ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿತೆ ಸಾವು: ಭಾರತಿ ಆಸ್ಪತ್ರೆ ವಿರುದ್ಧ ಎಫ್ಐಆರ್

Last Updated 25 ಮೇ 2021, 21:16 IST
ಅಕ್ಷರ ಗಾತ್ರ

ಬೆಂಗಳೂರು: ರೆಮ್‌ಡಿಸಿವಿರ್ ಚುಚ್ಚುಮದ್ದಿಗೆ ₹ 15 ಸಾವಿರ ಕೇಳಿದ್ದ ಹಾಗೂ ಸೋಂಕಿತ‌ ಮಹಿಳೆಗೆ ಸೂಕ್ತ ಚಿಕಿತ್ಸೆ ನೀಡದ ಆರೋಪದಡಿ‌ ಪ್ರಶಾಂತ ನಗರದ ಭಾರತಿ ಆಸ್ಪತ್ರೆ ವಿರುದ್ಧ ಎಫ್ಐಆರ್ ದಾಖಲಾಗಿದೆ.

'ಬಿಬಿಎಂಪಿಯ ವಲಯದ ಆರೋಗ್ಯ ವೈದ್ಯಾಧಿಕಾರಿ ಡಾ. ರಾಜೇಂದ್ರ ನೀಡಿರುವ ದೂರು ಆಧರಿಸಿ ಆಸ್ಪತ್ರೆ ವಿರುದ್ಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಅವರೇ ಸಂಬಂಧಪಟ್ಟವರನ್ನು ವಿಚಾರಣೆ ನಡೆಸಲಿದ್ದಾರೆ' ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.

'ಕೊರೊನಾ ಸೋಂಕಿತ ಮಹಿಳೆಯೊಬ್ಬರನ್ನು ಚಿಕಿತ್ಸೆಗಾಗಿ ಭಾರತಿ ಆಸ್ಪತ್ರೆಗೆ ಮೇ 8ರಂದು ದಾಖಲಿಸಲಾಗಿತ್ತು. ಆರೋಗ್ಯ ಹದಗೆಟ್ಟಿರುವುದಾಗಿ ಹೇಳಿದ್ದ ವೈದ್ಯರು, ರೆಮ್‌ಡಿಸಿವಿರ್ ‌ಚುಚ್ಚುಮದ್ದು ನೀಡಲು ₹ 15 ಸಾವಿರ ಕೇಳಿದ್ದರು. ದುಬಾರಿ ಬೆಲೆ ಕೇಳಿದ್ದರಿಂದಾಗಿ ರೋಗಿಯ ಕಡೆಯವರು, ಔಷಧ ನಿಯಂತ್ರಕರಿಗೆ ವಿಷಯ ತಿಳಿಸಿದ್ದರು. ಅವರ ಮೂಲಕ ಚುಚ್ಚುಮದ್ದು ತರಿಸಿ ಮಹಿಳೆಗೆ ನೀಡಲೆಂದು ವೈದ್ಯರಿಗೆ ಕೊಟ್ಟಿದ್ದರು’

'ತಾವು ಹೇಳಿದ ದರ ಕೊಟ್ಟು ಚುಚ್ಚುಮದ್ದು ಖರೀದಿಸದೇ ಔಷಧ ನಿಯಂತ್ರಕರನ್ನು ಸಂಪರ್ಕಿಸಿದ್ದಕ್ಕಾಗಿ ಗರಂ ಆದ ಆಸ್ಪತ್ರೆ ವೈದ್ಯರು, ಚಿಕಿತ್ಸೆ ಮುಂದುವರಿಸಲು ಆಗುವುದಿಲ್ಲವೆಂದು ಹೇಳಿ ಮಹಿಳೆಯನ್ನು ಆಸ್ಪತ್ರೆಯಿಂದ ಹೊರಹಾಕಿದ್ದರು. ದಿಕ್ಕು ತೋಚದಂತಾದ ಸಂಬಂಧಿಕರು, ಮಹಿಳೆಯನ್ನು ಬೇರೊಂದು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ತೀರಿಕೊಂಡಿದ್ದಾರೆ’ ಎಂದೂ ಡಿಸಿಪಿ ಸಂಜೀವ್ ತಿಳಿಸಿದರು.

‘ಮಹಾಲಕ್ಷ್ಮಿಪುರ ನಿವಾಸಿಯಾದ 52 ವರ್ಷದ ಕೊರೊನಾ ಸೋಂಕಿತರಿಗೂ ಆಸ್ಪತ್ರೆಯವರು ಇದೇ ರೀತಿ ಮಾಡಿದ್ದಾರೆ. ಚಿಕಿತ್ಸೆಗಾಗಿ ದುಬಾರಿ ಶುಲ್ಕ ಪಡೆದು ಗುಣಮುಖರಾಗಿರುವುದಾಗಿ ಹೇಳಿ ಆಸ್ಪತ್ರೆಯಿಂದ ವ್ಯಕ್ತಿಯನ್ನು ಕಳುಹಿಸಲಾಗಿತ್ತು. ಅದಾದ ಕೆಲದಿನಗಳಲ್ಲಿ ವ್ಯಕ್ತಿಯ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿತ್ತು. ಪುನಃ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ನೀಡಲು ನಿರಾಕರಿಸಲಾಗಿತ್ತು. ಈ ಸಂಬಂಧ ಬಿಬಿಎಂಪಿಯ ಮಾಜಿ ಸದಸ್ಯ ಎಸ್. ಹರೀಶ್ ಅವರು ಆರೋಗ್ಯ ವೈದ್ಯಾಧಿಕಾರಿಗೆ ದೂರು ನೀಡಿದ್ದರು. ಅದರ ವಿವರವನ್ನೂ ದೂರಿನೊಂದಿಗೆ ತಿಳಿಸಲಾಗಿದೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT