ಬುಧವಾರ, ಆಗಸ್ಟ್ 4, 2021
21 °C
ಮತ್ತೆ 16 ಮಂದಿ ಸಾವು l ಹೊಸ ಪ್ರಕರಣಗಳಲ್ಲಿ ಪತ್ತೆಯಾಗದ ಮೂಲ

ಒಂದೇ ದಿನ 1,235 ಮಂದಿಗೆ ಸೋಂಕು, ನಗರದಲ್ಲಿ 10 ಸಾವಿರದ ಗಡಿಯತ್ತ ಕೋವಿಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ನಗರದಲ್ಲಿ ಭಾನುವಾರ ಒಂದೇ ದಿನ 1,235 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಸೋಂಕಿತರ ಸಂಖ್ಯೆ ಹತ್ತು ಸಾವಿರದ ಗಡಿ (9,580) ಸಮೀಪಿಸಿದೆ. 

ಮತ್ತೆ 16 ಮಂದಿ ಮೃತಪಟ್ಟಿರುವುದು ದೃಢಪಟ್ಟಿದ್ದು, ಕೋವಿಡ್‌ನಿಂದ ಸಾವಿಗೀಡಾದವರ ಸಂಖ್ಯೆ 145ಕ್ಕೆ ಏರಿದೆ. 48 ಗಂಟೆಗಳಲ್ಲೇ 2,407 ಮಂದಿ ಕೊರೊನಾ ಸೋಂಕಿತರಾಗಿದ್ದಾರೆ. ಇದೇ ಅವಧಿಯಲ್ಲಿ 40 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ನಗರದಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆ 8,167ಕ್ಕೆ ತಲುಪಿದೆ. ಇದರಿಂದಾಗಿ ವಿಕ್ಟೋರಿಯಾ, ಬೌರಿಂಗ್, ರಾಜೀವ್‌ ಗಾಂಧಿ ಸೇರಿದಂತೆ ನಗರದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಭರ್ತಿಯಾಗಿವೆ. ಸೋಂಕು ಲಕ್ಷಣಗಳು ಬಹಿರಂಗವಾಗಿ ಗೋಚರಿಸದ ರೋಗಿಗಳನ್ನು ಕೋವಿಡ್‌ ಆರೈಕೆ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಚಿಕಿತ್ಸೆ ಪಡೆದುಕೊಳ್ಳುತ್ತಿರುವ ರೋಗಿಗಳಲ್ಲಿ 132 ರೋಗಿಗಳ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಭಾನುವಾರ ಒಂದೇ ದಿನ 302 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇದರಿಂದಾಗಿ ಗುಣಮುಖರಾದವರ ಸಂಖ್ಯೆ 1,267ಕ್ಕೆ ತಲುಪಿದೆ. 

ಬಿಬಿಎಂಪಿಯ ಆರೋಗ್ಯ ವಿಭಾಗದಡಿ ಕಾರ್ಯನಿರ್ವಹಿಸುತ್ತಿದ್ದ 18 ಪ್ರಯೋಗಾಲಯ ತಂತ್ರಜ್ಞರು ಕೋವಿಡ್ ಪೀಡಿತರಾಗಿದ್ದಾರೆ. ಇವರು ನಗರದ ವಿವಿಧೆಡೆ ಕಾರ್ಯನಿರ್ವಹಿಸುತ್ತಿದ್ದು, ಸೋಂಕು ಶಂಕಿತರ ಗಂಟಲ ದ್ರವದ ಮಾದರಿ ಸಂಗ್ರಹಿಸುತ್ತಿದ್ದರು. 

ಪತ್ತೆಯಾಗದ ಮೂಲ: ನಗರದಲ್ಲಿ ಹೊಸದಾಗಿ ವರದಿಯಾಗುತ್ತಿರುವ ಪ್ರಕರಣಗಳಲ್ಲಿ ರೋಗಿಗಳ ಸಂಪರ್ಕದ ಮೂಲವೇ ಪತ್ತೆಯಾಗುತ್ತಿಲ್ಲ. ಈವರೆಗೆ ವರದಿಯಾದ ಪ್ರಕರಣಗಳಲ್ಲಿ 7,988 ಮಂದಿಗೆ ಹೇಗೆ ಸೋಂಕು ತಗುಲಿತು ಎನ್ನುವುದೇ ತಿಳಿದಿಲ್ಲ. ಇದರಿಂದಾಗಿ ಅವರೊಂದಿಗೆ ಯಾರೆಲ್ಲ ಸಂಪರ್ಕ ಹೊಂದಿದ್ದರು ಎಂದು ಗುರುತಿಸಿ, ಕ್ವಾರಂಟೈನ್‌ ಹಾಗೂ ಕೋವಿಡ್ ಪರೀಕ್ಷೆಗೆ ಒಳಪಡಿಸುವ ಪ್ರಕ್ರಿಯೆಯು ನಡೆಯುತ್ತಿಲ್ಲ. 

‘ಆದ್ಯತಾ ಚಿಕಿತ್ಸೆ ಜಾರಿಯಾಗಲಿ’

ಆರೋಗ್ಯ ಸ್ಥಿತಿ ಗಂಭೀರವಾಗಿರುವವರಿಗೆ ಆಸ್ಪತ್ರೆಯಲ್ಲಿ ಹಾಗೂ ಸುಧಾರಿತ ಸ್ಥಿತಿಯಲ್ಲಿ ಇರುವವರಿಗೆ ಮನೆ ಅಥವಾ ಕೋವಿಡ್ ಸಮುದಾಯ ಕೇಂದ್ರಗಳಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ‘ನಾವು ಭಾರತೀಯರು’ ಸಂಘಟನೆ ಸರ್ಕಾರಕ್ಕೆ ಒತ್ತಾಯಿಸಿದೆ.

ಶಿಶು ಸಾವು: ಪಾಲಕರ ನೋವು

ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 17 ದಿನಗಳ ಶಿಶು ಮೃತಪಟ್ಟಿದ್ದು, ಪಾಲಕರೂ ಕೋವಿಡ್‌ ಪೀಡಿತರಾದ ಕಾರಣ ಮಗುವಿನ ಅಂತ್ಯಸಂಸ್ಕಾರದಲ್ಲಿ ಕೂಡ ಪಾಲ್ಗೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. 

ಬೆಳ್ಳಂದೂರಿನ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ ಶಿಶುವಿನ ತಂದೆ–ತಾಯಿ ಕೊರೊನಾ ಸೋಂಕಿತರಾಗಿದ್ದರು. ಇದರಿಂದ ಶಿಶುವಿಗೂ ಸೋಂಕು ತಗುಲಿತ್ತು. ಅವಧಿಪೂರ್ವ ಜನಿಸಿದ ಶಿಶು ಕಡಿಮೆ ತೂಕವಿತ್ತು. ಸದ್ಯ ಶಿಶುವಿನ ತಂದೆ–ತಾಯಿ ಆಸ್ಪತ್ರೆಯಲ್ಲಿಯೇ ಇದ್ದಾರೆ. ಇದರಿಂದಾಗಿ ಬಿಬಿಎಂಪಿ ಚಿತಾಗಾರದ ಸಿಬ್ಬಂದಿಯೇ ದಹನ ಮಾಡಿದ್ದಾರೆ. 

‘ಪ್ರತಿನಿತ್ಯ ಕೋವಿಡ್‌ನಿಂದ ಮೃತರಾದ ಐವರನ್ನು ಸುಡುತ್ತೇವೆ. ಎಂದಿಗೂ ಇಷ್ಟು ದುಃಖ ಆಗಿರಲಿಲ್ಲ. ಆಂಬುಲೆನ್ಸ್ ಬಂದಾಗ ನಾವೇ ಶಿಶು ಎತ್ತಿಕೊಂಡು ಸಂಸ್ಕಾರ ನೆರವೇರಿಸಿದೆವು‘ ಎಂದು ಚಿತಾಗಾರ ನಿರ್ವಹಣೆ ಮಾಡುತ್ತಿದ್ದ ರಾಜು ತಿಳಿಸಿದರು.

ಹೊಯ್ಸಳ ವಾಹನ ಸಿಬ್ಬಂದಿಗೆ ಕೊರೊನಾ

ಮಲ್ಲೇಶ್ವರ ಠಾಣೆಗೆ ಸೇರಿದ್ದ ಹೊಯ್ಸಳ ವಾಹನದ ಇಬ್ಬರು ಸಿಬ್ಬಂದಿಗೆ ಕೊರೊನಾ ದೃಢಪಟ್ಟಿದೆ. ಮುಂಜಾಗ್ರತೆಯಾಗಿ  ಠಾಣೆಯನ್ನು ತಾತ್ಕಾಲಿಕವಾಗಿ ಸೀಲ್‌ಡೌನ್ ಮಾಡಲಾಗಿದೆ. ಮಹಿಳಾ ಕಾನ್‌ಸ್ಟೆಬಲ್ ಸೇರಿ ಇಬ್ಬರಿಗೆ ಸೋಂಕು ಇದೆ. ಅವರ ಜತೆ ಸಂಪರ್ಕ ಹೊಂದಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ.

ಗರ್ಭಿಣಿಗೆ ಕೊರೊನಾ ಸೋಂಕು 

ಹುರುಳಿಚಿಕ್ಕನಹಳ್ಳಿ ಗ್ರಾಮದ 36 ವರ್ಷದ ಗರ್ಭಿಣಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 
ಐವರಕಂಡಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆರಿಗೆಗೆ ಅವರು ತೆರಳಿದ್ದರು. ಪ್ರಾಥಮಿಕ ತಪಾಸಣೆಯಲ್ಲಿ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಐವರಕಂಡಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ರತ್ನಪ್ರಭಾ ಅವರು ತಿಳಿಸಿದರು.

‘ಇನ್ನೊಂದು ಪ್ರಕರಣದಲ್ಲಿ ಇದೇ ಗ್ರಾಮದ 18 ವರ್ಷದ ಯುವಕನೊಬ್ಬನಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಉಸಿರಾಟದ ತೊಂದರೆಯಿಂದ ಯುವಕ ಕೆ.ಸಿ.ಜನರಲ್ ಆಸ್ಪತ್ರೆಗೆ ತೆರಳಿದಾಗ ಸೋಂಕು ಇರುವುದು ಪತ್ತೆಯಾಗಿದೆ’ ಎಂದು ಹೇಳಿದರು. 

ಕಾನ್‌ಸ್ಟೆಬಲ್‌ಗೆ ಸೋಂಕು: ಸಾಸುವೆಘಟ್ಟ ಗ್ರಾಮದ ನಿವಾಸಿ, ಕುಮಾರಕೃಪಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್‌ಸ್ಟೆಬಲ್‌ಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತನ ಮನೆಯ ಸುತ್ತಲಿನ ನೂರು ಮೀಟರ್ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿದೆ.

ಲಾಕ್‌ಡೌನ್; ರಾಜಧಾನಿ ಬಹುತೇಕ ಸ್ತಬ್ಧ

ಕೊರೊನಾ ವೈರಾಣು ಹರಡುವಿಕೆ ತಡೆಯಲು ಸರ್ಕಾರ ಜಾರಿ ಮಾಡಿದ್ದ ಲಾಕ್‌ಡೌನ್‌ನಿಂದಾಗಿ ಭಾನುವಾರ ನಗರ ಬಹುತೇಕ ಸ್ತಬ್ಧಗೊಂಡಿತ್ತು. ಅಗತ್ಯ ಹಾಗೂ ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣ ಬಂದ್ ಆಗಿದ್ದವು.

ಉದ್ಯಾನಗಳು, ಸಾರ್ವಜನಿಕ ಸ್ಥಳಗಳು, ಇತರೆ ಸೇವೆಗಳನ್ನು ಬಂದ್  ಮಾಡಲಾಗಿತ್ತು. ಕ್ಯಾಬ್‌, ಟ್ಯಾಕ್ಸಿ ಹಾಗೂ ಬಸ್‌ಗಳ ಓಡಾಟ ನಿರ್ಬಂಧಿಸಲಾಗಿತ್ತು. ಮೆಜೆಸ್ಟಿಕ್‌ನ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಬಸ್‌ಗಳನ್ನು ಸಾಲುಗಟ್ಟಿ ನಿಲ್ಲಿಸಲಾಗಿತ್ತು.
ಸಾರ್ವಜನಿಕ ಸಾರಿಗೆ ಸೇವೆ ಸ್ಥಗಿತವಾಗಿತ್ತು. ಆದರೆ, ಬೆಳಿಗ್ಗೆ ಕೆಲ ಸಾರ್ವಜನಿಕರು ನಿಲ್ದಾಣಕ್ಕೆ ಬಂದಿದ್ದರು. ಕೆಲ ಆಟೊಗಳು ಕಂಡುಬಂದವು. ಸಾರಿಗೆ ಸೌಲಭ್ಯ ಇಲ್ಲದ್ದನ್ನೇ ಬಂಡವಾಳ ಮಾಡಿಕೊಂಡ ಆಟೊ ಚಾಲಕರು, ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿದರು.

ಉಪ್ಪಾರಪೇಟೆ ಠಾಣೆ ಸೀಲ್‌ಡೌನ್‌ ಆಗಿದ್ದು, ಇದರಿಂದಾಗಿ ಮೆಜೆಸ್ಟಿಕ್‌ನಲ್ಲಿ ಭದ್ರತೆಗೆ ನಿಯೋಜನೆಗೊಂಡ ಪೊಲೀಸರ ಸಂಖ್ಯೆ ಕಡಿಮೆ ಇತ್ತು. ರಸ್ತೆಗಳಲ್ಲಿ ತಾತ್ಕಾಲಿಕ ಬ್ಯಾರಿಕೇಡ್‌ ನಿಲ್ಲಿಸಲಾಗಿತ್ತು. ಕೆಲ ಚಾಲಕರು ಬ್ಯಾರಿಕೇಡ್‌ ತೆಗೆದು ಸಂಚರಿಸಿದರು.

ಮೈಸೂರು ರಸ್ತೆಯ ಸ್ಯಾಟ್‌ಲೈಟ್ ಬಸ್ ನಿಲ್ದಾಣ, ಕೆಂಗೇರಿ ನಿಲ್ದಾಣ ಹಾಗೂ ತುಮಕೂರು ರಸ್ತೆಯ ಪೀಣ್ಯ ನಿಲ್ದಾಣದಲ್ಲೂ ಬಸ್‌ಗಳ ಓಡಾಟ ಬಂದ್ ಆಗಿತ್ತು. ಎಲ್ಲ ಮೇಲ್ಸೇತುವೆಗಳಲ್ಲಿ ಬ್ಯಾರಿಕೇಡ್ ನಿಲ್ಲಿಸಿ ರಸ್ತೆಯನ್ನು ಮುಚ್ಚಲಾಗಿತ್ತು. 

ರಸ್ತೆಯಲ್ಲೇ ವಾಯುವಿಹಾರ: ಉದ್ಯಾನಗಳನ್ನು ಬಂದ್ ಮಾಡಲಾಗಿತ್ತು. ವಾಯುವಿಹಾರಕ್ಕಾಗಿ ಬಂದಿದ್ದವರು ಬಂದ್ ಆಗಿದ್ದನ್ನು ನೋಡಿ ರಸ್ತೆಯಲ್ಲಿ ವಾಯುವಿಹಾರ ಮಾಡಿದರು.

ಬಹುಪಾಲು ಹೋಟೆಲ್‌ಗಳು ತೆರೆದಿದ್ದು, ಪಾರ್ಸೆಲ್‌ಗಷ್ಟೇ ಅವಕಾಶವಿತ್ತು. ಗ್ರಾಹಕರ ಸಂಖ್ಯೆ ಕಡಿಮೆ ಇತ್ತು.  ಕೆ.ಆರ್.ಮಾರುಕಟ್ಟೆ, ಕಲಾಸಿಪಾಳ್ಯ ಮಾರುಕಟ್ಟೆ ಸಂಪೂರ್ಣ ಬಂದ್ ಆಗಿತ್ತು. ಇಲ್ಲಿ, ಸೋಂಕಿತರು ಹೆಚ್ಚು ಕಂಡುಬಂದಿದ್ದರಿಂದ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಪ್ರತಿ ವಾಹನವನ್ನು ಪರಿಶೀಲಿಸಲಾಯಿತು. ನಿಯಮ ಉಲ್ಲಂಘಿಸಿದವರ ವಾಹನಗಳನ್ನು ಜಪ್ತಿ ಮಾಡಲಾಯಿತು.
ಬಸವನಗುಡಿ, ರಾಜಾಜಿನಗರ, ಬಸವೇಶ್ವರ ನಗರ, ವಿಜಯನಗರದಲ್ಲಿ ಕೆಲ ದಿನಸಿ ಅಂಗಡಿಗಳ ಮಾಲೀಕರು ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚಿದ್ದರು.

ಬ್ಯಾರಿಕೇಡ್‌ ಕಾವಲು

ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಆದರೆ, ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರ ಸಂಖ್ಯೆ ಕಡಿಮೆ ಇತ್ತು. 

‘ಕೊರೊನಾ ಯೋಧರಾದ ಪೊಲೀಸರಲ್ಲಿ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಹೀಗಾಗಿ, ಅಂತರ ಕಾಯ್ದುಕೊಂಡು ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು