ಸೋಮವಾರ, ಸೆಪ್ಟೆಂಬರ್ 27, 2021
22 °C
ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ

ಟಿಪ್ಪು ಜಯಂತಿ ರದ್ದು: ಕೋರ್ಟ್‌ಗೆ ಪೂರಕ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಟಿಪ್ಪು ಜಯಂತಿ ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಪೂರಕ ಮಾಹಿತಿಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಲು ಸಚಿವ ಸಂಪುಟ ನಿರ್ಧರಿಸಿದೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಟಿಪ್ಪು ಜಯಂತಿ ಕೈಬಿಡುವ ನಿರ್ಣಯವನ್ನು ತೆಗೆದುಕೊಂಡಿತ್ತು. ಇದನ್ನು ವಿರೋಧಿಸಿ ಕೆಲವು ಸಂಘಟನೆಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದವು. ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ, ಸರ್ಕಾರ ತನ್ನ ನಿಲುವಿಗೆ ಬದ್ಧವಾಗಿರಲು ತೀರ್ಮಾನಿಸಿತು.

ಎತ್ತಿನಹೊಳೆ ಯೋಜನೆಗೆ ಇಲಾಖೆಯ ಸುಪರ್ದಿಯಲ್ಲಿರುವ 86 ಎಕರೆ ಭೂಮಿಯನ್ನು ಹಸ್ತಾಂತರಿಸಲು ಒಪ್ಪಿಗೆ ನೀಡಲಾಗಿದೆ ಎಂದು ಪಶುಸಂಗೋಪನೆ ಇಲಾಖೆ ಸಚಿವ ಪ್ರಭು ಚವ್ಹಾಣ್‌ ತಿಳಿಸಿದ್ದಾರೆ. 

ಗುರುತ್ವ ಕಾಲುವೆ ಸರಪಳಿ 100ನೇ ಕಿ.ಮೀನಿಂದ 102.38 ಕಿ.ಮೀ.ವರೆಗೆ (ತಿಪಟೂರು ತಾಲ್ಲೂಕು ಕೊನೇಹಳ್ಳಿ ಬಳಿ) ಪಶು ವೈದ್ಯಕೀಯ ವಿದ್ಯಾಲಯದ ಆವರಣದಲ್ಲಿ ಹಾದು ಹೋಗಲಿದೆ. ಈ ಜಮೀನು ನೀಡುವ ಸಂಬಂಧ ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಒಡಂಬಡಿಕೆ ಮಾಡಿಕೊಳ್ಳಲಿವೆ ಎಂದು ಅವರು ಹೇಳಿದರು.

ಸಂಪುಟ ಸಭೆಯ ಮುಖ್ಯಾಂಶಗಳು

* ರಾಜ್ಯ ಮೀಸಲು ಪೊಲೀಸ್‌(ಕೇಡರ್‌ ಮತ್ತು ನೇಮಕಾತಿ) ನಿಯಮಾವಳಿಗೆ ಅನುಮೋದನೆ.

* ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ವಿಧೇಯಕಕ್ಕೆ ಒಪ್ಪಿಗೆ

* ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಮಸೂದೆಗೆ ಹಸಿರು ನಿಶಾನೆ

* ಅಸಂಘಟಿತ ವಲಯದ ವಾಣಿಜ್ಯ ವಾಹನಗಳ ಚಾಲಕರಿಗೂ ಅಪಘಾತ ವಿಮಾ ಪರಿಹಾರ ನೀಡಲು ಸಮ್ಮತಿ

* ಅಂಗನವಾಡಿಗಳಿಗೆ ಶಾಲಾ ಪೂರ್ವ ಶೈಕ್ಷಣಿಕ ಪರಿಕರ ಕಿಟ್ ಖರೀದಿಗೆ ₹32.95 ಕೋಟಿ

* ಬೆಂಗಳೂರಿನ ಪಟ್ಟೆಗಾರ ಪಾಳ್ಯದಲ್ಲಿ ಕೈಗೊಳ್ಳಲಾಗಿದ್ದ ₹11.50 ಕೋಟಿ ವೆಚ್ಚದ ವೈಟ್‌ ಟಾಪಿಂಗ್‌ ಕಾಮಗಾರಿ ಮಂಜೂರಾತಿ ರದ್ದು

* ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದಲ್ಲಿ ಹೊಸ ಓಟಿಎಸ್‌ ನೀತಿ ಜಾರಿಗೆ ತೀರ್ಮಾನ

* ಭೂಸ್ವಾಧೀನ ಮತ್ತು ಪುನರ್‌ವಸತಿ ತಿದ್ದುಪಡಿ ಕಾಯ್ದೆಗೆ ಅನುಮೋದನೆ

* ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಒಟ್ಟು 459 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಯೋಜನೆಗೆ ಒಪ್ಪಿಗೆ

* ದೇವಿಕಾರಾಣಿ ರೋರಿಚ್ ಎಸ್ಟೇಟ್‌ನ ಪಾರಂಪರಿಕ ತಾಣ ಮತ್ತು ಕಲಾಕೃತಿಗಳ ಸಂರಕ್ಷಣೆ. ಕಬ್ಬನ್‌ ಪಾರ್ಕ್‌ನಲ್ಲಿರುವ ಪ್ರೆಸ್‌ ಕ್ಲಬ್‌ ಕಟ್ಟಡದ ಗುತ್ತಿಗೆ ಅವಧಿ ಮುಂದುವರಿಕೆ.

* ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಆರೋಗ್ಯ ಭವನ ನಿರ್ಮಾಣಕ್ಕೆ ₹113 ಕೋಟಿ, ಪದವಿ ಪೂರ್ವ ಮತ್ತು ಪ್ರೌಢ ಶಾಲಾ ಹಂತದ ವಿದ್ಯಾರ್ಥಿ ನಿಲಯಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ₹70.19 ಕೋಟಿ ಅನುದಾನಕ್ಕೆ ಒಪ್ಪಿಗೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು