ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಹಾಸಿಗೆ ಮೀಸಲು: ಶೇ 5ರಷ್ಟು ಮಾತ್ರ ಭರ್ತಿ!

ಗೊಂದಲದಲ್ಲಿ ನಗರದ ಸರ್ಕಾರಿ ಆಸ್ಪತ್ರೆಗಳು
Last Updated 15 ಸೆಪ್ಟೆಂಬರ್ 2021, 21:03 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಸದ್ಯ 7 ಸಾವಿರಕ್ಕೂ ಅಧಿಕ ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಆದರೆ, ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಮೀಸಲಿಟ್ಟ ಹಾಸಿಗೆಗಳಲ್ಲಿ ಶೇ 5ರಷ್ಟು ಹಾಸಿಗೆಗಳು ಮಾತ್ರ ಬಳಕೆಯಾಗುತ್ತಿವೆ.

ಸೋಂಕಿತರಲ್ಲಿ ಬಹುತೇಕರು ಮನೆ ಆರೈಕೆಗೆ ಒಳಗಾಗಿದ್ದಾರೆ. ಸದ್ಯ 115 ಮಂದಿ ಮಾತ್ರ ಸರ್ಕಾರಿ ಕೋಟಾದಡಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದಾಗಿ ಕೋವಿಡ್‌ ಚಿಕಿತ್ಸೆಗೆ ಮೀಸಲಿಟ್ಟ 1,964 ಹಾಸಿಗೆಗಳಲ್ಲಿ 1,847 ಹಾಸಿಗೆಗಳು ಖಾಲಿ ಉಳಿದಿವೆ. ಸಂಭಾವ್ಯ ಕೋವಿಡ್ ಮೂರನೇ ಅಲೆಯ ಮುನ್ನೆಚ್ಚರಿಕೆ ಕ್ರಮವಾಗಿ ಹಾಸಿಗೆಗಳನ್ನು ಹಾಗೇ
ಉಳಿಸಿಕೊಳ್ಳಲಾಗಿದೆ.

ಕೋವಿಡ್‌ ಪ್ರಕರಣಗಳ ಸಂಖ್ಯೆ ಮಾರ್ಚ್‌ ಎರಡನೇ ವಾರದ ಬಳಿಕ ಏರಿಕೆ ಕಂಡಿದ್ದರಿಂದ ಸರ್ಕಾರವು ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ಸೋಂಕಿತರಿಗೆ ಚಿಕಿತ್ಸೆ ಒದಗಿಸುವ ವ್ಯವಸ್ಥೆ ರೂಪಿಸಿತ್ತು. ಸರ್ಕಾರಿ ಕೋಟಾದಡಿ ಶಿಫಾರಸು ಆಧಾರದಲ್ಲಿ ಚಿಕಿತ್ಸೆ ನೀಡಲು ಶೇ 50 ರಷ್ಟು ಹಾಸಿಗೆಗಳನ್ನು ಮೀಸಲಿಡುವಂತೆ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಿ, ಆದೇಶ ಹೊರಡಿಸಿತ್ತು. ಇದರಿಂದಾಗಿ ಕೋವಿಡ್‌ ಚಿಕಿತ್ಸೆಗೆ ನಗರದಲ್ಲಿ 5 ಸಾವಿರಕ್ಕೂ ಅಧಿಕ ಹಾಸಿಗೆಗಳು ದೊರೆತಿದ್ದವು. ಸೋಂಕು ದೃಢ ಪ್ರಮಾಣವು ಶೇ 2ರ ಒಳಗಡೆ ಬಂದಿರುವುದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಎಲ್ಲ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಗೊಂದಲದಲ್ಲಿ ಆಸ್ಪತ್ರೆಗಳು: ಕೋವಿಡ್ ಆಸ್ಪತ್ರೆಯಾಗಿ ಮಾರ್ಪಟ್ಟಿರುವ ವಿಕ್ಟೋರಿಯಾದಲ್ಲಿ 416 ಎಚ್‌ಡಿಯು ಹಾಸಿಗೆಗಳು ಮೀಸಲಿವೆ. ಅವುಗಳಲ್ಲಿ 398 ಹಾಸಿಗೆಗಳು ಖಾಲಿ ಉಳಿದಿವೆ. ಕೋವಿಡೇತರ ಚಿಕಿತ್ಸೆ ಪ್ರಾರಂಭಿಸಲು ಅನುಮತಿ ನೀಡದಿರುವುದರಿಂದ ಅನ್ಯ ಕಾಯಿಲೆ ಎದುರಿಸುತ್ತಿರುವ ರೋಗಿಗಳು ಬೇರೆ ಆಸ್ಪತ್ರೆಗಳನ್ನು ಅವಲಂಬಿಸಬೇಕಾಗಿದೆ. ಅಲ್ಲಿ ವೆಂಟಿಲೇಟರ್ ಸಹಿತ 54 ಐಸಿಯು ಹಾಸಿಗೆಗಳಲ್ಲಿ 52 ಖಾಲಿ ಉಳಿದಿವೆ.

ಸಿ.ವಿ. ರಾಮನ್, ಜಯನಗರ ಸಾರ್ವಜನಿಕ ಆಸ್ಪತ್ರೆ, ಇಂದಿರಾನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಸೇರಿದಂತೆ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಕೋವಿಡ್‌ ಚಿಕಿತ್ಸೆಗೆ ಕೆಲವಷ್ಟು ಹಾಸಿಗೆಗಳನ್ನು ಮೀಸಲಿಡಲಾಗಿದೆ. ಈ ಆಸ್ಪತ್ರೆಗಳಿಗೆ ಕೋವಿಡೇತರ ರೋಗಿಗಳು ಕಳೆದೊಂದು ತಿಂಗಳಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಅವರಿಗೆ ಹಾಸಿಗೆ ಸಮಸ್ಯೆ
ತಲೆದೋರಿದೆ.

‘ಕೋವಿಡ್ ಚಿಕಿತ್ಸೆಗೆ ಆಸ್ಪತ್ರೆಗೆ ಬರುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ದಾಖಲಾದವರು ಕೂಡ ಬೇಗ ಚೇತರಿಸಿಕೊಂಡು ಮನೆಗೆ ತೆರಳುತ್ತಿದ್ದಾರೆ. ಸಂಭಾವ್ಯ ಕೋವಿಡ್ ಮೂರನೇ ಅಲೆಯ ಸಂಬಂಧ ಹಾಸಿಗೆಗಳನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ಅನ್ಯ ರೋಗಿಗಳ ಚಿಕಿತ್ಸೆಗೆ ಅವಕಾಶ ನೀಡಿದಲ್ಲಿ ದಾಖಲಿಸಿಕೊಂಡು, ಚಿಕಿತ್ಸೆ ನೀಡಲಾಗುತ್ತದೆ’ ಎಂದು ಬೆಂಗಳೂರು ನಗರ ಜಿಲ್ಲಾ ಶಸ್ತ್ರಚಿಕಿತ್ಸಕ ಹಾಗೂ ಇಂದಿರಾ ನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಡಾ. ಅನ್ಸರ್ ಅಹಮದ್ ತಿಳಿಸಿದರು.

‘ಕೋವಿಡ್ ಮೊದಲ ಅಲೆಯಲ್ಲಿ ಕಳೆದ ವರ್ಷಾಂತ್ಯಕ್ಕೆ ಪ್ರಕರಣ ಸಂಖ್ಯೆ ನಿಯಂತ್ರಣಕ್ಕೆ ಬಂದಿತ್ತು. ಮಾರ್ಚ್‌ ಬಳಿಕ ಎರಡನೇ ಅಲೆ ಕಾಣಿಸಿಕೊಂಡು, ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿತು. ಮೂರನೇ ಅಲೆಯ ಬಗ್ಗೆ ತಜ್ಞರು ಮುನ್ನೆಚ್ಚರಿಕೆ ನೀಡಿರುವುದರಿಂದ ಹಾಸಿಗೆಗಳನ್ನು ಹಾಗೇ ಉಳಿಸಿಕೊಳ್ಳಲಾಗಿದೆ’ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರೊಬ್ಬರು
ವಿವರಿಸಿದರು.

ತಡವಾಗಿ ಮರಣ ವರದಿ

ನಗರದಲ್ಲಿ ಕೆಲದಿನಗಳಿಂದ ಕೋವಿಡ್ ಮರಣ ಪ್ರಕರಣಗಳ ಸಂಖ್ಯೆ ಇಳಿಮುಖ ಮಾಡಿದ್ದು, ಸಾವಿನ ಸಂಖ್ಯೆ ಒಂದಂಕಿಯಲ್ಲಿದೆ. ಆದರೆ, ಮೃತರು ಕೋವಿಡ್ ಪೀಡಿತರಾಗಿದ್ದರು ಎನ್ನುವುದು ತಡವಾಗಿ ವರದಿಯಾಗುತ್ತಿವೆ. ಕೆಲವು ಪ್ರಕರಣಗಳಲ್ಲಿ ತಿಂಗಳ ಬಳಿಕ ಕೋವಿಡ್ ಸಾವು ಎಂದು ಪರಿಗಣಿಸಲಾಗುತ್ತಿದೆ. ಬುಧವಾರ ದೃಢಪಟ್ಟ ಐದು ಮರಣ ಪ್ರಕರಣಗಳಲ್ಲಿ ಮೂವರು ಜುಲೈ ತಿಂಗಳಲ್ಲಿ ಮೃತಪಟ್ಟವರು. 76 ವರ್ಷದ ವೃದ್ಧೆಯೊಬ್ಬರು ಆ.1ರಂದು ಸಾವಿಗೀಡಾಗಿದ್ದಾರೆ. ‘ತಾಂತ್ರಿಕ ಸಮಸ್ಯೆಯಿಂದ ಕೆಲ ಪ್ರಕರಣಗಳಲ್ಲಿ ನೋಂದಣಿ ವಿಳಂಬವಾಗುವ ಸಾಧ್ಯತೆ ಇರುತ್ತದೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT