ಬೆಂಗಳೂರು: ಜಿ–20 ಶೃಂಗಸಭೆ ನಡೆಯುತ್ತಿದ್ದ ಸ್ಥಳದ ಸಮೀಪದಲ್ಲಿ ಅಕ್ರಮವಾಗಿ ಡ್ರೋನ್ ಹಾರಿಸುತ್ತಿದ್ದ ಆರೋಪದಡಿ ಇಬ್ಬರ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ರೇಸ್‌ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಜಿ– 20 ಶೃಂಗಸಭೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಡ್ರೋನ್ ಹಾರಾಟ ನಡೆಸಿದ್ದರಿಂದ, ಹೋಟೆಲ್ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
‘ಜಿ– 20 ಶೃಂಗಸಭೆ ನಡೆಯುತ್ತಿದ್ದರಿಂದ ಹೋಟೆಲ್ ಹಾಗೂ ಸುತ್ತಮುತ್ತ ಡ್ರೋನ್ ಹಾರಾಟ ನಿಷೇಧಿಸಲಾಗಿದೆ. ಮಡಿವಾಳ ಮಾರುತಿನಗರದ ನಿವಾಸಿ ವಿನಯ್ ಪುಲಾರ್ ಎಂಬಾತ, ಸ್ಯಾಂಕಿ ರಸ್ತೆಯ ಗಾಲ್ಫ್ ಲಿಂಕ್ ಅಪಾರ್ಟ್‌ಮೆಂಟ್ ಸಮುಚ್ಚಯದ ಮೇಲ್ಭಾಗದಲ್ಲಿ ಜುಲೈ 6ರಂದು ಡ್ರೋನ್ ಹಾರಿಸುತ್ತಿದ್ದ. ಅದನ್ನು ಗಮನಿಸಿದ್ದ ಭದ್ರತಾ ಸಿಬ್ಬಂದಿ, ಸ್ಥಳಕ್ಕೆ ಹೋಗಿ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಆರೋಪಿಯನ್ನು ವಿಚಾರಿಸಿದಾಗ, ಆತ ಛಾಯಾಗ್ರಾಹಕ ಎಂಬುದು ತಿಳಿಯಿತು. ಡ್ರೋನ್ ಬಳಸಿ ಹಳೇ ಕಟ್ಟಡಗಳ ವಿಡಿಯೊ ಚಿತ್ರೀಕರಿಸಿಕೊಡುವಂತೆ ಚಿರಾಗ್ ಎಂಬಾತ ಹೇಳಿದ್ದನೆಂದು ಆರೋಪಿ ಹೇಳಿಕೆ ನೀಡಿದ್ದ. ಡ್ರೋನ್ ಹಾರಾಟಕ್ಕೆ ಆರೋಪಿ ಯಾವುದೇ ಅನುಮತಿ ಪಡೆದಿರಲಿಲ್ಲ’ ಎಂದು ತಿಳಿಸಿವೆ.
‘ಆರೋಪಿ ವಿನಯ್ ಹಾಗೂ ಚಿರಾಗ್ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಡ್ರೋನ್ ಜಪ್ತಿ ಮಾಡಲಾಗಿದೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ’ ಎಂದು ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.