ಕೆಂಗೇರಿ: ಚಂದ್ರಯಾನ-3 ಯಶಸ್ವಿಯಾದ ಸಂಭ್ರಮವನ್ನು ಚೋಳನಾಯಕನ ಹಳ್ಳಿ ಗ್ರಾಮ ಪಂಚಾಯಿತಿಯು 101 ಸಸಿ ನೆಟ್ಟು ಆಚರಿಸಿತು.
ಪಂಚಾಯಿತಿ ವ್ಯಾಪ್ತಿಯ ಭದ್ರಾ ಸರ್ಕಾರಿ ಪ್ರೌಢಶಾಲೆಯಲ್ಲಿ ಪಂಚಾಯಿತಿ ಅಧ್ಯಕ್ಷ ಆನಂದಸ್ವಾಮಿ ಗಿಡ ನೆಟ್ಟು ನೀರು ಹಾಯಿಸುವ ಮೂಲಕ ಚಂದ್ರಯಾನದ ಯಶಸ್ವಿಯನ್ನು ಸ್ಮರಣೀಯವನ್ನಾಗಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
ಇಂತಹ ಅದ್ಭುತ ಕ್ಷಣವನ್ನು ನೆನಪಿನಲ್ಲಿಡಲು ಹಾಗೂ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ವೃದ್ಧಿಸಲು ಪಂಚಾಯಿತಿಯ ಎಲ್ಲ ಶಾಲೆಗಳಲ್ಲೂ ಸಸಿ ನೆಡಲು ಪಂಚಾಯಿತಿ ವತಿಯಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಆನಂದಸ್ವಾಮಿ ತಿಳಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಾರಾಮ್ ಚಂದ್ರಯಾನದ ಮಾಹಿತಿ ನೀಡಿದರು. ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು. ಮುಖ್ಯ ಶಿಕ್ಷಕಿ ಕೆ.ಎಂ. ಶೋಭಾ, ಸಹ ಶಿಕ್ಷಕ ಚಂದ್ರು ಇದ್ದರು.