ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ವಾರ್ಡ್‌ ರಕ್ಷಣೆ ಆಯಾ ಸದಸ್ಯರ ಜವಾಬ್ದಾರಿ ಎಂದ ಕಂದಾಯ ಸಚಿವ ಆರ್. ಅಶೋಕ

₹20 ಲಕ್ಷ ಅನುದಾನ: ಕಂಟೈನ್‌ಮೆಂಟ್‌, ಸೀಲ್‌ಡೌನ್ ಪ್ರದೇಶಗಳಲ್ಲಿ ಬಳಸಲು ಸೂಚನೆ
Last Updated 6 ಜುಲೈ 2020, 19:20 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಪ್ರತಿ ವಾರ್ಡ್‌ಗೆ ಬಿಬಿಎಂಪಿ ₹20 ಲಕ್ಷ ಅನುದಾನ ಹಂಚಿಕೆ ಮಾಡಿದ್ದು, ಅದನ್ನು ಆಯಾ ವಾರ್ಡ್‌ನ ಯಾವುದಾದರೂ ಪ್ರದೇಶ ಕಂಟೈನ್‌ಮೆಂಟ್‌, ಸೀಲ್‌ಡೌನ್ ಆದಲ್ಲಿ ತುರ್ತು ವ್ಯವಸ್ಥೆ ಕಲ್ಪಿಸಲು ಬಳಸುವಂತೆ ಪಾಲಿಕೆ ಸದಸ್ಯರಿಗೆ ಕಂದಾಯ ಸಚಿವ ಆರ್. ಅಶೋಕ ಹೇಳಿದರು.

ಬಿಬಿಎಂಪಿ ಕಚೇರಿಯಲ್ಲಿಪಾಲಿಕೆ ಸದಸ್ಯರ ಜತೆ ಸೋಮವಾರ ಸಭೆ ನಡೆಸಿದ ಸಚಿವರು, ‘ಕಂಟೈನ್‌ಮೆಂಟ್‌ ಅಥವಾ ಸೀಲ್‌ಡೌನ್ ಆದ ಪ್ರದೇಶಗಳಿಗೆ ಆಂಬುಲೆನ್ಸ್ ವ್ಯವಸ್ಥೆ, ಡಯಾಲಿಸಿಸ್‌ಗೆ ತೆರಳುವವರಿಗೆ ವಾಹನ ಸೌಕರ್ಯ, ರಕ್ತದೊತ್ತಡ ಮತ್ತು ಮಧುಮೇಹ ಇದ್ದವರಿಗೆ ಔಷಧ ಕೊಡಿಸಲು ಇದನ್ನು ಬಳಸಬಹುದು’ ಎಂದು ಸಲಹೆ ನೀಡಿದರು.

‘ಕಷ್ಟದ ಸಂದರ್ಭದಲ್ಲೂ ನಾವಿದ್ದೇವೆ ಎಂದು ಸದಸ್ಯರು ಧೈರ್ಯ ತುಂಬಬೇಕು. ಸೋಂಕಿನ ಲಕ್ಷಣ ಇದ್ದವರು ಏನು ಮಾಡಬೇಕು, ಏನು ಮಾಡಬಾರದು,ಚಿಕಿತ್ಸೆಗೆ ಎಲ್ಲಿಗೆ ಹೋಗಬೇಕು ಎಂಬ ಮಾಹಿತಿ ನೀಡಬೇಕು’ ಎಂದು ಸದಸ್ಯರಲ್ಲಿ ಮನವಿ ಮಾಡಿದರು.

‘ಜನರಲ್ಲಿ ಕೋವಿಡ್‌ ಕುರಿತ ಭಯ ದೂರ ಮಾಡಲು ಸದಸ್ಯರು ಕೈಜೋಡಿಸಬೇಕು. ಕೋವಿಡ್‌ ಬಗ್ಗೆ ಜಾಗೃತಿ ಮೂಡಿಸುವ ಕರಪತ್ರಗಳನ್ನು ಕ್ಷೇತ್ರದ ಶಾಸಕರ ಹೆಸರಿನಲ್ಲಿ ಮುದ್ರಿಸಿ ಮನೆ ಮನೆಗೆ ಹಂಚಬೇಕು. ಸೋಂಕಿನ ಲಕ್ಷಣ ಇದ್ದರೆ ಯಾರನ್ನು ಸಂಪರ್ಕಿಸಬೇಕು ಎಂದು ತಿಳಿಸಬೇಕು. ಪಾಲಿಕೆ ಸದಸ್ಯರು, ವಾರ್ಡ್ ಮಟ್ಟದ ಅಧಿಕಾರಿ ಸೇರಿ ಕನಿಷ್ಠ 6 ಮಂದಿಯ ಸಂಪರ್ಕ ಸಂಖ್ಯೆ ಅದರಲ್ಲಿರಬೇಕು. ಸೋಂಕು ದೃಢಪಟ್ಟು ಗುಣಮುಖ ಆದವರ ವಿಡಿಯೊ ಮಾಡಿ ಅದು ಎಲ್ಲರಿಗೂ ತಲುಪುವಂತೆ ನೋಡಿಕೊಳ್ಳಬೇಕು’ ಎಂದು ಕೋರಿದರು.

‘ಕೋವಿಡ್‌ನಿಂದ ಮೃತಪಟ್ಟವರ ಶವ ಸಂಸ್ಕಾರವನ್ನು ಗೌರವಯುತವಾಗಿ ನಡೆಸುವ ಹೊಣೆಯನ್ನು ಸದಸ್ಯರೇ ತೆಗೆದುಕೊಳ್ಳಬೇಕು. ವಾರ್ಡ್‌ಗಳ ರಕ್ಷಣೆ ಪಾಲಿಕೆ ಸದಸ್ಯರ ಹೊಣೆ ಎಂಬುದನ್ನು ಮನವರಿಕೆ ಮಾಡಿಸಲಾಗಿದೆ. ಎಲ್ಲ ಸದಸ್ಯರು ಸಹಕರಿಸಬೇಕು ಎಂದು ಕೋರಲಾಗಿದೆ’ ಎಂದು ಸಭೆಯ ಬಳಿಕ ಅಶೋಕ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

₹20 ಲಕ್ಷ ಅನುದಾನ ಯಾವ ಕಾರ್ಯಕ್ಕೆ ಬಳಸಿಕೊಳ್ಳಬೇಕು ಎಂಬ ಗೊಂದಲ ಬಗೆಹರಿಸುವಂತೆ ಪಾಲಿಕೆ ಸದಸ್ಯರು ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಒತ್ತಾಯಿಸಿದ್ದರು. ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲಿ ತುರ್ತು ಕ್ರಮಗಳ ಬಗ್ಗೆ ಚರ್ಚಿಸಲು ಸಭೆ ಕರೆಯಬೇಕು ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಒತ್ತಾಯಿಸಿದ್ದರು.

ಸೋಂಕಿತ ಮಹಿಳೆಯರ ಹೆರಿಗೆಗೆ ಪ್ರತ್ಯೇಕ ಆಸ್ಪತ್ರೆ

‘ಗರ್ಭಿಣಿಯರಿಗೆ ಸೋಂಕು ದೃಢಪಟ್ಟಿದ್ದರೆ, ಅಂತಹವರ ಹೆರಿಗೆಗೆ ಮತ್ತು ಆರೈಕೆಗೆ ಬೆಂಗಳೂರು ದಕ್ಷಿಣ ಮತ್ತು ಉತ್ತರದಲ್ಲಿ ಪ್ರತ್ಯೇಕ ಎರಡು ಆಸ್ಪತ್ರೆಗಳನ್ನು ಮೀಸಲಿಡಲಾಗುತ್ತದೆ’ ಎಂದು ಆರ್. ಅಶೋಕ ತಿಳಿಸಿದರು. ‘ಸೋಂಕಿತ ಗರ್ಭಿಣಿಯರ ಆರೈಕೆಗೆ ಪ್ರತಿ ವಾರ್ಡ್‌ಗೆ ₹10 ಲಕ್ಷ ಕಾಯ್ದಿರಿಸಲಾಗಿದೆ’ ಎಂದು ಹೇಳಿದರು.

ಬಿಬಿಎಂಪಿಗೆ 250 ಆಂಬುಲೆನ್ಸ್‌

‘ಕೋವಿಡ್ ಸಂದರ್ಭಕ್ಕಾಗಿ ಪಾಲಿಕೆ ವ್ಯಾಪ್ತಿಗೆ 250 ಆಂಬುಲೆನ್ಸ್ ಒದಗಿಸಲಾಗಿದೆ. ಸೋಂಕಿತರಿಗೆ ಎಷ್ಟು ವಾಹನ, ಸೋಂಕಿತರಲ್ಲದ ರೋಗಿಗಳಿಗೆ ಎಷ್ಟು ವಾಹನ ಬಳಕೆ ಮಾಡಿಕೊಳ್ಳಬೇಕು ಎಂದು ಆಯಾ ವಾರ್ಡ್‌ ಸದಸ್ಯರು ತೀರ್ಮಾನಿಸಬೇಕು’ ಎಂದು ಎಂದು ಕಂದಾಯ ಸಚಿವರು ತಿಳಿಸಿದರು.

‘ಆಂಬುಲೆನ್ಸ್‌ ಚಾಲಕರ ದೂರವಾಣಿ ಸಂಖ್ಯೆಯನ್ನು ಸದಸ್ಯರಿಗೆ ನೀಡಬೇಕು. ಅಧಿಕಾರಿಗಳು ಪಾಲಿಕೆ ಸದಸ್ಯರ ಜತೆ ಸಮನ್ವಯದಿಂದ ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದರು.

‘250 ಆಂಬುಲೆನ್ಸ್‌ಗಳಲ್ಲಿ 179 ಟೆಂಪೊ ಟ್ರಾವೆಲರ್‌ಗಳಿವೆ. ಪೂರ್ವ ವಲಯಕ್ಕೆ 39, ಪಶ್ಚಿಮಕ್ಕೆ 64, ದಕ್ಷಿಣಕ್ಕೆ 67, ರಾಜರಾಜೇಶ್ವರಿನಗರಕ್ಕೆ 20, ದಾಸರಹಳ್ಳಿಗೆ 12, ಯಲಹಂಕಕ್ಕೆ 15, ಮಹದೇವಪುರಕ್ಕೆ 16 ಮತ್ತು ಬೊಮ್ಮನಹಳ್ಳಿ ವಲಯಕ್ಕೆ 17 ವಾಹನಗಳನ್ನು ನೀಡಲಾಗಿದೆ’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT