಿಕರು, ಮೃತದೇಹಗಳನ್ನು ನೋಡಿ ದುಃಖತಪ್ತರಾದರು. ಅದರಲ್ಲೇ ಇಬ್ಬರು, ಪ್ರಜ್ಞೆ ತಪ್ಪಿ ಬಿದ್ದರು. ಆಂಬುಲೆನ್ಸ್‌ನಲ್ಲೇ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. 

‘ಎರಡು ವರ್ಷದಿಂದ ನಾರಾಯಣ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದರು. ಸುಖಿ ಕುಟುಂಬ ಅವರದ್ದಾಗಿತ್ತು. ಮೂವರ ಸಾವು ಸಹಿಸಿಕೊಳ್ಳಲಾಗುತ್ತಿಲ್ಲ’ ಎಂದು ಸಂಬಂಧಿಕರು ಹೇಳಿದರು.

ಇತ್ತೀಚಿನ ದುರಂತಗಳು
* 2018ರ ಜ.18: ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನ ರಸ್ತೆಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಕಾರ್ಮಿಕ ಶಬರೀಷ್‌ (36) ಮೃತಪಟ್ಟರು.
* ಫೆ.15: ಸರ್ಜಾಪುರ ರಸ್ತೆಯ ಕಸವನಹಳ್ಳಿಯ ಜಯರಾಮರೆಡ್ಡಿ ಲೇಔಟ್‍ನಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿದು ಉತ್ತರ ಪ್ರದೇಶದ ಗೋರಖ್‍ಪುರದ ಮೂವರು ಕಾರ್ಮಿಕರು ಮೃತಪಟ್ಟರು.
* ಅ.24: ಜಕ್ಕೂರು ಲೇಔಟ್‌ನಲ್ಲಿ ಕಟ್ಟಡದ ಗುತ್ತಿಗೆದಾರ ಶಿಡ್ಲಘಟ್ಟದ ಮಧುಸೂದನ್ (24) ಮೃತಪಟ್ಟರು.
* ನ.10: ತ್ಯಾಗರಾಜನಗರದಲ್ಲಿ ನಿರ್ಮಾಣ ಹಂತದ ‘ಸಾಯಿ ಗ್ರ್ಯಾಂಡ್’ ಅಪಾರ್ಟ್‌ಮೆಂಟ್ ಕಟ್ಟಡ ಕುಸಿದು ಸುಫೇಲ್‌ 
ಮೃತಪಟ್ಟರು.
* ಡಿ. 6: ಬ್ಯಾಡರಹಳ್ಳಿ ಸಮೀಪದ ತಿಗಳರಪಾಳ್ಯದಲ್ಲಿ ಕಟ್ಟಡ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟರು.
* ಡಿ.13: ಕಾಡುಗೋಡಿ ಸಮೀಪದ ಸೀಗೆಹಳ್ಳಿಯ ಆಶ್ರಮ ರಸ್ತೆಯಲ್ಲಿರುವ ‘ಹೋಲಿಸೋಲ್’ ಕಂಪನಿ ಕಟ್ಟಡ ದುರಂತದಲ್ಲಿ ಒಡಿಶಾದ ಮೂವರು ಕಾರ್ಮಿಕರು ಅಸುನೀಗಿದರು.
* 2019ರ ಏಪ್ರಿಲ್‌ 5: ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಆವರಣದಲ್ಲಿ ನಿರ್ಮಿಸಲಾಗುತ್ತಿದ್ದ ಪಾರ್ಕಿಂಗ್ ಕಟ್ಟಡದ ಸೆಂಟ್ರಿಂಗ್‌ ಕುಸಿದು ಕಾರ್ಮಿಕರಾದ ಬಿಹಾರದ ರಾಕೇಶ್ (21) ಹಾಗೂ ಪಶ್ಚಿಮ ಬಂಗಾಳದ ರಾಹುಲ್ ಗೋಸ್ವಾಮಿ (19) ಮೃತಪಟ್ಟು, 12 ಜನರು ಗಾಯಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು