ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲೊಂದು ಕರುನಾಡಿನ ನಾಣ್ಯಗಳ ಕಣಜ

Last Updated 26 ಜುಲೈ 2019, 20:07 IST
ಅಕ್ಷರ ಗಾತ್ರ

ಬೆಂಗಳೂರು: ಸೀಸದ ನಾಣ್ಯಗಳಿಂದ ಆದಿಯಾಗಿ ಚಿನ್ನ ಲೇಪಿತ ನಾಣ್ಯಗಳು ಕರ್ನಾಟಕದಲ್ಲಿ ಚಾಲ್ತಿಯಲ್ಲಿದ್ದವುಎಂಬುದನ್ನು ಕೇಳಿದ್ದೇವೆ. ಅಂತಹ ಅಪರೂಪದ ನಾಣ್ಯಗಳನ್ನು ನೋಡಬೇಕೆಂದರೆ ನಗರದ ಶಿಕ್ಷಕರ ಸದನಕ್ಕೆ ಭೇಟಿ ನೀಡಿ... ಕರುನಾಡಿನ ಪ್ರಾಚೀನ ನಾಣ್ಯಗಳ ಕಣಜವೇ ಇಲ್ಲಿ ತೆರೆದುಕೊಂಡಿದೆ.

ಭಾನುವಾರದ ತನಕ ಇಲ್ಲಿ ನಡೆಯಲಿರುವ ನಾಣ್ಯಗಳ ಪ್ರದರ್ಶನದಲ್ಲಿ ಹುಣಸೂರಿನ ಪಿ.ಕೆ. ಕೇಶವಮೂರ್ತಿ ಸಂಗ್ರಹಿಸಿರುವ ನಾಣ್ಯಗಳನ್ನು ನೋಡಿದರೆ ಕನ್ನಡ ನಾಡಿನ ಇತಿಹಾಸವೇ ಕಣ್ಮುಂದೆ ಬರುತ್ತದೆ.

ಕದಂಬ, ಚಾಲುಕ್ಯ,ಹೊಯ್ಸಳ, ವಿಜಯನಗರ, ಬಹುಮನಿ ಸುಲ್ತಾನರ ಸಾಮ್ರಾಜ್ಯದಲ್ಲಿ ಚಾಲ್ತಿಯಲ್ಲಿದ್ದ ಚಿನ್ನ ಮತ್ತು ತಾಮ್ರದ ನಾಣ್ಯಗಳು ಇಲ್ಲಿವೆ. ಮೈಸೂರು ರಾಜ್ಯದಲ್ಲಿ ಹೈದರಾಲಿ ಕಾಲದಲ್ಲಿದ್ದ ಶಿವ–ಪಾರ್ವತಿ ಚಿತ್ರ ಇರುವ ನಾಣ್ಯಗಳು, ಟಿಪ್ಪು ಸುಲ್ತಾನ ಕಾಲದಲ್ಲಿ ಉರ್ದುವಿನಲ್ಲಿ ಬರೆದಿರುವ ನಾಣ್ಯಗಳನ್ನು ಕೇಶವಮೂರ್ತಿ ಪ್ರದರ್ಶನಕ್ಕೆ ಇಟ್ಟಿದ್ದಾರೆ.

ಆಲಿ ಆದಿಲ್ ಷಾ ಕಾಲದಲ್ಲಿ (1657–75 ಅವಧಿ) ಚಾಲ್ತಿಯಲ್ಲಿದ್ದಹೇರ್‌ಪಿನ್ ಮಾದರಿಯ ನಾಣ್ಯ, ಮೈಸೂರಿನ ಒಡೆಯರ ಆಡಳಿತದಲ್ಲಿದ್ದ ಒಂದು ಕಡೆ ಆನೆಯ ಚಿತ್ರ ಮತ್ತೊಂದು ಕಡೆ ‘ಶ್ರೀಕೃಷ್ಣರಾಜ’ ಎಂದು ಬರೆದಿರುವ ತಾಮ್ರದ ನಾಣ್ಯವನ್ನೂ ಕೇಶವಮೂರ್ತಿ ಸಂಗ್ರಹಿಸಿದ್ದಾರೆ. ‘ಆರು ಕಾಲು ಕಾಸು ಮುಖಬೆಲೆಯ ಈ ನಾಣ್ಯದ ಲಭ್ಯತೆ ಕಡಿಮೆ ಇರುವ ಕಾರಣ ಬೇಡಿಕೆ ಹೆಚ್ಚಿದ್ದು, ₹15 ಸಾವಿರಕ್ಕೆ ಒಮ್ಮೆ ಮಾರಾಟವಾಗಿತ್ತು’ ಎಂದು ಕೇಶವಮೂರ್ತಿ ಹೇಳಿದರು.

‘31 ವರ್ಷ ಆಡಳಿತ ನಡೆಸಿದ್ದ ಚಿಕ್ಕದೇವರಾಯನ ಕಾಲದ 31 ನಾಣ್ಯಗಳು ಇವೆ. 30 ವರ್ಷಗಳಿಂದ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡಿದ್ದು, ದೇಶ–ವಿದೇಶ‌ದ ಲಕ್ಷಕ್ಕೂ ಹೆಚ್ಚು ನಾಣ್ಯಗಳು ನನ್ನ ಬಳಿ ಇವೆ’ ಎಂದು ತಿಳಿಸಿದರು.

‘ದೇಶದಾದ್ಯಂತ ನಾಣ್ಯಗಳ ಪ್ರದರ್ಶನದಲ್ಲಿ ಭಾಗವಹಿಸಿದ್ದು, 145ನೇ ಪ್ರದರ್ಶನ ಇದಾಗಿದೆ. ಕ್ರಿ.ಪೂ 5ನೇ ಶತಮಾನದಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಚಾಲ್ತಿಗೆ ಬಂದ ‘ಪಂಚ್ ಮಾರ್ಕ್’ ನಾಣ್ಯಗಳನ್ನೂ ಸಂಗ್ರಹಿಸಿದ್ದೇನೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT