ಬುಧವಾರ, ಜುಲೈ 28, 2021
24 °C

ಕೋವಿಡ್–19 | ಅಸ್ತಮಾ, ಬಿ.ಪಿ ಇದ್ರೂ ಕೊರೊನಾ ಗೆದ್ರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೊರೊನಾ ಪಾಸಿಟಿವ್‌ ಎಂದ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಐದು ದಿನ ಟ್ರೀಟ್‌ಮೆಂಟ್‌ ಕೊಡುತ್ತಾರೆ. ಸ್ವಲ್ಪ ದಿನ ನಿಗಾ ಇಡುತ್ತಾರೆ. ಸಮಯಕ್ಕೆ ಸರಿಯಾಗಿ ಊಟ, ಮಾತ್ರೆ ಕೊಡುತ್ತಾರೆ. ಸ್ವಲ್ಪ ದಿನ ಇದ್ದು ಬಂದರಾಯಿತು. ಭಯ ಪಡುವಂಥದ್ದೇನೂ ಇಲ್ಲ. ಸುಮ್ಮನಿದ್ದರೆ ಎಲ್ಲವೂ ಸರಿಯಾಗುತ್ತದೆ...’ ಹೀಗೆ ತುಂಬು ವಿಶ್ವಾಸದಲ್ಲಿ ಆ ಮಹಿಳೆ ಮಾತನಾಡಿದರು. 

ವಿಕ್ಟೋರಿಯಾ ಆಸ್ಪತ್ರೆಯಲ್ಲಿ 9 ದಿನ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದು ಆಗಲೇ ಹದಿನೈದು ದಿನಗಳಾಗಿವೆ. ‘ನನಗೆ 55 ವರ್ಷ. ಅಸ್ತಮಾ, ರಕ್ತದೊತ್ತಡ ಇತ್ತು. ಈ ವೇಳೆ ಪತಿಗೆ ಕೊರೊನಾ ಸೋಂಕು ತಗುಲಿದ್ದರಿಂದ, ನನಗೂ ಪಾಸಿಟಿವ್‌ ಆಗಿತ್ತು. ಆದರೆ, ಸೋಂಕಿನ ಯಾವ ಲಕ್ಷಣವೂ ನನಗೆ ಇರಲಿಲ್ಲ. ಇಬ್ಬರೂ ಆಸ್ಪತ್ರೆಗೆ ದಾಖಲಾದೆವು. ಅವರಿಗೆ ಮಧುಮೇಹ ಇತ್ತು. ಈಗ ಇಬ್ಬರೂ ಗುಣಮುಖರಾಗಿದ್ದೇವೆ’ ಎಂದು ಅವರು ಹೇಳಿದರು. 

‘ಸೋಂಕು ಬಂದವರಿಗೆ ಉಸಿರಾಟ ಕಷ್ಟವಾಗುತ್ತದೆ, ಉಸಿರಾಡಲು ಸಾಧ್ಯವೇ ಆಗುವುದಿಲ್ಲ ಎಂದೆಲ್ಲ ಸುಳ್ಳು ಹೇಳಲಾಗುತ್ತಿದೆ. ಅಂತಹ ಯಾವ ಸಮಸ್ಯೆಯೂ ಉದ್ಭವಿಸುವುದಿಲ್ಲ. ಆದರೆ, ಮಲೇರಿಯಾ ಚಿಕಿತ್ಸೆಗೆ ಕೊಡುವ ಮಾತ್ರೆಯನ್ನೇ ನಮಗೂ ಕೊಡುತ್ತಾರೆ. ಕೆಲವರಿಗೆ ಇದರಿಂದ ಅಡ್ಡ ಪರಿಣಾಮವಾಗುತ್ತದೆ. ಹೀಗಾಗಿ, ನಾನು ಆ ಮಾತ್ರೆಯನ್ನೂ ಸೇವಿಸಲಿಲ್ಲ. ಆರಾಮಾಗಿ ಊಟ ಮಾಡಿಕೊಂಡು ಬಂದೆ’ ಎಂದು ಅವರು ನಕ್ಕರು. 

‘ಆಸ್ಪತ್ರೆಗೆ ದಾಖಲಾದವರು ಸಾಮಾನ್ಯವಾಗಿ ಐದಾರು ಕೆ.ಜಿ ತೂಕ ಕಳೆದುಕೊಳ್ಳುತ್ತಾರೆ. ಮಾತ್ರೆ, ಔಷಧಗಳ ಪ್ರಭಾವ ಇರಬಹುದು. ನಾವಿಬ್ಬರೂ ಆಸ್ಪತ್ರೆಯಲ್ಲಿದ್ದಾಗ ಮಕ್ಕಳನ್ನು ಹೋಟೆಲ್‌ಗಳಲ್ಲಿ ಕ್ವಾರಂಟೈನ್‌ನಲ್ಲಿಡಲಾಗಿತ್ತು. ಮಕ್ಕಳು ಹೇಗಿದ್ದಾರೋ ಏನೋ ಎಂಬ ಚಿಂತೆ ಕಾಡುತ್ತಿತ್ತು. ಆದರೆ, ಹುಷಾರಾಗಿ ಬರುತ್ತೇನೆ ಎಂಬ ನಂಬಿಕೆ ಮಾತ್ರ ಇತ್ತು’ ಎಂದು ಅವರು ವಿಶ್ವಾಸದಿಂದ ಹೇಳಿದರು.

‘ಕೊರೊನಾ ಪಾಸಿಟಿವ್‌ ಎಂಬ ಕಾರಣಕ್ಕೆ ಈಗಲೂ ಬಿಬಿಎಂಪಿ, ಆರೋಗ್ಯ ಇಲಾಖೆ ಅಧಿಕಾರಿಗಳು ಕರೆ ಮಾಡುತ್ತಾರೆ. ಮೊದಲು ದಿನಾಂಕ ನೋಡಿ, ನಾನಾಗಲೇ ಡಿಸ್ಚಾರ್ಜ್‌ ಆಗಿ ಬಂದಿದ್ದೇನೆ ಎಂದು ಹೇಳುತ್ತೇನೆ. ನಿಮ್ಹಾನ್ಸ್‌ನಿಂದಲೂ ಕರೆ ಬರುತ್ತಿರುತ್ತದೆ. ಮಾನಸಿಕವಾಗಿ ನಾನು ಇನ್ನಷ್ಟು ಗಟ್ಟಿಯಾಗಿದ್ದೇನೆ. ನನಗೆ ಹುಚ್ಚೇನೂ ಹಿಡಿದಿಲ್ಲ. ಕರೆ ಮಾಡಬೇಡಿ ಎಂದು ನಗುತ್ತಲೇ ಹೇಳುತ್ತೇನೆ’ ಎಂದು ಅವರು ಅನುಭವ ಹಂಚಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು