ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಷಾರಾಮಿ ಕಾರು ಖರೀದಿ ನೆಪದಲ್ಲಿ ಉದ್ಯಮಿಗಳಿಗೆ ವಂಚನೆ

ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿಯೆಂದು ಪರಿಚಯ
Last Updated 13 ಜೂನ್ 2020, 12:29 IST
ಅಕ್ಷರ ಗಾತ್ರ

ಬೆಂಗಳೂರು: ಕಾರು ಖರೀದಿ ನೆಪದಲ್ಲಿ ಕರ್ನಾಟಕ ಹಾಗೂ ಕೇರಳದ ಉದ್ಯಮಿಗಳನ್ನು ವಂಚಿಸಲಾಗಿದ್ದು, ಈ ಸಂಬಂಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ತಮಗಾದ ವಂಚನೆ ಬಗ್ಗೆ ಉದ್ಯಮಿ ಜಾರ್ಜ್ ಥಾಮಸ್ ಎಂಬುವರು ದೂರು ನೀಡಿದ್ದಾರೆ. ಅದರನ್ವಯ ಆರೋಪಿಗಳಾದ ಕೇರಳದ ಕೆ.ಪಿ.ಅಮ್ಜದ್ ಹಾಗೂ ಖುಷಿ ಜಾನ್ ಎಂಬುವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದರು.

‘ಹೊಸ ಕಾರು ಖರೀದಿಸಿದ್ದ ಜಾರ್ಜ್, ತಮ್ಮ ಹಳೆ ಬೆನ್ಜ್ ಕಾರನ್ನು ಮಾರಲು ಮುಂದಾಗಿದ್ದರು. ₹48 ಲಕ್ಷಕ್ಕೆ ಕಾರು ಖರೀದಿಸುವ ಮಾತುಕತೆ ನಡೆಸಿದ್ದ ಆರೋಪಿಗಳು, ಕೆಲ ದಿನ ಬಿಟ್ಟು ಹಣ ನೀಡುವುದಾಗಿ ಹೇಳಿ ಕಾರು ತೆಗೆದುಕೊಂಡು ಹೋಗಿದ್ದರು.’

‘ನಿಗದಿತ ದಿನದಂದು ಹಣ ನೀಡಿರಲಿಲ್ಲ. ಕಾರನ್ನೂ ವಾಪಸು ಕೊಟ್ಟಿರಲಿಲ್ಲ. ಅದನ್ನು ಕೇಳಿದ್ದಕ್ಕೆ ಆರೋಪಿಗಳು ದೂರುದಾರರಿಗೆ ಬೆದರಿಕೆ ಹಾಕಿದ್ದರು. ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದರಿಂದ ಕಾರನ್ನು ವಾಪಸು ಕೊಟ್ಟಿದ್ದರು. ಆದರೆ, ಕಾರು ಕೆಟ್ಟಿತ್ತು. ಅದರ ದುರಸ್ತಿಗೆ ₹18 ಲಕ್ಷ ಖರ್ಚಾಗಿತ್ತು. ಈ ಸಂಗತಿಯನ್ನು ಜಾರ್ಜ್ ಅವರು ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.

ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿಯೆಂದು ಪರಿಚಯ

'ಜಾರ್ಜ್ ಥಾಮಸ್‌ ಅವರಷ್ಟೇ ಅಲ್ಲದೆ, ಕರ್ನಾಟಕ ಹಾಗೂ ಕೇರಳದ ಹಲವು ಉದ್ಯಮಿಗಳಿಂದ ಕಾರು ಖರೀದಿಸಿ ಆರೋಪಿಗಳು ವಂಚಿಸಿದ್ದಾರೆ. ತಾನು ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ಎಂದೇ ಅಮ್ಜದ್ ಉದ್ಯಮಿಗಳನ್ನು ಪರಿಚಯಿಸಿಕೊಳ್ಳುತ್ತಿದ್ದ. ಸ್ವಾಮೀಜಿ ಜೊತೆಗೆ ತೆಗೆಸಿಕೊಂಡಿದ್ದ ಫೋಟೊವನ್ನು ತೋರಿಸಿ ನಂಬಿಸುತ್ತಿದ್ದ. ಈ ಸಂಗತಿ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿಗಳು ಅಂಗರಕ್ಷಕರನ್ನೂ ಇಟ್ಟುಕೊಂಡು ಓಡಾಡುತ್ತಿದ್ದರು. ದೂರು ದಾಖಲಾಗುತ್ತಿದ್ದಂತೆ ಕೇರಳಕ್ಕೆ ಹೋಗಿ ತಲೆಮರೆಸಿಕೊಂಡಿರುವ ಮಾಹಿತಿ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT