ಸೋಮವಾರ, ಜುಲೈ 4, 2022
22 °C
ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನ

ಮೇ 6ರಿಂದ ನಾಟಕ ಪ್ರದರ್ಶನ: ದೋಸೆ ಜೀವತಳೆದ ಕಥೆ ಹೇಳಲಿರುವ ‘ವಿದ್ಯಾರ್ಥಿ ಭವನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 79 ವರ್ಷಗಳಿಂದ ನಾಡಿನ ಜನತೆಗೆ ಶುಚಿ–ರುಚಿಯಾದ ಉಪಾಹಾರ ಒದಗಿಸುತ್ತಾ ಬಂದಿರುವ ವಿದ್ಯಾರ್ಥಿ ಭವನ ಈಗ ರಂಗಭೂಮಿ ಕ್ಷೇತ್ರಕ್ಕೂ ಅಡಿ ಇಟ್ಟಿದೆ. ಅರ್ಜುನ್‌ ಕಬ್ಬಿಣ ನಿರ್ದೇಶನದ ‘ವಿದ್ಯಾರ್ಥಿ ಭವನ’ ನಾಟಕ ಮೇ 6ರಿಂದ 8ರವರೆಗೂ ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ ಪ್ರದರ್ಶನ ಕಾಣಲಿದೆ.

ವಿದ್ಯಾರ್ಥಿ ಭವನದ ಅರುಣ್‌ಕುಮಾರ್‌ ಅಡಿಗ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಈ ಕುರಿತು ಮಾಹಿತಿ ನೀಡಿದರು. 

‘ಕನ್ನಡದ ಹಲವು ಅಪರೂಪದ ಜೀವಗಳು ಹೋಟೆಲ್‌ನಲ್ಲಿ ಕುಳಿತು ಚಿಂತಿಸಿವೆ. ಹಲವು ಸೃಜನಾತ್ಮಕ ಮನಸ್ಸುಗಳು ಇಲ್ಲಿ ಪರಸ್ಪರ ಭೇಟಿಯಾಗಿವೆ. ಇದು ಉಪಾಹಾರದ ಹೋಟೆಲಷ್ಟೇ ಅಲ್ಲ. ಇದೊಂದು ಅನುಭವ ಸಾಂಗತ್ಯ. ನಾಡಿನ ಬಹು ಜನರ ಮೃದು–ಮಧುರ ನೆನಪಿನಂಗಳ’ ಎಂದು ತಿಳಿಸಿದರು.

‘ವಿದ್ಯಾರ್ಥಿ ಭವನ ಬೆಳೆದು ಬಂದ ವಿವಿಧ ಮಜಲುಗಳನ್ನು ಬಿಂಬಿಸುವ ಹೊಸ ಪ್ರಯತ್ನಕ್ಕೆ ನಾವು ಮುಂದಾಗಿದ್ದೇವೆ. ಎಂಟು ದಶಕಗಳಿಂದ ನೂರಾರು ಅವಿಸ್ಮರಣೀಯ ಅನುಭವಗಳಿಗೆ ಸಾಕ್ಷಿಯಾದ ‘ವಿದ್ಯಾರ್ಥಿ ಭವನ’ದ ರುಚಿಕರ ದೋಸೆ ಜೀವತಳೆದ ಕಥೆ ಈ ನಾಟಕದಲ್ಲಿ ಮೈದಳೆಯಲಿದೆ’ ಎಂದರು.

‘ವಿದ್ಯಾರ್ಥಿ ಭವನವು ಸದ್ಯದಲ್ಲೇ ಮಲ್ಲೇಶ್ವರಕ್ಕೆ ಬರಲಿದೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ. ಮಲ್ಲೇಶ್ವರದಲ್ಲೂ ನಮ್ಮ ಶಾಖೆ ಆರಂಭವಾಗಬಹುದೆಂಬ ಕುತೂಹಲ ಹಲವರಲ್ಲಿ ಮೂಡಿದೆ. ಶಾಖೆ ಆರಂಭದ ಆಲೋಚನೆ ಸದ್ಯಕ್ಕಂತೂ ಇಲ್ಲ. ‘ವಿದ್ಯಾರ್ಥಿ ಭವನ’ ನಾಟಕದ ಕುರಿತು ನಾಗರಿಕರ ಗಮನ ಸೆಳೆಯುವ ಉದ್ದೇಶವಷ್ಟೇ ಆ ಸುದ್ದಿಯ ಹಿಂದೆ ಅಡಗಿತ್ತು’ ಎಂದು ಸ್ಪಷ್ಟಪಡಿಸಿದರು.

‘ಬೆಂಗಳೂರು ಥಿಯೇಟರ್‌ ಫೌಂಡೇಷನ್‌ನೊಂದಿಗೆ ಮೂಡಿಬಂದಿರುವ ಈ ನಾಟಕವು 90 ನಿಮಿಷಗಳ ಅವಧಿಯದ್ದಾಗಿರಲಿದೆ. ಮೇ 6 ಮತ್ತು 7ರಂದು ಸಂಜೆ 6ಕ್ಕೆ, ಮೇ 8ರಂದು ಬೆಳಿಗ್ಗೆ 11.30 ಮತ್ತು ಸಂಜೆ 6ಕ್ಕೆ ಪ್ರದರ್ಶನ ಇರಲಿದೆ. ಟಿಕೆಟ್‌ವೊಂದಕ್ಕೆ ₹249 ದರ ನಿಗದಿ ಮಾಡಲಾಗಿದೆ. ಬುಕ್‌ ಮೈ ಶೋದಲ್ಲಿ ಸೋಮವಾರದಿಂದ ಟಿಕೆಟ್‌ ಲಭ್ಯವಿರಲಿದೆ. ಆಸಕ್ತರು ವಿದ್ಯಾರ್ಥಿ ಭವನದಲ್ಲೂ ಟಿಕೆಟ್‌ ಪಡೆಯಬಹುದು’ ಎಂದು ವಿವರಿಸಿದರು.

ನಾಟಕದ ನಿರ್ದೇಶಕ ಅರ್ಜುನ್‌ ಕಬ್ಬಿಣ, ‘ಸಿಹಿಕಹಿ ಚಂದ್ರು, ಸುಂದರ್‌ ವೀಣಾ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಲವು ಯುವ ಪ್ರತಿಭೆಗಳಿಗೂ ಅವಕಾಶ ನೀಡಿದ್ದೇವೆ. ರಾಜೇಂದ್ರ ಕಾರಂತ್‌ ನಾಟಕ ರಚಿಸಿದ್ದಾರೆ. ಶ್ರೀಧರ ಮೂರ್ತಿ ರಂಗಸಜ್ಜಿಕೆ ಮಾಡಲಿದ್ದು, ಬಿ.ವಿ.ಪ್ರವೀಣ್‌ ಮತ್ತು ಬಿ.ವಿ.ಪ್ರದೀಪ್‌ ಸಂಗೀತ ನೀಡಲಿದ್ದಾರೆ. ಪ್ರದೀಪ್‌ ಬೆಳವಾಡಿ ಅವರು ಬೆಳಕು ಹಾಗೂ ವಿಜಯ್‌ಕುಮಾರ್‌ ಬೆಣಚ ಅವರು ಪ್ರಸಾದನ ಕಾರ್ಯ ನಿರ್ವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು