ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೈಸ್‌ನ 532 ಶಿಕ್ಷಕರು ಕಂಗಾಲು: ಏಳು ತಿಂಗಳಿನಿಂದ ವೇತನ ಇಲ್ಲ

ಜೀವನ ನಿರ್ವಹಣೆಗೆ ಕೂಲಿ ಕೆಲಸ
Last Updated 27 ಅಕ್ಟೋಬರ್ 2020, 20:10 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ (ಕ್ರೈಸ್‌) ಅಧೀನದಲ್ಲಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಪ್ರಾಂಶುಪಾಲರು ಮತ್ತು ಶಿಕ್ಷಕರು ಸೇರಿ 532 ಸಿಬ್ಬಂದಿ ಏಳು ತಿಂಗಳಿನಿಂದ ವೇತನ ಇಲ್ಲದೆ ಕಂಗಾಲಾಗಿದ್ದಾರೆ.

ಬಳ್ಳಾರಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿನ ಈ ಸಿಬ್ಬಂದಿ ಜೀವನ ನಿರ್ವಹಣೆಗಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ!

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ ಮೊರಾರ್ಜಿ ವಸತಿ ಶಾಲೆ, ಪದವಿ ಪೂರ್ವ ಕಾಲೇಜು, ಮಾದರಿ ವಸತಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಹೊರ ಗುತ್ತಿಗೆ ಶಿಕ್ಷಕರಿಗೆ ವೇತನ ಬಿಡುಗಡೆ ಮಾಡಿ ಆಗಸ್ಟ್ 26ರಂದು ಆದೇಶ ಹೊರಡಿಸಲಾಗಿದೆ. ಆದರೆ, ತಮಗೆ ವೇತನ ನೀಡದೆ ತಾರತಮ್ಯ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕ್ರೈಸ್‌ ವಸತಿ ಶಾಲೆಗಳ ಹೊರಗುತ್ತಿಗೆ ಪ್ರಾಂಶುಪಾಲರು ಹಾಗೂ ಶಿಕ್ಷಕರ ಸಂಘ, ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದೆ.

‘12–15 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇವೆ. 2006ರಲ್ಲಿ ತಿಂಗಳಿಗೆ ಕೇವಲ ₹ 3,300 ವೇತನ ಪಡೆಯುತ್ತಿದ್ದ ನಮಗೆ, ಈಗ ₹ 8,825 ನೀಡಲಾಗುತ್ತಿದೆ. ಹೈಕೋರ್ಟ್ ಮಧ್ಯಂತರ ಆದೇಶದ ಮೇಲೆ ಕೆಲಸ ಮಾಡುತ್ತಿರುವ ನಾವು, ಕಾಯಂ ಆಗಬಹುದೆಂಬ ನಿರೀಕ್ಷೆಯಲ್ಲೇ ದಿನ ದೂಡುತ್ತಿದ್ದೇವೆ. ಎಸ್ಸೆಸ್ಸೆಲ್ಸಿ ಪರೀಕ್ಷೆ, ಮೌಲ್ಯಮಾಪನ ಕೆಲಸ, ಮಕ್ಕಳಿಗೆ ಆನ್‌ಲೈನ್‌ ತರಗತಿ ನೀಡುತ್ತಿದ್ದರೂ, ಕೆಲಸಕ್ಕೆ ತೆಗೆದುಕೊಂಡಿಲ್ಲವೆಂಬ ಕಾರಣ ನೀಡಿ ವೇತನ ಪಾವತಿಸಲು ನಿರಾಕರಿಸಲಾಗುತ್ತಿದೆ’ ಎಂದು ಶಿಕ್ಷಕರೊಬ್ಬರು ದೂರಿದರು.

‘ವೇತನ ಬಿಡುಗಡೆ ಮಾಡುವಂತೆ ರಾಜ್ಯಸಭೆ ಸದಸ್ಯ ಎಚ್‌.ಡಿ. ದೇವೇಗೌಡ,ವಿಧಾನಪರಿಷತ್ ‌ ಸದಸ್ಯ ಬಸವರಾಜ ಹೊರಟ್ಟಿ ಸೇರಿದಂತೆ ಹಲವರು ಈ ಹಿಂದೆ ಇಲಾಖೆಯ ಹೊಣೆ ಹೊತ್ತಿದ್ದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಪತ್ರ ಬರೆದಿದ್ದರು. ವೇತನ ಬಿಡುಗಡೆಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಗೆ ಕಾರಜೋಳ ಸೂಚಿಸಿದ್ದರು. ಆದರೂ ಹಿರಿಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದೂ ಬೇಸರ ವ್ಯಕ್ತಪಡಿಸಿದರು.

ಈ ಮಧ್ಯೆ, ಸ್ವಯಂ ದೂರು ದಾಖಲಿಸಿಕೊಂಡಿರುವ ರಾಜ್ಯ ಮಾನವ ಹಕ್ಕುಗಳ ಆಯೋಗ, ಈ ಕುರಿತು ಸೂಕ್ತ ಕ್ರಮ ಕೈಗೊಂಡು ನ. 22ರ ಒಳಗಾಗಿ ವರದಿನೀಡುವಂತೆ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದೆ. ವೇತನ ಪಾವತಿಸದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ರಾಜ್ಯ ದಲಿತ ಪದವೀಧರರ ಸಂಘ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT