ಶನಿವಾರ, ಡಿಸೆಂಬರ್ 4, 2021
20 °C

ಕೋವಿಡ್: ರಾಜ್ಯದಲ್ಲಿ ಹೊಸದಾಗಿ 8,865 ಪ್ರಕರಣ ದೃಢ, 6 ತಿಂಗಳಲ್ಲಿ 6 ಸಾವಿರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ಸೋಂಕಿತರಲ್ಲಿ ಮತ್ತೆ 104 ಮಂದಿ ಮೃತಪಟ್ಟಿರುವುದು ಗುರುವಾರ ದೃಢಪಟ್ಟಿದೆ. ಇದರಿಂದಾಗಿ ಕೋವಿಡ್‌ಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 6 ಸಾವಿರದ ಗಡಿ (6,054) ದಾಟಿದೆ.  

ರಾಜ್ಯದಲ್ಲಿ ಮಾ.10ರಂದು ಪ್ರಥಮ ಕೋವಿಡ್ ‍ಮರಣ ಪ್ರಕರಣ ವರದಿಯಾಗಿತ್ತು. ಅದಾಗಿ ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ (ಜೂ.30) ಮೃತರ ಸಂಖ್ಯೆ 246ಕ್ಕೆ ತಲುಪಿತ್ತು. ಬಳಿಕ ಏರುಗತಿ ಪಡೆದು, ಜುಲೈ ಅಂತ್ಯಕ್ಕೆ 2,314 ಪ್ರಕರಣಗಳು ವರದಿಯಾಗಿದ್ದವು. ಆಗಸ್ಟ್ ಒಂದೇ ‌ ತಿಂಗಳಲ್ಲಿ 3,388 ಮಂದಿ ಸಾವಿಗೀಡಾಗಿರುವುದು ದೃಢಪಟ್ಟಿದೆ. ಈ ಅವಧಿಯಲ್ಲಿ ಪ್ರತಿನಿತ್ಯ ಸರಾಸರಿ 109 ಮರಣ ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ಮೊದಲ ಪ್ರಕರಣ ವರದಿಯಾದ ಆರು ತಿಂಗಳು ಕಳೆಯುವ ಮುನ್ನವೇ ಮೃತರ ಸಂಖ್ಯೆ ಆರು ಸಾವಿರದ ಗಡಿ ದಾಟಿದೆ.

ರಾಜ್ಯದಲ್ಲಿ ಹೊಸದಾಗಿ 8,865 ಮಂದಿ ಕೋವಿಡ್ ಪೀಡಿತರಾಗಿರುವುದುದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 3.70 ಲಕ್ಷಕ್ಕೆ ಏರಿಕೆಯಾಗಿದೆ. ಸದ್ಯ ಸೋಂಕು ದೃಢ ಪ್ರಮಾಣ ಶೇ 11.84ರಷ್ಟಿದೆ. ಒಂದೇ ದಿನ 32,403 ಆ್ಯಂಟಿಜೆನ್‌ ಸೇರಿದಂತೆ 71,124 ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಕಳೆದ ಒಂದು ತಿಂಗಳಿಂದ ಪ್ರತಿನಿತ್ಯ ಸರಾಸರಿ 50 ಸಾವಿರ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಈವರೆಗೆ ನಡೆಸಲಾದ ಒಟ್ಟು ಪರೀಕ್ಷೆಗಳ ಸಂಖ್ಯೆ 31 ಲಕ್ಷ ದಾಟಿದೆ.

ಬೆಂಗಳೂರಿನಲ್ಲಿ 2,631 ಮಂದಿ ಸೇರಿದಂತೆ ರಾಜ್ಯದಲ್ಲಿ 7,122 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ರಾಜ್ಯದಲ್ಲಿ ಈವರೆಗೆ ಚೇತರಿಸಿಕೊಂಡವರ ಸಂಖ್ಯೆ 2.68 ಲಕ್ಷ ದಾಟಿದೆ. 96 ಸಾವಿರಕ್ಕೂ ಅಧಿಕ ಸೋಂಕಿತರು ಆಸ್ಪತ್ರೆಗಳು, ಕೋವಿಡ್ ಆರೈಕೆ ಕೇಂದ್ರಗಳು ಹಾಗೂ ಮನೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಬೆಂಗಳೂರಿನಲ್ಲಿ 3,189 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 1.38 ಲಕ್ಷ ದಾಟಿದೆ. ಮೈಸೂರಿನಲ್ಲಿ ಮತ್ತೆ 475 ಮಂದಿ ಕೋವಿಡ್ ಪೀಡಿತರಾಗಿದ್ದು, ಅಲ್ಲಿ ಒಟ್ಟು ಸೋಂಕಿತರ ಸಂಖ್ಯೆ 20 ಸಾವಿರದ ಗಡಿ (19,828) ಸಮೀಪಿಸಿದೆ. ಬಳ್ಳಾರಿ ಹಾಗೂ ಬೆಳಗಾವಿಯಲ್ಲಿ ಸತತ ಎರಡನೇ ದಿನ ಕೂಡ 400ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರು (29), ಧಾರವಾಡ (9), ಕೊಪ್ಪಳ (8), ಮೈಸೂರು (8), ಶಿವಮೊಗ್ಗ (8) ಜಿಲ್ಲೆಯಲ್ಲಿ ಅಧಿಕ ಮರಣ ಪ್ರಕರಣಗಳು ಗುರುವಾರ ದೃಢಪಟ್ಟಿದೆ. 

ಆತ್ಮಾವಲೋಕನ ಮಾಡಿಕೊಳ್ಳಿ’

ಬೆಂಗಳೂರು: ‘ರಾಜ್ಯದಲ್ಲಿ ಕೋವಿಡ್‌ನಿಂದ ಸಾವಿಗೀಡಾಗುತ್ತಿರುವವರ ಅಂಕಿ-ಸಂಖ್ಯೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಅವರಿಗೆ ಕಾಂಗ್ರೆಸ್‌ ಶಾಸಕ ಎಚ್‌.ಕೆ. ಪಾಟೀಲ ಸಲಹೆ ನೀಡಿದ್ದಾರೆ.

ಟ್ವೀಟ್‌ ಮಾಡಿರುವ ಅವರು, ‘ದೇಶದಲ್ಲಿ ಕೋವಿಡ್ ಪೀಡಿತರಾದ 10 ಲಕ್ಷ ಜನರಲ್ಲಿ 42 ಜನ ಮೃತಪಡುತ್ತಿದ್ದರೆ, ಕರ್ನಾಟಕದಲ್ಲಿ ಈ ಸಂಖ್ಯೆ 83 ಇದೆ. ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ ಜನವರಿಯಿಂದ ಜುಲೈವರೆಗೆ ಶೇ 32ರಷ್ಟು ಹೆಚ್ಚಳ ಕಂಡಿದೆ’ ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

‘ಸುಳ್ಳು ಮಾಹಿತಿಗಳನ್ನ ಜನರಿಗೆ ನೀಡಿ ಸಮರ್ಥಿಸಿಕೊಳ್ಳಬೇಡಿ. ಸಂಕಷ್ಟದ ಈ ಕಾಲದಲ್ಲಿ ಆಘಾತಕಾರಿ, ಸತ್ಯವಾದ ಮಾಹಿತಿಗಳನ್ನು ಜನರ ಜೊತೆಗೆ ಹಂಚಿಕೊಳ್ಳಿ. ಕೊರತೆಗಳನ್ನು ನೀಗಿಸಲು ಯುದ್ಧೋಪಾದಿಯಲ್ಲಿ ಕೆಲಸ ಮಾಡಲು ಆಡಳಿತ ಯಂತ್ರ ಚುರುಕುಗೊಳಿಸಿ’ ಎಂದೂ ಅವರು ಸಲಹೆ ನೀಡಿದ್ದಾರೆ.

6 ಸಾವಿರ ಪೊಲೀಸರಿಗೆ ಸೋಂಕು: ಪ್ರವೀಣ್‌ ಸೂದ್

ವಿಜಯಪುರ: ‘ರಾಜ್ಯದಲ್ಲಿ ಇದುವರೆಗೆ 6 ಸಾವಿರ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯಲ್ಲಿ ಕೋವಿಡ್‌ ದೃಢಪಟ್ಟಿದ್ದು, ಇದರಲ್ಲಿ 44 ಜನ ಸಾವಿಗೀಡಾಗಿದ್ದಾರೆ’ ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ತಿಳಿಸಿದರು.

ನಗರದಲ್ಲಿ ಗುರುವಾರ ಪೊಲೀಸ್‌ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೋವಿಡ್‌ನಿಂದ ಸಾವಿಗೀಡಾದ ಅವಲಂಬಿತರಿಗೆ ಸರ್ಕಾರಿ ನೌಕರಿ ನೀಡಲಾಗುವುದು’ ಎಂದು ಭರವಸೆ ನೀಡಿದರು.‌

‍ಪರೀಕ್ಷೆ ವಿಳಂಬ ಮಾಡಿದಲ್ಲಿ ದಂಡ

ಕೋವಿಡ್ ಆರ್‌ಟಿ–ಪಿಸಿಆರ್ ಪರೀಕ್ಷಾ ಫಲಿತಾಂಶವನ್ನು 48 ಗಂಟೆಗಳ ಅವಧಿಯಲ್ಲಿ ನೀಡದ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ (ಐಸಿಎಂಆರ್) ವೆಬ್‌ ಪೋರ್ಟಲ್‌ನಲ್ಲಿ ನಮೂದಿಸದ ಖಾಸಗಿ ‍ಪ್ರಯೋಗಾಲಯಗಳಿಗೆ ಇನ್ನು ಮುಂದೆ ಪ್ರತಿ ಪರೀಕ್ಷೆಗೆ ನಿಗದಿ ಮಾಡಿದ ದರದ ಶೇ 10ರಷ್ಟು ದಂಡ ವಿಧಿಸಲಾಗುತ್ತದೆ.

ಈ ಕುರಿತು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಕೆಲವೆಡೆ ಕೋವಿಡ್‌ ಪರೀಕ್ಷೆಗಳ ಫಲಿತಾಂಶ ವಿಳಂಬವಾಗುತ್ತಿರುವುದು ಕೊರೊನಾ ಸೋಂಕು ಶಂಕಿತರಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ. 24 ಗಂಟೆಗಳಿಂದ 48 ಗಂಟೆಗಳ ಅವಧಿಯಲ್ಲಿ ಪರೀಕ್ಷೆಯ ಫಲಿತಾಂಶವನ್ನು ಒದಗಿಸಿ, ವೆಬ್ ಪೋರ್ಟಲ್‌ನಲ್ಲಿ ವಿವರ ನಮೂದಿಸುವ ಪ್ರಯೋಗಾಲಯಗಳಿಗೆ ಈಗಾಗಲೇ ನಿಗದಿಪಡಿಸಿದ ದರವನ್ನು ಪಾವತಿಸಲಾಗುತ್ತದೆ.

24 ಗಂಟೆಗಳ ಒಳಗಡೆಯೇ ಫಲಿತಾಂಶ ನೀಡಿ, ಪೋರ್ಟಲ್‌ನಲ್ಲಿ ಮಾಹಿತಿ ನಮೂದಿಸುವ ಪ್ರಯೋಗಾಲಯಗಳಿಗೆ ಪ್ರತಿ ಪರೀಕ್ಷೆಗೆ ನಿಗದಿಯಾದ ದರದ ಶೇ 10 ರಷ್ಟು ಹಣವನ್ನು ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.‌

ಕರ್ನಾಟಕ ಮತ್ತು ದೆಹಲಿಯಲ್ಲಿ ಪ್ರತಿನಿತ್ಯ ಸಂಭವಿಸುತ್ತಿರುವ ಸಾವಿನ ಸಂಖ್ಯೆ ಏರಿಕೆ

ನವದೆಹಲಿ(ಪಿಟಿಐ): ಕೋವಿಡ್‌–19ನಿಂದಾಗಿ ದೇಶದಲ್ಲಿ ಸಂಭವಿಸಿರುವ ಒಟ್ಟು ಸಾವಿನ ಪೈಕಿ ಶೇ 70ರಷ್ಟು ಸಾವು ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ದೆಹಲಿ ಹಾಗೂ ತಮಿಳುನಾಡಿನಲ್ಲೇ ಸಂಭವಿಸಿದೆ. ಕರ್ನಾಟಕ ಮತ್ತು ದೆಹಲಿಯಲ್ಲಿ ಪ್ರತಿನಿತ್ಯ ಸಂಭವಿಸುತ್ತಿರುವ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

‘ವಾರದಿಂದ ವಾರಕ್ಕೆ ಆಂಧ್ರಪ್ರದೇಶ(ಶೇ 4.5), ಮಹಾರಾಷ್ಟ್ರ(ಶೇ 11.5) ಹಾಗೂ ತಮಿಳುನಾಡಿನಲ್ಲಿ(ಶೇ 18.2) ಪ್ರತಿನಿತ್ಯ ಸಂಭವಿಸುತ್ತಿರುವ ಸಾವಿನ ಸಂಖ್ಯೆ ಇಳಿಕೆಯಾಗುತ್ತಿದೆ. ನಿತ್ಯದ ಸರಾಸರಿ ಸಾವಿನ ಪ್ರಮಾಣವು ದೆಹಲಿಯಲ್ಲಿ ಶೇ 50 ಹಾಗೂ ಕರ್ನಾಟಕದಲ್ಲಿ ಶೇ 9.6 ಏರಿಕೆಯಾಗಿದೆ. ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಶೇ 62 ಪ್ರಕರಣಗಳು ಮಹಾರಾಷ್ಟ್ರ, ಆಂಧ್ರ ಪ್ರದೇಶ, ಕರ್ನಾಟಕ, ಉತ್ತರ ಪ್ರದೇಶ ಹಾಗೂ ತಮಿಳುನಾಡಿನಲ್ಲೇ ವರದಿಯಾಗಿವೆ’ ಎಂದು ಸಚಿವಾಲಯದ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ತಿಳಿಸಿದ್ದಾರೆ.

ಅತ್ಯಧಿಕ ಪರೀಕ್ಷೆ: ದೇಶದಾದ್ಯಂತ ಬುಧವಾರ ಒಂದೇ ದಿನ 11,72,179 ಕೋವಿಡ್‌–19 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದು ವಿಶ್ವದಲ್ಲೇ ಅತ್ಯಧಿಕವಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ಮೂಲಕ ಕೋವಿಡ್‌–19 ಪತ್ತೆಹಚ್ಚಲು ಒಟ್ಟಾರೆ 4.55 ಕೋಟಿಗೂ ಅಧಿಕ ಪರೀಕ್ಷೆಗಳನ್ನು ನಡೆಸಲಾಗಿದೆ. ಹೆಚ್ಚಿನ ಪರೀಕ್ಷೆಗಳನ್ನು ನಡೆಸುತ್ತಿರುವ ಪರಿಣಾಮ ದೃಢಪಡುತ್ತಿರುವ ಪ್ರಕರಣಗಳ ಪ್ರಮಾಣವೂ ಇಳಿಕೆಯಾಗಿದೆ ಎಂದು ಸಚಿವಾಲಯವು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು