ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಆಸ್ಪತ್ರೆಗಳೆಡೆಗೆ ಸುಳಿಯದ ಜನ

ಸರ್ಕಾರಿ ಆಸ್ಪತ್ರೆಗಳ ಹೊರರೋಗಿ ವಿಭಾಗಗಳಲ್ಲೂ ರೋಗಿಗಳ ಸಂಖ್ಯೆ ಇಳಿಕೆ
Last Updated 23 ಮಾರ್ಚ್ 2020, 3:04 IST
ಅಕ್ಷರ ಗಾತ್ರ

ಬೆಂಗಳೂರು: ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದ ಎಲ್ಲ ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗಗಳು (ಒಪಿಡಿ) ಭಾನುವಾರ ಸಂಪೂರ್ಣ ಬಂದ್ ಆಗಿದ್ದವು. ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಎಂದಿನಂತೆ ಇದ್ದರೂಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ‌ ಹೊರರೋಗಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿತ್ತು.

ಕಿಮ್ಸ್‌, ನಾರಾಯಣ ಹೆಲ್ತ್, ರಂಗದೊರೆ, ಮಣಿಪಾಲ್, ಫೋರ್ಟಿಸ್, ಬೃಂದಾವನ, ಸುಗುಣಾ, ಅಪೋಲೊ, ವಿಕ್ರಮ್ ಸೇರಿದಂತೆ ನಗರದ ಎಲ್ಲಖಾಸಗಿ ಆಸ್ಪತ್ರೆಗಳ ಒಪಿಡಿಗಳು ಮುಚ್ಚಿದ್ದವು.ತೀರಾ ಅಗತ್ಯವಲ್ಲವೆಂದು ಪರಿಗಣಿಸಲ್ಪಟ್ಟ ಸೇವಾ ಸಿಬ್ಬಂದಿಗೆ ರಜೆ ನೀಡಲಾಗಿತ್ತು.ಒಳರೋಗಿಗಳಿಗೆ ಆರೋಗ್ಯ ಸೇವೆ ಹಾಗೂ ತುರ್ತು ಚಿಕಿತ್ಸೆ ಎಂದಿನಂತೆ ನಡೆಯಿತು. ಕೆಲ ಹೊರ ರೋಗಿಗಳು ಮಾಹಿತಿ ಕೊರತೆಯಿಂದ ಬೆಳಿಗ್ಗೆ ಆಸ್ಪತ್ರೆಗೆ ಬಂದು ವಾಪಸ್ ಹೋದರು. ಬಹುತೇಕ ಎಲ್ಲ ಕ್ಲಿನಿಕ್‌ಗಳೂ ಮುಚ್ಚಿದ್ದವು. ಔಷಧಿ ಮಳಿಗೆಗಳು ಎಂದಿನಂತೆ ತೆರೆದಿದ್ದರೂ ಗ್ರಾಹಕರಿಲ್ಲದೆ ಬಣಗುಡುತ್ತಿದ್ದವು.

ವಿಕ್ಟೋರಿಯಾ, ವಾಣಿವಿಲಾಸ, ಜಯನಗರ ಸಾರ್ವಜನಿಕ ಆಸ್ಪತ್ರೆ, ಕೆ.ಸಿ.ಜನರಲ್ ಸೇರಿದಂತೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಹೊರರೋಗಿ ವಿಭಾಗ ಸೇರಿದಂತೆ ಎಲ್ಲ ವೈದ್ಯಕೀಯ ಸೌಲಭ್ಯಗಳಿದ್ದವು. ಆದರೆ, ರೋಗಿಗಳ ಸಂಖ್ಯೆಯಲ್ಲಿ ಅರ್ಧದಷ್ಟು ಇಳಿಕೆಯಾಗಿತ್ತು.

ಇನ್ನೊಂದೆಡೆ ಕೋವಿಡ್‌–19 ರೋಗಿಗಳು, ಸೋಂಕು ಶಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು, ಚೇತರಿಸಿಕೊಳ್ಳುತ್ತಿರುವ ಒಳರೋಗಿಗಳನ್ನು ಬಿಡುಗಡೆ ಮಾಡುವಂತೆ ಸರ್ಕಾರ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ತುರ್ತಾಗಿ ಅಗತ್ಯ ಚಿಕಿತ್ಸೆ ನೀಡಬೇಕಾದವರನ್ನು ಮಾತ್ರ ದಾಖಲಿಸಿಕೊಳ್ಳಲಾಗುತ್ತಿದೆ. ಈಗಾಗಲೇ ಸೋಂಕಿತರು ಹಾಗೂ ಸೋಂಕು ಶಂಕಿತರ ಚಿಕಿತ್ಸೆಗೆ 48 ಸರ್ಕಾರಿ ಆಸ್ಪತ್ರೆಗಳು ಹಾಗೂ 35 ಖಾಸಗಿ ಆಸ್ಪತ್ರೆಗಳನ್ನು ಪ್ರಥಮ ಆದ್ಯತಾ ಆಸ್ಪತ್ರೆಗಳು ಎಂದು ಗುರುತಿಸಲಾಗಿದೆ.

‘ವಿವಿಧ ವಿಷಯಗಳಿಗೆ ಸಂಬಂಧಿಸಿ ರಾಜ್ಯದಲ್ಲಿ ಹಲವು ಬಾರಿ ಬಂದ್‌ ನಡೆದಿವೆ. ಅದೇ ರೀತಿ, ನಾವು ಕೂಡ ಕೆಲ ಸಂದರ್ಭದಲ್ಲಿ ಮುಷ್ಕರ ಮಾಡಿದ್ದೆವು. ಆದರೆ, ಒಪಿಡಿ ಬಂದ್‌ಗೆ ಪೂರ್ಣ ಪ್ರಮಾಣದಲ್ಲಿ ಬೆಂಬಲ ದೊರೆತಿರಲಿಲ್ಲ. ಇದೇ ಮೊದಲ ಬಾರಿಗೆ ಸೋಂಕು ಭೀತಿಯಿಂದ ಜನತೆಯೇ ಆಸ್ಪತ್ರೆಗಳ ಕಡೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ತುರ್ತು ಚಿಕಿತ್ಸೆ ಅಗತ್ಯ ಇರುವವರಿಗೆ ಸೇವೆ ನೀಡಲಾಗಿದೆ’ ಎಂದುಭಾರತೀಯ ವೈದ್ಯಕೀಯ ಸಂಘದ (ಐಎಂಎ) ರಾಜ್ಯ ಕಾರ್ಯದರ್ಶಿ ಡಾ. ಶ್ರೀನಿವಾಸ್ ತಿಳಿಸಿದರು.

ಕೊರೋನಾ ಸೋಂಕು ಶಂಕಿತರಿಗೆ ಅಗತ್ಯ ಚಿಕಿತ್ಸೆ ಒದಗಿಸುವ ಸಂಬಂಧ ಎಲ್ಲ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿ ರಜಾ ದಿನವಾದ ಭಾನುವಾರವೂ ಕಾರ್ಯನಿರ್ವಹಿಸಿದರು. ’ಆರೋಗ್ಯ ಯೋಧ’ರ ಬಿಡುವಿಲ್ಲದ ಕಾರ್ಯನಿರ್ವಹಣೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

‘ಕೆಲ ಭಾಗಗಳಲ್ಲಿ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಅನೇಕ ತುರ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಾಗಾಗಿ ಮಾ.31ರವರೆಗೆ ಸಾರ್ವತ್ರಿಕರಜಾದಿನಗಳಂದು ಕರ್ತವ್ಯಕ್ಕೆ ಹಾಜರಾಗಬೇಕು. ಪರಿಸ್ಥಿತಿ ಸುಧಾರಿಸುವವರೆಗೂ ಆಸ್ಪತ್ರೆಯ ಮುಖ್ಯಸ್ಥರು ರಜೆಗಳನ್ನು ಮಂಜೂರು ಮಾಡಬಾರದು’ ಎಂದು ಆರೋಗ್ಯ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದರು.

ಹೀಗಾಗಿ ಆಸ್ಪತ್ರೆಗಲ್ಲಿ ಎಲ್ಲರೂ ಕರ್ತವ್ಯಕ್ಕೆ ಹಾಜರಾಗಿ ಸೇವೆ ಸಲ್ಲಿಸಿದರು. ಅದೇ ರೀತಿ,ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸಿದರು. ವೈದ್ಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆರಂಭವಾಗಿರುವ #ಹೆಲ್ತ್‌ ವಾರಿಯರ್ಸ್‌ ಅಭಿಯಾನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಟ್ವಿಟರ್‌ನಲ್ಲಿ ವೈದ್ಯರ ಕಾರ್ಯಕ್ಕೆ ಹಲವರು ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT