ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಆರೈಕೆ ಕೇಂದ್ರಗಳ ಸಂಖ್ಯೆ ಗಣನೀಯ ಇಳಿಕೆ

Last Updated 7 ಜುಲೈ 2021, 21:42 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೋವಿಡ್‌ ಹರಡುವಿಕೆ ಪ್ರಮಾಣ ಗಣನೀಯವಾಗಿ ಕಡಿಮೆಯಾದ ಬಳಿಕ ಕೋವಿಡ್‌ ರೋಗಿಗಳ ಆರೈಕೆ ಕೇಂದ್ರಗಳ ಸಂಖ್ಯೆಯನ್ನು ಬಿಬಿಎಂಪಿ ಗಣನೀಯವಾಗಿ ಕಡಿತಗೊಳಿಸಿದೆ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ, ‘ಕೆಲ ದಿನಗಳ ಹಿಂದೆ ಬಿಬಿಎಂಪಿ ವ್ಯಾಪ್ತಿಯ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ 3,400ರಷ್ಟು ಹಾಸಿಗೆ ಸೌಲಭ್ಯಗಳಿದ್ದವು. ಅವುಗಳ ಸಂಖ್ಯೆಯನ್ನು ಈಗ 800ಕ್ಕೆ ಇಳಿಸಿದ್ದೇವೆ. ನಗರದಲ್ಲಿ 60 ಕೋವಿಡ್‌ ಆರೈಕೆ ಕೇಂದ್ರಗಳನ್ನು ಆರಂಭಿಸಲಾಗಿತ್ತು. ಈಗ 10 ಕೇಂದ್ರಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಬಿಬಿಎಂಪಿ ವತಿಯಿಂದ ಆರಂಭಿಸಿರುವ ಕೋವಿಡ್‌ ಆರೈಕೆ ಕೇಂದ್ರಗಳ ಮೂಲಸೌಕರ್ಯಗಳನ್ನು ಹಾಗೆಯೇ ಉಳಿಸಿಕೊಂಡಿದ್ದೇವೆ. ಅಗತ್ಯ ಬಿದ್ದರೆ ಅವುಗಳನ್ನು ಬಳಸಿಕೊಳ್ಳಬಹುದು. ಸದ್ಯಕ್ಕೆ ಅವು ನಿಷ್ಕ್ರಿಯವಾಗಿವೆ’ ಎಂದರು.

ಕೋವಿಡ್‌ ಸೊಂಕಿತರಿಗೆ ಬಿಬಿಎಂಪಿ ವತಿಯಿಂದ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳಿಂದ ಪಡೆದ ಹಾಸಿಗೆಗಳನ್ನು ಮರಳಿಸುವಂತೆ ಕೋರಿ ಕೆಲವು ಶಾಸಕರು ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯ ಆಯುಕ್ತರು, ‘ನಗರದಲ್ಲಿ ಕೋವಿಡ್‌ ಚಿಕಿತ್ಸೆಗಾಗಿ 13 ಸಾವಿರದಷ್ಟು ಹಾಸಿಗೆಗಳನ್ನು ಖಾಸಗಿ ಆಸ್ಪತ್ರೆಗಳಿಂದ ಪಡೆದಿದ್ದೆವು. ಅವುಗಳಲ್ಲಿ 5 ಸಾವಿರ ಹಾಸಿಗೆಗಳನ್ನು ಉಳಿಸಿಕೊಂಡು ಉಳಿದವುಗಳನ್ನು ಮೂರು ವಾರಗಳ ಹಿಂದೆಯೇ ಆಸ್ಪತ್ರೆಯವರಿಗೆ ಬಿಟ್ಟುಕೊಟ್ಟಿದ್ದೇವೆ. ಬಿಬಿಎಂಪಿ ಕೋಟಾದ ಹಾಸಿಗೆಗಳ ಸಂಖ್ಯೆಯನ್ನು ಶೀಘ್ರವೇ ಮತ್ತಷ್ಟು ಕಡಿಮೆ ಮಾಡಲಿದ್ದೇವೆ. ಭವಿಷ್ಯದಲ್ಲಿ ಅವಶ್ಯಕತೆ ಎದುರಾದರೆ ಮತ್ತೆ ಹಾಸಿಗೆಗಳನ್ನು ಪಡೆಯಲಿದ್ದೇವೆ’ ಎಂದರು.

ಕೆಲವರು ಕೋವಿಡ್‌ ಲಸಿಕೆ ಹಾಕಲು ಹಿಂದೇಟು ಹಾಕುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಗೌರವ್‌ ಗುಪ್ತ, ‘ಪ್ರಪಂಚದಲ್ಲಿ ಎಲ್ಲೂ ಕೋವಿಡ್ ಲಸಿಕೆ ಕಾರ್ಯಕ್ರಮದಲ್ಲಿ ಶೇ 100ರಷ್ಟು ಸಾಧನೆ ಆಗಿಲ್ಲ. ಶೇ 20 ರಷ್ಟು ಜನ ಬೇರೆ ಬೇರೆ ಕಾರಣಗಳಿಂದ ಲಸಿಕೆ ಹಾಕಿಸಿಕೊಳ್ಳಲು ಆಸಕ್ತಿ ತೋರುವುದಿಲ್ಲ. ಲಸಿಕೆ ಏಕೆ ಅವಶ್ಯಕ ಎಂಬುದರ ಬಗ್ಗೆ ಅವರಿಗೆ ಮನವರಿಕೆ ಮಾಡಬೇಕಾಗುತ್ತದೆ. ನಗರದಲ್ಲಿ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಲು ಆಸಕ್ತಿ ತೋರಿಸದವರಿಗೆ ಸಮುದಾಯದ ಮುಖಂಡರ ಮೂಲಕ ಮನವರಿಕೆ ಮಾಡಿಸುತ್ತಿದ್ದೇವೆ’ ಎಂದರು.

‘ನಗರದಲ್ಲಿ ಕೊರೊನಾ ಸೋಂಕು ಪತ್ತೆ ದರ ಶೇ 1ಕ್ಕಿಂತ ಕಡಿಮೆ ಇದೆ. ಇದನ್ನು ಇನ್ನಷ್ಟು ಕಡಿಮೆ ಮಾಡುವ ಉದ್ದೇಶ ನಮ್ಮದು. ಕೆಲವು ವಾರ್ಡ್‌ಗಳಲ್ಲಿ ದಿನದಲ್ಲಿ 20ರಿಂದ 30 ಪ್ರಕರಣಗಳು ಪತ್ತೆಯಾಗುತ್ತಿವೆ. ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಕಾಣಿಸಿಕೊಂಡ ಪ್ರದೇಶಗಳಲ್ಲಿ ಕಂಟೈನ್ಮೆಂಟ್‌ ಪ್ರದೇಶಗಳನ್ನು ಗುರುತಿಸುತ್ತಿದ್ದೇವೆ. ಕೋವಿಡ್‌ ಲಕ್ಷಣ ಕಂಡುಬಂದರೆ ಜನರು ತಕ್ಷಣವೇ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಈ ರೋಗ ನಿಯಂತ್ರಣಕ್ಕೆ ಸಹಕರಿಸಬೇಕು. ಸಾರ್ವಜನಿಕ ಪ್ರದೇಶಗಳಲ್ಲಿ, ಕಚೇರಿಗಳಲ್ಲಿ ಜನ ಸ್ವಪ್ರೇರಣೆಯಿಂದ ಮಾಸ್ಕ್‌ ಧರಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT