ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಕ್ಯಾನ್ಸರ್ ತಪಾಸಣೆ, ರೋಗದ ಬಗ್ಗೆ ಜಾಗೃತಿ

ಆರೋಗ್ಯ ಇಲಾಖೆಯ ಸಹಯೋಗದಲ್ಲಿ ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಹಮ್ಮಿಕೊಂಡಿದ್ದ ಎಕ್ಸ್‌ಪೊ
Published 24 ಫೆಬ್ರುವರಿ 2024, 16:20 IST
Last Updated 24 ಫೆಬ್ರುವರಿ 2024, 16:20 IST
ಅಕ್ಷರ ಗಾತ್ರ

ಬೆಂಗಳೂರು: ಆರೋಗ್ಯ ಇಲಾಖೆಯ ಸಹಯೋಗದಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಎಂ.ಜಿ. ರಸ್ತೆಯ ರಂಗೋಲಿ ಮೆಟ್ರೊದಲ್ಲಿ ಹಮ್ಮಿಕೊಂಡಿದ್ದ ‘ಕ್ಯಾನ್ಸರ್ ಎಕ್ಸ್‌ಪೊ’ದಲ್ಲಿ ಕ್ಯಾನ್ಸರ್ ತಪಾಸಣೆ ನಡೆಸುವ ಜತೆಗೆ ರೋಗದ ಬಗ್ಗೆ ಜಾಗೃತಿ ಮೂಡಿಸಲಾಯಿತು. 

‘ಕ್ಯಾನ್ಸರ್‌ಗೆ ವಿದಾಯ ಹೇಳಿ, ಹೊಸ ಜೀವನಕ್ಕೆ ನಾಂದಿ ಹಾಡಿ’ ಎಂಬ ಶೀರ್ಷಿಕೆಯಡಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಈ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು. 

‘ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆ ಮಾಡಿದಲ್ಲಿ ಸುಲಭವಾಗಿ ಕಾಯಿಲೆಯನ್ನು ವಾಸಿ ಮಾಡಬಹುದು. ಹಾಗಾಗಿ, ರೋಗದ ಲಕ್ಷಣಗಳು ಕಾಣಿಸಿಕೊಂಡಾಗ ಕಡೆಗಣಿಸಬಾರದು. 40 ವರ್ಷಗಳು ಮೇಲ್ಪಟ್ಟ ಬಳಿಕ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಆರಂಭಿಕ ಹಂತದಲ್ಲಿಯೇ ರೋಗ ಪತ್ತೆ ಮಾಡಿದಲ್ಲಿ ಚಿಕಿತ್ಸೆಯ ವೆಚ್ಚವೂ ಕಡಿಮೆ ಆಗುತ್ತದೆ’ ಎಂದರು. 

‘ವ್ಯಕ್ತಿಯನ್ನು ದೈಹಿಕ, ಮಾನಸಿಕ ಮತ್ತು ಆರ್ಥಿಕವಾಗಿ ಕುಗ್ಗಿಸುತ್ತಿದ್ದ ಕ್ಯಾನ್ಸರ್ ಕಾಯಿಲೆ, ಇತ್ತೀಚೆಗೆ ಸಾಮಾನ್ಯವಾಗಿದೆ. ಈ ಕಾಯಿಲೆ ಬಗ್ಗೆ ಜಾಗೃತಿಯೂ ಮೂಡುತ್ತಿದ್ದು, ತಂತ್ರಜ್ಞಾನದ ನೆರವಿನಿಂದ ಚಿಕಿತ್ಸೆಗಳು ವ್ಯಕ್ತಿಯನ್ನು ಪ್ರಾಣಾಪಾಯದಿಂದ ಪಾರು ಮಾಡುತ್ತಿವೆ. ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗಳು ನಿಖರ ಚಿಕಿತ್ಸೆಗೆ ಸಹಕಾರಿಯಾಗುತ್ತಿವೆ. ಕ್ಯಾನ್ಸರ್ ತಡೆಗೆ ನಿಯಮಿತ ವ್ಯಾಯಾಮ, ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಸೇರಿ ಆರೋಗ್ಯಪೂರ್ಣ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಕ್ಯಾನ್ಸರ್ ವಿಚಾರದಲ್ಲಿ ಹೆಚ್ಚಿನ ಜಾಗೃತಿ ವಹಿಸಬೇಕು’ ಎಂದು ಹೇಳಿದರು. 

ಕ್ಯಾನ್ಸರ್ ಪ್ರಕರಣ ಹೆಚ್ಚಳ: ಫೋರ್ಟಿಸ್, ನಾರಾಯಣ ಹೆಲ್ತ್, ಆಸ್ಟರ್ ಸಿಎಂಐ, ಸೈಟ್‍ಕೇರ್ ಆಸ್ಪತ್ರೆ, ಇಂಡಿಯನ್ ಕ್ಯಾನ್ಸರ್‌ ಸೊಸೈಟಿ ಈ ಎಕ್ಸ್‌ಪೊದಲ್ಲಿ ಪಾಲ್ಗೊಂಡಿದ್ದವು. ಮಧ್ಯಾಹ್ನದ ಬಳಿಕ ಕ್ಯಾನ್ಸರ್‌ಗೆ ಸಂಬಂಧಿಸಿದ ಗೋಷ್ಠಿಗಳು ನಡೆದವು. ಈ ವೇಳೆ ಮಾತನಾಡಿದ ಕ್ಯಾನ್ಸರ್ ತಜ್ಞರು, ‘ಆಧುನಿಕ ಜೀವನ ವಿಧಾನ, ಪಾಶ್ಚಾತ್ಯ ಆಹಾರ ಪದ್ಧತಿ, ವಾಯು ಮಾಲಿನ್ಯ ಸೇರಿ ವಿವಿಧ ಕಾರಣಗಳಿಂದ ನಗರ ಪ್ರದೇಶದಲ್ಲಿ ಕ್ಯಾನ್ಸರ್ ಪೀಡಿತರಾಗುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹಾಗಾಗಿ, ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಬೆಳಿಗ್ಗೆಯಿಂದ ಸಂಜೆವರೆಗೆ ನಡೆದ ಎಕ್ಸ್‌ಪೊದಲ್ಲಿ ಆರೋಗ್ಯ ಇಲಾಖೆಯ ಸಂಚಾರಿ ಸಮುದಾಯ ಆರೋಗ್ಯ ಕೇಂದ್ರದ ಮೂಲಕ ಕ್ಯಾನ್ಸರ್ ತಪಾಸಣೆ ಜತೆಗೆ ಎಕೊ, ಮ್ಯಾಮೋಗ್ರಾಮ್‌ನಂತಹ ಪರೀಕ್ಷೆಗಳೂ ಲಭ್ಯವಿದ್ದವು. ಪ್ರಮುಖ ಆಸ್ಪತ್ರೆಗಳ ಕ್ಯಾನ್ಸರ್ ತಜ್ಞರು ಉಚಿತವಾಗಿ ತಪಾಸಣೆ ನಡೆಸಿ, ಸಮಾಲೋಚನೆಯನ್ನೂ ಮಾಡಿದರು. ಕ್ಯಾನ್ಸರ್‌ಗೆ ಸಂಬಂಧಿಸಿದ ಮಾಹಿತಿ ಫಲಕಗಳನ್ನೂ ಇರಿಸಲಾಗಿತ್ತು. ಇದರಿಂದ ರೋಗದ ಬಗ್ಗೆ ಜನರಿಗೆ ಸುಲಭವಾಗಿ ಮಾಹಿತಿ ದೊರೆತವು. ಕ್ಯಾನ್ಸರ್ ಲಕ್ಷಣ, ಚಿಕಿತ್ಸಾ ವಿಧಾನ, ಹೊಸ ಆವಿಷ್ಕಾರಗಳ ಬಗ್ಗೆ ವೈದ್ಯಕೀಯ ತಜ್ಞರು ಮಾಹಿತಿ ನೀಡಿದರು.

ಲೇಖಕ ರಾಮೇಂದ್ರ ಕುಮಾರ್ ಅವರ ‘ಮೈ ಗ್ರ್ಯಾಂಡ್‌ ಪಾ ಮೈ ಬೆಸ್ಟಿ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಆಹಾರ ಮಳಿಗೆಗಳು, ಕರಕುಶಲ ವಸ್ತುಗಳ ಮಳಿಗೆಗಳೂ ಎಕ್ಸ್‌ಪೊದಲ್ಲಿ ಇದ್ದವು.

ಆರೋಗ್ಯ ಇಲಾಖೆಯ ಸಂಚಾರಿ ಸಮುದಾಯ ಆರೋಗ್ಯ ಕೇಂದ್ರದ ಮೂಲಕ ಕ್ಯಾನ್ಸರ್ ತಪಾಸಣೆ ಹಾಗೂ ವಿವಿಧ ಆರೋಗ್ಯ ಪರೀಕ್ಷೆಗಳನ್ನು ನಡೆಸಲಾಯಿತು
ಆರೋಗ್ಯ ಇಲಾಖೆಯ ಸಂಚಾರಿ ಸಮುದಾಯ ಆರೋಗ್ಯ ಕೇಂದ್ರದ ಮೂಲಕ ಕ್ಯಾನ್ಸರ್ ತಪಾಸಣೆ ಹಾಗೂ ವಿವಿಧ ಆರೋಗ್ಯ ಪರೀಕ್ಷೆಗಳನ್ನು ನಡೆಸಲಾಯಿತು

‘ಡೇ-ಕೇರ್ ಕಿಮೋಥೆರಪಿ ಕೇಂದ್ರ’

‘ಕ್ಯಾನ್ಸರ್ ತಪಾಸಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಗೆ ಪ್ರತಿ ಜಿಲ್ಲೆಯಲ್ಲಿಯೂ ಒಂದು ಡೇ-ಕೇರ್ ಕಿಮೋಥೆರಪಿ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆ. ತಪಾಸಣೆಗೂ ವಿಶೇಷ ಕಾರ್ಯಕ್ರಮಕ್ಕೆ ಯೋಜನೆ ರೂಪಿಸುತ್ತಿದ್ದೇವೆ. ಮಹಿಳೆಯರಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ ಅನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು 20 ಜಿಲ್ಲಾ ಆಸ್ಪತ್ರೆಗಳಲ್ಲಿ ಡಿಜಿಟಲ್ ಮ್ಯಾಮೋಗ್ರಫಿ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಗೃಹ ಆರೋಗ್ಯ ಯೋಜನೆಯಡಿ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ತಪಾಸಣೆ ಮತ್ತು ಔಷಧ ಒದಗಿಸಲು ಕ್ರಮವಹಿಸಿದ್ದೇವೆ’ ಎಂದು ದಿನೇಶ್ ಗುಂಡೂರಾವ್ ಹೇಳಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT