ಬೆಂಗಳೂರು: ಗೋವಾದ ಕ್ಯಾಸಿನೊದಲ್ಲಿ ಹಣ ಗೆದ್ದಿದ್ದ ಚಹಾ ವ್ಯಾಪಾರಿ ತಿಲಕ್ ಮಣಿಕಂಠ (32) ಅವರಿಂದ ₹ 15 ಲಕ್ಷ ಸುಲಿಗೆ ಮಾಡಿದ್ದ ಎಂಟು ಆರೋಪಿಗಳನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ತ್ಯಾಗರಾಜನಗರ ನಿವಾಸಿ ತಿಲಕ್ ಮಣಿಕಂಠ್ ಅವರನ್ನ ಅಪಹರಿಸಿ ಚಿತ್ರಹಿಂಸೆ ನೀಡಿದ್ದ ಆರೋಪಿಗಳು, ಸುಲಿಗೆ ಮಾಡಿ ರಾಜ್ಯ ತೊರೆದಿದ್ದರು. ಇವರ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಗಳು ಇತ್ತೀಚೆಗೆ ಶಿರಡಿಯಲ್ಲಿ ಸಿಕ್ಕಿಬಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ರೌಡಿ ಕಾರ್ತಿಕ್, ರಾಹುಲ್, ತರುಣ್, ಮನೋಜ್, ಈಶ್ವರ್, ರಾಮಕುಮಾರ್ ಅಲಿಯಾಸ್ ದೀಪು, ಮೋಹನ್ ಹಾಗೂ ನಿಶ್ಚಲ್ ಬಂಧಿತರು. ಇವರಿಂದ ₹ 12 ಲಕ್ಷ ಜಪ್ತಿ ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.
‘ಗೋವಾದ ಪಣಜಿಯಲ್ಲಿರುವ ಕ್ಯಾಸಿನೊವೊಂದಕ್ಕೆ ಹೋಗಿದ್ದ ತಿಲಕ್ ಮಣಿಕಂಠ್, ₹ 4 ಲಕ್ಷ ಹಣವನ್ನು ಬಳಸಿಕೊಂಡು ಆಟವಾಡಿದ್ದರು. ಇದರಿಂದ ₹ 25 ಲಕ್ಷ ಗೆದ್ದಿದ್ದರು. ಈ ಹಣ ದೋಚಲು ಸ್ನೇಹಿತರು ಸಂಚು ರೂಪಿಸಿದ್ದರು.’
‘ಬನಶಂಕರಿ ಠಾಣೆಯ ರೌಡಿ ಪಟ್ಟಿಯಲ್ಲಿ ಕಾರ್ತಿಕ್ ಹೆಸರಿದೆ. ತಿಲಕ್ ಮಣಿಕಂಠ್ ಅವರ ಬಾಲ್ಯ ಸ್ನೇಹಿತರಾಗಿದ್ದ ಕಾರ್ತಿಕ್, ರಾಮಕುಮಾರ್ ಹಾಗೂ ರಾಹುಲ್, ತಮ್ಮ ಇತರೆ ಗೆಳೆಯರ ಜೊತೆ ಸೇರಿ ಕೃತ್ಯ ಎಸಗಿದ್ದರು’ ಎಂದು ಹೇಳಿವೆ.
ಸುಳಿವು ಸಿಗಬಾರದೆಂದು ಸ್ಥಳ ಬದಲು: ‘ಕೃತ್ಯದ ಬಳಿಕ ನಗರ ತೊರೆದಿದ್ದ ಆರೋಪಿಗಳು, ಗೋವಾಗೆ ಹೋಗಿದ್ದರು. ಅಲ್ಲಿಂದ ಮುಂಬೈಗೆ ತೆರಳಿ ಕೆಲ ದಿನ ನೆಲೆಸಿದ್ದರು. ಸ್ಥಳ ಬದಲಿಸಿದರೆ ಸುಳಿವು ಸಿಗುವುದಿಲ್ಲವೆಂಬುದು ಆರೋಪಿಗಳ ಲೆಕ್ಕಾಚಾರವಾಗಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಮುಂಬೈನಿಂದ ಶಿರಡಿಗೆ ಬಂದಿದ್ದ ಆರೋಪಿಗಳು, ಕೆಲದಿನ ಉಳಿದುಕೊಂಡಿದ್ದರು. ಈ ಮಾಹಿತಿ ತಿಳಿದ ವಿಶೇಷ ತಂಡ, ಶಿರಡಿಯಲ್ಲಿ ಆರೋಪಿಗಳಿಗಾಗಿ ಹುಡುಕಾಟ ನಡೆಸಿತ್ತು. ಶಿರಡಿ ತೊರೆದು ಬೇರೆಡೆ ಹೊರಡಲು ಸಜ್ಜಾಗಿದ್ದ ಆರೋಪಿಗಳನ್ನು ರೈಲು ನಿಲ್ದಾಣದಲ್ಲಿ ಸೆರೆ ಹಿಡಿಯಲಾಯಿತು’ ಎಂದು ಹೇಳಿವೆ.
ಬ್ಯಾಂಕ್ ವಹಿವಾಟು ಬಂದ್: ‘ಸುಲಿಗೆ ಮಾಡಿದ್ದ ₹ 15 ಲಕ್ಷದ ಪೈಕಿ ₹ 3 ಲಕ್ಷವನ್ನು ಆರೋಪಿಗಳು ಖರ್ಚು ಮಾಡಿದ್ದಾರೆ. ಖಾತೆಗಳ ವಿವರ ಸಿಗುತ್ತಿದ್ದಂತೆ, ವಹಿವಾಟು ಬಂದ್ ಮಾಡಿಸಲಾಗಿತ್ತು. ಹೀಗಾಗಿ, ಉಳಿದ ಹಣವನ್ನು ಖಾತೆಯಿಂದ ತೆಗೆಸಿಕೊಳ್ಳಲು ಸಾಧ್ಯವಾಗಿರಲಿಲ್ಲ’ ಎಂದು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.