ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಓವಿಸಿ 18061: ಬೆಲ್ಲ ತಯಾರಿಕೆಗೆ ಅತ್ಯುತ್ತಮ ಈ ಕಬ್ಬು ತಳಿ

ಹೆಚ್ಚು ಸಕ್ಕರೆ ಅಂಶವುಳ್ಳ ‘ಸಿಓವಿಸಿ 18061’: ಕೃಷಿ ಸಂಶೋಧನಾ ಕೇಂದ್ರದಿಂದ ಅಭಿವೃದ್ಧಿ
Last Updated 12 ನವೆಂಬರ್ 2021, 21:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಲ್ಲ ತಯಾರಿಕೆಗೆ ಅತ್ಯುತ್ತಮವಾಗಿರುವ ಹೊಸ ಕಬ್ಬು ತಳಿ ಕೃಷಿ ಮೇಳದಲ್ಲಿ ರೈತರ ಆಕರ್ಷಣೆಯ ಕೇಂದ್ರವಾಗಿದೆ.

ಹೊಸದಾಗಿ ಅಭಿವೃದ್ಧಿಪಡಿಸಿರುವ ‘ಸಿಓವಿಸಿ 18061’ ಕಬ್ಬು ತಳಿ ಈ ಬಾರಿಯ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕೃಷಿ ಮೇಳದಲ್ಲಿ ರೈತರನ್ನು ತನ್ನತ್ತ ಸೆಳೆಯುತ್ತಿದೆ. ಕೃಷಿ ವಿಶ್ವವಿದ್ಯಾಲಯದ ಮಂಡ್ಯದ ವಿ.ಸಿ. ಫಾರ್ಮ್‌ನ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಈ ತಳಿಯನ್ನು ಅಭಿವೃದ್ಧಿ ಪಡಿಸಲಾಗಿದೆ.

ಈ ಕಬ್ಬು ತಳಿಯಿಂದ ಎಕರೆಗೆ 70ರಿಂದ 80 ಟನ್‌ ಇಳುವರಿ ದೊರೆಯುತ್ತದೆ. ಹೆಚ್ಚು ಸಕ್ಕರೆ ಅಂಶ ಇರುವುದರಿಂದ ಬೆಲ್ಲ ತಯಾರಿಕೆಗೆ ಹೆಚ್ಚು ಉಪಯುಕ್ತವಾಗಿದೆ. ಈ ತಳಿಯಲ್ಲಿ ನೀರಿನ ಅಂಶ ಕಡಿಮೆ ಇರುವುದರಿಂದ ‘ಸುಕ್ರೋಸ್‌’ ಹೆಚ್ಚಾಗಿದ್ದು, ಶೇಕಡ 19ರಿಂದ 20ರಷ್ಟಿದೆ.

‘ಡಿಸೆಂಬರ್‌ ನಂತರ ಕಬ್ಬು ಬೆಳೆ ನಾಟಿ ಮಾಡುವುದು ಸಾಮಾನ್ಯ. ಆದರೆ, ಈ ತಳಿಯನ್ನು ಎಲ್ಲ ಕಾಲದಲ್ಲಿಯೂ ನಾಟಿ ಮಾಡಬಹುದಾಗಿದೆ. ಆದರೂ, ಜನವರಿ ಮತ್ತು ಫೆಬ್ರುವರಿ ಅವಧಿಯಲ್ಲಿ ನಾಟಿ ಮಾಡುವುದು ಉತ್ತಮ’ ಎಂದು ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಯೂಸುಫ್ ಅಬ್ಬಾಸ್‌ ತಿಳಿಸಿದ್ದಾರೆ.

‘ಎರಡು ಅಥವಾ ಮೂರು ಬಾರಿ ಉತ್ತಮ ‘ಕೂಳೆ’ ಬೆಳೆ ಸಹ ತೆಗೆಯಬಹುದು. ಸೂಲಂಗಿಯು ಶೇಕಡ 10ರಿಂದ 20ರಷ್ಟು ಮಾತ್ರ ಇದೆ. ಕಬ್ಬು ಬೆಳೆಯುವಾಗ ಸಾಲುಗಳಲ್ಲಿ ಅಂತರ ಕಾಪಾಡುವುದು ಸಹ ಮುಖ್ಯ. ಈ ತಳಿಯನ್ನು ಹಾಕುವಾಗ ಸಾಲುಗಳ ನಡುವೆ 5 ಅಡಿ ಅಂತರ ಕಾಪಾಡಬೇಕು.12ರಿಂದ 14 ತಿಂಗಳು ಅವಧಿಯಲ್ಲಿ ಇದು ಕಟಾವಿಗೆ ಬರುತ್ತದೆ’ ಎಂದು ಅವರು ವಿವರಿಸಿದ್ದಾರೆ.

‘2018ರಲ್ಲಿ ಕೊಯಮತ್ತೂರಿನ ಕಬ್ಬು ತಳಿ ಸಂಸ್ಥೆಯಲ್ಲಿ ಈ ತಳಿಯನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆ ಆರಂಭ
ವಾಯಿತು. ಈ ಸಂಸ್ಥೆಯಲ್ಲಿ ಭಾರತ ಮತ್ತು ಬ್ರೆಜಿಲ್‌ ಸೇರಿದಂತೆ ವಿವಿಧ ದೇಶಗಳಲ್ಲಿನ ತಳಿಗಳನ್ನು ಸಂಗ್ರಹಿಸಿ ಸಂಶೋಧನೆ ಕೈಗೊಳ್ಳಲಾಗುತ್ತಿದೆ. ಸೂಲಂಗಿ ಮತ್ತು ಸಕ್ಕರೆ ಅಂಶಗಳನ್ನು ಪ್ರಮುಖವಾಗಿ ಪರಿಗಣಿಸಿ ಈ ತಳಿಯನ್ನು ಅಭಿವೃದ್ಧಿಪಡಿಸಲಾಯಿತು. ಸತತ ಮೂರು ವರ್ಷಗಳ ಕಾಲ ಸಂಶೋಧನೆ ಕೈಗೊಂಡ ಬಳಿಕ ಬಿಡುಗಡೆ ಮಾಡಲಾಗಿದೆ. ಈ ತಳಿ 12ರಿಂದ 13 ಅಡಿಯಷ್ಟು ಎತ್ತರ ಬೆಳೆಯುತ್ತದೆ’ ಎಂದೂ ಹೇಳಿದ್ದಾರೆ.

ಒಂದು ಸಾವಿರ ಲೀಟರ್‌ ಕಬ್ಬಿನ ಹಾಲಿಗೆ ಒಂದು ಕ್ವಿಂಟಲ್‌ ಬೆಲ್ಲ ದೊರೆಯುತ್ತದೆ. ಅಂದರೆ ಶೇಕಡ 10.8 ಬೆಲ್ಲವೂ ಇದರಿಂದ ದೊರೆಯುತ್ತದೆ. ಈ ತಳಿಯನ್ನು ಸಕ್ಕರೆ ಕಾರ್ಖಾನೆಗಳಿಗೆ ಪೂರೈಸಲಾಗುತ್ತಿದೆ. ಕಾರ್ಖಾನೆಗಳ ಮೂಲಕ ರೈತರು ಪಡೆಯಬಹುದಾಗಿದೆ. ಬಿತ್ತನೆ ಕಬ್ಬಿಗೆ ಪ್ರತಿ ಟನ್‌ಗೆ ₹2700 ರಿಂದ ₹2900 ದರ ನಿಗದಿ ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT