ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಮ್ ಕ್ವಾರಂಟೈನ್‌ಗೆ ಅಪಾರ್ಟ್‌ಮೆಂಟ್ ಬಳಸಲು ಕೋರಿ ಹೈಕೋರ್ಟ್‌ಗೆ ಪಿಐಎಲ್

Last Updated 30 ಮಾರ್ಚ್ 2020, 15:34 IST
ಅಕ್ಷರ ಗಾತ್ರ

ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ (ಬಿಬಿಎಂಪಿ) ಖಾಲಿ ಇರುವ ಸಾವಿರಾರು ಅಪಾರ್ಟ್‌ಮೆಂಟ್‌ಗಳನ್ನು ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡಲು ಬಳಸಿಕೊಳ್ಳವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು’ಎಂದು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.

ಹೈಕೋರ್ಟ್ ವಕೀಲೆ ಪಿ.ಎಲ್. ವಂದನಾ ಸಲ್ಲಿಸಿರುವ ಈ ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

‘ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಖಾಸಗಿ ಹೊಟೇಲ್, ರೈಲ್ವೆ ಬೋಗಿಗಳನ್ನು ಮತ್ತು ಛತ್ರಗಳನ್ನು ಕ್ವಾರಂಟೈನ್ ಬಳಕೆಗೆ ಯೋಜನೆ ರೂಪಿಸಲಾಗಿದೆ. ಇದರ ಬದಲು ಬಿಬಿಎಂಪಿ ವ್ಯಾಪ್ತಿಯಲ್ಲಿ ಬಳಕೆಗೆ ಸಿದ್ಧವಾಗಿರುವ ಸಾವಿರಾರು ಅಪಾರ್ಟ್ ಮೆಂಟ್ ಗಳು ಖಾಲಿ ಇವೆ‌. ಇವುಗಳನ್ನು ನಂತರ ಖಾಲಿ ಮಾಡುವ ಸಂದರ್ಭದಲ್ಲಿ ಸ್ವಚ್ಛಗೊಳಿಸಿ ಮಾಲೀಕರಿಗೆ ನೀಡಬಹುದು’ಎಂದು ಅರ್ಜಿದಾರರು ಸಲಹೆ ನೀಡಿದ್ದಾರೆ.

‘ಕೊರೊನಾ ಶಂಕಿತರು ಹಾಗೂ ಸೋಂಕಿತರಿಗೆ ವೈದ್ಯಕೀಯ ಸೇವೆಗಳನ್ನು ಒದಗಿಸಲು ನಗರಗಳಲ್ಲಿರುವ ವೈದ್ಯಕೀಯ ಹಾಗೂ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳ ಸೇವೆ ಪಡೆದುಕೊಳ್ಳಬೇಕು. ಜೊತೆಗೆ ಸ್ಕೌಟ್ಸ್ ಮತ್ತು ಗೈಡ್ಸ್, ಹೋಂ ಗಾರ್ಡ್ಸ್ ಸೇರಿದಂತೆ ಸ್ವಯಂ ಸೇವಾ ಸಂಸ್ಥೆಗಳ ಸೇವೆ ಪಡೆದುಕೊಳ್ಳಬೇಕು. ನಗರ ಮತ್ತು ಗ್ರಾಮೀಣ ಸಾರಿಗೆ ಸೌಲಭ್ಯಕ್ಕೆ ಖಾಸಗಿ ಸಾರಿಗೆ ಆಪರೇಟರ್ಸ್ ಗಳ ಬಸ್ಸುಗಳನ್ನು ಸರ್ಕಾರ ತನ್ನ ವಶಕ್ಕೆ ಪಡೆದುಕೊಳ್ಳಬೇಕು. ನೆರೆ ಹಾವಳಿ ಮತ್ತಿತರರ ಸಂದರ್ಭಗಳಲ್ಲಿ ಸಂತ್ರಸ್ತರಿಗೆ ನೆರವು ನೀಡುವ ಸಂಘ-ಸಂಸ್ಥೆಗಳು ಹಾಗೂ ದಾನಿಗಳಿಗೆ ಈಗಲೂ ತಮ್ಮ ಸೇವೆ ಮುಂದುವರಿಸುವಂತೆ ಮನವಿ ಮಾಡಬೇಕು’ಎಂದು ಅರ್ಜಿದಾರರು ಕೋರಿದ್ದಾರೆ.

ವಕೀಲ ಎಂ.ಎಸ್. ಶ್ಯಾಮಸುಂದರ್ ವಕಾಲತ್ತು ವಹಿಸಿದ್ದಾರೆ.

ಜೈಲುಗಳಲ್ಲಿ ಕೊರೋನಾ ಹರಡದಂತೆ ಕ್ರಮ
ಬೆಂಗಳೂರು:
ಜೈಲುಗಳಲ್ಲಿ ಕೈದಿಗಳ ದಟ್ಟಣೆಯಿಂದ ಕೊರೋನಾ ಹರಡದಂತೆ ಕ್ರಮಕ್ಕೆ ಮುಂದಾಗಿರುವ ಹೈಕೋರ್ಟ್,
ಅರ್ಹ ಪ್ರಕರಣಗಳಲ್ಲಿ ಮಧ್ಯಂತರ ಜಾಮೀನು ನೀಡಲು ಒಟ್ಟು 34 ಜಿಲ್ಲಾ ನ್ಯಾಯಾಧೀಶರಿಗೆ ಕಾರ್ಯಭಾರ ಒಪ್ಪಿಸಿದೆ.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ.

ಈ ಕುರಿತಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ ಅವರು ಅಧಿಸೂಚನೆ ಹೊರಡಿಸಿದ್ದಾರೆ.

ಲಾಠಿ ಪ್ರಹಾರ: ಮಾರ್ಗಸೂಚಿ ರೂಪಿಸಲು ನಿರ್ದೇಶನ
ಬೆಂಗಳೂರು: ‘
ಕೊರೋನಾ ಸೊಂಕು ಹಿನ್ನೆಲೆಯಲ್ಲಿ ವವಲಸೆ ಕಾರ್ಮಿಕರ ರಕ್ಷಣೆಗೆ ಕ್ರಮ‌ ಕೈಗೊಳ್ಳಬೇಕು’ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಪೊಲೀಸರು ಸಾರ್ವಜನಿಕರ ಮೇಲೆ ಬೇಕಾಬಿಟ್ಟಿ ಲಾಠಿ ಪ್ರಹಾರ ಮಾಡುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಡಿಯೊ ಕಾನ್ಫರೆನ್ಸ್ ಮುಖಾಂತರ ವಿಚಾರಣೆ ನಡೆಸಿತು.

ಬೇಕಾಬಿಟ್ಟಿ ಲಾಠಿ ಪ್ರಹಾರ ತಡೆಯುವ ನಿಟ್ಟಿನಲ್ಲಿ ಮಾರ್ಗಸೂಚಿ ರೂಪಿಸುವಂತೆ ಗೃಹ ಇಲಾಖೆಗೆ ನಿರ್ದೇಶಿಸಿತು.

ಬಿಬಿಎಂಪಿ ಪೌರ ಕಾರ್ಮಿಕರ ಭದ್ರತೆ ಮತ್ತು ಸುರಕ್ಷತೆಗೆ ಕ್ರಮ‌ ಕೈಗೊಳ್ಳುವಂತೆಯೂ ಸೂಚಿಸಲಾಗಿದೆ.

‘ಸೂಪರ್ ಮಾರ್ಕೆಟ್ ಗಳಲ್ಲಿ ಜನಸಂದಣಿ ಹಿನ್ನೆಲೆ ವಿಚಾರಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆ ವೇಳೆ ಆದೇಶ ನೀಡಲಾಗುವುದು’ಎಂದು ನ್ಯಾಯಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT