ಬುಧವಾರ, ಅಕ್ಟೋಬರ್ 28, 2020
21 °C
ವಿಧಾನ ಪರಿಷತ್‌ನಲ್ಲಿ ಮಸೂದೆಗೆ ಅಂಗೀಕಾರ

ಬಿಬಿಎಂಪಿ ವಾರ್ಡ್‌ ಹೆಚ್ಚಳಕ್ಕೆ ಸಮ್ಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್‌ಗಳ ಸಂಖ್ಯೆಯನ್ನು 225ರಿಂದ 250ರವರೆಗೆ ಹೆಚ್ಚಿಸಲು ಅವಕಾಶ ಕಲ್ಪಿಸುವ ಕರ್ನಾಟಕ ನಗರ ಪಾಲಿಕೆಗಳ (ಮೂರನೇ ತಿದ್ದುಪಡಿ) ಮಸೂದೆ–2020ಕ್ಕೆ ವಿಧಾನ ಪರಿಷತ್‌ ಶುಕ್ರವಾರ ಅಂಗೀಕಾರ ನೀಡಿದೆ.

ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರು ಮಸೂದೆ ಮಂಡಿಸಿದಾಗ ಜೆಡಿಎಸ್‌ನ ಎಚ್‌.ಎಂ. ರಮೇಶ್‌ ಗೌಡ, ಕಾಂತರಾಜು, ಕಾಂಗ್ರೆಸ್‌ನ ಎಸ್‌. ರವಿ ಸೇರಿದಂತೆ ಹಲವು ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ‘ಬಿಬಿಎಂಪಿ ಚುನಾವಣೆ ಮುಂದೂಡುವ ಉದ್ದೇಶದಿಂದ ಈ ಮಸೂದೆ ಮಂಡಿಸಲಾಗಿದೆ’ ಎಂದು ಆರೋಪಿಸಿದರು.

‘ಬೆಂಗಳೂರು ನಗರ ವಿಸ್ತಾರವಾಗಿ ಬೆಳೆದಿದೆ. ಹಳೆಯ ಬೆಂಗಳೂರನ್ನು ಒಂದು ಪಾಲಿಕೆಯನ್ನಾಗಿ ಮತ್ತು ಹೊಸದಾಗಿ ಸೇರಿರುವ ಪ್ರದೇಶಗಳನ್ನು ಇನ್ನೊಂದು ಪಾಲಿಕೆಯನ್ನಾಗಿ ವಿಭಜಿಸಬೇಕು. ಮುಂಬೈ, ದೆಹಲಿ ಮಾದರಿ ಅನುಸರಿಸಿದರೆ ಆಡಳಿತಾತ್ಮಕ ದೃಷ್ಟಿಯಿಂದ ಅನುಕೂಲವಾಗುತ್ತದೆ’ ಎಂದು ಕಾಂಗ್ರೆಸ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಸಲಹೆ ನೀಡಿದರು.

‘ವಾರ್ಡ್‌ ಪುನರ್‌ ವಿಂಗಡಣೆಯ ಅಧಿಕಾರವನ್ನು ಜಿಲ್ಲಾಧಿಕಾರಿಗಳ ಬದಲಿಗೆ ರಾಜ್ಯ ಚುನಾವಣಾ ಆಯೋಗಕ್ಕೆ ನೀಡಬೇಕು. ಆಗ ವೈಜ್ಞಾನಿಕ ವಿಧಾನದಲ್ಲಿ ಪ್ರಕ್ರಿಯೆ ನಡೆಯುತ್ತದೆ’ ಎಂದು ಕಾಂಗ್ರೆಸ್ ಸದಸ್ಯ ಪಿ.ಆರ್‌. ರಮೇಶ್‌ ಹೇಳಿದರು.

ಸ್ಪಷ್ಟೀಕರಣ ನೀಡಿದ ಸುರೇಶ್‌ ಕುಮಾರ್‌, ‘ಈ ಮಸೂದೆ ವಾರ್ಡ್‌ ಸಂಖ್ಯೆ ಹೆಚ್ಚಳಕ್ಕಷ್ಟೆ ಸೀಮಿತ. ಬಿಬಿಎಂಪಿ ಆಡಳಿತ ನಿರ್ವಹಣೆಗೆ ಸಮಗ್ರವಾದ ಪ್ರತ್ಯೇಕ ಮಸೂದೆಯನ್ನು ರೂಪಿಸಲಾಗುವುದು’ ಎಂದರು.

ಎನ್‌. ರವಿಕುಮಾರ್‌, ತೇಜಸ್ವಿನಿ ಗೌಡ ಸೇರಿದಂತೆ ಬಿಜೆಪಿಯ ಹಲವು ಸದಸ್ಯರು ಮಸೂದೆಯನ್ನು ಬೆಂಬಲಿಸಿ ಮಾತನಾಡಿದರು. ಬಳಿಕ ಮಸೂದೆಗೆ ಒಪ್ಪಿಗೆ ನೀಡಲಾಯಿತು.

‘ತಕ್ಷಣ 198 ವಾರ್ಡ್‌ಗಳಿಗೆ ಚುನಾವಣೆ ನಡೆಸಿ’
‘ಬಿಬಿಎಂಪಿ ಚುನಾವಣೆ ಮುಂದೂಡುವ ಉದ್ದೇಶದಿಂದ ಬಿಜೆಪಿ ಸರ್ಕಾರ ವಾರ್ಡ್ ಮರು ವಿಂಗಡಿಸಿ 250ಕ್ಕೆ ಹೆಚ್ಚಿಸಲು ಹೊರಟಿದೆ’ ಎಂದು ಆರೋಪಿಸಿದ ಮಾಜಿ ಮೇಯರ್‌ಗಳಾದ ಕಾಂಗ್ರೆಸ್‌ನ ಜೆ. ಹುಚ್ಚಪ್ಪ ಮತ್ತು ರಾಮಚಂದ್ರಪ್ಪ, ‘ತಕ್ಷಣ 198 ವಾರ್ಡ್‌ಗಳಿಗೆ ಚುನಾವಣೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಈ ಹಿಂದೆ ಬಿಜೆಪಿ ಸರ್ಕಾರ 100 ವಾರ್ಡ್ ಇದ್ದುದನ್ನು 198 ವಾರ್ಡ್‌ಗಳಿಗೆ ಹೆಚ್ಚಿಸಿ ಚುನಾವಣೆ ಮಾಡಿತ್ತು. ಆದರೆ, ಹೊಸದಾಗಿ ಸೇರಿದ ವಾರ್ಡ್‌ಗಳಿಗೆ ಇಲ್ಲಿಯವರೆಗೂ ಮೂಲಸೌಕರ್ಯ ಒದಗಿಸಲು ಸರ್ಕಾರಗಳು ವಿಫಲವಾಗಿವೆ. ಹೊಸ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಕೊರತೆ, ಕಸ ವಿಂಗಡಣೆ, ರಸ್ತೆ, ‘ಎ’ ಖಾತಾ ನೀಡಲು ವಿಫಲವಾಗಿರುವ‌‌ ಸರ್ಕಾರ, ಮೊದಲು ಈ ಕೆಲಸ ಮಾಡಲಿ’ ಎಂದೂ ಒತ್ತಾಯಿಸಿದ್ದಾರೆ.

‘ಬೆಂಗಳೂರಿನ ಹೆಸರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ‌ಕಸ ಸಮಸ್ಯೆಯಿಂದ ಹಾಳು ಮಾಡಿದವರು ಬಿಜೆಪಿಯವರು. ಅವರಿಂದಾಗಿ ಕೆಂಪೇಗೌಡ ಕಟ್ಟಿದ ಬೆಂಗಳೂರು ಹಾಳಾಗಿದೆ. ಇದೀಗ ಚುನಾವಣೆ ಮುಂದೂಡಲು 250 ವಾರ್ಡ್ ಮಾಡುತ್ತೇವೆಂದು ಮಸೂದೆ ಮಂಡಿಸಿರುವುದು ಎಷ್ಟು ಸರಿ’ ಎಂದೂ ಅವರು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು