ಮಂಗಳವಾರ, ಜನವರಿ 18, 2022
15 °C
ಚಿಕಿತ್ಸೆ ಪಟ್ಟಿಯಿಂದ ಕೇಂದ್ರ ಆರೋಗ್ಯ ಸಚಿವಾಲಯ ಕೈಬಿಟ್ಟಿದ್ದರೂ ವಿತರಣೆ

ಮನೆಯಲ್ಲಿರುವ ಸೋಂಕಿತರಿಗೆ ಹಳೆಯ ಕೋವಿಡ್‌ ಕಿಟ್‌ಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇಶದಲ್ಲಿ ಕೋವಿಡ್‌–19ಗೆ ಚಿಕಿತ್ಸೆ ನೀಡುವ ಔಷಧಗಳ ಪಟ್ಟಿಯಿಂದ ‘ಐವರ್‌ಮೆಕ್ಟಿನ್‌’ ಮತ್ತು ‘ಡಾಕ್ಸಿಸೈಕ್ಲಿನ್‌’ ಮಾತ್ರೆಗಳನ್ನು ಕೈಬಿಡಲಾಗಿದೆ. ಆದರೆ, ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿರುವ ಸೋಂಕು ಲಕ್ಷಣಗಳಿರುವ ರೋಗಿಗಳಿಗೆ ಈ ಔಷಧಗಳನ್ನು ಬಿಬಿಎಂಪಿ ಒದಗಿಸುತ್ತಿದೆ.

ಡಿಸೆಂಬರ್‌ 25ರಂದು ಬೊಮ್ಮನಹಳ್ಳಿ ವಲಯದ 43 ವರ್ಷದ ವ್ಯಕ್ತಿಯೊಬ್ಬರಲ್ಲಿ ಸೋಂಕು ಲಕ್ಷಣಗಳು ಕಾಣಿಸಿಕೊಂಡಿದ್ದವು. ಇವರಿಗೆ ಮನೆಯಲ್ಲಿ ಪ್ರತ್ಯೇಕ ವಾಸದಲ್ಲಿರುವರ ಕಿಟ್‌ (ಎಚ್‌ಐ) ಅನ್ನು ಬಿಬಿಎಂಪಿ ವತಿಯಿಂದ ನೀಡಲಾಗಿತ್ತು. ಈ ಕಿಟ್‌ ಸ್ಯಾನಿಟೈಸರ್‌ (100 ಮಿ.ಲೀ.), ಮಾಸ್ಕ್‌, ವಿಟಮಿನ್‌ ಸಿ (500 ಮಿ.ಗ್ರಾಂ), ಜಿಂಕ್‌ ಮಾತ್ರೆಗಳು (50 ಮಿ.ಗ್ರಾಂ), ಆರು ದಿನಗಳಿಗಾಗಿ ಪ್ಯಾರಾಸಿಟಮಾಲ್‌ ಪ್ಲಸ್ ಮತ್ತು ಮೂರು ದಿನಗಳಿಗಾಗಿ ‘ಐವರ್‌ಮೆಕ್ಟಿನ್‌’ ಹಾಗೂ ಐದು ದಿನಗಳಿಗಾಗಿ ‘ಡಾಕ್ಸಿಸೈಕ್ಲಿನ್‌’ ಮಾತ್ರೆಗಳನ್ನು ಒಳಗೊಂಡಿತ್ತು. ಖಾಸಗಿ ವೈದ್ಯರೊಬ್ಬರ ಸಲಹೆಯಂತೆ ಈ ಎರಡು ಮಾತ್ರೆಗಳನ್ನು ಅವರು ಸೇವಿಸಿಲ್ಲ.

‘ಎರಡನೇ ಅಲೆಯ ಬಳಿಕ ಉಳಿದ ಕಿಟ್‌ ಅನ್ನು ನೀಡಲಾಗಿದೆ ಎನ್ನುವುದು ನನ್ನ ಅಭಿಪ್ರಾಯ’ ಎಂದು ಅವರು ತಿಳಿಸಿದ್ದಾರೆ. ನಗರದ ವಿವಿಧೆಡೆ ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿರುವ ಹಲವು ಸೋಂಕಿತರು ಸಹ ಹಳೆಯ ಕಿಟ್‌ಗಳನ್ನು ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಸೋಮವಾರವೂ ಹಳೆಯ ಕಿಟ್‌ಗಳನ್ನು ವಿತರಿಸಲಾಗಿದೆ.

ಎರಡನೇ ಅಲೆಯ ಬಳಿಕ ಹೆಚ್ಚುವರಿಯಾಗಿ ಉಳಿದಿರುವ ಹಳೆಯ ಕಿಟ್‌ಗಳನ್ನು ವಿಲೇವಾರಿ ಮಾಡುವುದು ಬಿಬಿಎಂಪಿ ಅಧಿಕಾರಿಗಳ ಉದ್ದೇಶವಾಗಿದೆ ಎಂದು ಕೆಲವರು ದೂರಿದ್ದಾರೆ.

‘ಮನೆಯಲ್ಲಿ ಪ್ರತ್ಯೇಕವಾಗಿ ವಾಸವಾಗಿರುವ ಸೋಂಕು ಲಕ್ಷಣಗಳಿರುವ ರೋಗಿಗಳಿಗೆ ನೀಡುವ ಕಿಟ್‌ನಲ್ಲಿ ಪ್ಯಾರಾಸಿಟಮಾಲ್‌, ವಿಟಮಿನ್‌ ಮತ್ತು ಜಿಂಕ್‌ ಮಾತ್ರೆಗಳಿರಬೇಕು. ಕೇಂದ್ರ ಆರೋಗ್ಯ ಸಚಿವಾಲಯ ‘ಐವರ್‌ಮೆಕ್ಟಿನ್‌’ ಮತ್ತು ‘ಡಾಕ್ಸಿಸೈಕ್ಲಿನ್‌’ ಮಾತ್ರೆಗಳನ್ನು ಜೂನ್‌ 7ರಿಂದ ಚಿಕಿತ್ಸಾ ಪಟ್ಟಿಯಿಂದ ಕೈಬಿಟ್ಟಿದೆ’ ಎಂದು ಕ್ಲಿನಿಕಲ್‌ ಚಿಕಿತ್ಸೆ ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.

ಹಳೆಯ ಕಿಟ್‌ ವಿತರಿಸದಂತೆ ಸೂಚನೆ
‘ಈ ಸಮಸ್ಯೆ ಗಮನಕ್ಕೆ ಬಂದಿದೆ. ಹಳೆಯ ಕಿಟ್‌ಗಳನ್ನು ನೀಡದಂತೆ ಎಲ್ಲ ವಲಯಗಳ ತಂಡಗಳಿಗೆ ಸೂಚಿಸಲಾಗಿದೆ’ ಎಂದು  ಬಿಬಿಎಂಪಿ ಮುಖ್ಯ ಆರೋಗ್ಯ ಆಧಿಕಾರಿ ಡಾ.ಎ.ಎಸ್‌. ಬಾಲಸುಂದರ್ ತಿಳಿಸಿದ್ದಾರೆ.

‘ಯಾವುದೇ ರೀತಿಯ ಕಿಟ್‌ಗಳನ್ನು ವಿತರಿಸದಂತೆ ತಜ್ಞರು ನಮಗೆ ಹೇಳುತ್ತಿದ್ದಾರೆ. ಆದರೂ, ಹೊಸ ಕಿಟ್‌ಗಳನ್ನು ನೀಡಲು ಉದ್ದೇಶಿಸಲಾಗಿದೆ. ಈ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ’ ಎಂದು ತಿಳಿಸಿದ್ದಾರೆ.

ಈ ಮಾತ್ರೆಗಳು ಅಪಾಯಕಾರಿಯೇ?
‘ಐವರ್‌ಮೆಕ್ಟಿನ್‌’ ಮತ್ತು ‘ಡಾಕ್ಸಿಸೈಕ್ಲಿನ್‌’ ಮಾತ್ರೆಗಳನ್ನು ಕೋವಿಡ್‌ ಮೊದಲ ಅಲೆಯಲ್ಲಿ ನೀಡಲಾಗಿತ್ತು. ಕೆಲವು ಅಂಶಗಳ ಆಧಾರದ ಮೇಲೆ ಈ ಮಾತ್ರೆಗಳನ್ನು ನೀಡಲಾಗುತ್ತಿತ್ತು. ಕಳೆದ ಒಂದೂವರೆ ವರ್ಷದ ದತ್ತಾಂಶವನ್ನು ವಿಶ್ಲೇಷಿಸಿದಾಗ ಕೋವಿಡ್‌–19 ವಿರುದ್ಧ ಈ ಮಾತ್ರೆಗಳು ಯಾವುದೇ ರೀತಿ ಪರಿಣಾಮ ಬೀರುತ್ತಿಲ್ಲ ಎಂದು ತಜ್ಞ ವೈದ್ಯರಾದ ಡಾ. ರವೀಂದ್ರ ಮೆಹ್ತಾ ಅಭಿಪ್ರಾಯಪಟ್ಟಿದ್ದಾರೆ.

‘ಡಾಕ್ಸಿಸೈಕ್ಸಿನ್‌ನಿಂದ ತೀವ್ರ ರೀತಿಯ ಗ್ಯಾಸ್ಟ್ರಿಕ್ ಸಮಸ್ಯೆ ಮತ್ತು ವಾಂತಿಯಾಗಬಹುದು’ ಎಂದು ಸೋಂಕು ಕಾಯಿಲೆಗಳ ತಜ್ಞ ಡಾ. ಜೆ. ರಘು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು