ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಇಳಿಕೆ: ಅಂಗಾಂಗ ಕಸಿಗೆ ಆದ್ಯತೆ

ಈ ವರ್ಷ 32 ಮಂದಿ ಮಾತ್ರ ಅಂಗಾಂಗ ದಾನ
Last Updated 13 ಜುಲೈ 2021, 20:39 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ಪ್ರಕರಣಗಳ ಇಳಿಕೆ ಹಾಗೂ ಲಾಕ್‌ಡೌನ್ ಸಡಿಲಿಕೆಯಿಂದಾಗಿ ನಗರದ ಆಸ್ಪತ್ರೆಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಅಂಗಾಂಗ ಕಸಿ ನಡೆಸಲಾರಂಭಿಸಿವೆ. ಆದರೆ, ಈ ವರ್ಷ ರಾಜ್ಯ ಅಂಗಾಂಶ ಕಸಿ ಸಂಸ್ಥೆ (ಸೊಟೊ) ಅಡಿ 32 ಮಂದಿ ಮಾತ್ರ ಅಂಗಾಂಗ ದಾನ ಮಾಡಿದ್ದಾರೆ.

ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ 3 ಸಾವಿರಕ್ಕೂ ಅಧಿಕ ಮಂದಿ ಸೊಟೊ ಅಡಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅವರು ಅಂಗಾಂಗಕ್ಕಾಗಿ ಎದುರು ನೋಡುತ್ತಿದ್ದಾರೆ. ಆದರೆ, ಕೋವಿಡ್ ಕಾರಣದಿಂದ ಬಹುತೇಕ ಪ್ರಕರಣಗಳಲ್ಲಿ ಮೃತ ವ್ಯಕ್ತಿಯ ಕುಟುಂಬದ ಸದಸ್ಯರು ಅಂಗಾಂಗ ದಾನದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿಲ್ಲ. ಇದರಿಂದಾಗಿ ಅಂಗಾಂಗಗಳ ಸಂಗ್ರಹ ಹೆಚ್ಚಿನ ಸಂಖ್ಯೆಯಲ್ಲಿ ಈ ವರ್ಷ ಸಾಕಾರವಾಗಿಲ್ಲ. ಇನ್ನೊಂದೆಡೆ, ಆಸ್ಪತ್ರೆಗಳು ಕೂಡ ಕೋವಿಡ್ ಚಿಕಿತ್ಸೆಗೆ ಆದ್ಯತೆ ನೀಡಿದ್ದರಿಂದ ರೋಗಿಗಳಿಗೆ ಅಂಗಾಂಗ ಕಸಿಗಳನ್ನು ಮುಂದೂಡಲಾಗಿತ್ತು.

ಜೂನ್ ಬಳಿಕ 7 ಮಂದಿಯಿಂದ ಅಂಗಾಂಗ ಸಂಗ್ರಹಿಸಲಾಗಿದೆ. ಈ ವರ್ಷ 86 ಅಂಗಾಂಗಗಳು ಹಾಗೂ 46 ಕಣ್ಣಿನ ಕಾರ್ನಿಯಾವನ್ನು ಸಂಸ್ಥೆಯು ಅಗತ್ಯ ಇರುವವರಿಗೆ ಒದಗಿಸಿದೆ.

ನಗರದ ಫೋರ್ಟಿಸ್, ನಾರಾಯಣ ಹೆಲ್ತ್, ಎಂ.ಎಸ್. ರಾಮಯ್ಯ, ಮಣಿಪಾಲ್, ಕೊಲಂಬಿಯಾ ಏಷ್ಯಾ, ಅಪೋಲೊ, ಸಕ್ರಾ ವರ್ಲ್ಡ್ ಸೇರಿದಂತೆ ಪ್ರಮುಖ ಖಾಸಗಿ ಆಸ್ಪತ್ರೆಗಳು ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಅಂಗಾಂಗ ಕಸಿ ಸೇರಿದಂತೆ ತುರ್ತಾಗಿ ಅಗತ್ಯವಲ್ಲದ ಕೆಲ ಶಸ್ತ್ರಚಿಕಿತ್ಸೆಗಳನ್ನು ಸ್ಥಗಿತ ಮಾಡಿದ್ದವು. ಈಗ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಕೆ ಹಾಗೂ ಸೋಂಕಿತರಿಗೆ ಹಾಸಿಗೆಗಳ ಮೀಸಲು ನಿರ್ಬಂಧವನ್ನು ಸಡಿಲಿಸಿದ್ದರಿಂದ ಕೋವಿಡೇತರ ಚಿಕಿತ್ಸೆಗಳು ಹಾಗೂ ಶಸ್ತ್ರಚಿಕಿತ್ಸೆಗಳಿಗೆ ಆದ್ಯತೆ ನೀಡಲಾರಂಭಿಸಿವೆ.

ಜಾಗೃತಿ ಕೊರತೆ: ‘ಮಿದುಳು ನಿಷ್ಕ್ರಿಯಗೊಂಡ ಯಾವುದೇ ವ್ಯಕ್ತಿಯು ಅಂಗಾಂಗ ದಾನ ಮಾಡಬಹುದಾಗಿದ್ದು, ಅದು ಕಾನೂನುಬದ್ಧ. ಒಬ್ಬ ದಾನಿಯು ಹೃದಯ, ಮೂತ್ರಪಿಂಡ, ಯಕೃತ್ತು, ಮೇದೋಜೀರಕ ಗ್ರಂಥಿ, ಸಣ್ಣ ಕರುಳು, ಶ್ವಾಸಕೋಶ ದಾನ ಮಾಡಬಹುದು. ಚರ್ಮ, ಮೂಳೆಗಳು, ಅಸ್ಥಿ ಮಜ್ಜೆ, ಹೃದಯದ ಕವಾಟ, ನೇತ್ರದ ಕಾರ್ನಿಯಾ ಸೇರಿದಂತೆ ವಿವಿಧ ಅಂಗಗಳನ್ನು ದಾನ ಮಾಡುವ ಮೂಲಕ ಹಲವು ಜೀವಗಳಿಗೆ ನೆರವಾಗಬಹುದು’ ಎಂದು ಸೊಟೊದ ಅಧಿಕಾರಿಯೊಬ್ಬರು ತಿಳಿಸಿದರು.

‘ಕೋವಿಡ್‌ನಿಂದಾಗಿ ಅಂಗಾಂಗ ದಾನ ಪ್ರಕ್ರಿಯೆಗೆ ಸಮಸ್ಯೆಯಾಗಿತ್ತು. ಈಗ ಕೋವಿಡ್ ಪ್ರಕರಣಗಳು ಇಳಿಕೆಯಾಗಿದ್ದರಿಂದ ಆಸ್ಪತ್ರೆಗಳಲ್ಲಿ ಕೋವಿಡೇತರ ಕಾಯಿಲೆಗಳಿಗೆ ಶಸ್ತ್ರಚಿಕಿತ್ಸೆ ನಡೆಯುತ್ತಿವೆ. ಹೀಗಾಗಿ, ಮುಂದಿನ ದಿನಗಳಲ್ಲಿ ಅಂಗಾಂಗ ದಾನ ಹೆಚ್ಚುವ ನಿರೀಕ್ಷೆಯಲ್ಲಿದ್ದೇವೆ. ಜನರಲ್ಲಿ ಅಂಗಾಂಗ ದಾನದ ಬಗ್ಗೆ ಜಾಗೃತಿ ಕೊರತೆಯಿದೆ’ ಎಂದು ವಿವರಿಸಿದರು.

ಅಂಗಾಂಗ ದಾನ: ಸಂಚಾರಿ ವಿಜಯ್ ಪ್ರೇರಣೆ

ಅಂಗಾಂಗ ದಾನಕ್ಕೆ ಸಂಬಂಧಿಸಿದಂತೆ ಈವರೆಗೆ ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಕಳೆದ ತಿಂಗಳು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ನಟ ಸಂಚಾರಿ ವಿಜಯ್ ಅವರ ಅಂಗಾಂಗಗಳನ್ನು ಕುಟುಂಬದ ಸದಸ್ಯರು ದಾನ ಮಾಡಿದ್ದರು. ಇದರಿಂದ ಹಲವರು ಪ್ರೇರಣೆ ‍ಪಡೆದು, ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ ಎಂದು ಸೊಟೊದ ಅಧಿಕಾರಿಗಳು ತಿಳಿಸಿದರು.

‘ಕೋವಿಡ್ ಹಾಗೂ ಲಾಕ್‌ಡೌನ್‌ ಕಾರಣ ಕೆಲ ತಿಂಗಳಿನಿಂದ ಅಂಗಾಂಗ ದಾನಕ್ಕೆ ಸಂಬಂಧಿಸಿದಂತೆ ಹೆಸರು ನೋಂದಣಿ ಶಿಬಿರ ನಡೆಸಲು ಸಾಧ್ಯವಾಗಿಲ್ಲ. ಜೂನ್ ತಿಂಗಳ ಬಳಿಕ 230 ಮಂದಿ ಆನ್‌ಲೈನ್ ಮೂಲಕ ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸುವವರ ಸಂಖ್ಯೆ ಕೆಲ ದಿನಗಳಿಂದ ಹೆಚ್ಚಳವಾಗುತ್ತಿದೆ. ನಾವು ಕೂಡ ಜಾಗೃತಿ ಮೂಡಿಸುತ್ತಿದ್ದು, ಸಂಚಾರಿ ವಿಜಯ್ ಅವರ ಉದಾಹರಣೆ ನೀಡುತ್ತಿದ್ದೇವೆ’ ಎಂದು ಅಧಿಕಾರಿಗಳು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT