ಭಾನುವಾರ, ಜನವರಿ 19, 2020
25 °C

‘ಐಸಿ ಚಿಪ್‌ ವಿನ್ಯಾಸದಲ್ಲಿ ಬೆಂಗಳೂರಿಗೆ ಸಾಟಿ ಇಲ್ಲ’: ಗುರುರಾಜ ಕುಲಕರ್ಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಇಂಟೆಗ್ರೇಟೆಡ್‌ ಸರ್ಕ್ಯೂಟ್‌ (ಐಸಿ)/ ಚಿಪ್‌ ವಿನ್ಯಾಸಗೊಳಿಸುವುದಕ್ಕೆ ಹೇಳಿ ಮಾಡಿಸಿದಂತಹ ಔದ್ಯಮಿಕ ವಾತಾವರಣ ಬೆಂಗಳೂರಿನಲ್ಲಿದೆ. ಪ್ರತಿಯೊಂದು ಮೊಬೈಲ್‌ನ ಒಂದು ಭಾಗವಾದರೂ ಖಂಡಿತಾ ಈ ನಗರದಲ್ಲೇ ವಿನ್ಯಾಸಗೊಂಡಿರುತ್ತದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಈ ವಿಚಾರದಲ್ಲಿ ಯಾವುದೇ ದೇಶದ ಯಾವುದೇ ನಗರವೂ ಬೆಂಗಳೂರಿಗೆ ಸರಿಸಾಟಿ ಇಲ್ಲ’ ಎಂದು ಕ್ವಾಲ್ಕಾಮ್ ಇಂಡಿಯಾ ಕಂಪನಿಯ ಚಿಪ್ ಪ್ರೋಗ್ರಾಮ್‌ ಮ್ಯಾನೇಜರ್‌‌ ಗುರುರಾಜ ಕುಲಕರ್ಣಿ ಅಭಿಪ್ರಾಯಪಟ್ಟರು.

ಮುನ್ನೋಟ ವತಿಯಿಂದ ಭಾನುವಾರ ಏರ್ಪಡಿಸಿದ್ದ ಅರಿಮೆ ಮಾತುಕತೆ ಕಾರ್ಯಕ್ರಮದಲ್ಲಿ ಅವರು ‘ಮರಳಿನಿಂದ ಮೊಬೈಲ್‌ ತಿರುಳಿನವರೆಗೆ ಐಸಿ/ಚಿಪ್‌ ತಂತ್ರಜ್ಞಾನದ ಒಳನೋಟ’ ಕುರಿತು ಮಾತನಾಡಿದರು.

‘ಡಿಜಿಟಲ್‌ ಯಂತ್ರಗಳು ಸೇರಿದಂತೆ ವಿವಿಧ ಪರಿಕರಗಳ ಜೊತೆ ಅಂತರ ಸಂಪರ್ಕ ಸಾಧಿಸುವ ತಂತ್ರಜ್ಞಾನದ (ಐಒಟಿ) ಕ್ಷೇತ್ರ ಬೆಳೆದಂತೆ ಚಿಪ್‌ಗಳಿಗೆ ಬೇಡಿಕೆ ಹೆಚ್ಚಲಿದೆ. ಮೊಬೈಲ್‌ಗಳಲ್ಲಿ 5ಜಿ ತಂತ್ರಜ್ಞಾನ ಬಳಕೆಗೆ ಬರುತ್ತಿದ್ದಂತೆಯೇ ದೈನಂದಿನ ಬದುಕಿನ ವಿಧಾನವೇ ಬದಲಾಗಲಿದೆ. ಮನೆಯ ಫ್ಯಾನ್‌, ಗೀಸರ್‌ ಮುಂತಾದ ಉಪಕರಣಗಳನ್ನು ದೂರದಲ್ಲೆಲ್ಲೋ ಕುಳಿತು ನಿಯಂತ್ರಿಸುವುದು ಸಾಧ್ಯವಾಗಲಿದೆ. ಇದಕ್ಕೆ ನಾನಾ ಬಗೆಯ ಚಿಪ್‌ಗಳ ಅಗತ್ಯವಿದೆ. ಚಿಪ್‌ಗಳ ವಿನ್ಯಾಸಕ್ಕೆ ಪ್ರಸಿದ್ಧವಾಗಿರುವ ಬೆಂಗಳೂರಿನಲ್ಲಿ ಇದು ಹೇರಳ ಉದ್ಯೋಗಾವಕಾಶಗಳನ್ನೂ ಸೃಷ್ಟಿಸಲಿದೆ’ ಎಂದರು.

‘ಎಲೆಕ್ಟ್ರಿಕ್‌ ಅಥವಾ ಎಲೆಕ್ಟ್ರಾನಿಕ್ಸ್‌ ಪದವಿ, ಸ್ನಾತಕೋತ್ತರ ಪದವಿ, ಪಿ.ಜಿ-ಡಿಪ್ಲೊಮಾ ಪದವೀಧರರು ಇದರ ಸದುಪಯೋಗ ಪಡೆಯಬಹುದು. ಡಿಜಿಟಲ್‌ ಸರ್ಕ್ಯೂಟ್‌ ಬಗ್ಗೆ ತಿಳಿವಳಿಕೆಯುಳ್ಳವರು, ಪರ್ಲ್‌ ಶೆಲ್‌ ಎಚ್‌ಡಿಎಲ್‌ ಕುರಿತು ಜ್ಞಾನ ಇರುವವರಿಗೆ ಇದರಿಂದ ಹೆಚ್ಚು ಅನುಕೂಲ. ಬಹಳಷ್ಟು ಕೆಲಸಗಳು ಕ್ಯಾಡ್‌ನಲ್ಲಿಯೂ ಇರುವುದರಿಂದ ಕಂಪ್ಯೂಟರ್‌ ವಿಜ್ಞಾನ ಕಲಿತವರಿಗೂ ಬೇಡಿಕೆ. ಥರ್ಮಲ್‌, ವಸ್ತು ವಿಜ್ಞಾನ ಕಲಿತ ಮೆಕ್ಯಾನಿಕಲ್‌ ಎಂಜಿನಿಯರ್‌ಗಳಿಗೂ ಅವಕಾಶಗಳಿರುತ್ತವೆ’ ಎಂದರು.

‘ಭಾರತವು ಚಿಪ್‌ ಉತ್ಪಾದನೆಯಲ್ಲಿ ಇತರ ದೇಶಗಳಿಗಿಂತ ಹಿಂದುಳಿದಿರುವುದು ನಿಜ. ಆದರೆ, ಆಧುನಿಕ ಹಾಗೂ ದೊಡ್ಡ ಪ್ರಮಾಣದ ಫ್ಯಾಬ್‌ (ಚಿಪ್ ಉತ್ಪಾದಿಸುವ ಉದ್ದಿಮೆ) ಸ್ಥಾಪನೆಗೆ ಭಾರಿ ಹೂಡಿಕೆ ಬೇಕಾಗುತ್ತದೆ. ಜತೆಗೆ ಹೇರಳ ಪ್ರಮಾಣದ ನೆಲ, ನೀರು, ವಿದ್ಯುತ್‌ ಬೇಕು. ಆದರೆ ಅವುಗಳಲ್ಲಿ ಸೃಷ್ಟಿಯಾಗುವ ಉದ್ಯೋಗ ತುಂಬಾ ಕಡಿಮೆ. ಹಾಗಾಗಿ ಭಾರತವು ಫ್ಯಾಬ್‌ಗಳ ಸ್ಥಾಪನೆಗಿಂತ ಚಿಪ್‌ ವಿನ್ಯಾಸಗೊಳಿಸುವ ಉದ್ದಿಮೆಗಳಿಗೆ ಒತ್ತು ನೀಡಿರುವುದು ಸೂಕ್ತ ನಿರ್ಧಾರ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು