ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಫಿವರ್ ಕ್ಲಿನಿಕ್' ಪ್ರಾರಂಭ: ರೋಗಿಗಳ ದಟ್ಟಣೆ ತಪ್ಪಿಸಲು ಕ್ರಮ

Last Updated 1 ಏಪ್ರಿಲ್ 2020, 20:56 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಅನಾರೋಗ್ಯ ಸಮಸ್ಯೆಗೆ ಒಳಗಾದವರನ್ನು ಪರೀಕ್ಷೆಗೆ ಒಳಪಡಿಸುವ ‘ಫಿವರ್ಕ್ಲಿನಿಕ್’ ಗಳನ್ನು ರಾಜ್ಯದಾದ್ಯಂತ ವಿಸ್ತರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದೆ.

ವಿದೇಶಗಳಿಂದ ಬಂದವರು ಹಾಗೂ ಅವರೊಂದಿಗೆ ನೇರ ಸಂಪರ್ಕ ಹೊಂದಿರುವವರಲ್ಲಿ ಈ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಅನಾರೋಗ್ಯ ಸಮಸ್ಯೆಗೆ ಒಳಗಾದವರೂ ಪ್ರಥಮ ಆದ್ಯತಾ ಆಸ್ಪತ್ರೆಗಳಿಗೆ ತೆರಳಿ, ಕೋವಿಡ್–19 ಪರೀಕ್ಷೆಗೆ ಒತ್ತಾಯಿಸಿದ ಪರಿಣಾಮ ರೋಗಿಗಳ ದಟ್ಟಣೆ ಉಂಟಾಗುತ್ತಿದೆ.

ಜನರಲ್ಲಿನ ಆತಂಕ ದೂರ ಮಾಡುವ ಉದ್ದೇಶದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ 31 ಫಿವರ್ ಕ್ಲಿನಿಕ್‌ಗಳು ಪ್ರಾರಂಭಿವಾಗಿವೆ. ಅದೇ ಮಾದರಲ್ಲಿ ರಾಜ್ಯದ ವಿವಿಧೆಡೆ ಕ್ಲಿನಿಕ್ ಕಾರ್ಯಾರಂಭಿಸಲಿದೆ.ಪ್ರತಿ ಜಿಲ್ಲೆಯ ಅಗತ್ಯಕ್ಕೆ ಅನುಗುಣವಾಗುವಷ್ಟು ಕ್ಲಿನಿಕ್‍ಗಳನ್ನು ಆರಂಭಿಸಲು ಸೂಚನೆ ನೀಡಲಾಗಿದೆ.

ಬೆಳಿಗ್ಗೆ 9ಗಂಟೆಯಿಂದ ಸಂಜೆ 4.30ರ ವರೆಗೆ ಈ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಜ್ವರ, ಕೆಮ್ಮು, ಶೀತ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗೆ ಪರೀಕ್ಷೆ ಮಾಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ರೆಫರಲ್ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಬಂದವರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡುವ ಸೋಂಕು ತಗುಲಿದೆಯೇ ಎನ್ನುವುದನ್ನು ಪತ್ತೆ ಮಾಡಲಾಗುತ್ತದೆ.

ಪ್ರತಿಕ್ಲಿನಿಕ್‌ಗೂ ವೈದ್ಯಾಧಿಕಾರಿ, ಶುಶ್ರೂಷಕಿ, ಹಿರಿಯ ಹಾಗೂ ಕಿರಿಯ ಆರೋಗ್ಯ ಸಿಬ್ಬಂದಿಯನ್ನು ನೇಮಿಸಲಾಗುತ್ತದೆ. ರೋಗಿಗಳನ್ನು ಪರೀಕ್ಷೆ ಮಾಡುವವರಿಗೆ ಸುರಕ್ಷಾ ಸಾಧನಗಳ (ಪಿಪಿಇ) ಕಿಟ್‌ಗಳನ್ನು ನೀಡಲಾಗುತ್ತದೆ.

ಸೋಂಕಿನ ಲಕ್ಷಣ ಕಾಣಿಸಿಕೊಂಡಲ್ಲಿ ಕ್ವಾರಂಟೈನ್ ಕೇಂದ್ರಕ್ಕೆ ದಾಖಲಿಸಲಾಗುತ್ತದೆ. ಸೋಂಕು ಇರುವುದು ದೃಢಪಟ್ಟಲ್ಲಿ ಪ್ರಥಮ ಆದ್ಯತಾ ಆಸ್ಪತ್ರೆಗಳಿಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT