ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಹೊಸ ಲಕ್ಷಣಗಳು ಗೋಚರ

ಗ್ರಹಿಸುವ ಶಕ್ತಿ ಕಳೆದುಕೊಂಡವರಿಗೂ ಸೋಂಕು ದೃಢ
Last Updated 24 ಸೆಪ್ಟೆಂಬರ್ 2020, 23:05 IST
ಅಕ್ಷರ ಗಾತ್ರ

ಬೆಂಗಳೂರು: ಜ್ವರ, ಕೆಮ್ಮು, ಶೀತ, ಉಸಿರಾಟದ ಸಮಸ್ಯೆಯಂತಹಸಾಮಾನ್ಯ ಲಕ್ಷಣಗಳ ಜತೆಗೆ ವಾಸನೆ ಮತ್ತು ರುಚಿ ಗ್ರಹಿಸುವ ಶಕ್ತಿ ಕಳೆದುಕೊಂಡವರು ಕೂಡ ಕೊರೊನಾಸೋಂಕಿತರಾಗುತ್ತಿರುವುದು ಪರೀಕ್ಷೆಯಿಂದ ದೃಢಪಡುತ್ತಿದೆ.

ರಾಜ್ಯದಲ್ಲಿ ಸೊಂಕಿತರಾದ ಬಹುತೇಕರಲ್ಲಿ ಜ್ವರ, ಉಸಿರಾಟದ ಸಮಸ್ಯೆ, ಕೆಮ್ಮು, ಸೀನು ಸೇರಿದಂತೆ ವಿವಿಧ ಸಾಮಾನ್ಯ ಲಕ್ಷಣಗಳು ಕಾಣಿಸಿದ್ದವು.

‘ಪ್ರಕರಣಗಳ ಸಂಖ್ಯೆ ಹೆಚ್ಚಿದಂತೆ ಸೋಂಕಿನ ಪರಿಣಾಮವೂ ಅಧಿಕವಾಗಲಿದೆ. ವ್ಯಕ್ತಿ ದಿಢೀರ್ ವಾಸನೆ ಮತ್ತು ರುಚಿ ಗ್ರಹಿಸುವ ಶಕ್ತಿ ಕಳೆದುಕೊಳ್ಳುವುದು ಕೂಡ ಸೋಂಕಿನ ಲಕ್ಷಣ’ ಎಂದುಅಮೆರಿಕದ ನ್ಯಾಷನಲ್‌ ಪಬ್ಲಿಕ್‌ ಹೆಲ್ತ್‌ ಇನ್‌ಸ್ಟಿಟ್ಯೂಟ್‌ನ ರೋಗ ನಿಯಂತ್ರಣ ವಿಭಾಗವು ಈಗಾಗಲೇ ಖಚಿತಪಡಿಸಿದೆ. ಇದಕ್ಕೆ ಪೂರಕ ಎಂಬಂತೆರಾಜ್ಯದಲ್ಲಿ ಕೂಡ ಈ ತಿಂಗಳು ವರದಿಯಾದ ಕೆಲ ಪ್ರಕರಣಗಳಲ್ಲಿವಾಸನೆ ಮತ್ತು ರುಚಿ ಗ್ರಹಿಸುವ ಶಕ್ತಿ ಕಳೆದುಕೊಂಡ ವ್ಯಕ್ತಿಗಳಲ್ಲಿ ಸೋಂಕು ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಅದೇ ರೀತಿ, ತಲೆನೋವು, ಆಯಾಸ,ಅತಿಸಾರ ಸಮಸ್ಯೆ ಇರುವವರಲ್ಲಿ ಕೂಡ ಸೋಂಕು ಕಾಣಿಸಿಕೊಂಡಿದೆ.

ನಿರ್ಲಕ್ಷಿಸಿದರೆ ಅಪಾಯ: ‘ಯಾವುದೇ ಸಾಂಕ್ರಾಮಿಕ ರೋಗಕ್ಕೆ ವ್ಯಕ್ತಿ ಒಳಪಟ್ಟಾಗ ಜ್ವರ, ಶೀತದಂತಹ ಸಾಮಾನ್ಯ ಲಕ್ಷಣಗಳ ಜತೆಗೆ ಆಯಾಸ, ತಲೆನೋವು, ಬೆವರುವುದು, ಅತಿಸಾರದಂತಹ ಲಕ್ಷಣಗಳು ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಮೊದಲ ಕೋವಿಡ್ ಪ್ರಕರಣ ವರದಿಯಾದ ಬಳಿಕ ಹೆಚ್ಚಾಗಿ ಸಾಮಾನ್ಯ ಲಕ್ಷಣಗಳು ಕಾಣಿಸಿಕೊಂಡಿದ್ದವು.ವಾಸನೆ ಮತ್ತು ರುಚಿ ಗ್ರಹಿಸುವ ಶಕ್ತಿ ಕಳೆದುಕೊಂಡವರು ಕೂಡ ಇತ್ತೀಚಿನ ದಿನಗಳಲ್ಲಿ ಸೋಂಕಿತರಾಗುತ್ತಿದ್ದಾರೆ. ಆದ್ದರಿಂದ ಇದು ಹೊಸ ಲಕ್ಷಣ ಎಂದು ಗುರುತಿಸಿದ್ದೇವೆ’ ಎಂದುರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ.ಸಿ.ನಾಗರಾಜ್ ತಿಳಿಸಿದರು.

ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯ ವೈದ್ಯ ಅಧೀಕ್ಷಕಡಾ. ಅನ್ಸರ್ ಅಹಮದ್, ‘ಬೆನ್ನುನೋವಿನ ಸಮಸ್ಯೆ ಇರುವವರಿಗೆ, ವಾಸನೆ ಗ್ರಹಿಸುವ ಶಕ್ತಿ ಕಳೆದುಕೊಂಡವರಿಗೆ ಪರೀಕ್ಷೆ ಮಾಡಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದು ನಮಗೆ ಕೂಡ ಅಚ್ಚರಿ ಮೂಡಿಸಿದೆ. ಅತಿಯಾದ ಆಯಾಸ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿ ಸಹ ಸೋಂಕಿತನಾಗುವ ಸಾಧ್ಯತೆಯಿದೆ. ಹಾಗಾಗಿ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಶೇ 94ಕ್ಕಿಂತ ಕಡಿಮೆಯಾದಲ್ಲಿ ಕೋವಿಡ್‌ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ’ ಎಂದು ಸ್ಪಷ್ಟಪಡಿಸಿದರು.

ಕರ್ತವ್ಯಕ್ಕೆ ಗೈರಾದ ಆರೋಗ್ಯ ಸಿಬ್ಬಂದಿ
ಬೆಂಗಳೂರು:
ಸಮಾನ ವೇತನ, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿರುವಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿರುವಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು, ಕರ್ತವ್ಯಕ್ಕೆ ಗೈರಾಗುವ ಮೂಲಕ ಗುರುವಾರ ಮುಷ್ಕರ ಆರಂಭಿಸಿದ್ದಾರೆ.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ30 ಸಾವಿರಕ್ಕೂ ಅಧಿಕ ನೌಕರರು ಪ್ರತಿಭಟನೆ ನಡೆಸಿದರು.ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲ್ಲೂಕು ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು, ಕೋವಿಡ್‌ ಆರೈಕೆ ಕೇಂದ್ರಗಳು ಸೇರಿದಂತೆ ವಿವಿಧೆಡೆ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿ ಕೆಲಸಕ್ಕೆ ಹಾಜರಾಗದ ಪರಿಣಾಮ ಕೆಲ ಆಸ್ಪತ್ರೆಗಳು ಹಾಗೂ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ವೈದ್ಯಕೀಯ ಸೇವೆಗಳಲ್ಲಿ ವ್ಯತ್ಯಯವಾಗಿ, ರೋಗಿಗಳು ಚಿಕಿತ್ಸೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಕಂಡುಬಂತು. ಆರೋಗ್ಯ ಸಿಬ್ಬಂದಿಯ ಮುಷ್ಕರಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕೂಡ ಬೆಂಬಲ ನೀಡಿದೆ.

‘ವೇತನ ಹೆಚ್ಚಳ, ಪದೋನ್ನತಿ, ಸೇವಾ ಭದ್ರತೆ, ವೈದ್ಯಕೀಯ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಈ ಹಿಂದೆ ಪ್ರತಿಭಟನೆ ನಡೆಸಿದಾಗ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಈವರೆಗೂ ಯಾವುದೇ ಬೇಡಿಕೆ ಈಡೇರಲಿಲ್ಲ. ನಮ್ಮ ಬೇಡಿಕೆಗಳ ಪರಿಶೀಲನೆಗೆ ಸರ್ಕಾರವು ರಚಿಸಿದ ಸಮಿತಿಯು ಈವರೆಗೂ ವರದಿ ಸಲ್ಲಿಸದೆ ನಿರ್ಲಕ್ಷ್ಯ ತೋರಿದೆ. ಇದರಿಂದ 30 ಸಾವಿರಕ್ಕೂ ಅಧಿಕ ನೌಕರರಿಗೆ ಅನ್ಯಾಯವಾಗಿದೆ. ಹಾಗಾಗಿ ಮನೆಯಲ್ಲಿಯೇ ಇದ್ದು, ಕೆಲಸವನ್ನು ಬಹಿಷ್ಕರಿಸುತ್ತಿದ್ದೇವೆ’ ಎಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ವಿಶ್ವಾರಾಧ್ಯ ಯಮೋಜಿ ತಿಳಿಸಿದರು.

‘ಮಾನವ ಸಂಪನ್ಮೂಲ ನೀತಿ ಜಾರಿಗೆ ಸಂಬಂಧಿಸಿದಂತೆಹರಿಯಾಣದಲ್ಲಿ ನೌಕರರು 17 ದಿನಗಳವರೆಗೆ ಮುಷ್ಕರ ನಡೆಸಿದರು. ಅದೇ ರೀತಿ ನಾವು ಕೂಡ ಎದೆಗುಂದದೆ ಹೋರಾಟ ನಡೆಸಬೇಕಾಗಿದೆ. ಬೇಡಿಕೆಗಳು ಈಡೇರಿದ ಮರುಕ್ಷಣವೇ ಕೆಲಸಕ್ಕೆ ಹಾಜರಾಗುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT